ಕಿವೀಸ್​ ವಿರುದ್ಧದ ಸೇಡಿನ ಸಮರದಲ್ಲಿ ಗೆದ್ದು 4ನೇ ಬಾರಿಗೆ ವಿಶ್ವಕಪ್ ಫೈನಲ್​ಗೇರಿದ ಭಾರತ
ಕನ್ನಡ ಸುದ್ದಿ  /  ಕ್ರಿಕೆಟ್  /  ಕಿವೀಸ್​ ವಿರುದ್ಧದ ಸೇಡಿನ ಸಮರದಲ್ಲಿ ಗೆದ್ದು 4ನೇ ಬಾರಿಗೆ ವಿಶ್ವಕಪ್ ಫೈನಲ್​ಗೇರಿದ ಭಾರತ

ಕಿವೀಸ್​ ವಿರುದ್ಧದ ಸೇಡಿನ ಸಮರದಲ್ಲಿ ಗೆದ್ದು 4ನೇ ಬಾರಿಗೆ ವಿಶ್ವಕಪ್ ಫೈನಲ್​ಗೇರಿದ ಭಾರತ

India vs New Zealand 1st Semi-Final: ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಜಯಿಸಿದ ಭಾರತ, 4ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. 2011ರ ನಂತರ ಫೈನಲ್​ಗೆ ಎಂಟ್ರಿಕೊಟ್ಟಿದೆ.

4ನೇ ಬಾರಿಗೆ ವಿಶ್ವಕಪ್ ಫೈನಲ್​ಗೇರಿದ ಭಾರತ.
4ನೇ ಬಾರಿಗೆ ವಿಶ್ವಕಪ್ ಫೈನಲ್​ಗೇರಿದ ಭಾರತ.

ನ್ಯೂಜಿಲೆಂಡ್ ಎದುರಿನ ರೋಚಕ ಸೆಮಿಫೈನಲ್ ಕದನದಲ್ಲಿ ಗೆದ್ದು ಬೀಗಿದ ಭಾರತ ತಂಡ, ಐತಿಹಾಸಿಕ 4ನೇ ಬಾರಿಗೆ ಏಕದಿನ ವಿಶ್ವಕಪ್​ ಟೂರ್ನಿಯ ಫೈನಲ್​ ಪ್ರವೇಶಿಸಿದೆ. 1983, 2003, 2011ರ ವಿಶ್ವಕಪ್​​ ಬಳಿಕ ಭಾರತ ಮತ್ತೊಮ್ಮೆ ಫೈನಲ್​ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ 2019ರ ವಿಶ್ವಕಪ್ ಸೆಮಿಫೈನಲ್​ ಸೋಲಿನ ಸೇಡನ್ನು ರೋಹಿತ್ ಪಡೆ, ತೀರಿಸಿಕೊಂಡಿದೆ. ಕೊನೆಯ ಬಾರಿ 2011ರಲ್ಲಿ ಫೈನಲ್​ಗೇರಿದ್ದ ಭಾರತ ಪ್ರಶಸ್ತಿ ಗೆದ್ದಿತ್ತು. 140 ಕೋಟಿ ಭಾರತೀಯರ ಕನಸಿಗೆ ಇನ್ನೊಂದೆ ಹೆಜ್ಜೆ ಬಾಕಿ ಇದೆ.

ತದನಂತರ 2015, 2019ರ ವಿಶ್ವಕಪ್​​ ಸೆಮಿಫೈನಲ್​​ನಲ್ಲಿ ಸೋಲನುಭವಿಸಿ ಫೈನಲ್​ ಪ್ರವೇಶಿಸಲು ವಿಫಲವಾಗಿದ್ದ ಮೆನ್ ಇನ್ ಬ್ಲೂ, 12 ವರ್ಷಗಳ ನಂತರ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. ಮೊಹಮ್ಮದ್ ಶಮಿ ಅವರ ಬೆಂಕಿ-ಬಿರುಗಾಳಿ ಬೌಲಿಂಗ್​​​​ಗೆ ನ್ಯೂಜಿಲೆಂಡ್​ ಶರಣಾಯಿತು. ಶಮಿ 7 ವಿಕೆಟ್ ಪಡೆದು ಗೆಲುವಿನ ರೂವಾರಿ ಎನಿಸಿದರು. ಭಾರತ 70 ರನ್​ಗಳ ಭರ್ಜರಿ ಗೆಲುವು ದಾಖಲಿಸಿ ಟೂರ್ನಿಯಲ್ಲಿ ರೋಹಿತ್ ಪಡೆ ಅಜೇಯ ಗೆಲುವಿನ ಓಟ ಮುಂದುವರೆಸಿತು.

ವಾಂಖೆಡೆ ಮೈದಾನದಲ್ಲಿ ನಡೆದ ವಿಶ್ವಕಪ್​ನ ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಭಾರತ, ನಿಗದಿತ 50 ಓವರ್​​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 397 ರನ್​​ಗಳ ಬೃಹತ್ ಮೊತ್ತ ಕಲೆ ಹಾಕಿತು. ವಿರಾಟ್ ಕೊಹ್ಲಿ 117 ರನ್, ಶ್ರೇಯಸ್ ಅಯ್ಯರ್ 105 ರನ್, ಶುಭ್ಮನ್ ಗಿಲ್ ಅಜೇಯ 80 ರನ್ ಗಳಿಸಿದರು. ಈ ಗುರಿ ಬೆನ್ನಟ್ಟಿದ ನಿಗದಿತ 48.5 ಓವರ್​​​ಗಳಲ್ಲಿ 327 ರನ್​ಗಳಿಗೆ ಆಲೌಟ್​ ಆಯಿತು. ಡೇರಿಲ್ ಮಿಚೆಲ್ 134 ರನ್ ಗಳಿಸಿದರು. ಭಾರತದ ಪರ ಶಮಿ 7 ವಿಕೆಟ್ ಪಡೆದು ಮಿಂಚಿದರು.

ಕಿವೀಸ್ ದಿಟ್ಟ ಹೋರಾಟ

398 ರನ್​ಗಳ ಬೃಹತ್ ಗುರಿಯನ್ನು ಹಿಂಬಾಲಿಸಿದ ಕಿವೀಸ್, ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು. ತಂಡದ ಮೊತ್ತ 39 ರನ್ ಆಗುವಷ್ಟರಲ್ಲಿ ಆರಂಭಿಕರನ್ನು ಕಳೆದುಕೊಂಡಿತು. ಡೆವೊನ್ ಕಾನ್ವೆ ಮತ್ತು ರಚಿನ್ ರವೀಂದ್ರ ತಲಾ 13 ರನ್ ಸಿಡಿಸಿ ಮೊಹಮ್ಮದ್ ಶಮಿ ಬೌಲಿಂಗ್​ನಲ್ಲಿ ವಿಕೆಟ್ ಕೀಪರ್ ಕೆಎಲ್ ರಾಹುಲ್​ಗೆ ಕ್ಯಾಚ್ ನೀಡಿ​ ನಿರ್ಗಮಿಸಿದರು. ಆದರೆ ಈ ವೇಳೆ ನಾಯಕ ಕೇನ್ ವಿಲಿಯಮ್ಸನ್ ಮತ್ತು 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಡ್ಯಾರಿಲ್ ಮಿಚೆಲ್ ತುಂಬಾ ಕಾಡಿದರು.

3ನೇ ವಿಕೆಟ್​ಗೆ 181 ರನ್​ಗಳ ಜೊತೆಯಾಟ

ಮೊದಲ 2 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ರಕ್ಷಣಾತ್ಮಕ ಆಟವಾಡಿದ ವಿಲಿಯಮ್ಸನ್ ಮತ್ತು ಮಿಚೆಲ್ ಭಾರತೀಯ ಬೌಲರ್​​​ಗಳಿಗೆ ಬೆಂಡೆತ್ತಿದರು. ತಂಡವನ್ನು ರಕ್ಷಿಸಿದ ಈ ಜೋಡಿ 3ನೇ ವಿಕೆಟ್​ಗೆ 149 ಎಸೆತಗಳಲ್ಲಿ 181 ರನ್ ಕಲೆ ಹಾಕಿತು. ಇದು ಭಾರತ ತಂಡದ ಆತಂಕ ಹೆಚ್ಚಿಸಿತು. ಬೌಲರ್​​​ಗಳು ವಿಕೆಟ್​ ಪಡೆಯಲು ಪರದಾಡಿದರು. ಮೈದಾನದ ಅಷ್ಟ ದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡಿದರು. ಪಂದ್ಯಕ್ಕೆ ಗೆಲುವಿನ ಭರವಸೆ ಮೂಡಿಸಿದರು.

ಮಿಚೆಲ್ ಶತಕ, ವಿಲಿಯಮ್ಸನ್ ಅರ್ಧಶತಕ

ಭಾರತದ ಬೌಲರ್​ಗಳನ್ನು ಕಾಡಿದ ಮಿಚೆಲ್​, ಭರ್ಜರಿ ಶತಕ ಸಿಡಿಸಿದರು. ಆ ಮೂಲಕ ಕಿವೀಸ್​​ಗೆ ಜೀವ ತುಂಬಿದರು. ಮತ್ತೊಂದೆಡೆ ನಾಯಕ ವಿಲಿಯಮ್ಸನ್​ ಅರ್ಧಶತಕ ಸಿಡಿಸಿ, ಮಿಚೆಲ್​ಗೆ ಸಾಥ್ ನೀಡಿದರು. ಮೊದಲು ನಿಧಾನವಾಗಿ ಬ್ಯಾಟಿಂಗ್ ನಡೆಸಿದ ಈ ಜೋಡಿ, ಟೀಮ್ ಇಂಡಿಯಾ ಪಾಳಯದಲ್ಲಿ ಆತಂಕ ಇಮ್ಮಡಿಗೊಳಿಸಿತು. ವಿಲಿಯಮ್ಸನ್ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ 32.2ನೇ ಓವರ್​​ನಲ್ಲಿ ಮೊಹಮ್ಮದ್ ಶಮಿ, ಭಾರತಕ್ಕೆ ತಿರುವು ನೀಡಿದರು. ಒಂದೇ ಓವರ್​​ನಲ್ಲಿ 2 ವಿಕೆಟ್ ಪಡೆದು ತಂಡಕ್ಕೆ ಮುನ್ನಡೆ ತಂದುಕೊಟ್ಟರು. ವಿಲಿಯಮ್ಸನ್ 69 ರನ್ ಗಳಿಸಿ ಔಟಾದರೆ, ಟಾಮ್ ಲಾಥಮ್ ಡಕೌಟ್​ಗೆ ಬಲಿಯಾದರು.

ಸತತ ವಿಕೆಟ್​ ಕಳೆದುಕೊಂಡರೂ ಮಿಚೆಲ್ ಆರ್ಭಟ ನಿಲ್ಲಲ್ಲಿಲ್ಲ. ಏಕಾಂಗಿಯಾಗಿ ಹೋರಾಟ ನಡೆಸಿದರು. ಮಿಚೆಲ್​ಗೆ ಸಖತ್​ ಸಾಥ್ ನೀಡಿದ ಗ್ಲೆನ್ ಫಿಲಿಪ್ಸ್​, ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿದರು. ಈ ಜೋಡಿ ಭಾರತದ ಪಾಳಯದಲ್ಲಿ ಮತ್ತೆ ಆತಂಕ ಹೆಚ್ಚಿಸಿತು. ಆದರೆ ಈ ವೇಳೆ ಬುಮ್ರಾ ಮತ್ತು ಕುಲ್ದೀಪ್ ವಿಕೆಟ್​ ಪಡೆದು ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಫಿಲಿಪ್ಸ್​ 41 ರನ್ ಗಳಿಸಿ ಔಟಾದರೆ, ಮಾರ್ಕ್ ಚಾಪ್ಮನ್ 2 ರನ್ ಗಳಿಸಿ ನಿರಾಸೆ ಮೂಡಿಸಿದರು.

ಸತತ ವಿಕೆಟ್ ಕಳೆದುಕೊಂಡರೂ ಏಕಾಂಗಿಯಾಗಿ ತಂಡಕ್ಕೆ ಆಸರೆಯಾಗುತ್ತಿದ್ದ ಮಿಚೆಲ್​ಗೆ ಶಮಿ ಗೇಟ್​ಪಾಸ್ ನೀಡಿದರು. 119 ಎಸೆತಗಳಲ್ಲಿ 9 ಬೌಂಡರಿ, 7 ಸಿಕ್ಸರ್​ ಸಹಿತ 134 ರನ್ ಗಳಿಸಿ ಔಟಾದರು. ಇದು ಭಾರತದ ಆಟಗಾರರ ಮೊಗದಲ್ಲಿ ಮಂದಹಾಸ ಹೆಚ್ಚಿಸಿತು. ಪಂದ್ಯಕ್ಕೆ ಪ್ರಮುಖ ತಿರುವು ನೀಡಿದ ಶಮಿ, ಕೊನೆಯ ಎರಡೂ ವಿಕೆಟ್​ ಪಡೆದು ದಾಖಲೆ ಬರೆದರು. ಒಟ್ಟು 7 ವಿಕೆಟ್ ಪಡೆದು ಸಂಭ್ರಮಿಸಿದರು. ಅಲ್ಲದೆ, ವಿಶ್ವಕಪ್​ನಲ್ಲಿ 3ನೇ ಬಾರಿ 5+ ವಿಕೆಟ್ ಸಾಧನೆ ಮಾಡಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ರನ್ ಶಿಖರ ನಿರ್ಮಿಸಿದ ಭಾರತ

ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಭರ್ಜರಿ ಆರಂಭ ಪಡೆಯಿತು. ರೋಹಿತ್​ ಶರ್ಮಾ ಆಕ್ರಮಣಕಾರಿ ಆಟದ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ 47 ರನ್ ಗಳಿಸಿ ಅರ್ಧಶತಕದ ಅಂಚಿನಲ್ಲಿ ಎಡವಿದರು. ಮೊದಲ ವಿಕೆಟ್​​ಗೆ 71 ರನ್​ಗಳು ಹರಿದು ಬಂದವು. ಬಳಿಕ ಮತ್ತೊಬ್ಬ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಕಿವೀಸ್​ ಬೌಲರ್​ಗಳಿಗೆ ಬೆಂಡೆತ್ತಿದರು. ಈ ಜೋಡಿ ಅಜೇಯ 93 ರನ್​ ಪೇರಿಸಿತು. ಈ ವೇಳೆ ಶುಭ್ಮನ್ ಗಿಲ್ ಅರ್ಧಶತಕ ಸಿಡಿಸಿ ಮಿಂಚಿದರು.

ಆದರೆ 79 ರನ್ ಗಳಿಸಿದ್ದ ವೇಳೆ ಕಾಲಿನ ಸ್ನಾಯು ಸೆಳೆತಕ್ಕೆ ಒಳಗಾಗಿ ರಿಟೈರ್ಡ್​​ ಹರ್ಟ್ ಆದರು. ಆ ಬಳಿಕ ಕೊಹ್ಲಿಗೆ ಜೊತೆಯಾದ ಶ್ರೇಯಸ್ ಅಯ್ಯರ್ ಬಿರುಸಿನ ಬ್ಯಾಟಿಂಗ್​ ನಡೆಸಿದರು. ಈ ಜೋಡಿ 2ನೇ ವಿಕೆಟ್​ಗೆ 128 ಎಸೆತಗಳಲ್ಲಿ 163 ರನ್​ಗಳ ಜೊತೆಯಾಟದವಾಡಿತು. ಅಲ್ಲದೆ ಇಬ್ಬರೂ ಶತಕ ಸಿಡಿಸಿ ತಂಡದ ಮೊತ್ತವನ್ನು 400ರ ಸಮೀಪಕ್ಕೆ ತಂದು ನಿಲ್ಲಿಸಿದರು. ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್​​ನಲ್ಲಿ 50ನೇ ಶತಕ ಸಿಡಿಸಿ ವಿಶ್ವದಾಖಲೆ ಬರೆದರು.

ಕೊಹ್ಲಿ 113 ಎಸೆತಗಳಲ್ಲಿ 117 ರನ್ ಗಳಿಸಿದರೆ, ಶ್ರೇಯಸ್ ಅಯ್ಯರ್ 70 ಎಸೆತಗಳಲ್ಲಿ 105 ರನ್​ಗಳಿಸಿದರು. ಮತ್ತೊಂದೆಡೆ ರಿಟೈರ್ಡ್ ಹರ್ಟ್ ಆಗಿದ್ದ ಶುಭ್ಮನ್ ಕೊನೆಯಲ್ಲಿ ಕಣಕ್ಕಿಳಿದು ಅಜೇಯರಾಗಿ ಉಳಿದರು. ಕೆಎಲ್ ರಾಹುಲ್ ಕೂಡ ಬಿರುಸಿನ ಬ್ಯಾಟಿಂಗ್ ನಡೆಸಿದರು. ಪರಿಣಾಮ 20 ಎಸೆತಗಳಲ್ಲಿ ಅಜೇಯ 39 ರನ್ ಗಳಿಸಿದರು. ಇದರೊಂದಿಗೆ ಭಾರತ ಸ್ಕೋರ್​ ಬೋರ್ಡ್​​​ನಲ್ಲಿ 397 ರನ್​ಗಳ ಬೃಹತ್ ಮೊತ್ತ ಪೇರಿಸಿತು.

 

Whats_app_banner