ಶಾಸ್ತ್ರಿ, ಕರಿಯ ಬಳಿಕ ದರ್ಶನ್‌ ನಟನೆಯ ಪೊರ್ಕಿ ಸಿನಿಮಾ ಮರು ಬಿಡುಗಡೆ; ಈ ವಾರ ಹೊಸಬರ ಇನ್ನೂ ಐದು ಸಿನಿಮಾಗಳ ಆಗಮನ
ಕನ್ನಡ ಸುದ್ದಿ  /  ಮನರಂಜನೆ  /  ಶಾಸ್ತ್ರಿ, ಕರಿಯ ಬಳಿಕ ದರ್ಶನ್‌ ನಟನೆಯ ಪೊರ್ಕಿ ಸಿನಿಮಾ ಮರು ಬಿಡುಗಡೆ; ಈ ವಾರ ಹೊಸಬರ ಇನ್ನೂ ಐದು ಸಿನಿಮಾಗಳ ಆಗಮನ

ಶಾಸ್ತ್ರಿ, ಕರಿಯ ಬಳಿಕ ದರ್ಶನ್‌ ನಟನೆಯ ಪೊರ್ಕಿ ಸಿನಿಮಾ ಮರು ಬಿಡುಗಡೆ; ಈ ವಾರ ಹೊಸಬರ ಇನ್ನೂ ಐದು ಸಿನಿಮಾಗಳ ಆಗಮನ

ಕರ್ನಾಟಕದಲ್ಲಿ ತಮಿಳಿನ ವೆಟ್ಟೈಯನ್‌ ಮತ್ತು ಕನ್ನಡದ ಮಾರ್ಟಿನ್‌ ಸಿನಿಮಾಗಳ ಅಬ್ಬರ ಈ ವಾರವೂ ಮುಂದುವರಿದಿದೆ. ಹೀಗಿರುವಾಗಲೇ ಮತ್ತೊಂದು ಶುಕ್ರವಾರ ಬಂದೇ ಬಿಟ್ಟಿದೆ. ಈ ವಾರ (ಅ.18) ಬಹುತೇಕ ಹೊಸಬರ ಸಿನಿಮಾಗಳೇ ಚಿತ್ರಮಂದಿರಕ್ಕೆ ಆಗಮಿಸುತ್ತಿವೆ.

ಅಕ್ಟೋಬರ್‌ 18ರಂದು ತೆರೆಕಾಣಲಿರುವ ಸಿನಿಮಾಗಳ ವಿವರ.
ಅಕ್ಟೋಬರ್‌ 18ರಂದು ತೆರೆಕಾಣಲಿರುವ ಸಿನಿಮಾಗಳ ವಿವರ.

Friday Releasing Kannada Movies: ಕಳೆದ ವಾರ ಧ್ರುವ ಸರ್ಜಾ ನಟನೆಯ ಮಾರ್ಟಿನ್‌ ಸಿನಿಮಾದ ಅಬ್ಬರ ಜೋರಾಗಿತ್ತು. ಅದಕ್ಕೂ ಒಂದು ದಿನ ಮೊದಲು ರಜನಿಕಾಂತ್‌ ನಟನೆಯ ವೆಟ್ಟೈಯನ್‌ ಸಿನಿಮಾ ತೆರೆಗೆ ಬಂದು ಸದ್ಯ ಶತಕೋಟಿ ಕ್ಲಬ್‌ ಮುಟ್ಟಿದೆ. ಕರ್ನಾಟಕದಲ್ಲಿ ಈ ಎರಡು ಸಿನಿಮಾಗಳ ಅಬ್ಬರ ಇನ್ನೂ ಮುಂದುವರಿದಿದೆ. ಹೀಗಿರುವಾಗಲೇ ಮತ್ತೊಂದು ಶುಕ್ರವಾರ ಬಂದೇ ಬಿಟ್ಟಿದೆ. ಈ ವಾರ ಬಹುತೇಕ ಹೊಸಬರ ಸಿನಿಮಾಗಳೇ ಚಿತ್ರಮಂದಿರಕ್ಕೆ ಆಗಮಿಸುತ್ತಿವೆ. ಇಲ್ಲಿದೆ ಆ ಸಿನಿಮಾಗಳ ವಿವರ.

ಪೊರ್ಕಿ

ನಟ ದರ್ಶನ್‌ ಜೈಲು ಸೇರಿದ ಬಳಿಕ ಅವರ ಹಲವು ಸಿನಿಮಾಗಳು ಮರು ಬಿಡುಗಡೆ ಆಗಿ ಯಶಸ್ವಿಯಾಗಿವೆ. ಶಾಸ್ತ್ರಿ, ಕರಿಯ ಸಿನಿಮಾಗಳಿಗೆ ಪ್ರೇಕ್ಷಕ ಬಹುಪರಾಕ್‌ ಹೇಳಿದ್ದಾನೆ. ಇದೀಗ ಎಂ.ಡಿ ಶ್ರೀಧರ್‌ ನಿರ್ದೇಶನದ ಪೊರ್ಕಿ ಸಿನಿಮಾ ಸಹ ಇದೇ ವಾರ (ಅ. 18) ತೆರೆಗೆ ಬರುತ್ತಿದೆ. ದರ್ಶನ್‌ಗೆ ಜೋಡಿಯಾಗಿ ನಟಿ ಪ್ರಣೀತಾ ಸುಭಾಷ್‌ ನಾಯಕಿಯಾಗಿದ್ದಾರೆ. 2010ರಲ್ಲಿ ಕನ್ನಡದಲ್ಲಿ ತೆರೆಗೆ ಬಂದ ಈ ಸಿನಿಮಾ ತೆಲುಗಿನ ಪೊಕಿರಿ ಚಿತ್ರದ ರಿಮೇಕ್‌ ಆಗಿದೆ.

ಮರ್ಫಿ

ಸೋಮಣ್ಣ ಟಾಕೀಸ್ ಮತ್ತು ವರ್ಣಸಿಂಧು ಸ್ಟುಡಿಯೋಸ್ ಬ್ಯಾನರ್ ಅಡಿ ರಾಮ್ ಕೋ ಸೋಮಣ್ಣ ಹಾಗೂ ಬಿಎಸ್‌ಪಿ ವರ್ಮಾ ಮರ್ಫಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ನಿರ್ಮಾಣದ ಜತೆಗೆ ಬಿಎಸ್‌ಪಿ ವರ್ಮಾ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಮರ್ಫಿಯಲ್ಲಿ ಏಳು ಹಾಡುಗಳಿದ್ದು, ಅರ್ಜುನ್ ಜನ್ಯ, ರಜತ್ ಹೆಗ್ಡೆ, ಕೀರ್ತನ್ ಹೊಳ್ಳ ಮತ್ತು ಸಿಲ್ವೆಸ್ಟರ್ ಪ್ರದೀಪ್ ಸಂಗೀತ ನಿರ್ದೇಶನ ಮಾಡಿದ್ದು, ಸಿಲ್ವೆಸ್ಟರ್ ಪ್ರದೀಪ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಇಡೀ ಕುಟುಂಬ ಸಮೇತರಾಗಿ ನೋಡುವಂತಹ ಚಿತ್ರವಾಗಿರುವ ಮರ್ಫಿ ಈ ವಾರ (ಅಕ್ಟೋಬರ್ 18) ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.

ಪ್ರಕರಣ ತನಿಖಾ ಹಂತದಲ್ಲಿದೆ

ಶೀರ್ಷಿಕೆಯ ಕಾರಣದಿಂದ ಆರಂಭಿಕವಾಗಿ ಗಮನ ಸೆಳೆದಿದ್ದ ಚಿತ್ರ ಪ್ರಕರಣ ತನಿಖಾ ಹಂತದಲ್ಲಿದೆ. ಸುಂದರ್ ಎಸ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಟ್ರೈಲರ್ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಈ ಮೂಲಕವೇ ಭಿನ್ನ ಕಥಾನಕದ ಸುಳಿವು ಬಿಟ್ಟು ಕೊಟ್ಟಿದ್ದ `ಪ್ರಕರಣ ತನಿಖಾ ಹಂತದಲ್ಲಿದೆ' ಸಿನಿಮಾ ಈ ವಾರ ಅಂದರೆ, ಅಕ್ಟೋಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಶೀರ್ಷಿಕೆ ಕೇಳಿದಾಕ್ಷಣವೇ ಒಟ್ಟಾರೆ ಕಥೆಯ ಬಗ್ಗೆ ಒಂದು ಕಲ್ಪನೆ ಮೂಡಿಸಿಕೊಂಡಿದ್ದ ಪ್ರೇಕ್ಷಕರನ್ನೆಲ್ಲ, ಟ್ರೇಲರ್ ಅಚ್ಚರಿಗೀಡು ಮಾಡಿತ್ತು.

ಸಿಂಹರೂಪಿಣಿ

ಖ್ಯಾತ ಸಾಹಿತಿ ಕಿನ್ನಾಳ್ ರಾಜ್ ನಿರ್ದೇಶನದ ಭಕ್ತಿಪ್ರಧಾನ ಸಿನಿಮಾ ಸಿಂಹರೂಪಿಣಿ. ಈ ವಾರ ಈ ಸಿನಿಮಾ ತೆರೆಗೆ ಬರುತ್ತಿದೆ. ಕೆ.ಎಂ. ನಂಜುಡೇಶ್ವರ ಕಥೆ ಬರೆದು ನಿರ್ಮಾಣ ಮಾಡಿದ್ದಾರೆ. ತಾರಾಗಣದಲ್ಲಿ ಯಶ್‌ ಶೆಟ್ಟಿ, ಅಂಕಿತ ಗೌಡ, ದಿವ್ಯಾ ಆಲೂರು, ಹಿರಿಯ ನಟ ಸುಮನ್, ತಮಿಳು ಖ್ಯಾತ ಕಲಾವಿದ ದೀನಾ, ದಿನೇಶ್‌ ಮಂಗಳೂರು, ಹರೀಶ್‌ ರಾಯ್, ನೀನಾಸಂ ಅಶ್ವಥ್, ತಬಲ ನಾಣಿ, ವಿಜಯ್‌ ಚೆಂಡೂರು, ಯಶ್‌ ಶೆಟ್ಟಿ, ವರ್ಧನ್, ಸಾಗರ್, ಯಶಸ್ವಿನಿ ಸುಬ್ಬೇಗೌಡ ಮುಂತಾದ ಹಿರಿಯ ಕಲಾವಿದರು ನಟಿಸಿದ್ದಾರೆ.

ಮಾಂತ್ರಿಕ

ಜಗತ್ತಿನಲ್ಲಿ ದೆವ್ವ, ಭೂತಗಳು ಇದೆಯೋ ಇಲ್ಲವೊ ಗೊತ್ತಿಲ್ಲ. ಆದರೆ ಅವುಗಳ ಸತ್ಯಾಸತ್ಯತೆಯ ಹುಡುಕಾಟ ಮಾತ್ರ ನಡೆದೇ ಇದೆ. ಅಂಥದೇ ಒಂದು ಹುಡುಕಾಟದ ಪ್ರಯತ್ನದಲ್ಲಿ ಹೊರಬಂದ ಚಿತ್ರವೇ ಮಾಂತ್ರಿಕ. ಐಟಿ ಹಿನ್ನೆಲೆಯಿಂದ ಬಂದ ವ್ಯಾನವರ್ಣ ಜಮ್ಮುಲ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಜೊತೆಗೆ ಪ್ರಮುಖ ಪಾತ್ರದಲ್ಲೂ ಸಹ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಈ ವಾರ (ಅ. 18) ತೆರೆಗೆ ಬರಲಿದೆ. ಘೋಸ್ಟ್ ಹಂಟರ್ (ಆತ್ಮಗಳನ್ನು ಪತ್ತೆಹಚ್ಚುವವ) ಸುತ್ತ ನಡೆಯುವ ಇಂಟಲೆಕ್ಚುಯಲ್, ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಈ ಚಿತ್ರದಲ್ಲಿದೆ. ದೆವ್ವ ಅನ್ನೋದು ಇದೆಯೋ ಇಲ್ಲವೋ ಅಥವಾ ಅದೆಲ್ಲಾ ನಮ್ಮ ಭ್ರಮೆಯೋ ಎನ್ನುವುದರ ಸುತ್ತ ಸಾಗುವ ಕಥೆ ಸಾಗಲಿದೆ.

Whats_app_banner