Flashback Column: ಮೊದಲ 100 ಸಿನಿಮಾ, ಮೊದಲ ಫೋನ್, ಮೊದಲ ಕಾರ್; ಕನ್ನಡದ ಹಲವು ಮೊದಲುಗಳ ಸರದಾರ ನಮ್ಮ ಹಾಸ್ಯಚಕ್ರವರ್ತಿ ನರಸಿಂಹರಾಜು
ಕನ್ನಡ ಚಿತ್ರೋದ್ಯಮ ಕಂಡ ದಂತಕತೆ, ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಜನ್ಮ ಶತಮಾನೋತ್ಸವದ ಸಂಭ್ರಮ ಕರುನಾಡಿನಲ್ಲಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಅವರ ಬಣ್ಣದ ಲೋಕದ ಸಾಧನೆಯ ಹಾದಿ ನೆನಪಿಸುವ ಬರಹ ಇಂದಿನ ಫ್ಲಾಷ್‌ಬ್ಯಾಕ್ ಅಂಕಣದಲ್ಲಿದೆ.
Flashback Column: ಚಂದನವನ ಕಂಡ ದಂತಕತೆ, ಹಾಸ್ಯ ಚಕ್ರವರ್ತಿ, ಕನ್ನಡದ ಚಾರ್ಲಿ ಚಾಪ್ಲಿನ್ ಹೀಗೆ ಹಲವು ಹೆಸರುಗಳಿಂದ ಚಿರಪರಿಚಿತರಾದವರು ನೆಚ್ಚಿನ ನಟ ನರಸಿಂಹರಾಜು. ಸ್ಯಾಂಡಲ್‌ವುಡ್ ಸಿನಿಮಾ ಇಂಡಸ್ಟ್ರಿಗೆ ಆಗಿನ ಕಾಲದಲ್ಲಿಯೇ ಇವರದ್ದು ಅತೀ ದೊಡ್ಡ ಕೊಡುಗೆ. ಆಗಿನ ಸ್ಟಾರ್ ಹೀರೋಗಳಿಗೆ ಮೊದಲು ಯಾರ ಕಾಲ್‌ಶೀಟ್ ಸಿಗುತ್ತಿತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ, ನರಸಿಂಹರಾಜು ಇದ್ದಾರಲ್ಲ? ಎಂದು ನಿರ್ದೇಶಕರನ್ನು ಕೇಳುತ್ತಿದ್ದರು. ಆ ಮಟ್ಟದ ಪ್ರಭಾವಳಿ ನರಸಿಂಹರಾಜು ಅವರಿಗಿತ್ತು.
ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಚಾರ್ಲಿ ಚಾಪ್ಲಿನ್ ಅಂದ್ರೆ ಹೇಗೆ ನಾವು ಈಗ ಕಣ್ಣರಳಿಸುತ್ತೆವೋ, ಚಾರ್ಲಿ ಚಾಪ್ಲಿನ್ ಹಾಸ್ಯಕ್ಕೆ ಆವತ್ತಿನವರು ಮಾತ್ರವಲ್ಲ, ಇವತ್ತಿನ ಮಕ್ಕಳೂ ಹೇಗೆ ನಗುತ್ತಾರೋ, ಮಾತೇ ಇಲ್ಲದ ಅವರ ಅಭಿನಯಕ್ಕೆ ಮರಳುರಾಗುತ್ತಾರೋ, ಕನ್ನಡದ ಮಟ್ಟಿಗೆ ಅಂಥ ಹಾಸ್ಯನಟನಾಗಿ ಸಿಕ್ಕಿದ್ದು ನರಸಿಂಹರಾಜು! ಕೇವಲ ಒಂದು ತಲೆಮಾರಿಗೆ ಮಾತ್ರವಲ್ಲ, ಮೂರ್ನಾಲ್ಕು ತಲೆಮಾರಿಗೆ ಅವರು ಪ್ರಭಾವಿಸಿದವರು. ಅವರು ಇಲ್ಲದ ಕಾಲದಲ್ಲಿಯೂ ಅವರ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರಿದ್ದಾರೆ.
ಅವರು ಇಲ್ಲವಾಗಿಯೇ ಹಲವು ದಶಕಗಳು ಮರೆಯಾಗಿವೆ. ಆದರೆ, ಅವರ ನಟನೆ, ಆ ಕಾಮಿಡಿ ಪಂಚ್, ತೆರೆಮೇಲಿನ ಅವರ ಪ್ರಸೆನ್ಸ್ .. ಹೀಗೆ ಸಣ್ಣ ಸಣ್ಣ ಏರಿಳಿತಗಳನ್ನೂ ನೋಡಿ ಕಲಿತವರಿದ್ದಾರೆ. ಈಗಲೂ ಕಲಿಯುತ್ತಿದ್ದಾರೆ. ಅವರ ಪಾತ್ರಗಳನ್ನೇ ಸ್ಫೂರ್ತಿಯನ್ನಾಗಿಸಿಕೊಂಡು ನಟನೆಯತ್ತ ಹೊರಳಿದವರೂ ಎಷ್ಟೋ ಮಂದಿ. ಹಾಗಾಗಿ ಕನ್ನಡದ ಶ್ರೇಷ್ಠ ನಟರ ಸಾಲಿನಲ್ಲಿ ನರಸಿಂಹರಾಜು ಅವರ ಹೆಸರು ಸದಾ ಹಸಿರು ಮತ್ತು ಚಿರಸ್ಥಾಯಿ. ಇದೇ ನರಸಿಂಹರಾಜು ಅವರ ಬಗ್ಗೆ ಹಿರಿಯ ಪತ್ರಕರ್ತ ಶ್ರೀಧರಮೂರ್ತಿ, ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ನರಸಿಂಹರಾಜು ಆರಂಭದ ದಿನಗಳ ಬಗ್ಗೆ ಮಾತನಾಡಿದ್ದಾರೆ.
ನರಸಿಂಹರಾಜು ಅದ್ಯಾವ ಮಟ್ಟಿಗೆ ಆ ಕಾಲದಲ್ಲಿ ಹರಡಿದ್ದರೆಂದರೆ, ಅವರ ಪಾತ್ರ ನೋಡಿದವರು ಅವರನ್ನು ಹಲ್ಲುಬ್ಬ ಎಂದೇ ಕರೆಯುತ್ತಿದ್ದರು. ಸಿನಿಮಾ ಒಪ್ಪಿಕೊಳ್ಳುವ ಹೀರೋಗಳು ಮೊದಲು ನರಸಿಂಹರಾಜು ಅವರ ಕಾಲ್‌ಶೀಟ್ ಪಡೆಯುತ್ತಿದ್ದರು. ಸ್ವತಃ ರಾಜ್‌ಕುಮಾರ್ ಸಿನಿಮಾ ಮಾಡುತ್ತಿದ್ದರೆ, "ಅವರಿದ್ದಾರಲ್ಲ, ಅವರ ಕಾಲ್‌ಶೀಟ್ ಸಿಕ್ಕಿದೆಯಲ್ಲ?" ಎಂದು ನಿರ್ದೇಶಕರನ್ನು ಕೇಳುತ್ತಿದ್ದರು. ವಯಸ್ಸಲ್ಲಿ ರಾಜ್ ಅವರಿಗಿಂತ ನರಸಿಂಹರಾಜು ಹಿರಿಯರು. ಇಬ್ಬರ ನಡುವಿನ ಬಾಂಧವ್ಯವೂ ಅಷ್ಟೇ ಚೆಂದ.
ಟಿ ನರಸಿಂಹರಾಜು. ಟಿ ಅಂದರೆ ತಿಪಟೂರು. ತುಮಕೂರು ಜಿಲ್ಲೆಯ ಮುಖ್ಯ ವಾಣಿಜ್ಯ ನಗರಿ. ಕೊಬ್ಬರಿಗೆ ಫೇಮಸ್ ಆದ ನಗರ ಈ ತಿಪಟೂರು. ಈ ಊರಿಂದ ಬಂದವರೇ ನರಸಿಂಹರಾಜು. ಆಗ ನಾಟಕಗಳಲ್ಲಿ ಅಭಿನಯಿಸುವುದು ಗೌರವದ ಸಂಕೇತವಾಗಿರಲಿಲ್ಲ. ಬಾಲ ಕಲಾವಿದರಿಗೆ ಬೇಡಿಕೆ ಇತ್ತಾದರೂ, ಮಕ್ಕಳು ಸಿಗುತ್ತಿರಲಿಲ್ಲ. ನಾಟಕದ ಕಂಪನಿ ನಡೆಸುವವರ ಮಕ್ಕಳಿದ್ದರೆ ಅವರೇ ನಟಿಸುತ್ತಿದ್ದರು. ಮಕ್ಕಳಿಲ್ಲದಿದ್ದರೆ ಸಮಸ್ಯೆ ದೊಡ್ಡದಾಗುತ್ತಿತ್ತು. ಆ ಪೈಕಿ ಚಂದ್ರಮೌಳೇಶ್ವರ ನಾಟಕ ಕಂಪನಿಯಲ್ಲಿಯೂ ಬಾಲ ಕಲಾವಿದರದ್ದೇ ಸಮಸ್ಯೆ. ಆಗ ಲಕ್ಷ್ಮೀಪತಿ ರಾಜು, ತಮ್ಮ ಅಣ್ಣನ ಮಗ ನರಸಿಂಹರಾಜುವಿಗೆ ಕೇಳುತ್ತಾರೆ. "ನಾಟಕಗಳಲ್ಲಿ ಬಾಲ ಕಲಾವಿದನಾಗಿ ನಟಿಸುತ್ತೀಯಾ?" ಎಂದು. ಆಗ ನರಸಿಂಹರಾಜು ಕೇವಲ 4 ವರ್ಷದ ಹುಡುಗ. "ನಟಿಸ್ತಿನಿ ಚಿಕ್ಕಪ್ಪ.." ಅಂತಾರೆ. ಆಗ ಅಪ್ಪನ ಒಪ್ಪಿಗೆ ಸಿಗಲ್ಲ. ಕೊನೆಗೇ ಅಮ್ಮನನ್ನು ಪುಸಲಾಯಿಸಿ ನಾಟಕಕ್ಕೆ ಇಳಿಯುತ್ತಾರೆ.
ಆಗ ತಿಪಟೂರಿನಲ್ಲಿ ಭಕ್ತ ಕುಬೇರದಾಸ ನಾಟಕದಲ್ಲಿ ನರಸಿಂಹರಾಜು ತಮ್ಮ ನಾಲ್ಕನೇ ವಯಸ್ಸಿಗೆ ರಂಗಭೂಮಿ ಪದಾರ್ಪಣೆ ಮಾಡುತ್ತಾರೆ. ಹುಟ್ಟೂರಿನ ಸಾಕಷ್ಟು ಜನರ ಮೆಚ್ಚುಗೆ ಪಡೆಯುತ್ತಾರೆ. ಬಳಿಕ ಕಾನ್ಕಾಹಳ್ಳಿಗೂ ನಾಟಕಕ್ಕೆ ಹೋಗುತ್ತಾರೆ. ಕಾನ್ಕಾಹಳ್ಳಿ ಇಂದಿನ ಕನಕಪುರ. ಅಲ್ಲಿನ ಕೃಷ್ಣಶಾಸ್ತ್ರಿ ಎಂಬುವವರ ರಂಗಭೂಮಿಯಲ್ಲಿ ಒಳ್ಳೆಯ ಮೇಷ್ಟು. ನರಸಿಂಹರಾಜು ಅವರಲ್ಲಿನ ಪ್ರತಿಭೆಯನ್ನು ಅರ್ಥಮಾಡಿಕೊಂಡು, ಅವರಿಗೆ ಅಭಿನಯದ ತರಬೇತಿ ನೀಡುತ್ತಾರೆ. ಅದಾದ ಬಳಿಕ ಸಣ್ಣಪುಟ್ಟ ಪಾತ್ರ ಮಾಡುತ್ತಿದ್ದ ನರಸಿಂಹರಾಜು, ತರಬೇತಿಯ ಬಳಿಕ ಲೋಹಿತಾಶ್ವ, ಬಾಲ ಕೃಷ್ಣ, ಬಾಲ ಮಕರಂದದಂಥ ಮುಖ್ಯ ಬಾಲ ಪಾತ್ರಗಳನ್ನು ಮಾಡಲು ಶುರುಮಾಡುತ್ತಾರೆ.
ಬಾಲ್ಯದಲ್ಲಿ ಕೃಷ್ಣಮೂರ್ತಿಗಳು ನರಸಿಂಹರಾಜುಗೆ ಅಭಿನಯದ ಪಾಠ ಹೇಳಿಕೊಟ್ಟರೆ, ಮುದ್ದಪ್ಪ ಗುರುಗಳು ಅಕ್ಷರಾಭ್ಯಾಸ ಹೇಳಿಕೊಡ್ತಾರೆ. ಸಂಗೀತ, ಗಾಯನ, ಸಾಹಿತ್ಯ, ಸಂಸ್ಕೃತ ಶ್ಲೋಕಗಳನ್ನು ಮುದ್ದಪ್ಪ ಅವರಿಂದ ಕಲಿಯುತ್ತಾರೆ. ಹೀಗಾಗಿ ಇಬ್ಬರು ಗುರುಗಳಿಂದ ನರಸಿಂಹರಾಜು ಅವರ ಶಿಕ್ಷಣ ಮತ್ತು ನಟನೆ ಸುಧಾರಿಸುತ್ತದೆ. "ನಟನೆ ವಿಚಾರದಲಿ ನಾನು ಏನೇ ಸಾಧಿಸಿದರೂ ಅದಕ್ಕೆ ಕೃಷ್ಣಮೂರ್ತಿಗಳೇ ಕಾರಣ, ಭಾಷಣ, ಮಾತುಗಾರಿಕೆಯಲ್ಲಿ ನಾನು ಏನೇ ಮಾಡಿದರೂ ಅದಕ್ಕೆ ಮುದ್ದಪ್ಪನವರು ಕಾರಣ". ಹೀಗೆ ಈ ಮಾತನ್ನು ನರಸಿಂಹರಾಜು ಸಾಕಷ್ಟು ಬಾರಿ ವೇದಿಕೆಗಳಲ್ಲಿ, ಸ್ನೇಹಿತರು ಜತೆ ಮಾತಿಗಿಳಿದಾಗ ನೆನಸಪಿಕೊಂಡಿದ್ದಾರೆ.
ಹೀಗೆ ರಂಗಭೂಮಿಯಲ್ಲಿ ಬೆಳೆಯುತ್ತಿರುವಾಗಲೇ, ಅಮ್ಮನಿಗೆ ಎಲ್ಲೋ ಒಂದು ಕಡೆ ಅಳುಕು. ಮಗ ಎಲ್ಲಿ ಹಾಳಾಗ್ತಾನೆ ಅನ್ನೋ ಭಯ. ಅದಾಗಲೇ ನರಸಿಂಹರಾಜು ನಾಲ್ಕು ವರ್ಷ ರಂಗಭೂಮಿಯಲ್ಲಿ ಪಳಗಿದ್ದರು. ಹೀಗಿರುವಾಗ ಇವರ ಬಗ್ಗೆ ಎರಡು ರೀತಿಯಲ್ಲಿ ಕೆಲ ಮಾತುಗಳು ಕೇಳಿ ಬಂದವು. ಒಂದು ಮನೆಯವರಿಗೆ ಒಪ್ಪಿಸಿ ನಾಟಕ ಸೇರಿಕೊಂಡರು. ಇನ್ನೊಂದು ಮನೆಯವರನ್ನು ಒಪ್ಪಿಸದೇ ನಾಟಕ ಸೇರಿಕೊಂಡರು ಎಂಬ ಮಾತಿದೆ. ಹೀಗೆ ಸಾಗಿದ ನರಸಿಂಹರಾಜು ಮುಂದೆ ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡುತ್ತಾರೆ. ಕಿರು ಅವಧಿಯಲ್ಲಿ ಅಪಾರ ಯಶಸ್ಸು ಸಂಪಾದಿಸುತ್ತಾರೆ. ಈ ಮೇಲೆ ಹೇಳಿದಂತೆ, "ನರಸಿಂಹ ರಾಜು ಅವರು ಸಿನಿಮಾದಲ್ಲಿ ಇದ್ದಾರೆಯೇ?" ಎಂದು ಹೇಳಿಯೇ ರಾಜ್ ಕುಮಾರ್ ಸೇರಿ ಬಹುತೇಕ ಅಂದಿನ ಎಲ್ಲ ನಟರಿಗೂ ಇವರು ಇರಲೇಬೇಕು. ಇದ್ದಾರೆಂದರೆ ಮಾತ್ರ ಸಿನಿಮಾ ಒಪ್ಪಿಕೊಳ್ಳುತ್ತಿದ್ದರು.
ಆ ಕಾಲದಲ್ಲಿ ಕೇವಲ ಸಿನಿಮಾ ಕ್ಷೇತ್ರದ ಪ್ರಭಾವಿ ಹಾಸ್ಯನಟನಾಗಿ ಮಾತ್ರವಲ್ಲದೆ, ಸಿನಿಮಾ ನಿರ್ಮಾಣದಲ್ಲಿಯೂ ನರಸಿಂಹರಾಜು ತೊಡಗಿಸಿಕೊಂಡರು. ಅತ್ಯಂತ ಕಡಿಮೆ ಅವಧಿಯಲ್ಲಿಯೇ ಹಲವು ಮೊದಲುಗಳಿಗೂ ಇವರು ಕಾರಣರಾದವರು. ಆ ಮೊದಲುಗಳನ್ನು ನೋಡುವುದಾದರೆ, ಕನ್ನಡದಲ್ಲಿ ಮೊದಲ ನೂರು ಸಿನಿಮಾ ಮಾಡಿದವರು ನರಸಿಂಹರಾಜು. ಕನ್ನಡದಲ್ಲಿ ಮೊದಲ ಕಾರ್ ಖರೀದಿಸಿದ ಮೊದಲಿಗರು ನರಸಿಂಹರಾಜು. ಮೊದಲು ಮನೆ ಕಟ್ಟಿದ ಕಲಾವಿದ ನರಸಿಂಹರಾಜು. ಮನೆಗೆ ಫೋನ್ ಕನೆಕ್ಷನ್ ಪಡೆದ ಮೊದಲ ಕಲಾವಿದ ನರಸಿಂಹರಾಜು. ಹೀಗೆ ಅನೇಕ ಮೊದಲುಗಳ ಸರಮಾಲೆಯನ್ನೇ ಹಾಕಿಕೊಂಡವರು ನರಸಿಂಹರಾಜು.
- ಮಂಜುನಾಥ ಕೊಟಗುಣಸಿ
ಇಂಥ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಫ್ಯಾಷ್‌ಬ್ಯಾಕ್ ಅಂಕಣ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆ, ಸಲಹೆಗಳಿಗೆ ಸ್ವಾಗತ. ಇಮೇಲ್: manjunath.kotagunasi@htdigital.in ಅಥವಾ ht.kannada@htdigital.in
ಮನರಂಜನೆಯ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ