Darshan New Movie: ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ ದಿನಗಣನೆ...ಮತ್ತೆ ಮುನ್ನೆಲೆಗೆ ಬಂತು D56 ಟೈಟಲ್‌ ವಿಚಾರ
ಕನ್ನಡ ಸುದ್ದಿ  /  ಮನರಂಜನೆ  /  Darshan New Movie: ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ ದಿನಗಣನೆ...ಮತ್ತೆ ಮುನ್ನೆಲೆಗೆ ಬಂತು D56 ಟೈಟಲ್‌ ವಿಚಾರ

Darshan New Movie: ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ ದಿನಗಣನೆ...ಮತ್ತೆ ಮುನ್ನೆಲೆಗೆ ಬಂತು D56 ಟೈಟಲ್‌ ವಿಚಾರ

ಕೆಲವು ದಿನಗಳ ಹಿಂದೆ ಈ ಚಿತ್ರಕ್ಕೆ ಸ್ವಲ್ಪ ಭಾಗದ ಚಿತ್ರೀಕರಣ ಕೂಡಾ ನಡೆದಿತ್ತು. ಕಳೆದ ವರ್ಷ ದರ್ಶನ್ ಹುಟ್ಟುಹಬ್ಬದಂದು ಈ ಚಿತ್ರದ ಥೀಮ್‌ ಪೋಸ್ಟರ್‌ ರಿಲೀಸ್‌ ಆಗಿತ್ತು. ಕುರಿಗಳ ಹಿಂಡಿನ ಮುಂದೆ ನಿಂತಿರುವ ಶ್ವಾನದ ಪೋಸ್ಟರ್‌ ಅದಾಗಿದ್ದು ''ಹಿಂದಿರೋವ್ರಿಗೆ ದಾರಿ ಮುಂದಿರೋವ್ನದ್ದು ಜವಾಬ್ದಾರಿ'' ಎಂಬ ಬರಹ ಕುತೂಹಲ ಕೆರಳಿಸಿತ್ತು.

ದರ್ಶನ್‌ 56ನೇ ಚಿತ್ರದ ಅಪ್‌ಡೇಟ್‌ಗಾಗಿ ಕಾಯುತ್ತಿರುವ ಅಭಿಮಾನಿಗಳು
ದರ್ಶನ್‌ 56ನೇ ಚಿತ್ರದ ಅಪ್‌ಡೇಟ್‌ಗಾಗಿ ಕಾಯುತ್ತಿರುವ ಅಭಿಮಾನಿಗಳು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿ' ಸಿನಿಮಾ ಜನವರಿ 26ರಂದು ತೆರೆ ಕಂಡು ಉತ್ತಮ ಪ್ರತಿಕ್ರಿಯೆ ಗಳಿಸಿದೆ. ಇಷ್ಟು ದಿನಗಳು ಕ್ರಾಂತಿ ಗುಂಗಿನಲ್ಲಿದ್ದ ಅಭಿಮಾನಿಗಳು ಈಗ ದರ್ಶನ್‌ ಹುಟ್ಟುಹಬ್ಬ ಆಚರಿಸುವ ತಯಾರಿಯಲ್ಲಿದ್ದಾರೆ. ಫೆಬ್ರವರಿ 16 ದರ್ಶನ್‌ ಹುಟ್ಟುಹಬ್ಬ. ಈ ಹಿನ್ನೆಲೆ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬವನ್ನು ಈ ಬಾರಿ ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿದ್ದಾರೆ.

ಕೊರೊನಾ ಹಾಗೂ ಪುನೀತ್‌ ರಾಜ್‌ಕುಮಾರ್‌ ಅವರ ನಿಧನದ ನೋವಿನಿಂದ ದರ್ಶನ್‌ ಕಳೆದ ಮೂರು ವರ್ಷಗಳಿಂದ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಈ ಬಾರಿಯಾದರೂ ದಚ್ಚು ನಮ್ಮೊಂದಿಗೆ ಬರ್ತ್‌ಡೇ ಆಚರಿಸಿಕೊಳ್ಳಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ನಡುವೆ ದರ್ಶನ್‌ ಅವರ ಹೊಸ ಚಿತ್ರದ ಟೈಟಲ್‌ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಸಾಮಾನ್ಯವಾಗಿ ನಟರ ಹುಟ್ಟುಹಬ್ಬದಂದು ಹೊಸ ಸಿನಿಮಾ ಅಪ್‌ಡೇಟ್‌ ನೀಡುವುದು ಸಾಮಾನ್ಯ. ಅದರಂತೆ ಈ ಬಾರಿ ಚಾಲೆಂಜಿಂಗ್‌ ಸ್ಟಾರ್‌ ಹುಟ್ಟುಹಬ್ಬಕ್ಕೆ ಅವರ 56ನೇ ಚಿತ್ರದ ಅಪ್‌ಡೇಟ್‌ ದೊರೆಯಬಹುದು ಎನ್ನಲಾಗುತ್ತಿದೆ.

'ಕ್ರಾಂತಿ' ಸಿನಿಮಾ ಚಿತ್ರೀಕರಣದ ಹಂತದಲ್ಲಿ ಇರುವಾಗಲೇ ದರ್ಶನ್ ಅವರ 56ನೇ ಚಿತ್ರದ ಬಗ್ಗೆ ಚರ್ಚೆ ಆರಂಭವಾಗಿತ್ತು. ದರ್ಶನ್ ಮುಂದಿನ ಸಿನಿಮಾಗೆ, ಅಂದರೆ 56ನೇ ಸಿನಿಮಾಗೆ 'ಕಾಟೇರ' ಎಂದು ಹೆಸರಿಟ್ಟಿರುವುದಾಗಿ ಸುದ್ದಿ ಹರಿದಾಡಿತ್ತು. ಆದರೆ ಈ ವಿಚಾರದ ಬಗ್ಗೆ ದರ್ಶನ್ ಆಗಲೀ, ಚಿತ್ರತಂಡವಾಗಲೀ ಅಧಿಕೃತ ಘೋಷಣೆ ಮಾಡಿಲ್ಲ. ತರುಣ್ ಸುಧೀರ್, ಈ ಚಿತ್ರಕ್ಕಾಗಿ ಗಧೆ, ಚೌಡಯ್ಯ, ಕಾಟೇರ ಎಂಬ ಮೂರು ಟೈಟಲ್​​​ಗಳನ್ನು ಆಯ್ದುಕೊಂಡಿದ್ದು ಕಾಟೇರ ಎಂಬ ಟೈಟಲ್ ಫೈನಲ್ ಆಗಿದೆ ಎನ್ನಲಾಗಿತ್ತು. ಡಿ ಬಾಸ್ ಅಭಿಮಾನಿಗಳು ಕೂಡಾ ದರ್ಶನ್ ಮುಂದಿನ ಸಿನಿಮಾ ಅಪ್​ಡೇಟ್​​​​ ತಿಳಿಯಲು ಬಹಳ ಎಕ್ಸೈಟ್ ಆಗಿದ್ದರು. ಆದರೆ ಇದೀಗ ಈ ಚಿತ್ರದ ಬಗ್ಗೆ ಹೊಸ ಅಪ್‌ಡೇಟ್‌ ಹೊರ ಬಿದ್ದಿದೆ.

ದರ್ಶನ್ ಅವರ 56ನೇ ಚಿತ್ರಕ್ಕೆ 'ಚೌಡಯ್ಯ' ಎಂಬ ಹೆಸರನ್ನು ಫೈನಲ್‌ ಮಾಡಲಾಗಿದೆ ಎಂಬ ಹೊಸ ಸುದ್ದಿ ಹರಿದಾಡುತ್ತಿದೆ. ಕೆಲವು ದಿನಗಳ ಹಿಂದೆ ಈ ಚಿತ್ರಕ್ಕೆ ಸ್ವಲ್ಪ ಭಾಗದ ಚಿತ್ರೀಕರಣ ಕೂಡಾ ನಡೆದಿತ್ತು. ಕಳೆದ ವರ್ಷ ದರ್ಶನ್ ಹುಟ್ಟುಹಬ್ಬದಂದು ಈ ಚಿತ್ರದ ಥೀಮ್‌ ಪೋಸ್ಟರ್‌ ರಿಲೀಸ್‌ ಆಗಿತ್ತು. ಕುರಿಗಳ ಹಿಂಡಿನ ಮುಂದೆ ನಿಂತಿರುವ ಶ್ವಾನದ ಪೋಸ್ಟರ್‌ ಅದಾಗಿದ್ದು ''ಹಿಂದಿರೋವ್ರಿಗೆ ದಾರಿ ಮುಂದಿರೋವ್ನದ್ದು ಜವಾಬ್ದಾರಿ'' ಎಂಬ ಬರಹ ಕುತೂಹಲ ಕೆರಳಿಸಿತ್ತು. ಇದೀಗ ಈ ಹುಟ್ಟುಹಬ್ಬಕ್ಕೆ ತಪ್ಪದೆ ಅವರ ಹೊಸ ಸಿನಿಮಾ ಬಗ್ಗೆ ಅಪ್‌ಡೇಟ್‌ ದೊರೆಯಲಿದೆ ಎಂಬ ನಿರೀಕ್ಷೆ ಹೆಚ್ಚಾಗಿದೆ. ಚಿತ್ರದ ಟೈಟಲ್‌ ಕಾಟೇರ ಅಥವಾ ಚೌಡಯ್ಯ...ಎರಡರಲ್ಲಿ ಯಾವುದು ಎಂಬುದು ತಿಳಿಯಲಿದೆ.

ಕಳೆದ ವರ್ಷ ಮುಹೂರ್ತ ಆಚರಿಸಿಕೊಂಡಿದ್ದ D56

ದರ್ಶನ್‌ 56ನೇ ಚಿತ್ರದಲ್ಲಿ ಮಾಲಾಶ್ರೀ ಪುತ್ರಿ ರಾಧನಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಕಳೆದ ವರ್ಷ ವರಮಹಾಲಕ್ಷ್ಮಿ ಹಬ್ಬದಂದು ರವಿಶಂಕರ್‌ ಅವರ ಆಶ್ರಮದಲ್ಲಿ ಸರಳವಾಗಿ ಮುಹೂರ್ತ ನೆರವೇರಿತ್ತು. ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾ ಕಥೆ ಹೆಣೆಯಲಾಗಿದೆಯಂತೆ. ಈ ಚಿತ್ರವನ್ನು ರಾಕ್‌ಲೈನ್‌ ವೆಂಕಟೇಶ್‌ ನಿರ್ಮಿಸುತ್ತಿದ್ದು ತರುಣ್‌ ಸುಧೀರ್‌ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ದರ್ಶನ್ ಹುಟ್ಟುಹಬ್ಬ ಹಾಗೂ ಮುಂದಿನ ಸಿನಿಮಾ ಈಗ ಭಾರೀ ಸದ್ದು ಮಾಡುತ್ತಿದೆ.

Whats_app_banner