Deepfake: ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೊ ಬಗ್ಗೆ ಝರಾ ಪಟೇಲ್ ಪ್ರತಿಕ್ರಿಯೆ; ಇದಕ್ಕೂ ನನಗೂ ಸಂಬಂಧವಿಲ್ಲ ಅಂದ್ರು ಮೂಲ ವಿಡಿಯೊ ಒಡತಿ
Zara Patel Reacts on Deepfake Video: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೊ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ ಮೂಲ ವಿಡಿಯೊದ ಝರಾ ಪಟೇಲ್. ಈ ಬಗ್ಗೆ ಇನ್‌ಸ್ಟಾಗ್ರಾಂ ಪೋಸ್ಟ್ ಮಾಡಿರುವ ಝರಾ ಏನು ಹೇಳಿದ್ದಾರೆ ನೋಡಿ.
ನಿನ್ನೆಯಿಂದ ಎಲ್ಲಿ ಕೇಳಿದ್ರೂ ಡೀಪ್‌ಫೇಕ್ ಪದವೇ ಕಿವಿಗೆ ರಾಚುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ದೀಪ್‌ಫೇಕ್‌ನದ್ದೇ ಸುದ್ದಿ. ಇದಕ್ಕೆ ಕಾರಣ ವೈರಲ್ ಆದ ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೊ. ಈ ವಿಡಿಯೊ ಭಾರತದಾದ್ಯಂತ ಸಂಚಲನ ಸೃಷ್ಟಿಸಿದೆ. ಈ ವಿಡಿಯೊ ಬಗ್ಗೆ ಬಾಲಿವುಡ್‌ನ ಖ್ಯಾತ ನಟ ಅಮಿತಾಬ್ ಬಚ್ಚನ್ ಕೂಡ ಪ್ರತಿಕ್ರಿಯಿಸಿದ್ದು ಕಠಿಣ ಕಾನೂನು ಕ್ರಮ ಜರುಗಿಸುವಂತೆ ಕೇಳಿಕೊಂಡಿದ್ದಾರೆ.
ಇದೀಗ ಈ ವಿಡಿಯೊ ಬಗ್ಗೆ ಝರಾ ಪಟೇಲ್ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಯಾರು ಈ ಝರಾ ಪಟೇಲ್ ಅಂತೀರಾ, ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ಮಾಡಲಾದ ಒರಿಜಿನಲ್ ವಿಡಿಯೊ ಝರಾ ಪಟೇಲ್ ಅವರದ್ದು. ಬ್ರಿಟಿಷ್ ಇಂಡಿಯನ್ ಇನ್ಫ್ಲೂಯೆನ್ಸರ್ ಆಗಿರುವ ಝರಾ ಪಟೇಲ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ʼಈ ವಿಷಯ ಕೇಳಿ ನನಗೆ ತುಂಬಾ ಬೇಸರವಾಗಿದೆ, ನಡೆದಿರುವ ಈ ಘಟನೆ ನನ್ನ ಮನಸನ್ನು ಘಾಸಿಗೊಳಿಸಿದೆʼ ಎಂದು ಆಕೆ ಬರೆದುಕೊಂಡಿದ್ದಾರೆ. ಈ ವಿಡಿಯೊ ಸೃಷ್ಟಿಗೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಆಕೆ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಝರಾ ʼನನ್ನ ದೇಹಕ್ಕೆ ಬಾಲಿವುಡ್‌ನ ಖ್ಯಾತ ನಟಿಯೊಬ್ಬರ ಮುಖವನ್ನು ಅಳವಡಿಸಿ ಡೀಪ್‌ಫೇಕ್ ವಿಡಿಯೊ ಸೃಷ್ಟಿಸಿರುವುದು ನನ್ನ ಗಮನಕ್ಕೆ ಬಂದಿದೆ. ಈ ಡೀಪ್‌ಫೇಕ್ ವಿಡಿಯೊ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಇದರಿಂದ ನನಗೆ ತುಂಬಾ ಬೇಸರವಾಗಿದೆ, ಮನಸ್ಸಿಗೆ ಘಾಸಿಯಾಗಿದೆʼ ಎಂದು ಬರೆದುಕೊಂಡಿದ್ದಾರೆ. ಮುಂದಿನ ಸಾಲುಗಳಲ್ಲಿ ಆಕೆ ಜನರಲ್ಲಿ ಅಂತರ್ಜಾಲದಲ್ಲಿ ಬರುವ ಎಲ್ಲವನ್ನೂ ನಂಬಬೇಡಿ, ಫ್ಯಾಕ್ಟ್‌ಚೆಕ್ ಮಾಡಿ ಎಂದು ಕೇಳಿಕೊಂಡಿದ್ದಾರೆ. ʼಅಂತರ್ಜಾಲದಲ್ಲಿ ನೀವು ನೋಡಿರುವ ವಿಚಾರಗಳನ್ನು ಒಮ್ಮೆಲೆ ನಂಬಬೇಡಿ. ಒಂದು ಹೆಜ್ಜೆ ಹಿಂದಿಟ್ಟು ಫ್ಯಾಕ್ಟ್‌ಚೆಕ್ ಮಾಡಿ. ಇಂಟರ್‌ನೆಟ್‌ನಲ್ಲಿ ಬರುವುದೆಲ್ಲವೂ ಸತ್ಯವಲ್ಲʼ ಎಂದು ಬರೆದಿದ್ದಾರೆ.
ವೈರಲ್ ಆದ ಡೀಪ್‌ಫೇಕ್ ವಿಡಿಯೊದಲ್ಲಿ ಕಪ್ಪು ಬಣ್ಣದ ಉಡುಪು ಧರಿಸಿ ಲಿಫ್ಟ್ ಒಳಗೆ ಹೋಗುತ್ತಿರುವ ದೃಶ್ಯವಿದೆ. ಇದು ಝರಾ ಪಟೇಲ್ ಅವರದ್ದಾಗಿದ್ದು, ಅವರ ಈ ವಿಡಿಯೊಗೆ ಎಐ ತಂತ್ರಜ್ಞಾನದ ಮೂಲಕ ರಶ್ಮಿಕಾ ಮಂದಣ್ಣ ಮುಖವನ್ನು ಅಳವಡಿಸಲಾಗಿದೆ. ಮೇಲ್ನೋಟಕ್ಕೆ ಇದು ಎಡಿಟೆಡ್ ವಿಡಿಯೊ ಅನ್ನಿಸಲು ಸಾಧ್ಯವೇ ಇಲ್ಲ ಅನ್ನುವಷ್ಟು ಸ್ವಷ್ಟವಾಗಿ ತಂತ್ರಜ್ಞಾನ ಬಳಸಿಕೊಂಡು ಎಡಿಟ್ ಮಾಡಲಾಗಿದೆ.
ಫ್ಯಾಕ್ಟ್‌ಚೆಕ್ಕರ್ ಒಬ್ಬರು ರಶ್ಮಿಕಾ ಮಂದಣ್ಣ ಅವರ ಈ ಡೀಪ್‌ಫೇಕ್ ವಿಡಿಯೊದ ಅಸಲಿ ಹಾಗೂ ನಕಲಿ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ನಂತರ ಈ ಸುದ್ದಿ ಸಂಚಲನ ಮೂಡಿಸಿದೆ. ಇದು ಅಮಿತಾಬ್ ಬಚ್ಚನ್ ಅವರ ಗಮನಕ್ಕೂ ಬಂದಿದ್ದು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ಡೀಪ್‌ಫೇಕ್ ವಿಡಿಯೊ ಬಗ್ಗೆ ರಶ್ಮಿಕಾ ಮಂದಣ್ಣ ತುಂಬಾ ನೋವಾಗುತ್ತಿದೆ, ಇದು 'ಅತ್ಯಂತ ಭಯಾನಕ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.