ಸಾರ್ವಕಾಲಿಕ ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ; ಕಪಿಲ್ ದೇವ್, ಜಹೀರ್ ಖಾನ್, ಇಶಾಂತ್ ಶರ್ಮಾ ರೆಕಾರ್ಡ್ ಉಡೀಸ್
Jasprit Bumrah: ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ 2ನೇ ದಿನದಂದು ಜಸ್ಪ್ರೀತ್ ಬುಮ್ರಾ ಐದು ವಿಕೆಟ್ ಉರುಳಿಸಿ ಕಪಿಲ್ ದೇವ್, ಜಹೀರ್ ಖಾನ್, ಇಶಾಂತ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ.
ಗಬ್ಬಾದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಜಸ್ಪ್ರೀತ್ ಬುಮ್ರಾ ಅದ್ಭುತ ಪ್ರದರ್ಶನದೊಂದಿಗೆ ತಮ್ಮ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲನ್ನು ತಲುಪಿದ್ದಾರೆ. 31 ವರ್ಷದ ವೇಗಿ 25 ಓವರ್ಗಳಲ್ಲಿ 72 ರನ್ ನೀಡಿ 5 ವಿಕೆಟ್ ಪಡೆದು 2ನೇ ದಿನವನ್ನು ಕೊನೆಗೊಳಿಸಿದರು. ಇದು ಟೆಸ್ಟ್ ಕ್ರಿಕೆಟ್ನಲ್ಲಿ ಬುಮ್ರಾ ಅವರ 12ನೇ ಐದು ವಿಕೆಟ್ಗಳ ಗೊಂಚಲು. ಈ ಮೂಲಕ ಬುಮ್ರಾ ಭಾರತದ ಶ್ರೇಷ್ಠ ಆಟಗಾರರಾದ ಜಹೀರ್ ಖಾನ್ ಮತ್ತು ಇಶಾಂತ್ ಶರ್ಮಾ ಅವರನ್ನು ಹಿಂದಿಕ್ಕಿ ಮುಂದೆ ಸಾಗಿದ್ದಾರೆ.
ಎರಡನೇ ದಿನದಾಟದ ಆರಂಭದಲ್ಲಿ ಉಸ್ಮಾನ್ ಖವಾಜಾ ಅವರನ್ನು 21 ರನ್ಗಳಿಗೆ ಔಟ್ ಮಾಡುವ ಮೂಲಕ ವಿಕೆಟ್ ಖಾತೆ ತೆರೆದ ಬುಮ್ರಾ, ನಂತರ ನಾಥನ್ ಮೆಕ್ಸ್ವೀನಿ (9) ವಿಕೆಟ್ ಕಬಳಿಸಿದರು. ಅಲ್ಲದೆ, ಶತಕ ಸಿಡಿಸಿದ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ (101), ಟ್ರಾವಿಸ್ ಹೆಡ್ (152), ಮಿಚೆಲ್ ಮಾರ್ಷ್ (5) ಅವರನ್ನೂ ಔಟ್ ಮಾಡಿದರು. ಮಾರ್ಷ್ ಮತ್ತು ಹೆಡ್ ಅವರನ್ನು ಬುಮ್ರಾ ಒಂದೇ ಓವರ್ನಲ್ಲಿ ಔಟ್ ಮಾಡಿದರು. ಐದು ವಿಕೆಟ್‌ಗಳೊಂದಿಗೆ ದಿನದಾಟ ಮುಗಿಸಿದಿ ಪ್ರಮುಖ ದಾಖಲೆಗಳನ್ನು ಬರೆದರು. ಅವುಗಳ ಪಟ್ಟಿ ಇಲ್ಲಿದೆ.
ಭಾರತದ ಪರ ಅತಿ ಹೆಚ್ಚು ಬಾರಿ ಐದು ವಿಕೆಟ್ ಗೊಂಚಲು ಸಾಧನೆ (ಟೆಸ್ಟ್)
- ಕಪಿಲ್ ದೇವ್ - 23
- ಜಸ್ಪ್ರೀತ್ ಬುಮ್ರಾ - 12
- ಜಹೀರ್ ಖಾನ್ - 11
- ಇಶಾಂತ್ ಶರ್ಮಾ - 11
- ಜಾವಗಲ್ ಶ್ರೀನಾಥ್ - 10
ಸೇನಾ ದೇಶಗಳಲ್ಲಿ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ) ಕಪಿಲ್ ದೇವ್ ಪಡೆದಿದ್ದ ಏಳು ಬಾರಿ ಐದು ವಿಕೆಟ್ಗಳ ಗೊಂಚಲು ದಾಖಲೆಯನ್ನೂ ಬುಮ್ರಾ ಮುರಿದಿದ್ದಾರೆ. ಇದರೊಂದಿಗೆ ಸೇನಾ ದೇಶಗಳಲ್ಲಿ ಅತಿ ಹೆಚ್ಚು ಬಾರಿ 5 ವಿಕೆಟ್ ಗೊಂಚಲು ಪಡೆದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.‘
- ಜಸ್ಪ್ರೀತ್ ಬುಮ್ರಾ - 8
- ಕಪಿಲ್ ದೇವ್ - 7
- ಜಹೀರ್ ಖಾನ್ - 6
ಅನಿಲ್ ಕುಂಬ್ಳೆ ದಾಖಲೆ ಸರಿಗಟ್ಟಿದ ಬುಮ್ರಾ
ಆಸ್ಟ್ರೇಲಿಯಾ ನೆಲದಲ್ಲಿ ಅತ್ಯಧಿಕ ವಿಕೆಟ್ ಪಡೆದವರ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಲ್ಲದೆ, ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಕೇವಲ 3 ವಿಕೆಟ್ ಮಾತ್ರ ಬೇಕಿದೆ. ಈವರೆಗೂ ಆಸೀಸ್ ನೆಲದಲ್ಲಿ ಬುಮ್ರಾ 10 ಪಂದ್ಯಗಳಲ್ಲಿ 49 ವಿಕೆಟ್ ಕಿತ್ತಿದ್ದಾರೆ. ಈಗ ಅನಿಲ್ ಕುಂಬ್ಳೆ ಅವರೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಕಪಿಲ್ ದೇವ್ 51
ಜಸ್ಪ್ರೀತ್ ಬುಮ್ರಾ 49
ಅನಿಲ್ ಕುಂಬ್ಳೆ 49
ಆಸ್ಟ್ರೇಲಿಯಾ ವಿರುದ್ಧ ಬುಮ್ರಾ 5 ವಿಕೆಟ್ ಕಬಳಿಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ 9ನೇ ಬಾರಿ ಐದು ವಿಕೆಟ್ಗಳ ಗೊಂಚಲು ಪಡೆದಿದ್ದಾರೆ. ಇಷ್ಟೇ ಸಾಧನೆ ಮಾಡಿರುವ ಪ್ಯಾಟ್ ಕಮಿನ್ಸ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಡಬ್ಲ್ಯುಟಿಸಿ 2023-25ರ ಆವೃತ್ತಿಯಲ್ಲಿ ಬುಮ್ರಾ 62 ವಿಕೆಟ್‌ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. 63 ವಿಕೆಟ್‌ಗಳೊಂದಿಗೆ ಅಶ್ವಿನ್‌ಗಿಂತ ಕೇವಲ ಒಂದು ಹಿಂದಿದ್ದಾರೆ.