ಕನ್ನಡ ಸಾಹಿತ್ಯ ಸಮ್ಮೇಳನ: ಕನ್ನಡಕ್ಕಾಗಿ ಓಟ ಘೋಷವಾಕ್ಯದೊಂದಿಗೆ ಡಿಸೆಂಬರ್ 17ರ ಬೆಳಿಗ್ಗೆ 7ಕ್ಕೆ ಮ್ಯಾರಥಾನ್ ಸ್ಪರ್ಧೆ
Kannada Sahitya Sammelana 2024: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2024 ಡಿಸೆಂಬರ್ 20, 21 ಮತ್ತು 22 ರಂದು ಮಂಡ್ಯ ಜಿಲ್ಲೆಯಲ್ಲಿ ನಡೆಯಲಿದ್ದು, ಸಮ್ಮೇಳನದ ಅರಿವು ಮೂಡಿಸುವ ಸಲುವಾಗಿ ‘ಕನ್ನಡಕ್ಕಾಗಿ ಓಟ’ ಎಂಬ ಘೋಷವಾಕ್ಯದಡಿ ಡಿಸೆಂಬರ್ 17 ರಂದು ಬೆಳಿಗ್ಗೆ 7 ಗಂಟೆಗೆ ಮ್ಯಾರಥಾನ್ ಸ್ಪರ್ಧೆ ನಡೆಯಲಿದೆ.
ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20ರಿಂದ 22ರ ತನಕ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2024 (Kannada sahitya sammelana 2024) ಅಂಗವಾಗಿ ‘ಕನ್ನಡಕ್ಕಾಗಿ ಓಟ’ ಎಂಬ ಘೋಷವಾಕ್ಯದೊಂದಿಗೆ ಮ್ಯಾರಥಾನ್ ಸ್ಪರ್ಧೆಯನ್ನು (Marathon competition) ಹಮ್ಮಿಕೊಳ್ಳಲಾಗಿದೆ. ನಾಳೆ ಅಂದರೆ ಡಿಸೆಂಬರ್ 17ರಂದು ಬೆಳಿಗ್ಗೆ 7 ಗಂಟೆಗೆ ಮ್ಯಾರಥಾನ್ ಸ್ಪರ್ಧೆ ನಗರದ ಸರ್ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಿಂದ ಸಮ್ಮೇಳನ ನಡೆಯುವ ಸ್ಥಳ (ಸ್ಯಾಂಟೋ ಆಸ್ಪತ್ರೆ ಹಿಂಭಾಗ)ದವರೆಗೆ ಹಮ್ಮಿಕೊಳ್ಳಲಾಗಿದೆ.
ಇಂದು (ಡಿಸೆಂಬರ್ 15) ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ ರವಿಕುಮಾರ್ ಅವರು 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಏರ್ಪಡಿಸಲಾಗಿರುವ ‘ಕನ್ನಡಕ್ಕಾಗಿ ಓಟ’ ಮ್ಯಾರಥಾನ್ ಕಾರ್ಯಕ್ರಮದ ಟೀ ಶರ್ಟ್ ಬಿಡುಗಡೆ ಮಾಡಿ ಮಾತನಾಡಿದ್ದು, ಈ ಸ್ಪರ್ಧೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು. ಪಾಲ್ಗೊಳ್ಳುವ ಎಲ್ಲರಿಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಮನವಿ ಮಾಡಿದ್ದಾರೆ.
ಎಲ್ಲಾ ಸಿದ್ಧತೆ ಮಾಡಲಾಗಿದೆ ಎಂದ ಶಾಸಕ
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಕುಡಿಯುವ ನೀರು, ಬಿಸ್ಕೆಟ್ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಬಂದೋಬಸ್ತ್ ವ್ಯವಸ್ಥೆ, ವೈದ್ಯರ ತಂಡ ಸೇರಿದಂತೆ ಎಲ್ಲಾ ಸಕಲ ಸಿದ್ದತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ ಎಂದು ಶಾಸಕ ಹೇಳಿದರು. ಆರೋಗ್ಯಕ್ಕಾಗಿ ಓಡಿ ನಿಮ್ಮ ಆರೋಗ್ಯವನ್ನು ನೀವೇ ವೃದ್ಧಿಸಿಕೊಳ್ಳಬೇಕು. ಅದಕ್ಕಾಗಿಯಾದರೂ ಓಡಬೇಕು. ಸಾರ್ವಜನಿಕರು ಸಂತೋಷದಿಂದ ಈ ಸ್ಪರ್ಧೆಯಲ್ಲಿ ಭಾಗಿಯಾಗಬೇಕು ಎಂದು ಕೋರಿದ್ದಾರೆ.
ಎಲ್ಲಾ ಅಧಿಕಾರಿ, ಸಿಬ್ಬಂದಿ ಭಾಗವಹಿಸಿ ಎಂದ ಜಿಲ್ಲಾಧಿಕಾರಿ
ಜಿಲ್ಲಾಧಿಕಾರಿ ಡಾ ಕುಮಾರ ಅವರು ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸುವ ಸಲುವಾಗಿ ಮತ್ತು ಸಮ್ಮೇಳನದ ಅರಿವು ಮೂಡಿಸುವ ಸಲುವಾಗಿ ‘ಕನ್ನಡಕ್ಕಾಗಿ ಓಟ’ ಎಂಬ ಘೋಷವಾಕ್ಯದಡಿ ಡಿಸೆಂಬರ್ 17 ರಂದು ಬೆಳಿಗ್ಗೆ 7 ಗಂಟೆಗೆ ಮ್ಯಾರಥಾನ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನ ಹಿಂದೆಂದಿಗಿಂತಲೂ ವಿಶಿಷ್ಟಮಯವಾಗಿ ಹಾಗೂ ವಿಶ್ವಮಟ್ಟದಲ್ಲಿ ಹೆಸರು ಮಾಡುವ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆಯಲ್ಲಿರುವ ಎಲ್ಲಾ ಸಾರ್ವಜನಿಕರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಎಲ್ಲಾ ಸಂಘ-ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಎಲ್ಲಾ ಅಧಿಕಾರಿ, ಸಿಬ್ಬಂದಿಗಳು ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿ ಎಂದು ಹೇಳಿದ್ದಾರೆ.
ಸ್ಪರ್ಧೆಯಲ್ಲಿ ಸುಮಾರು 35,000 ದಿಂದ 40 ಸಾವಿರದವರೆಗೂ ಜನರು ಭಾಗವಹಿಸಬೇಕು. ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ವಿನಯ್ ಗುರೂಜಿ, ನಟ-ನಟಿಯರು ಕೂಡ ಆಗಮಿಸಲಿದ್ದಾರೆ ಎಂದಿದ್ದಾರೆ. ನಗರಸಭೆ ಅಧ್ಯಕ್ಷ ಎಂವಿ ಪ್ರಕಾಶ್ (ನಾಗೇಶ್), ಮುಡಾ ಅಧ್ಯಕ್ಷ ನಹೀಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಮೋಹನ್, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂಚಾಲಕಿ ಮೀರಾ ಶಿವಲಿಂಗಯ್ಯ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಗೌರವ ಕಾರ್ಯದರ್ಶಿ ವಿ ಹರ್ಷ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.