ನಿಮ್ಮ ಬಗ್ಗೆ ಹೆಮ್ಮೆಯಿದೆ ಅಪ್ಪ, ನಿಮ್ಮಂತೆ ಯಾರೂ ನಿರೂಪಣೆ ಮಾಡಲು ಸಾಧ್ಯವಿಲ್ಲ: ಸುದೀಪ್ ನಿರ್ಧಾರದ ಬಗ್ಗೆ ಮಗಳು ಸಾನ್ವಿ ಪ್ರತಿಕ್ರಿಯೆ
ಕಿಚ್ಚ ಸುದೀಪ್ ಬಿಗ್‌ಬಾಸ್ ನಿರೂಪಣೆಗೆ ಗುಡ್ ಬೈ ಹೇಳಿದ್ದಾರೆ. 11ನೇ ಬಿಗ್‌ಬಾಸ್ ಕಾರ್ಯಕ್ರಮದ ನಂತರ ಇನ್ಮುಂದೆ ವೇದಿಕೆಯಲ್ಲಿ ಮೆಚ್ಚಿನ ನಟನನ್ನು ನೋಡಲಾಗುವುದಿಲ್ಲ ಎಂದು ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ಸುದೀಪ್ ಪುತ್ರಿ ಸಾನ್ವಿ ಕೂಡಾ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಂದೆ ನಿರ್ಧಾರದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.

ಬಿಗ್‌ಬಾಸ್ ಕನ್ನಡ ಸೀಸನ್ 11, ಮೂರನೇ ವಾರಕ್ಕೆ ಕಾಲಿಟ್ಟಿದೆ. ಸ್ಪರ್ಧಿಗಳ ನಡುವೆ ಗುಂಪುಗಾರಿಕೆ ಹೆಚ್ಚಾಗಿದೆ. ಜಗಳವೂ ಹೆಚ್ಚುತ್ತಿದೆ. ಕೆಲವರು ಬಹಳ ಕಠಿಣವಾಗಿ ವರ್ತಿಸುತ್ತಿದ್ದಾರೆ. ಬಿಗ್‌ಬಾಸ್‌ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ಕೆಲವರು ಪೊಲೀಸರಿಗೆ ದೂರು ನೀಡಿದ್ದು ಆಯೋಜಕರಿಗೆ ಪೊಲೀಸರು ನೋಟಿಸ್ ಕೂಡಾ ನೀಡಿದ್ದಾರೆ. ಈ ನಡುವೆ ಸುದೀಪ್, ಇದು ನಿರೂಪಕನಾಗಿ ನನ್ನ ಕೊನೆಯ ಬಿಗ್‌ಬಾಸ್ ಕಾರ್ಯಕ್ರಮ ಎಂದು ಘೋಷಿಸಿರುವುದು ಹಲವರ ಬೇಸರಕ್ಕೆ ಕಾರಣವಾಗಿದೆ. ಆದರೆ ಮಗಳ ಸಾನ್ವಿ ಅಪ್ಪನ ನಡೆಗೆ ಸಂತೋಷ ವ್ಯಕ್ತಪಡಿಸಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ನಿರೂಪಕನಾಗಿ ಇದು ನನ್ನ ಕೊನೆಯ ಬಿಗ್‌ಬಾಸ್
ಪ್ರೋಮೋ ರಿಲೀಸ್ ಆದಾಗ ಈ ಬಾರಿ ಕಿಚ್ಚ ಸುದೀಪ್ ಬಿಗ್‌ಬಾಸ್ ನಿರೂಪಣೆ ಮಾಡ್ತಿಲ್ಲ, ಅವರ ಬದಲಿಗೆ ಬೇರೆ ಸ್ಟಾರ್ ಹೀರೋ ಈ ಬಾರಿ ನಿರೂಪಣೆ ಮಾಡುತ್ತಾರೆ ಎನ್ನಲಾಗಿತ್ತು. ಸುದೀಪ್ ಇಲ್ಲದಿದ್ದರೆ ನಾವು ಬಿಗ್‌ಬಾಸ್ ನೋಡುವುದೇ ಇಲ್ಲ ಎಂದು ಹಲವರು ಕಾಮೆಂಟ್ ಕೂಡಾ ಮಾಡಿದ್ದರು. ಆದರೆ ಮತ್ತೊಂದು ಪ್ರೋಮೋದಲ್ಲಿ ಕಿಚ್ಚನನ್ನು ನೋಡಿ ಎಲ್ಲರೂ ಖುಷಿಯಾಗಿದ್ದರು. ಕಿಚ್ಚ ಇಲ್ಲ ಎಂದರೆ ಬಿಗ್‌ಬಾಸ್ ವೇದಿಕೆಗೆ ಕಳೆಯೇ ಇರುವುದಿಲ್ಲ ಎಂದಿದ್ದರು. ಇಷ್ಟು ದಿನಗಳವೆರೆಗೂ ಒಂದು ಲೆಕ್ಕ , ಇನ್ಮುಂದೆ ಒಂದು ಲೆಕ್ಕ ಎಂದು ಸುದೀಪ್ ಜೋಶ್ ಆಗಿ ನಿರೂಪಣೆ ಆರಂಭಿಸಿದ್ದರು. ಪ್ರತಿ ಬಾರಿ ಬಿಗ್‌ಬಾಸ್ ಆರಂಭವಾದಗೆಲ್ಲಾ ಸುದೀಪ್ ನಿರೂಪಣೆ ಮಾಡುವುದಿಲ್ಲ ಎಂದು ಸುದ್ದಿಯಾಗುತ್ತಿತ್ತು. ಅದರೆ ಇದೆಲ್ಲಾ ಕೆಲವರು ಬೇಕೆಂದೇ ಹಬ್ಬಿಸುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಸ್ವತ: ಸುದೀಪ್ ನಾನು ಇನ್ಮುಂದೆ ನಿರೂಪಣೆ ಮಾಡ್ತಿಲ್ಲ ಎಂದಾಗ ಅಭಿಮಾನಿಗಳಿಗೆ ಶಾಕ್ ಆಗಿತ್ತು.
2 ದಿನಗಳ ಹಿಂದೆ ಸುದೀಪ್ ಮಾಡಿದ್ದ ಟ್ವೀಟ್ ಕಂಡು ಹಲವರ ಹೃದಯ ಒಡೆದಿತ್ತು. ಬಿಗ್‌ಬಾಸ್ ಕಾರ್ಯಕ್ರಮಕ್ಕೆ ನೀವೆಲ್ಲರೂ ತೋರಿದ ಪ್ರೀತಿ, ವಿಶ್ವಾಸ ಬಹಳ ದೊಡ್ಡದು. ಈ ಪ್ರೀತಿಗೆ ನಾನು ಎಂದಿಗೂ ಚಿರಋಣಿ ಆಗಿರುತ್ತೇನೆ. ಬಿಗ್‌ಬಾಸ್ ನಿರೂಪಕನಾಗಿ ಇದು ನನ್ನ ಕೊನೆಯ ಶೋ, ನಾನು ಬೇರೆ ಕೆಲಸಗಳ ಕಡೆ ಗಮನ ಕೇಂದ್ರೀಕರಿಸಬೇಕಿದೆ. ಎಂದು ಕಿಚ್ಚ ಟೀಟ್ ಮಾಡಿದ್ದರು. ಇದನ್ನು ನೋಡುತ್ತಿದ್ದಂತೆ ಎಲ್ಲರೂ ಬ್ರೇಕ್ ಹಾರ್ಟ್ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದ್ದರು. ಇದೇನು ಸುದೀಪ್ ಇಂಥ ನಿರ್ಧಾರ ಏಕೆ ತೆಗೆದುಕೊಂಡ್ರಿ, ನೀವು ಇದ್ದರೆ ಮಾತ್ರ ಬಿಗ್‌ಬಾಸ್ ವೇದಿಕೆಗೆ ಒಂದು ಕಳೆ, ನೀವು ಇಲ್ಲದಿದ್ದರೆ ನಾವು ಖಂಡಿತ ಕಾರ್ಯಕ್ರಮ ನೋಡುವುದಿಲ್ಲ ಎಂದೆಲ್ಲಾ ರಿಪ್ಲೇ ಮಾಡಿದ್ದರು. ಸುದೀಪ್ ಪುತ್ರಿ ಸಾನ್ವಿ ಕೂಡಾ ತಂದೆ ಟ್ವೀಟ್ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ನಿಮ್ಮಂತೆ ಯಾರೂ ನಿರೂಪಣೆ ಮಾಡಲಾಗುವುದಿಲ್ಲ ಎಂದ ಸಾನ್ವಿ ಸುದೀಪ್
ನಿಮ್ಮ ಜರ್ನಿ ಬಗ್ಗೆ ಬಹಳ ಹೆಮ್ಮೆ ಇದೆ ಅಪ್ಪ, ನಿಮ್ಮಂತೆ ಬೇರೆ ಯಾರೂ ನಿರೂಪಣೆ ಮಾಡಲು ಸಾಧ್ಯವಿಲ್ಲ. ಬಿಗ್‌ಬಾಸ್ ವೇದಿಕೆಯಲ್ಲಿ ಇನ್ಮುಂದೆ ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇವೆ. ಈ ಕಾರ್ಯಕ್ರಮಕ್ಕಾಗಿ ನೀವು ಎಷ್ಟೆಲ್ಲಾ ಶ್ರಮ ವಹಿಸಿದ್ದೀರಿ ಎಂಬುದು ನನಗೆ ಗೊತ್ತು. ಇಲ್ಲಿವರೆಗೂ ಶೋಗಾಗಿ ನೀವು ನೀಡಿದ ಕೊಡುಗೆ ಮಹತ್ತರವಾದದ್ದು, ಆದರೂ ನಿಮ್ಮ ನಿರ್ಧಾರದ ಬಗ್ಗೆ ಬಹಳ ಹೆಮ್ಮೆ ಇದೆ ಎಂದು ಸುದೀಪ್ ಪುತ್ರಿ ಸಾನ್ವಿ, ತಂದೆ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
