‘ಧೀರ ಭಗತ್‍ ರಾಯ್‍’ ಚಿತ್ರದ ಹಾಡು ಬಿಡುಗಡೆ ಮಾಡಿದ ನಿನಾಸಂ ಸತೀಶ್‌; ಕವಿರಾಜ್ ಸಾಹಿತ್ಯ, ನವೀನ್ ಸಜ್ಜು ಗಾಯನ
ಕನ್ನಡ ಸುದ್ದಿ  /  ಮನರಂಜನೆ  /  ‘ಧೀರ ಭಗತ್‍ ರಾಯ್‍’ ಚಿತ್ರದ ಹಾಡು ಬಿಡುಗಡೆ ಮಾಡಿದ ನಿನಾಸಂ ಸತೀಶ್‌; ಕವಿರಾಜ್ ಸಾಹಿತ್ಯ, ನವೀನ್ ಸಜ್ಜು ಗಾಯನ

‘ಧೀರ ಭಗತ್‍ ರಾಯ್‍’ ಚಿತ್ರದ ಹಾಡು ಬಿಡುಗಡೆ ಮಾಡಿದ ನಿನಾಸಂ ಸತೀಶ್‌; ಕವಿರಾಜ್ ಸಾಹಿತ್ಯ, ನವೀನ್ ಸಜ್ಜು ಗಾಯನ

ಧೀರ ಭಗತ್‍ ರಾಯ್‍ ಸಿನಿಮಾದ ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು ನಟ ನಿನಾಸಂ ಸತೀಶ್‌ ಅವರು ಬಿಡುಗಡೆ ಮಾಡಿದ್ದಾರೆ. ಈ ಹಾಡಿಗೆ ಕವಿರಾಜ್ ಸಾಹಿತ್ಯ, ನವೀನ್ ಸಜ್ಜು ಗಾಯನವಿದೆ.

‘ಧೀರ ಭಗತ್‍ ರಾಯ್‍’ ಚಿತ್ರದ ಹಾಡು ಬಿಡುಗಡೆ
‘ಧೀರ ಭಗತ್‍ ರಾಯ್‍’ ಚಿತ್ರದ ಹಾಡು ಬಿಡುಗಡೆ

‘ಧೀರ ಭಗತ್‍ ರಾಯ್‍’ ಚಿತ್ರವು ಡಿ. 6ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಈ ಮಧ್ಯೆ, ಚಿತ್ರದ ʼಆಕಾಶದ ನೀಲಿ ಎದ್ದುʼ ಎಂಬ ಹಾಡು ಬಿಡುಗಡೆ ಆಗಿದೆ. ಖ್ಯಾತ ಗೀತರಚನೆಕಾರ ಕವಿರಾಜ್ ಬರೆದು, ನವೀನ್ ಸಜ್ಜು ಹಾಡಿರುವ ಈ ಹಾಡಿಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡನ್ನು ಇತ್ತೀಚೆಗೆ ಸತೀಶ್ ನೀನಾಸಂ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ದಾರೆ.

ʼಈ ಸಿನಿಮಾ ಹೊಸಬರದ್ದಿರಬಹುದು. ಆದರೆ, ಇಲ್ಲಿರುವವರೆಲ್ಲ ಅನುಭವಸ್ಥರೇ. ಬಹಳ ಚೆನ್ನಾಗಿ ತಿಳಿದುಕೊಂಡಿರುವವರು, ಕಷ್ಟಗಳನ್ನು ನೋಡಿರುವವರು, ಬದುಕಲ್ಲಿ ಸಹಿಸಿಕೊಂಡವರು, ಸೋತವರು, ಬಾಗಿದವರು. ಅದರಲ್ಲಿ ನಾನು ಸಹ ಒಬ್ಬ. ಈ ತರಹದ ಸಿನಿಮಾಗಳನ್ನು ನಾನು ಯಾಕೆ ಮಾಡುವುದಿಲ್ಲ ಎಂದು ಹಲವರು ಕೇಳುತ್ತಿರುತ್ತಾರೆ. ನನಗೆ ಈ ತರಹದ ಕಥೆಗಳೇ ಇದುವರೆಗೂ ಬಂದಿಲ್ಲ. ನಾನು ಸಹ ಇಂಥ ಚಿತ್ರ ಮಾಡುವುದಕ್ಕೆ ಕಾಯುತ್ತಿದ್ದೇನೆ ಎಂದು ಸತೀಶ್ ನೀನಾಸಂ ಹೇಳಿದ್ದಾರೆ.

ಒಳ್ಳೆಯ ನಿರ್ದೇಶಕ ಬೇಕು, ಒಳ್ಳೆಯ ತಂತ್ರಜ್ಞರು ಸಿಕ್ಕರೆ ಖಂಡಿತಾ ಸಿನಿಮಾ ಮಾಡುತ್ತೇನೆ. ಈ ಚಿತ್ರದಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ಒಂದು ಸಮುದಾಯದ ಹೋರಾಟವನ್ನು ಧೈರ್ಯವಾಗಿ ಹೇಳಲಾಗುತ್ತಿದೆ. ಒಂದು ಹೋರಾಟವನ್ನು ಮಾತುಗಳ ಮೂಲಕ, ದೃಶ್ಯಗಳ ಮೂಲಕ ಕಟ್ಟಿಕೊಡುತ್ತಿರುವ ಬಗ್ಗೆ ಖುಷಿ ಇದೆ. ಈ ತರಹದ ಸಿನಿಮಾಗಳು ಸಾಕಷ್ಟು ಬರಬೇಕಿತ್ತು. ಆದರೆ, ಕಾರಣಾಂತರಗಳಿಂದ ಬಂದಿರಲಿಲ್ಲ. ಈಗ ನಿಮ್ಮ ಸಿನಿಮಾ ನಾಂದಿ ಹಾಡುತ್ತಿದೆ. ಇದು ಲಕ್ಷಾಂತರ ಜನ ನೋಡುವ ಸಿನಿಮಾ ಆಗಬೇಕುʼ ಎಂದಿದ್ಧಾರೆ.

ಹಾಡಿಗೆ ಸಾಹಿತ್ಯ ರಚಿಸಿರುವ ಕವಿರಾಜ್ ʼಈ ಸಮಾಜದಲ್ಲಿ ಒಂದು ವರ್ಗ ಶ್ರಮ ಪಡುತ್ತದೆ, ಇನ್ನೊಂದು ವರ್ಗ ಸುಖ ಪಡುತ್ತದೆ. ಒಂದು ವರ್ಗಕ್ಕೆ ಶ್ರಮ ಮೀಸಲಾದರೆ, ಇನ್ನೊಂದು ವರ್ಗಕ್ಕೆ ಸುಖ ಮೀಸಲಾಗಿದೆ. ಸಾಧ್ಯವಿರುವ ಎಲ್ಲಾ ಆಯಾಮಗಳಲ್ಲೂ ನಾವು ಅದನ್ನು ವಿರೋಧಿಸಿಕೊಂಡು ಬರಬೇಕು. ಡಾ. ಅಂಬೇಡ್ಕರ್ ಅವರು ಆ ಕಾಲದಲ್ಲಿ ಒಂದು ದಾರಿ ತೋರಿಸಿ ಹೋದರು. ಆ ದಾರಿಯಲ್ಲಿ ನಾವೆಷ್ಟು ಮುಂದುವರೆದಿದ್ದೇವೆ, ಎಷ್ಟು ಸಾಧನೆ ಆಗಿದೆ, ಅವರ ಆಶಯಗಳೆಷ್ಟು ಈಡೇರಿದೆ ಎಂಬುದನ್ನು ನಮ್ಮನ್ನು ನಾವೇ ಕೇಳಿಕೊಳ್ಳಬೇಕು. ಅವರು ಅಂದುಕೊಂಡ ಸಮಾನತೆಯನ್ನು ನಾವಿನ್ನೂ ಮುಟ್ಟಿಲ್ಲ. ನಮ್ಮನ್ನು ಹಿಂದೆಳೆಯುವ ಕೈಗಳ ಜೊತೆಗೇ ನಾವು ಹೋಗುತ್ತಿದ್ದೇವೆ ಹೊರತು, ಮುಂದೆ ತಳ್ಳುವ ಕೈಗಳ ಜೊತೆಗೆ ಹೋಗುತ್ತಿದ್ದೇವೆ. ಮನುಷ್ಯನ ಮನಸ್ಸನ್ನು ಬದಲು ಮಾಡುವ ಪ್ರಭಾವಿ ಮಾಧ್ಯಮ ಈ ಸಿನಿಮಾ. ʼಅಸುರನ್ʼ, ʼಕರ್ಣನ್ʼ ತರಹದ ಸಿನಿಮಾಗಳು ನಮ್ಮಲ್ಲಿ ಯಾಕೆ ಬರುತ್ತಿಲ್ಲ ಎಂಬ ಬೇಸರ ನಮ್ಮಲ್ಲಿ ಇದ್ದೇ ಇತ್ತು. ಅದಕ್ಕೆ ಉತ್ತರವಾಗಿ ಈ ಚಿತ್ರ ಬರುತ್ತಿದೆ. ಈ ಚಿತ್ರಕ್ಕಾಗಿ ಖುಷಿಪಟ್ಟು ಕೆಲವು ಹಾಡುಗಳನ್ನು ಬರೆದಿದ್ದೇನೆ. ನಾನು ಬರೆದ ಸಾಲುಗಳನ್ನು ಕೇಳಿ ನನಗೇ ರೋಮಾಂಚನವಾಗಿದ್ದಿದೆ. ಈ ಸಿನಿಮಾದ ಮೂಲಕ ಒಬ್ಬನಾದರೂ ದೌರ್ಜನ್ಯದ ವಿರುದ್ಧ ಎದ್ದೇಳಬೇಕು ಎನ್ನುವುದು ನಮ್ಮೆಲ್ಲರ ಆಶಯʼ ಎಂದರು.

ಹಾಡಿನಲ್ಲಿ ಒಂದು ಕಥೆ ಇದೆ

ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಕೆಲವು ಹಾಡುಗಳ ಬಗ್ಗೆ ಮಾತನಾಡುವುದಕ್ಕೆ ಮುಜುಗರ ಪಡುತ್ತಿರುತ್ತೇವೆ. ಕೆಲವು ಹಾಡುಗಳು ಮತ್ತು ವಿಷಯಗಳ ಬಗ್ಗೆ, ಎಲ್ಲಾ ಮುಜುಗರ ಬಿಟ್ಟು, ನಾವು ಇದನ್ನು ಹೇಳಲೇಬೇಕು ಎಂದನಿಸುವಂತೆ ಮಾಡುತ್ತವೆ. ಈ ಹಾಡು ಸಹ ಅಂಥ ಹಾಡುಗಳಲ್ಲಿ ಒಂದು. ಕವಿರಾಜ್ ಅವರು ಸಾಹಿತ್ಯ ಬರೆದುಕೊಟ್ಟಾಗ, ಈ ಸಾಲುಗಳನ್ನು ಕೇಳಿ ರೋಮಾಂಚನವಾಯಿತು. ಪ್ರತಿ ಸಾಲಿನಲ್ಲೂ ಒಂದೊಂದು ವಿಷಯ, ಒಂದು ಕಥೆ ಇದೆ. ಈ ಹಾಡಿನ ಹಿಂದೆ ತುಂಬಾ ಶ್ರಮ ಇದೆ. ಹಾಡು ಕೇಳಿದವರೆಲ್ಲಾ ಖುಷಿಪಟ್ಟು, ಜೊತೆಯಾಗಿ ಸೇರಿ ಮಾಡಿರುವ ಹಾಡಿದುʼ ಎಂದರು.

ಸಿನಿಮಾ ತಂಡದ ವಿವರ

ಕರ್ಣನ್ ಕಥೆ, ಚಿತ್ರಕತೆ ಬರೆದು ನಿರ್ದೇಶಿಸಿರುವ ‘ಧೀರ ಭಗತ್‍ ರಾಯ್‍’ ಚಿತ್ರದಲ್ಲಿ ನಾಯಕನಾಗಿ ರಾಕೇಶ್‍ ದಳವಾಯಿ ನಟಿಸುತ್ತಿದ್ದಾರೆ. ಅವರಿಗೆ ನಾಯಕಿಯಾಗಿ ಸುಚರಿತಾ ನಟಿಸಿದ್ದಾರೆ. ಜೊತೆಗೆ ಶರತ್ ಲೋಹಿತಶ್ವ, ನೀನಾಸಂ ಅಶ್ವಥ್, ಪ್ರವೀಣ್ ಗೌಡ, ಕೆ.ಎಂ. ಸಂದೇಶ್ ಮುರೋಳಿ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ, ಸೆಲ್ಪಂ ಜಾನ್ ಛಾಯಾಗ್ರಹಣವಿದೆ. ‘ಧೀರ ಭಗತ್‍ ರಾಯ್‍’ ಚಿತ್ರವನ್ನು ವೈಟ್ ಲೋಟಸ್ ಎಂಟರ್ಟೈನ್ಮೆಂಟ್ ಮತ್ತು ಶ್ರೀ ಓಂ ಸಿನಿ ಎಂಟ್ರಟೈನರ್ಸ್ ಬ್ಯಾನರ್ ಅಡಿ ನಿರ್ಮಾಣವಾಗಿದೆ.

Whats_app_banner