Bhagyalakshmi Serial: ಯಾವ ಸೀಮೆ ತಾಯಿನಮ್ಮ ನೀನು, ಕುಸುಮಾ ವಿರುದ್ಧ ಹರಿಹಾಯ್ದ ತಾಂಡವ್; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial Today Episode: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 27ರ ಸಂಚಿಕೆ ಹೀಗಿದೆ. ಸೊಸೆ ಪರ ನಿಂತ ತಾಯಿಗೆ ತಾಂಡವ್ ಅವಮಾನ ಮಾಡುತ್ತಾನೆ. ಅತ್ತೆಯ ಕಣ್ಣೀರು ನೋಡಿದ ಭಾಗ್ಯಾ, ತಾಯಿಗೆ ನೋವು ಕೊಡದಂತೆ ಮನವಿ ಮಾಡುತ್ತಾಳೆ.
Bhagyalakshmi Kannada Serial: ಗಾಳಿಪಟ ಸ್ಪರ್ಧೆಯಲ್ಲಿ ಸೋತ ತಾಂಡವ್‌ನನ್ನು ಮಾತನಾಡಿಸಲು ಶ್ರೇಷ್ಠಾ ಬರುತ್ತಾಳೆ. ಅಷ್ಟರಲ್ಲಿ ಮಗ ತನ್ಮಯ್ ಬಂದು ಅಜ್ಜಿ ಕರೆಯತ್ತಿರುವುದಾಗಿ ಹೇಳುತ್ತಾನೆ. ನಿನ್ನ ಅಮ್ಮ ನಿನಗೆ ಅವಮಾನ ಮಾಡಲು ಕರೆಯುತ್ತಿರುವುದು, ಸೋತರೆ ಕಾಲಿಗೆ ಬಿದ್ದು ಸೊಸೆಯೇ ಗ್ರೇಟ್ ಎಂದು ಒಪ್ಪಿಕೊಳ್ಳುವುದಾಗಿ ಹೇಳಿದ್ದೆ, ಈಗ ಹೋಗಿ ಕಾಲಿಗೆ ಬೀಳು ಎಂದು ಶ್ರೇಷ್ಠಾ ವ್ಯಂಗ್ಯವಾಡುತ್ತಾಳೆ.
ಅಮ್ಮನ ಕಾಲಿಗೆ ಬೀಳುವ ತಾಂಡವ್
ಅಪ್ಪನನ್ನು ಏಕೆ ಕರೆದಿದ್ದು ಎಂದು ತನ್ವಿ ಅಜ್ಜಿ ಮೇಲೆ ಕೋಪಗೊಳ್ಳುತ್ತಾಳೆ. ಆದರೆ ಮೊಮ್ಮಗಳಿಗೆ ಬುದ್ಧಿ ಹೇಳುವ ಕುಸುಮಾ, ಇಲ್ಲಿರುವವರಿಗೆ ನಮ್ಮ ಮನೆಯಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯುವುದು ಬೇಡ, ಅಷ್ಟಕ್ಕೂ ನಿನ್ನ ಅಪ್ಪನ ಮೇಲೆ ನಮಗೆ ದ್ವೇಷ ಇಲ್ಲ. ಕೋಪದಿಂದ ಮನೆ ಬಿಟ್ಟು ಬಂದಿದ್ದಾನೆ. ನಾವೆಲ್ಲಾ ಇಲ್ಲಿ ಇರುವಾಗ ಅವನೇಕೆ ಒಂಟಿಯಾಗಿರಬೇಕು. ಅಲ್ಲಿ ನೋಡು, ಎಲ್ಲರೂ ಜೊತೆಯಾಗಿ ಊಟ ಮಾಡುತ್ತಿದ್ದಾರೆ. ನಾವೆಲ್ಲಾ ಒಟ್ಟಿಗೆ ಊಟ ಮಾಡೋಣ ಎಂದು ಅವನನ್ನು ಕರೆದಿದ್ದಾಗಿ ಹೇಳುತ್ತಾಳೆ. ಆದರೆ ತಾಂಡವ್ ಮಾತ್ರ ಇದ್ಯಾವುದನ್ನೂ ಅರ್ಥ ಮಾಡಿಕೊಳ್ಳುವುದಿಲ್ಲ. ಅಮ್ಮನ ಬಳಿ ಬರುವ ತಾಂಡವ್, ಕುಸುಮಾ ಕಾಲಿಗೆ ಬೀಳುತ್ತಾನೆ.
ನಾನು ಆಟದಲ್ಲಿ ಸೋತಿದ್ದೇನೆ, ಅಮ್ಮ ನೀನು ಹೇಳಿದಂತೆ ನಿನ್ನ ಕಾಲಿಗೆ ಬೀಳುತ್ತಿದ್ದೇನೆ. ಹೌದು, ನೀನು ಆರಿಸಿ ತಂದು ನನಗೆ ಮದುವೆ ಮಾಡಿರುವ ಇವಳು ನಿಜಕ್ಕೂ ಸರ್ವಶ್ರೇಷ್ಠ ಸೊಸೆ, ಸ್ವತ: ನಾನೇ ಆರಿಸಿದ್ದರೂ ಇಂಥ ಹುಡುಗಿಯನ್ನು ಆರಿಸುತ್ತಿದ್ದೆನೋ ಇಲ್ಲವೋ, ಒಂದು ವೇಳೆ ಭಾಗ್ಯಾ ನನ್ನ ಜೀವನದಲ್ಲಿ ಇರದಿದ್ದರೆ ನಾನು ಏನಾಗುತ್ತಿದ್ದೆನೋ ಏನೋ ಎನ್ನುತ್ತಾನೆ. ಮಗನ ವಿಚಿತ್ರ ವರ್ತನೆಯನ್ನು ಕುಸುಮಾ ಅನುಮಾನದಿಂದಲೇ ನೋಡುತ್ತಾಳೆ. ಆದರೆ ನಂತರವಷ್ಟೇ ಅದು ಕೊಂಕು ಮಾತುಗಳು ಎಂದು ಕುಸುಮಾ, ಭಾಗ್ಯಾಗೆ ತಿಳಿಯುತ್ತದೆ. ಯಾವ ಸೀಮೆ ತಾಯಿನಮ್ಮ ನೀನು, ಮಗ ಸೋತಾಗ, ಅವನ ಪರ ನಿಲ್ಲುವುದು ಬಿಟ್ಟು ಸೊಸೆ ಪರ ಇದ್ದೀಯ. ನೀನು ಹೇಳಿದಂತೆ ನಿನ್ನ ಸೊಸೆ ಸರ್ವಶ್ರೇಷ್ಠ ಎಂದು ಒಪ್ಪಿಕೊಂಡಿದ್ದೇನೆ. ಆ ಸೊಸೆ ಜೊತೆ ನೀನೇ ಇರು, ನನಗೆ ಇಂಥ ಹೆಂಡತಿ ಬೇಕಿಲ್ಲ ಎನ್ನುತ್ತಾನೆ.
ತಾಂಡವ್‌ಗೆ ಭಾಗ್ಯಾ ತಿರುಗೇಟು
ಮಗನ ಮಾತನ್ನು ಕೇಳಿ ಕುಸುಮಾ ಕಣ್ಣೀರಿಡುತ್ತಾಳೆ. ಆದರೆ ಭಾಗ್ಯಾ ಸುಮ್ಮನಿಸುವುದಿಲ್ಲ. ಇಷ್ಟು ಹೊತ್ತು ಅವರು ಹೇಳಿದ್ದನ್ನು ನಾವು ಕೇಳಿಸಿಕೊಂಡೆವು. ಈಗ ನಾವು ಹೇಳುವುದನ್ನು ಅವರು ಕೇಳಿಸಿಕೊಳ್ಳಲಿ. ನಾನು ಉತ್ತರ ಕೊಡುತ್ತೇನೆ ಎಂದು ಭಾಗ್ಯಾ ತಾಂಡವ್ ಎದುರು ನಿಂತು, ನಿಜ ಏನೆಂದು ಹೇಳುತ್ತಾಳೆ. ಇಷ್ಟಕ್ಕೂ ನಿಮ್ಮನ್ನು ಇಲ್ಲಿ ಕರೆದದ್ದು ನಿಮ್ಮ ಬಳಿ ಕ್ಷಮೆ ಕೇಳಿಸಿಕೊಳ್ಳಬೇಕು ಅಂತ ಅಲ್ಲ, ಆಟವನ್ನು ಆಟದ ರೀತಿ ಆಡಿದೆವು. ನಾನು ಗೆದ್ದೆ ಹೌದು, ಆದರೆ ಅದು ಅಲ್ಲಿಗೆ ಮುಗಿಯಿತು. ನಿಮ್ಮನ್ನು ಅಮ್ಮನ ಕಾಲಿಗೆ ಬೀಳಲಿ ಎಂದೋ, ನನ್ನನ್ನು ಒಳ್ಳೆ ಸೊಸೆ ಎಂದು ಒಪ್ಪಿಕೊಳ್ಳಲೆಂದೋ ಕರೆದಿಲ್ಲ. ಮನೆ ಬಿಟ್ಟು ಬಂದಿದ್ದೀರ, ನಾವೆಲ್ಲರೂ ಒಟ್ಟಿಗೆ ಊಟ ಮಾಡಿ ಬಹಳ ದಿನಗಳಾಯ್ತು. ನಾವೆಲ್ಲಾ ಇಲ್ಲಿ ಇರುವಾಗ ನೀವು ಅಲ್ಲೆಲ್ಲೋ ಒಬ್ಬರೇ ಇರುವುದು ಸರಿ ಎನಿಸಲಿಲ್ಲ. ಆದ್ದರಿಂದ ಕರೆದಿದ್ದು ಎಂದು ಹೇಳುತ್ತಾಳೆ.
ಭಾಗ್ಯಾ ಮಾತು ತನಗೆ ಅರ್ಥವಾಯ್ತು ಎಂಬಂತೆ ನಿಲ್ಲುವ ತಾಂಡವ್, ನಿಜಕ್ಕೂ ಅಮ್ಮ, ಹೆಂಡತಿಯನ್ನು ಅರ್ಥ ಮಾಡಿಕೊಳ್ಳುತ್ತಾನಾ? ಅಥವಾ ಮತ್ತೆ ಹಳೆ ವರಸೆ ತೆಗೆಯುತ್ತಾನಾ ಕಾದು ನೋಡಬೇಕು.