ಫಿಲ್ ಸಾಲ್ಟ್, ಜಿತೇಶ್ ಶರ್ಮಾ ಖರೀದಿಗೆ ಹಣದ ಹೊಳೆ ಹರಿಸಿದ ಆರ್‌ಸಿಬಿ; ಜಾಕ್ಪಾಟ್ನೊಂದಿಗೆ ತಂಡಕ್ಕೆ ಮರಳಿದ ಹೇಜಲ್‌ವುಡ್
ಐಪಿಎಲ್ 2025ರ ಆವೃತ್ತಿಗೆ ಆರ್‌ಸಿಬಿ ತಂಡಕ್ಕೆ ವಿಕೆಟ್ ಕೀಪರ್‌ಗಳ ಅಗತ್ಯವಿದೆ. ಅದರಂತೆಯೇ ಐಪಿಎಲ್ ಮೆಗಾ ಹರಾಜಿನಲ್ಲಿ ಫಿಲ್ ಸಾಲ್ಟ್ ಹಾಗೂ ಜಿತೇಶ್ ಶರ್ಮಾ ಮೇಲೆ ಹಣದ ಮಳೆ ಸುರಿಸಿದೆ. ತಂಡದ ಮಾಜಿ ಆಟಗಾರ ಜೋಶ್ ಹೇಜಲ್‌ವುಡ್ ಕೂಡಾ ಆರ್‌ಸಿಬಿ ತಂಡಕ್ಕೆ ಮರಳಿದ್ದಾರೆ.
ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ತಂಡವು ಸೂಕ್ತ ನಾಯಕ ಹಾಗೂ ವಿಕೆಟ್ ಕೀಪರ್ ಹುಡುಕಾಟದಲ್ಲಿದೆ. ಈಗಾಗಲೇ ನಾಯಕನ ಸ್ಥಾನಕ್ಕೆ ಕೆಎಲ್ ರಾಹುಲ್ ಖರೀದಿಯಿಂದ ಹಿಂದೆ ಸರಿದಿರುವ ತಂಡ, ಕೊನೆಗೂ ವಿಕೆಟ್ ಕೀಪರ್ ಖರೀದಿ ಕೆಲಸ ಮುಗಿಸಿದೆ. ಕಳೆದ ಆವೃತ್ತಿಯಲ್ಲಿ ಕೆಕೆಆರ್ ತಂಡದ ವಿಕೆಟ್ ಕೀಪರ್ ಹಾಗೂ ಆರಂಭಿಕ ಆಟಗಾರನಾಗಿದ್ದ ಫಿಲ್ ಸಾಲ್ಟ್, ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡಿದ್ದಾರೆ. ಇಂಗ್ಲೆಂಡ್ ವಿಕೆಟ್ ಕೀಪರ್ ಖರೀದಿಗೆ ಬೆಂಗಳೂರು ತಂಡವು ಬರೋಬ್ಬರಿ 11.50 ಕೋಟಿ ರೂ. ವಿನಿಯೋಗಿಸಿದೆ.
ಕೆಕೆಆರ್ ಕೂಡಾ ತಂಡದ ಮಾಜಿ ಆಟಗಾರನನ್ನು ತೆಕ್ಕೆಗೆ ಹಾಕಿಕೊಳ್ಳಲು ಮುಂದಾಯಿತು. ಆದರೆ, ಆರ್‌ಸಿಬಿ ಕೊನೆಯವರೆಗೆ ಬಿಡ್ ಮಾಡಿ ತಂಡಕ್ಕೆ ವಿಕೆಟ್ ಕೀಪರ್ ಅಂತಿಮಗೊಳಿಸಿದೆ. ಅದಾಗಲೇ ಮತ್ತೊಬ್ಬ ಇಂಗ್ಲೀಷ್ ಆಲ್‌ರೌಂಡರ್ ತಂಡವು ಲಿಯಾಮ್ ಲಿವಿಂಗ್‌ಸ್ಟನ್ ಅವರನ್ನು 8.75 ಕೋಟಿ ರೂ.ಗೆ ಖರೀದಿಸಿತ್ತು. ದಿನದ ಎರಡೂ ಖರೀದಿಯೂ ಇಂಗ್ಲೆಂಡ್ ಆಟಗಾರರಾಗಿದ್ದಾರೆ.
ಜಿತೇಶ್ ಶರ್ಮಾ ಶರ್ಮಾಗೆ 11 ಕೋಟಿ ರೂ ಸುರಿದ ಆರ್‌ಸಿಬಿ
ಭಾರತೀಯ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಶರ್ಮಾ ಖರೀದಿಗೆ ಆರ್‌ಸಿಬಿ ತಂಡ 7 ಕೋಟಿ ರೂ ಮಾಡಿತು. ಈ ವೇಳೆ ಪಂಜಾಬ್ ಕಿಂಗ್ಸ್ ಆರ್‌ಟಿಎಂ ಬಳಸಿತು. ಆದರೆ, 11 ಕೋಟಿಗೆ ಬಿಡ್ ಏರಿಸಿದ ಆರ್‌ಸಿಬಿ, ವಿಕೆಟ್ ಕೀಪರ್ ತೆಕ್ಕೆಗೆ ಹಾಕಿಕೊಂಡಿತು. ಸದ್ಯ ಫೀಲ್ ಸಾಲ್ಟ್ ಜೊತೆಗೆ ಒಬ್ಬ ಭಾರತೀಯ ವಿಕೆಟ್ ಕೀಪರ್ ಕೂಡಾ ಆರ್‌ಸಿಬಿ ಪಾಲಾಗಿದ್ದಾರೆ. ಅತ್ತ ತಂಡದ ಮಾಜಿ ವೇಗಿ ಜೋಶ್ ಹೇಜಲ್‌ವುಡ್‌ಗೆ 12.50 ಕೋಟಿ ಕೊಟ್ಟು ಮತ್ತೊಮ್ಮೆ ತಂಡಕ್ಕೆ ಸ್ವಾಗತಿಸಿದೆ.
2025ರ ಆವೃತ್ತಿಯ ಹರಾಜಿಗೂ ಮುನ್ನ ತಂಡವು ಮೂವರು ಆಟಗಾರರನ್ನು ರಿಟೈನ್ ಮಾಡಿಕೊಂಡಿತ್ತು. ವಿರಾಟ್ ಕೊಹ್ಲಿಯನ್ನು ತಂಡವು 21 ಕೋಟಿ ರೂ.ಗೆ ಉಳಿಸಿಕೊಂಡಿತ್ತು. ಇವರೊಂದಿಗೆ ಮಧ್ಯಮ ಕ್ರಮಾಂಕದ ಬ್ಯಾಟರ್ ರಜತ್ ಪಾಟೀದಾರ್ ಅವರಿಗೆ 11 ಕೋಟಿ ಹಾಗೂ ಎಡಗೈ ವೇಗಿ ಯಶ್ ದಯಾಳ್‌ಗೆ 5 ಕೋಟಿ ರೂ. ಕೊಟ್ಟು ತಂಡದಲ್ಲೇ ಉಳಿಸಿಕೊಂಡಿತು.
ಬಲಿಷ್ಠ ಆಟಗಾರರ ನಿರ್ಲಕ್ಷ್ಯ
ತಂಡವು ಇಬ್ಬರು ವಿದೇಶಿಗರನ್ನು ಮಾತ್ರ ಖರೀದಿಸಿದ್ದು, ಭಾರತೀಯರ ಮೇಲೆ ಬಿಡ್ ಮಾಡಲು ಹಿಂದೇಟು ಹಾಕಿದೆ. ಇದೇ ವೇಳೆ ಕೆಎಲ್ ರಾಹುಲ್, ಮ್ಯಾಕ್ಸ್‌ವೆಲ್, ರಚಿನ್ ರವೀಂದ್ರ, ಡೇವಿಡ್ ಮಿಲ್ಲರ್, ಕಗಿಸೊ ರಬಾಡ ಖರೀದಿಗೂ ಮನಸ್ಸು ಮಾಡಿಲ್ಲ. ತಂಡಕ್ಕೆ ಇನ್ನೂ ಪ್ರಬಲ ನಾಯಕನೊಬ್ಬ ಸಿಕ್ಕಿಲ್ಲ.
ಆಸ್ಟ್ರೇಲಿಯಾ ಆಲ್‌ರೌಂಡರ್ ಮ್ಯಾಕ್ಸ್‌ವೆಲ್ 2 ಕೋಟಿ ರೂಪಾಯಿ ಮೂಲಬೆಲೆಗೆ ಹರಾಜಿಗೆ ಬಂದರು. ಕೊನೆಗೆ 4.20 ಕೋಟಿಗೆ ಪಂಜಾಬ್ ಕಿಂಗ್ಸ್ ಖರೀದಿ ಮಾಡಿತು. ಆದರೆ, ಆರ್‌ಸಿಬಿ ತಂಡ ಅಲ್ಪಮೊತ್ತಕ್ಕೆ ಆರ್‌ಟಿಎಂ ಕಾರ್ಡ್ ಬಳಸಲು ಹಿಂದೆ ಸರಿಯಿತು. ಮಿಚೆಲ್ ಮಾರ್ಷ್ 3.40 ಕೋಟಿಗೆ ಎಲ್‌ಎಸ್‌ಜಿ ಪಾಲಾಗಿದರು. ರಹಮಾನುಲ್ಲಾ ಗುರ್ಬಾಜ್ 2 ಕೋಟಿ ರೂ ಮೂಲ ಬೆಲೆಗೆ ಕೆಕೆಆರ್ ಪಾಲಾದರು.
ಮಾರ್ಕಸ್ ಸ್ಟೋಯ್ನಿಸ್ ಖರೀದಿಸಿದ ಪಂಜಾಬ್
ಆಸೀಸ್ ಆಲ್‌ರೌಂಡರ್ ಮಾರ್ಕಸ್ ಸ್ಟೋಯ್ನಿಸ್, 11 ಕೋಟಿಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ. ಆರ್‌ಟಿಎಂ ಕಾರ್ಡ್ ಬಳಸಲು ಎಲ್ಎಸ್‌ಜಿ ಹಿಂದೆ ಸರಿದ ಕಾರಣದಿಂದ ಪಂಜಾಬ್ ತಂಡ ಆಲ್‌ರೌಂಡರ್ ಅನ್ನು ತೆಕ್ಕೆಗೆ ಹಾಕಿಕೊಂಡಿದೆ.
ಕೆಕೆಆರ್ ಮಾಜಿ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್, 2 ಕೋಟಿ ರೂ ಮೂಲ ಬೆಲೆಯಿಂದ ಭಾರಿ ಮೊತ್ತಕ್ಕೆ ಬಿಡ್ ಆದರು. ಕೆಕೆಆರ್ ಜೊತೆಗೆ ಆರ್‌ಸಿಬಿ ತಂಡ ಕೂಡಾ ಭಾರಿ ಬೆಲೆ ಕೊಡಲು ಮುಂದಾಯ್ತು. ಭಾರಿ ಬಿಡ್ ವಾರ್ ನಡುವೆಯೂ ಕೆಕೆಆರ್ 23.75 ಕೋಟಿ ರೂಪಾಯಿ ಕೊಟ್ಟು ತನ್ನ ಆಟಗಾರನ್ನು ತಂಡದಲ್ಲೇ ಉಳಿಸಿಕೊಂಡಿತು.
ಅಶ್ವಿನ್, ರಚಿನ್ ಸಿಎಸ್‌ಕೆ ಪಾಲು
ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಅವರನ್ನು 9.75 ಕೋಟಿ ರೂಪಾಯಿ ಬೆಲೆಗೆ ಸಿಎಸ್‌ಕೆ ತಂಡ ಖರೀದಿಸಿತು. ರಚಿನ್ ರವೀಂದ್ರ ಅವರಿಗೆ 3.20 ಕೋಟಿಗೆ ಪಂಜಾಬ್ ಕಿಂಗ್ಸ್ ಬಿಡ್ ಮಾಡಿತು. ಸಿಎಸ್‌ಕೆ ಆರ್‌ಟಿಎಂ ಕಾರ್ಡ್ ಬಳಸಿತು. 4 ಕೋಟಿಯೊಂದಿಗೆ ಆಟಗಾರನನ್ನು ತನ್ನಲ್ಲೇ ಉಳಿಸಿಕೊಂಡಿತು.
ಹರ್ಷಲ್ ಪಟೇಲ್ ಅವರನ್ನು ಹೈದರಾಬಾದ್ ತಂಡ 8 ಕೋಟಿಗೆ ಆಟಗಾರನನ್ನು ತೆಕ್ಕೆಗೆ ಹಾಕಿಕೊಂಡಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಆಸೀಸ್ ಸಿಡಿಗುಂಡು ಜೇಕ್ ಫ್ರೇಸರ್ ಮೆಕ್‌ಗುರ್ಕ್ ಖರೀದಿಗೆ ಡೆಲ್ಲಿ ಕ್ಯಾಪಿಟಲ್ಸ್ ಆರ್‌ಟಿಎಂ ಕಾರ್ಡ್ ಬಳಸಿಕೊಂಡಿತು. 9 ಕೋಟಿ ರೂ.ಗೆ ತಂಡ ಸೇರಿಕೊಂಡರು.