ಕನ್ನಡ ಸುದ್ದಿ  /  Cricket  /  Manoj Tiwary Says Mi Captain Hardik Pandya Booed Louder In Wankhede Stadium Mumbai After Replacing Rohit Sharma Jra

ಮುಂಬೈನಲ್ಲಿ ಹಾರ್ದಿಕ್ ವಿರುದ್ಧ ಜೋರಾಗಿ ಘೋಷಣೆ ಕೇಳುತ್ತೆ; ನಾಯಕತ್ವ ಬದಲಾವಣೆ ಯಾರೂ ನಿರೀಕ್ಷಿಸಿರಲಿಲ್ಲ: ಮನೋಜ್ ತಿವಾರಿ

Manoj Tiwary: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನೂತನ ನಾಯಕ ಹಾರ್ದಿಕ್ ಪಾಂಡ್ಯ ವಿರುದ್ಧ ಜೋರಾಗಿ ಘೋಷಣೆ ಕೇಳಿಬರುವ ಸಾಧ್ಯತೆ ಇದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಹೇಳಿದ್ದಾರೆ.

ಮುಂಬೈನಲ್ಲಿ ಹಾರ್ದಿಕ್ ವಿರುದ್ಧ ಜೋರಾಗಿ ಘೋಷಣೆ ಕೇಳುತ್ತೆ ಎಂದ ಮನೋಜ್ ತಿವಾರಿ
ಮುಂಬೈನಲ್ಲಿ ಹಾರ್ದಿಕ್ ವಿರುದ್ಧ ಜೋರಾಗಿ ಘೋಷಣೆ ಕೇಳುತ್ತೆ ಎಂದ ಮನೋಜ್ ತಿವಾರಿ

ಐಪಿಎಲ್‌ನಲ್ಲಿ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿರುವ ತಂಡ ಎಂದಾಗ ಥಟ್ಟನೆ ನೆನಪಾಗುವುದು ಆರ್‌ಸಿಬಿ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಹೊರತುಪಡಿಸಿದರೆ, ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳಿಗೂ ಇದೇ ರೀತಿಯ ಬೆಂಬಲ ಸಿಗುತ್ತದೆ. ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿ ಪಂದ್ಯಗಳಿಗೆ ಅಭಿಮಾನಿಗಳ ಹಾಜರಿ ಹೇಗಿರುತ್ತೋ, ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆಯೂ ಮೈದಾನ ಪೂರ್ತಿ ನೀಲಿಯಾಗಿರುತ್ತದೆ. ಈ ತಂಡಗಳ ತವರಲ್ಲಿ ಆ ತಂಡಗಳನ್ನು ಎದುರಿಸುವುದು ಎದುರಾಳಿಗೆ ದೊಡ್ಡ ಸವಾಲು. ಆದರೆ, ಈ ಬಾರಿ ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಅದರದ್ದೇ ತವರಲ್ಲಿ ಹಳೆಯ ಬೆಂಬಲ ಸಿಗುವ ಸಾಧ್ಯತೆ ತೀರಾ ಕಡಿಮೆ.

ಪ್ರಸಕ್ತ ಆವೃತ್ತಿಯಲ್ಲಿ ಮುಂಬೈ ತಂಡವು ತನ್ನ ತವರಿನಲ್ಲಿ ಇನ್ನಷ್ಟೇ ಪಂದ್ಯವಾಡಬೇಕಿದೆ. ಇದೀಗ ವಾಂಖೆಡೆ ಸ್ಟೇಡಿಯಂನಲ್ಲಿ ಅಭಿಮಾನಿಗಳ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ. ಇದಕ್ಕೆ ಕಾರಣ‌ ನಾಯಕತ್ವ ಬದಲಾವಣೆ. ಮುಂಬೈ ಇಂಡಿಯನ್ಸ್ ತಂಡದ ನೂತನ ನಾಯಕನಾಗಿ ಹಾರ್ದಿಕ್ ಪಾಂಡ್ಯ ಆಯ್ಕೆಯಾದ ಬಳಿಕ, ತಂಡದ ಅಭಿಮಾನಿಗಳ ವರ್ತನೆ ಬದಲಾಗಿದೆ. ರೋಹಿತ್‌ ಅವರನ್ನು ಕೆಳಗಿಳಿಸಿ ಹಾರ್ದಿಕ್‌ ಅವರನ್ನು ನಾಯಕನಾಗಿ ನೇಮಿಸಿರುವುದು ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಹೀಗಾಗಿ ಪಂದ್ಯದ ವೇಳೆ ಮುಂಬೈ ಹಾಗೂ ರೋಹಿತ್‌ ಶರ್ಮಾ ಅಭಿಮಾನಿಗಳು ಹಾರ್ದಿಕ್‌ ಪಾಂಡ್ಯ ವಿರುದ್ಧ ಘೋಷಣೆ ಕೂಗಬಹುದು ಎಂದು ಭಾರತದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಅಭಿಪ್ರಾಯಪಟ್ಟಿದ್ದಾರೆ.

ಭಾರತ ತಂಡದ ನಾಯಕನೂ ಆಗಿರುವ ರೋಹಿತ್ ಶರ್ಮಾ, ಮುಂಬೈ ಫ್ರಾಂಚೈಸಿಯ ಯಶಸ್ವಿ ನಾಯಕ. ರೋಹಿತ್ ಮತ್ತು ಧೋನಿ ಇಬ್ಬರೂ ತಲಾ ಐದು ಐಪಿಎಲ್‌ ಟ್ರೋಫಿ ಗೆದ್ದ ನಾಯಕರು ಎಂಬ ದಾಖಲೆ ಹೊಂದಿದ್ದಾರೆ. ಈ ಯಶಸ್ವಿ ನಾಯಕತ್ವದ ಹೊರತಾಗಿಯೂ, ರೋಹಿತ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಯ್ತು. ಅಷ್ಟೇ ಅಲ್ಲ ಗುಜರಾತ್ ಟೈಟಾನ್ಸ್ ನಾಯಕನಾಗಿದ್ದ ಹಾರ್ದಿಕ್ ಅವರನ್ನು ಮರಳಿ ತಂಡಕ್ಕೆ ಕರೆಸಿ ನಾಯಕ ಸ್ಥಾನ ನೀಡಲಾಯ್ತು. ಈ ಕುರಿತು ಯಾವೊಬ್ಬ ಅಭಿಮಾನಿಯೂ ಊಹಿಸಿರಲಿಲ್ಲ. ಫ್ರಾಂಚೈಸಿ ನಿರ್ಧಾರ ಪ್ರಕಟಿಸುತ್ತಿದ್ದಂತೆಯೇ, ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಅಸಮಾಧಾನ ಕೇಳಿ ಬಂತು. ಸೋಷಿಯಲ್‌ ಮೀಡಿಯಾದಲ್ಲಿ ಲಕ್ಷಾಂತರ ಫಾಲೊವರ್‌ಗಳನ್ನು ಮುಂಬೈ ಕಳೆದುಕೊಂಡಿತು.

ಇದನ್ನೂ ಓದಿ | ಎಸ್‌ಆರ್‌ಎಚ್‌ ಪರ ಪದಾರ್ಪಣೆ ಪಂದ್ಯದಲ್ಲೇ ಸ್ಫೋಟಕ ಆಟ; ಮುಂಬೈ ಇಂಡಿಯನ್ಸ್ ವಿರುದ್ಧ ಟ್ರಾವಿಸ್‌ ಹೆಡ್ ದಾಖಲೆಯ ಅರ್ಧಶತಕ

ಮುಂಬೈ ತಂಡವು ಪ್ರಸಕ್ತ ಆವೃತ್ತಿಯ ಮೊದಲ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ತಂಡವನ್ನು ಅಹಮದಾಬಾದ್‌ನಲ್ಲಿ ಎದುರಿಸಿತು. ಈ ವೇಳೆ ಹಾರ್ದಿಕ್‌ ವಿರುದ್ಧದ ಘೋಷಣೆ, ಕೂಗು ಮೈದಾನದಲ್ಲಿ ಕೇಳಿಬಂತು. ಮೈದಾನ ತುಂಬೆಲ್ಲಾ ಅಭಿಮಾನಿಗಳು ರೋಹಿತ್‌ ಪರ ಘೋಷಣೆ ಕೂಗಿದರು. ಏನೇ ಆದರೂ ನಮ್ಮ ನಾಯಕ ಹಿಟ್‌ಮ್ಯಾನ್‌ ಎಂಬೆಲ್ಲಾ ಪೋಸ್ಟರ್‌ಗಳು ಕಾಣಸಿಕ್ಕವು. ಇದೀಗ ಇದೇ ರೀತಿಯ ವಾತಾವರಣ ಮುಂಬೈನಲ್ಲೂ ಎದುರಾಗುವ ಸಾಧ್ಯತೆ ಇದೆ.

ಯಾರೂ ನಿರೀಕ್ಷೆ ಮಾಡಿರಲಿಲ್ಲ

“ಮುಂಬೈನಲ್ಲಿ ಹಾರ್ದಿಕ್ ಅವರನ್ನು ಹೇಗೆ ಸ್ವಾಗತಿಸಲಾಗುತ್ತದೆ ಎಂಬುದನ್ನು ನೋಡಬೇಕು. ಏಕೆಂದರೆ ಈ ಮೈದಾನದಲ್ಲಿ ಇನ್ನೂ ಸ್ವಲ್ಪ ಜೋರಾಗಿ ಅಭಿಮಾನಿಗಳು ಕೂಗುತ್ತಾರೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಒಬ್ಬ ಸಾಮಾನ್ಯ ಅಭಿಮಾನಿಯಾಗಿ, ಮುಂಬೈ ಅಭಿಮಾನಿಯಾಗಿ ಅಥವಾ ರೋಹಿತ್ ಶರ್ಮಾ ಅಭಿಮಾನಿಯಾಗಿ; ಹಾರ್ದಿಕ್‌ಗೆ ನಾಯಕತ್ವ ನೀಡಲಾಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ” ಎಂದು ತಿವಾರಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ನನಗಂತೂ ಕಾರಣವೇನು ಎಂಬುದು ಗೊತ್ತಿಲ್ಲ

“ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡಕ್ಕೆ ಐದು ಟ್ರೋಫಿಗಳನ್ನು ನೀಡಿದ್ದರೂ, ಅವರು ನಾಯಕತ್ವ ಕಳೆದುಕೊಳ್ಳಬೇಕಾಯ್ತು. ಇದಕ್ಕೆ ಕಾರಣಗಳು ಏನು ಎಂದು ನನಗೆ ತಿಳಿದಿಲ್ಲ. ಆದರೆ ಇದು ಅಭಿಮಾನಿಗಳಿಗೆ ಸರಿ ಕಾಣಲಿಲ್ಲ ಎಂದು ನಾನು ಭಾವಿಸುತ್ತೇನೆ. ಹೀಗಾಗಿ ಮೈದಾನದಲ್ಲಿ ಇಂಥಾ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ” ಎಂದು ಅವರು ತಿಳಿಸಿದ್ದಾರೆ.

IPL_Entry_Point