ಸ್ಮೃತಿ ಮಂಧಾನ-ಜೆಮಿಮಾ ರೋಡ್ರಿಗಸ್ ಅಬ್ಬರ; ಮೊದಲ ಟಿ20ಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ 49 ರನ್ಗಳ ಜಯ
India women vs West Indies Women: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ 49 ರನ್ಗಳ ಭರ್ಜರಿ ಗೆಲುವು ಸಾಧಿಸಿದ್ದು, ಸರಣಿಯಲ್ಲಿ ಮುನ್ನಡೆ ಪಡೆದಿದೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಅವರದ್ದೇ ನೆಲದಲ್ಲಿ 3-0 ಅಂತರದಿಂದ ಹೀನಾಯ ಸೋಲು ಕಂಡಿದ್ದ ಭಾರತ ಮಹಿಳಾ ತಂಡ, ಇದೀಗ ತವರಿನಲ್ಲಿ ನಡೆದ ವೆಸ್ಟ್ ಇಂಡೀಸ್ ಎದುರಿನ ಮೊದಲ ಟಿ20ಐ ಪಂದ್ಯದಲ್ಲಿ 49 ರನ್ಗಳಿಂದ ಭರ್ಜರಿ ಜಯ ಸಾಧಿಸಿದೆ. ನವೀ ಮುಂಬೈನ ಡಾ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಮೈದಾನದಲ್ಲಿ ನಡೆದ ಮೊದಲ ಚುಟುಕು ಪಂದ್ಯದಲ್ಲಿ ಭಾರತ ತಂಡ ನೀಡಿದ್ದ 195 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಲು ವಿಫಲವಾದ ವಿಂಡೀಸ್ 147 ರನ್ ಗಳಿಸಲಷ್ಟೇ ಶಕ್ತವಾಯಿತು. ಗೆದ್ದ ಭಾರತ 1-0ರಲ್ಲಿ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್ಗೆ 50 ರನ್ ಹರಿದು ಬಂತು. ಸ್ಮೃತಿ ಮಂಧಾನ ಮತ್ತು ಉಮಾ ಚೆಟ್ರಿ ವಿಂಡೀಸ್ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿದರು. ನಿಧಾನವಾಗಿ ಬ್ಯಾಟಿಂಗ್ ನಡೆಸಿದ ಉಮಾ 26 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರು. ಬಳಿಕ ಮಂಧಾನಗೆ ಜೊತೆಯಾದ ಜೆಮಿಮಾ ರೊಡ್ರಿಗಸ್ ಅಬ್ಬರದ ಬ್ಯಾಟಿಂಗ್ ನಡೆಸಿದರು. ಈ ಜೋಡಿ ಸಹ 2ನೇ ವಿಕೆಟ್ಗೆ 81 ರನ್ಗಳ ಪಾಲುದಾರಿಕೆ ಒದಗಿಸಿತು. ಇದು ಬೃಹತ್ ಗುರಿ ಪೇರಿಸುವ ಮುನ್ಸೂಚನೆ ನೀಡಿತು. ಇದರ ನಡುವೆ ಮಂಧಾನ ಮತ್ತು ಜೆಮಿಮಾ ಅರ್ಧಶತಕ ಸಿಡಿಸಿ ಮಿಂಚಿದರು.
ಜೆಮಿಮಾ-ಸ್ಮೃತಿ ಮಿಂಚು
ಆಸೀಸ್ ನೆಲದಲ್ಲಿ ಸದ್ದು ಮಾಡದ ಸ್ಮೃತಿ, ವಿಂಡೀಸ್ ವಿರುದ್ಧದ ಮೊದಲ ಟಿ20ಯಲ್ಲೇ ಭರ್ಜರಿ ಅರ್ಧಶತಕ ಬಾರಿಸಿದರು. 33 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಿತ 54 ರನ್ ಸಿಡಿಸಿ ಔಟಾದರು. ಸ್ಮೃತಿ ಔಟಾದರೂ ಜೆಮಿಮಾ ಅಬ್ಬರ ನಿಲ್ಲಿಸಲಿಲ್ಲ. 35 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಹಿತ 73 ರನ್ ಬಾರಿಸಿ ರನೌಟ್ ಆದರು. ಜೆಮಿಮಾ ಔಟಾದ ನಂತರ ಸ್ಕೋರ್ ಏರಲಿಲ್ಲ. ರಿಚಾ ಘೋಷ್ 14 ಎಸೆತಗಳಲ್ಲಿ 20 ರನ್ ಸಿಡಿಸಿದರೆ, ಹರ್ಮನ್ ಪ್ರೀತ್ ಕೌರ್ 11 ಎಸೆತಗಳಲ್ಲಿ 13 ರನ್ ಸಿಡಿಸಿ ಅಜೇಯರಾದರು. ನಿಗದಿತ 20 ಓವರ್ಗಳಲ್ಲಿ ಭಾರತ 4 ವಿಕೆಟ್ ನಷ್ಟಕ್ಕೆ 195 ರನ್ ಪೇರಿಸಿತು.
ವೆಸ್ಟ್ ಇಂಡೀಸ್ ತತ್ತರ
ಬೃಹತ್ ಟಾರ್ಗೆಟ್ ಹಿಂಬಾಲಿಸಿದ ವಿಂಡೀಸ್, ಆರಂಭದಲ್ಲೇ ಹೀಲಿ ಮ್ಯಾಥ್ಯೂಸ್ ವಿಕೆಟ್ ಕಳೆದುಕೊಂಡಿತು. ಟಿಟಾಸ್ ಸಧು ವಿಕೆಟ್ ಪಡೆದರು. ಬಳಿಕ ಶೆಮೈನ್ ಕ್ಯಾಂಪ್ಬೆಲ್ಲೆ ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಈ ವೇಳೆ ದೀಪ್ತಿ ಶರ್ಮಾ ವಿಕೆಟ್ ಪಡೆದರು. ಬಳಿಕ ಕಿಯಾನಾ ಜೋಸೆಫ್ 49 ಮತ್ತು ಡಿಯಾಂಡ್ರಾ ಡಾಟಿನ್ 52 ರನ್ ಸಿಡಿಸಿ ಮಿಂಚಿದರು. ಅಲ್ಲದೆ, ತಂಡಕ್ಕೆ ಆಸರೆಯಾದರು. ಆ ಮೂಲಕ ಗೆಲುವಿನ ಆಸೆಯನ್ನು ಹೆಚ್ಚಿಸಿದರು. ಆದರೆ ಟಿಟಾಸ್ ಸಧು ಇಬ್ಬರಿಗೂ ಗೇಟ್ಪಾಸ್ ನೀಡಿ ಭಾರತ ತಂಡಕ್ಕೆ ಮೇಲುಗೈ ತಂದರು. ಚಿನೆಲ್ಲೆ ಹೆನ್ರಿ 7, ಶಬಿಕಾ ಗಜನಾಬಿ 15, ಜೈದಾ ಜೇಮ್ಸ್ 5 ರನ್ ಗಳಿಸಿ ನಿರಾಸೆ ಮೂಡಿಸಿದರು. ಅಂತಿಮವಾಗಿ 20 ಓವರ್ಗಳ ಮುಕ್ತಾಯಕ್ಕೆ 147 ರನ್ ಪೇರಿಸಿತು. ಟಿಟಾಸ್ 3, ದೀಪ್ತಿ ಶರ್ಮಾ ಮತ್ತು ರಾಧಾ ಯಾದವ್ ತಲಾ 2 ವಿಕೆಟ್ ಪಡೆದರು.
- 2ನೇ ಟಿ20 ಪಂದ್ಯ ಡಿಸೆಂಬರ್ 17ರಂದು ನಡೆಯಲಿದೆ. ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯಲಿದೆ.
- 3ನೇ ಟಿ20 ಪಂದ್ಯ ಡಿಸೆಂಬರ್ 19ರಂದು ನಡೆಯಲಿದೆ. ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯಲಿದೆ.
ಇದನ್ನೂ ಓದಿ: ಇದೆಂತಹ ಅಚ್ಚರಿ; ಕೇವಲ 36 ಗಂಟೆಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಮೂವರು ಆಟಗಾರರು ನಿವೃತ್ತಿ!