ಕನ್ನಡ ಸುದ್ದಿ  /  Elections  /  Bangalore News Lok Sabha Elections 2024 Karnataka Had 11 Lakh Youth Voters Voting First Time After Effort From Eci Mrt

Lok Sabha Elections 2024: ಕರ್ನಾಟಕದಲ್ಲಿ ಯುವ ಹವಾ, ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ 11 ಲಕ್ಷ ಯುವಕರು

ಚುನಾವಣೆಯಲ್ಲಿ ಮತದಾನ ಪ್ರಮುಖವಾದದ್ದು. ಹದಿನೆಂಟು ವರ್ಷ ದಾಟಿದವರಿಗೆ ನಮ್ಮಲ್ಲಿ ಮತದಾನದ ಹಕ್ಕು ಬರಲಿದೆ. ಭಾರತದಲ್ಲಿ ಪ್ರತಿ ಚುನಾವಣೆಗೆ ಯುವ ಮತದಾರರ ಸಡಗರ ಇದ್ದೇ ಇರುತ್ತದೆ. ಈ ಬಾರಿಯೂ ಕರ್ನಾಟಕದಲ್ಲಿ ಯುವ ಮತದಾರರ ಸಂಖ್ಯೆ ಹೆಚ್ಚೇ ಇದೆ.ವರದಿ: ಎಚ್.ಮಾರುತಿ. ಬೆಂಗಳೂರು

ಯುವ ಮತದಾರರ ಖುಷಿಯ ಕ್ಷಣ.
ಯುವ ಮತದಾರರ ಖುಷಿಯ ಕ್ಷಣ.

ಬೆಂಗಳೂರು: ಇನ್ನೇನು ಲೋಕಸಭೆ ಚುನಾವಣೆಗೆ ದಿನಾಂಕವೂ ಘೋಷಣೆಯಾಗಿದ್ದು, ದಿನಾಂಕವೂ ಸಮೀಪಸಲಿದೆ. ಚುನಾವಣೆ ಎನ್ನುವುದು ಹಬ್ಬವಿದ್ದ ಹಾಗೆ. ಆ ಹಬ್ಬದಲ್ಲಿ ಯುವ ಮತದಾರರೂ ಗಮನ ಸೆಳೆಯುತ್ತಾರೆ. ಪ್ರತಿ ಚುನಾವಣೆಯಲ್ಲೂ ಹೊಸ ಹಾಗೂ ಮೊದಲ ಬಾರಿಗೆ ಮತಚಲಾಯಿಸುವ ಮತದಾರರು ಇದ್ದೇ ಇರುತ್ತಾರೆ. ಈ ಬಾರಿಯೂ ಕರ್ನಾಟಕದಲ್ಲಿ ಬರೋಬ್ಬರಿ 11 ಲಕ್ಷ ಯುವಕರು ಯುವಕರು ಮತ ಚಲಾಯಿಸಲು ಅಣಿಯಾಗಿದ್ದಾರೆ. ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಶೇ. 52 ರಷ್ಟು ಮೊದಲ ಬಾರಿ ಮತ ಹಾಕುತ್ತಿರುವ ಯುವ ಸಮುದಾಯದ ಸಂಖ್ಯೆ ಹೆಚ್ಚಿದೆ. ಬೆಂಗಳೂರಿನಲ್ಲಿಯೇ ಮೊದಲ ಬಾರಿ ಮತ ಹಾಕುವವರ ಪ್ರಮಾಣ 1.1 ಲಕ್ಷ .

ಸಂಖ್ಯೆ ಗಣನೀಯ ಏರಿಕೆ

ಕರ್ನಾಟಕದಲ್ಲಿ ಮೊದಲ ಬಾರಿಗೆ ಮತ ಚಲಾಯಿಸುವ 18-19 ವರ್ಷದೊಳಗಿನ ಮತದಾರರ ಸಂಖ್ಯೆ ಶೇ. 52 ರಷ್ಟು ಹೆಚ್ಚಳವಾಗಿದೆ. 2019 ರಲ್ಲಿ ಈ ವಯೋಮಾನದ ಮತದಾರರ ಸಂಖ್ಯೆ 7,12,606 ರಷ್ಟಿದ್ದರೆ 2024 ರಲ್ಲಿ 10,83,416 ಕ್ಕೆ ಹೆಚ್ಚಳವಾಗಿದೆ.

ಬೆಂಗಳೂರುವೊಂದರಲ್ಲೇ 1.1 ಲಕ್ಷ ಯುವ ಮತದಾರರು ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ನಗರದ ಒಟ್ಟು ಮತದಾರರ ಸಂಖ್ಯೆ 98,43, 577. ಇವರಿಗೆ ಹೋಲಿಸಿದರೆ ಮೊದಲ ಬಾರಿಗೆ ಮತದಾನ ಮಾಡುವವರ ಸಂಖ್ಯೆ ಶೇ. 1.1 ರಷ್ಟಿದೆ.

ಕೇವಲ ಕರ್ನಾಟಕದಲ್ಲಿ ಮಾತ್ರ ಮೊದಲ ಬಾರಿಗೆ ಮತ ಚಲಾಯಿಸುವವರ ಸಂಖ್ಯೆಯಲ್ಲಿ ಏರಿಕೆಯಾಗಿಲ್ಲ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಒಡಿಶಾದಲ್ಲಿಯೂ ಯುವ ಮತದಾರರ ಸಂಖ್ಯೆ ಏರಿಕೆಯಾಗಿದೆ.

ಸಾಮಾಜಿಕ ಮಾಧ್ಯಮ ಬಳಕೆ

ರಾಜ್ಯ ಚುನಾವಣಾ ಆಯೋಗ ಮತ್ತು ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಕಾರ್ಯಕ್ರಮ ( ಎಸ್ ವಿ ಇ ಇ ಪಿ) ಜಂಟಿಯಾಗಿ ಹಮ್ಮಿಕೊಂಡ ಅರಿವು ಮೂಡಿಸುವ ಕಾರ್ಯಕ್ರಮದ ಫಲವಾಗಿ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ಮನೋಜ್ ಕುಮಾರ್ ಮೀನಾ ಅಭಿಪ್ರಾಯಪಡುತ್ತಾರೆ.

ಇನ್ ಸ್ಟಾಗ್ರಾಂ ಮತ್ತು ಫೇಸ್ ಬುಕ್ ನಲ್ಲಿ ಹೆಚ್ಚಿನ ಪ್ರಚಾರ ನಡೆಸಿದ್ದರಿಂದಲೂ ಯುವಕರು ನೋಂದಣಿಗೆ ಆಸಕ್ತಿ ತೋರಿಸಿದ್ದಾರೆ. ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಕಾರಣದಿಂದಲೂ ಯುವ ಮತದಾರರು ಮತದಾನಕ್ಕೆ ಮುಂದಾಗಿದ್ದಾರೆ.

ಯುವ ಮತದಾರರನ್ನು ಚುನಾವಣಾ ಆಯೋಗದ ಪೋಸ್ಟ್ ಗಳತ್ತ ಆಕರ್ಷಿಸಲು ಮಾರಿಯೋ ಎಂಬ ಗೇಮ್ ಮತ್ತು ಬಾಯಾರಿಕೆಯಿಂದ ಬಳಲುತ್ತಿರುವ ಕಾಗೆ ಮತ್ತು ಸೂಪರ್ ಮ್ಯಾನ್ ಮಾಡಲಾದ ಕಥೆಗಳನ್ನು ಹೇಳಲಾಗುತ್ತಿತ್ತು. ಇದರಿಂದ ಯುವಕರಿಗೆ ಆಸಕ್ತಿ ಹೆಚ್ಚಿ ನೋಂದಣಿಗೆ ಮುಂದಾಗಿದ್ದಾರೆ ಎಂದೂ ಆಯೋಗದ ಮಾಹಿತಿ ತಂತ್ರಜ್ಞಾನ ಮತ್ತು ಮಾಧ್ಯಮ ವಿಭಾಗದ ವಿಶೇಷ ಅಧಿಕಾರಿ ಸೂರ್ಯ ಸೇನ್ ಹೇಳುತ್ತಾರೆ.

ಬೆಂಗಳೂರಲ್ಲಿ ಹೇಗೆ

ರಾಜ್ಯದ ಹೈಸ್ಕೂಲ್, ಪಿಯು ಮತ್ತು ಪದವಿ ಕಾಲೇಜುಗಳಲ್ಲಿ ಸುಮಾರು 27,000 ಚುನಾವಣಾ ಸಾಕ್ಷರತೆ ಕ್ಲಬ್ ಗಳನ್ನು ಸ್ಥಾಪಿಸಲಾಗಿತ್ತು. ಈ ಕ್ಲಬ್ ಗಳಲ್ಲಿ ನೋಡಲ್ ಅಧಿಕಾರಿಯೊಬ್ಬರನ್ನು ನಿಯೋಜಿಸಲಾಗಿತ್ತು. ಇವರು ಮತದಾನದ ಸಾಕ್ಷರತೆ, ಮಹತ್ವ ಮತ್ತು ಪ್ರಾಮುಖ್ಯತೆಯನ್ನು ಕುರಿತು ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು ನಗರ ವಿಭಾಗದಲ್ಲಿ ಅತಿ ಹೆಚ್ಚು ಯುವ ಮತದಾರರಿದ್ದಾರೆ. 25,782 ಪುರುಷ ಮತ್ತು 22,880 ಮಹಿಳೆಯರು ಸೇರಿ 48,668 ಮಂದಿ ಮೊದಲ ಬಾರಿಗೆ ಹಕ್ಕು ಚಲಾಯಿಸಲಿದ್ದಾರೆ.

ಬೆಂಗಳೂರು ಉತ್ತರ ವಿಭಾಗದಲ್ಲಿ ಪುರುಷ (12,919), ಮಹಿಳೆ(11,042) ಸೇರಿ ಒಟ್ಟು 22,961 ಯುವ ಮತದಾರರಿದ್ದಾರೆ. ಬೆಂಗಳೂರು ಕೇಂದ್ರ ವಿಭಾಗದಲ್ಲಿ ಪುರುಷ (10,557), ಮಹಿಳೆ(9,916) ಸೇರಿ ಒಟ್ಟು 20,475 ಯುವ ಮತದಾರರಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಪುರುಷ (10,391), ಮಹಿಳೆ(9,746) ಸೇರಿ ಒಟ್ಟು 20,138 ಯುವ ಮತದಾರರಿದ್ದಾರೆ.

(ವರದಿ: ಎಚ್. ಮಾರುತಿ, ಬೆಂಗಳೂರು)