ಗಿನ್ನಿಸ್‌ ದಾಖಲೆಯಲ್ಲಿ ತೆಲುಗು ನಟ ಚಿರಂಜೀವಿ ಹೆಸರು; ಈ ಕಾರಣಕ್ಕೆ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದ ಮೆಗಾಸ್ಟಾರ್
ಕನ್ನಡ ಸುದ್ದಿ  /  ಮನರಂಜನೆ  /  ಗಿನ್ನಿಸ್‌ ದಾಖಲೆಯಲ್ಲಿ ತೆಲುಗು ನಟ ಚಿರಂಜೀವಿ ಹೆಸರು; ಈ ಕಾರಣಕ್ಕೆ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದ ಮೆಗಾಸ್ಟಾರ್

ಗಿನ್ನಿಸ್‌ ದಾಖಲೆಯಲ್ಲಿ ತೆಲುಗು ನಟ ಚಿರಂಜೀವಿ ಹೆಸರು; ಈ ಕಾರಣಕ್ಕೆ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದ ಮೆಗಾಸ್ಟಾರ್

ಟಾಲಿವುಡ್‌ ಮೆಗಾಸ್ಟಾರ್‌ ಚಿರಂಜೀವಿ ಇದೀಗ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ಇದೇ ವರ್ಷ ಪದ್ಮವಿಭೂಷಣ ಪ್ರಶಸ್ತಿ ಪಡೆದಿದ್ದ ಚಿರಂಜೀವಿ, ಈಗ ಗಿನ್ನಿಸ್‌ ರೆಕಾರ್ಡ್‌ನಲ್ಲಿಯೂ ತಮ್ಮ ಹೆಸರು ಸೇರಿಸಿಕೊಂಡಿದ್ದಾರೆ.

ಗಿನ್ನಿಸ್‌ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ನಟ ಚಿರಂಜೀವಿ ಹೆಸರು
ಗಿನ್ನಿಸ್‌ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ನಟ ಚಿರಂಜೀವಿ ಹೆಸರು

Megastar Chiranjeevi: ಭಾರತೀಯ ಚಿತ್ರರಂಗದಲ್ಲಿ ಯಾರಿಗೂ ದಕ್ಕದ, ಯಾರೂ ಮಾಡದ ಸಾಧನೆಯೊಂದನ್ನು ಮಾಡಿದ ಕೀರ್ತಿ ಮೆಗಾಸ್ಟಾರ್‌ ಚಿರಂಜೀವಿ ಪಾಲಾಗಿದೆ. ಅದರಲ್ಲೂ ಇದೇ ವರ್ಷ ಚಿರಂಜೀವಿಗೆ ಕೇಂದ್ರ ಸರ್ಕಾರ ನೀಡುವ ಪದ್ಮವಿಭೂಷಣದಂಥ ಪ್ರತಿಷ್ಠಿತ ಪ್ರಶಸ್ತಿಯೂ ಅವರನ್ನೂ ಅರಸಿ ಬಂದಿತ್ತು. ಇದೀಗ ಗಿನ್ನಿಸ್‌ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಹೆಸರು ದಾಖಲಾಗಿದೆ. ಈ ಮೂಲಕ ಅಪರೂಪದ ಗೌರವಕ್ಕೆ ಪಾತ್ರರಾಗಿದ್ದಾರೆ. ಅಷ್ಟಕ್ಕೂ ಈ ಪ್ರಶಸ್ತಿ ಸಿಕ್ಕಿದ್ದಾದರೂ ಯಾವ ಕಾರಣಕ್ಕೆ? ಮುಂದೆ ಓದಿ.

ಇಂದು (ಸೆಪ್ಟೆಂಬರ್‌ 22) ಹೈದರಾಬಾದ್‌ನಲ್ಲಿ ನಡೆದ ಗಿನ್ನಿಸ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟ ಆಮೀರ್‌ ಖಾನ್‌ ಅವರಿಂದ, ಭಾರತೀಯ ಚಿತ್ರರಂಗದ ಮೋಸ್ಟ್​ ಪ್ರೊಫೈಲಿಕ್ ಸ್ಟಾರ್ ಎಂಬ ಪ್ರಮಾಣ ಪತ್ರವನ್ನು ಮೆಗಾಸ್ಟಾರ್‌ ಚಿರಂಜೀವಿ ಪಡೆದರು. ಕಳೆದ ನಾಲ್ಕು ದಶಕಗಳಿಂದ ಭಾರತೀಯ ಚಿತ್ರರಂಗದಲ್ಲಿ ಟಾಪ್‌ ಹೀರೋ ಆಗಿ ನಟಿಸಿ, ದಿಗ್ಗಜರಲ್ಲಿ ಒಬ್ಬರಾಗಿದ್ದಾರೆ. ವಯಸ್ಸು 60 ದಾಟಿದರೂ ಅದೇ ಸ್ಟಾರ್ ಡಮ್ ಉಳಿಸಿಕೊಂಡಿದ್ದಾರೆ.

24,000 ಡಾನ್ಸ್‌ ಸ್ಟೆಪ್ಸ್‌

ಕಳೆದ 46 ವರ್ಷಗಳ ಸಿನಿಮಾ ಜರ್ನಿಯಲ್ಲಿ ನಟ ಚಿರಂಜೀವಿ ಒಟ್ಟು 156 ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ 156 ಸಿನಿಮಾಗಳ 537 ಹಾಡುಗಳಲ್ಲಿ ಹೆಜ್ಜೆ ಹಾಕಿದ್ದಾರೆ. ಒಟ್ಟಾರೆಯಾಗಿ 24,000 ಡಾನ್ಸ್‌ ಸ್ಟೆಪ್ಸ್‌ ಹಾಕಿ ಯಾರೂ ಮಾಡದ ಹೊಸ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ ಚಿರಂಜೀವಿ. ಈ ಒಂದು ಕಾರಣಕ್ಕೆ ಈ ವಿಶೇಷ ದಾಖಲೆ ಚಿರಂಜೀವಿ ಹೆಸರಲ್ಲಿ ನಿರ್ಮಾಣವಾಗಿದೆ.

ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್, ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪ್ರಮಾಣ ಪತ್ರ ನೀಡಿದರು. ಡಾನ್ಸ್‌ ವಿಚಾರದಲ್ಲಿ ಭಾರತದಲ್ಲೇ ಅತ್ಯಂತ ಪ್ರಭಾವಿ ಡಾನ್ಸರ್‌ ಎಂಬ ಹೆಗ್ಗಳಿಕೆ ಗಿನ್ನಿಸ್‌ ದಾಖಲೆ ಪುಟ ಸೇರಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಟಾಲಿವುಡ್‌ ನಿರ್ಮಾಪಕ ಅಲ್ಲು ಅರವಿಂದ್, ನಟರಾದ ವರುಣ್ ತೇಜ್, ಸಾಯಿ ಧರಮ್ ತೇಜ್, ವೈಷ್ಣವ್ ತೇಜ್ ಮತ್ತು ಇತರ ಕೆಲವು ಟಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು.

ನಾನು ಈ ಪ್ರಶಸ್ತಿ ನಿರೀಕ್ಷಿಸಿರಲಿಲ್ಲ

ಈ ಸಂದರ್ಭದಲ್ಲಿ ಮಾತನಾಡಿದ ಚಿರಂಜೀವಿ, ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಗಿನ್ನಿಸ್ ಪುಸ್ತಕಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಭಾವಿಸಿದ್ದೆ. ನಿರೀಕ್ಷಿಸದ ದೊಡ್ಡ ಗೌರವಕ್ಕಾಗಿ ಆ ದೇವರಿಗೆ, ಚಿತ್ರ ನಿರ್ಮಾಪಕರು ಮತ್ತು ಅಭಿಮಾನಿಗಳಿಗೆ ನಾನು ಋಣಿಯಾಗಿರುತ್ತೇನೆ ಎಂದು ಹೇಳಿದರು. ಚಿರು ಈ ವರ್ಷ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮ ವಿಭೂಷಣ ಪ್ರಶಸ್ತಿಯನ್ನೂ ಪಡೆದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಚಿರಂಜೀವಿ ಸದ್ಯ ಸೋಶಿಯೋ ಫ್ಯಾಂಟಸಿ ಚಿತ್ರ ವಿಶ್ವಂಭರದಲ್ಲಿ ನಟಿಸುತ್ತಿದ್ದಾರೆ. ವಿಶಿಷ್ಟಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮುಂದಿನ ವರ್ಷದ ಜನವರಿ 10 ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ.

Whats_app_banner