AR Rahman: ಅಮ್ಮನ ಚಿನ್ನಾಭರಣ ಗಿರವಿಗಿಟ್ಟು ಮ್ಯೂಸಿಕ್ ಸ್ಟುಡಿಯೋಗೆ ಮೊದಲ ಸಂಗೀತ ಸಲಕರಣೆ ಖರೀದಿಸಿದ್ರಂತೆ ಎಆರ್ ರೆಹಮಾನ್
ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ತನ್ನ ಕರಿಯರ್‌ನ ಆರಂಭದ ದಿನಗಳ ಕುರಿತು, ಬಾಲ್ಯದ ಕುರಿತು ಮಾತನಾಡಿದ್ದಾರೆ. ಮೊದಲ ಮ್ಯೂಸಿಕ್ ಸ್ಟುಡಿಯೋ ತೆರೆದ ಸಂದರ್ಭ ಇದ್ದ ಆರ್ಥಿಕ ಬಿಕ್ಕಟ್ಟಿನ ವಿವರವನ್ನೂ ನೀಡಿದ್ದಾರೆ.
ಬೆಂಗಳೂರು: ಈಗ ಎಆರ್ ರೆಹಮಾನ್ ಎಂದರೆ ಎಲ್ಲರಿಗೂ ಗೊತ್ತು. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಸಂಗೀತ ಉದ್ಯಮದಲ್ಲಿ ಸಾಕಷ್ಟು ಕೀರ್ತಿ, ಹಣ ಗಳಿಸಿದ್ದಾರೆ. ಈಗ ಅವರು ಹಲವು ಕೋಟಿಗಳಿಗೆ ಅಧಿಪತಿಯಾಗಿರಬಹುದು. ಆದರೆ, ಅವರ ಆರಂಭದ ದಿನಗಳು ಹೀಗಿರಲಿಲ್ಲ. ಮೊದಲ ಮ್ಯೂಸಿಕ್ ಸ್ಟುಡಿಯೋ ನಿರ್ಮಿಸುವ ಸಂದರ್ಭದಲ್ಲಿ ತೀವ್ರ ಆರ್ಥಿಕ ಸಂಕಷ್ಟ ಇತ್ತು. ಇತ್ತೀಚೆಗೆ ನೆಟ್‌ಫ್ಲಿಕ್ಸ್‌ಗೆ ನೀಡಿದ ಸಂದರ್ಶನದಲ್ಲಿ ಎಆರ್ ರೆಹಮಾನ್ ಅವರು "ಮೊದಲ ಮ್ಯೂಸಿಕ್ ಸಲಕರಣೆಗಳನ್ನು ಖರೀದಿಸಲು ನನ್ನ ಅಮ್ಮನ ಆಭರಣಗಳನ್ನು ಗಿರವಿಗೆ ಇಡಬೇಕಾಯಿತು" ಎಂದು ಹೇಳಿದ್ದಾರೆ.
ಅಮರ್ ಸಿಂಗ್ ಚಮ್ಕಿಲಾ ತಂಡದೊಂದಿಗೆ ನಡೆದ ಸಂಭಾಚಣೆಯ ವೇಳೆ ನಿರ್ದೇಶಕ ಇಮ್ತಿಯಾಜ್ ಅಲಿ, ಗಾಯಕ ಮೋಹಿತ್ ಚೌಹಾಣ್ ಮತ್ತು ಗೀತರಚನೆಕಾರ ಇರ್ಷಾದ್ ಕಾಮಿಲ್ ಜತೆ ಎಆರ್ ರೆಹಮಾನ್ ಅವರು ತಮ್ಮ ವೈಯಕ್ತಿಕ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ.
ಅಮ್ಮನ ಚಿನ್ನಾಭರಣ ಗಿರವಿಗಿಟ್ಟ ಸಂದರ್ಭ
ಕರಿಯರ್ ಆರಂಭದ ಕಷ್ಟದ ದಿನಗಳಲ್ಲಿ ತನ್ನ ಕುಟುಂಬ ಹೇಗೆ ಸಹಾಯ ಮಾಡಿತು ಎಂಬುದನ್ನು ಎಆರ್ ರೆಹಮಾನ್ ನೆನಪಿಸಿಕೊಂಡಿದ್ದಾರೆ. "ನಾನು ನನ್ನ ಸ್ಟುಡಿಯೋವನ್ನು ನಿರ್ಮಿಸಿದ ಸಂದರ್ಭದಲ್ಲಿ ಆಂಪ್ಲಿಫೈಯರ್ ಅಥವಾ ಈಕ್ವಲೈಸರ್ ಖರೀದಿಸಲು ನನ್ನ ಬಳಿ ಹಣವಿರಲಿಲ್ಲ. ಶೆಲ್ಫ್ ಮತ್ತು ಕಾರ್ಪೆಟ್ ಹೊಂದಿರುವ ಎಸಿ ಮಾತ್ರ ಇತ್ತು. ನಾನು ಏನನ್ನೂ ಖರೀದಿಸಲು ಹಣವಿಲ್ಲದೆ ಸುಮ್ಮನೆ ಅಲ್ಲಿ ಕುಳಿತುಕೊಳ್ಳುತ್ತಿದ್ದೆ. ಸ್ಟುಡಿಯೋ ನಿರ್ಮಿಸಿದರೂ ಸ್ಟುಡಿಯೋಗೆ ಅಗತ್ಯವಾದ ಸಲಕರಣೆಗಳು ನನ್ನಲ್ಲಿ ಇರಲಿಲ್ಲ. ನನ್ನ ತಾಯಿ ಆಕೆಯ ಆಭರಣಗಳನ್ನು ಅಡವಿಟ್ಟರು. ಈ ಹಣದಿಂದ ನನ್ನ ಮೊದಲ ರೆಕಾರ್ಡರ್ ಬಂತು. ನಾನು ಇನ್ಮುಂದೆ ಸಾಧಿಸಬಲ್ಲೆ ಅನಿಸಿತು" ಎಂದು ಎಆರ್ ರೆಹಮಾನ್ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಯೋಜಕ ಎಆರ್ ರೆಹಮಾನ್ ಕಾಲೇಜಿಗೆ ಹೋಗಿರಲಿಲ್ಲ. "12 ವರ್ಷದವನಿದ್ದಾಗ, ನಾನು 40 ಮತ್ತು 50 ರ ವಯಸ್ಸಿನ ಜನರೊಂದಿಗೆ ಬೆರೆಯುತ್ತಿದ್ದೆ. ನನ್ನ ಬೇಸರ ಕಳೆಯಲು ಅನೇಕ ವಿಷಯಗಳನ್ನು ಅವರಲ್ಲಿ ಕೇಳುತ್ತಿದೆ. ಜಗತ್ತಿನ ಕುರಿತು ಮಾಹಿತಿ ದೊರಕುತ್ತಿತ್ತು. ಏನಾದರೂ ಸಾಧನೆ ಮಾಡಲು ಉತ್ತೇಜನ ದೊರಕುತ್ತಿತ್ತು" ಎಂದು ಅವರು ಹೇಳಿದ್ದಾರೆ. ಏಪ್ರಿಲ್ 12ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಇಮ್ತಿಯಾಜ್ ಅವರ ಅಮರ್ ಸಿಂಗ್ ಚಮ್ಕಿಲಾ ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಈ ಸಂಗೀತ ನಿರ್ದೇಶನಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಅಮರ್ ಸಿಂಗ್ ಚಮ್ಕಿಲಾ
ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಅಮರ್ ಸಿಂಗ್ ಚಮ್ಕಿಲಾ ಸಿನಿಮಾ ಸಾಕಷ್ಟು ಜನಪ್ರಿಯತೆ ಪಡೆದಿದೆ. ತನ್ನ ಹಾಡುಗಳಿಂದಲೇ ಜನಪ್ರಿಯರಾದ ಗಾಯಕ, ಸಂಗೀತಗಾರ ಅಮರ್ ಸಿಂಗ್ ಚಮ್ಕಿಲಾ ಅವರ ಬಯೋಪಿಕ್ ಒಟಿಟಿಯಲ್ಲಿ ಮಾತ್ರ ಬಿಡುಗಡೆಯಾಗಿತ್ತು. 1980 ರ ದಶಕದಲ್ಲಿ ಕ್ಷಿಪ್ರವಾಗಿ ಜನಪ್ರಿಯತೆ ಪಡೆದ ಪಂಜಾಬ್ ಎಲ್ವಿಸ್ ಎಂದೇ ಖ್ಯಾತಿ ಪಡೆದ ಚಮ್ಕಿಲಾರ ಕಥೆಯನ್ನು ಸಿನಿಮಾ ಮಾಡಲಾಗಿತ್ತು. ಪಂಜಾಬ್‌ನ ಹಾಡುಗಾರ ಬಹುಬೇಗ ಪ್ರಸಿದ್ಧಿಗೆ ಬಂದಿದ್ದ. ಆದರೆ, ತನ್ನ 27ನೇ ವಯಸ್ಸಿನಲ್ಲಿ ನಿಗೂಢವಾಗಿ ಹತ್ಯೆಗೀಡಾಗಿದ್ದ. ಈ ಸಿನಿಮಾಕ್ಕೆ ಹಿನ್ನೆಲೆ ಸಂಗೀತ, ಹಾಡುಗಳು ಅತ್ಯಂತ ಪ್ರಮುಖವಾಗಿತ್ತು. ಎಆರ್ ರೆಹಮಾನ್ ಅವರ ಸಂಗೀತದ ಶಕ್ತಿಯು ಈ ಸಿನಿಮಾದ ಯಶಸ್ಸಿಗೆ ನೆರವಾಗಿತ್ತು.
ಕನ್ನಡದಲ್ಲಿ ಮನರಂಜನೆ ಸುದ್ದಿಗಳಿಗೆ ಬರವಿಲ್ಲ ಇಲ್ಲಿ ಕ್ಲಿಕ್ ಮಾಡಿ