Bhagyalakshmi Serial: ಮಗನೂ ಬೇಡ, ಅವನು ಕಟ್ಟಿಸಿದ ಮನೆಯೂ ಬೇಡ; ಬಾಡಿಗೆ ಮನೆಗೆ ಹೊರಡಲು ಮುಂದಾದ ಕುಸುಮಾ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ 'ಭಾಗ್ಯಲಕ್ಷ್ಮಿ' ಧಾರಾವಾಹಿ ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿದೆ. ಡಿಸೆಂಬರ್ 30ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ.
Bhagyalakshmi Kannada Serial: ಮನೆಯನ್ನು ಸೊಸೆ ಹೆಸರಿಗೆ ಬರೆದುಕೊಡುವಂತೆ ಕೇಳಿದಾಕ್ಷಣ ತಾಂಡವ್, ಹೆಂಡತಿ ಮೇಲೆ ಕೋಪಗೊಂಡು ಲಾಯರ್ ಬರೆದ ಪತ್ರಗಳಿಗೆ ಸಹಿ ಹಾಕುತ್ತಾನೆ. ನಾನು ಅಮ್ಮ ದೂರಾಗಲು ನೀನೇ ಕಾರಣ ಎಂದು ಹೆಂಡತಿ ಮೇಲೆ ಆರೋಪ ಹೊರಿಸಿ ಹೊರಡಲು ಮುಂದಾದ ತಾಂಡವ್‌ನನ್ನು ಕುಸುಮಾ ವಾಪಸ್ ಕರೆಯುತ್ತಾಳೆ.
ಕುಸುಮಾ ಲೆಕ್ಕದ ಪುಸ್ತಕ ನೋಡಿ ತಾಂಡವ್ ಶಾಕ್
ಅಮ್ಮ ಬೇರೆ ಏನೋ ಹೇಳಲು ಕರೆದಿದ್ದಾಳೆ ಎಂದುಕೊಳ್ಳುವ ತಾಂಡವ್, ಕುಸುಮಾ ಒಂದು ಪುಸ್ತಕವನ್ನು ಕೈಗಿಟ್ಟಾಗ ಕನ್ಫ್ಯೂಸ್ ಆಗುತ್ತಾನೆ. ಅಮ್ಮ ಮಗನ ಸಂಬಂಧ ಬೇಡವೆಂದು ನೀನು ಹೊರಡುವಾಗ ನನಗೂ ನಿನ್ನ ಸಂಬಂಧ ಬೇಡ. ನೀನು ಹುಟ್ಟಿದಾಗಿನಿಂದ ಕೆಲಸಕ್ಕೆ ಸೇರುವವರೆಗೂ ನಾನು ಹಾಗೂ ನಿನ್ನ ಅಪ್ಪ ನಿನಗಾಗಿ ಎಷ್ಟು ಖರ್ಚು ಮಾಡಿದ್ದೇವೆ ಎಂಬುದನ್ನು ಈ ಪುಸ್ತಕದಲ್ಲಿ ಬರೆದಿದ್ದೇನೆ. ಒಟ್ಟು 17 ಲಕ್ಷ ಆಗಿದೆ. ಎಲ್ಲವನ್ನೂ ಕೊಟ್ಟು ಹೋಗು ಎನ್ನುತ್ತಾಳೆ. ಅಮ್ಮನ ಮಾತು ಕೇಳಿ ತಾಂಡವ್‌ಗೆ ಶಾಕ್ ಆಗುತ್ತದೆ. ನೀನು ಹಾಕಿದ್ದ ಒಂದೊಂದು ಡೈಪರ್‌ಗೂ ಇಲ್ಲಿ ಲೆಕ್ಕ ಬರೆದಿದ್ದೇನೆ. ನಿನ್ನ ವಿದ್ಯಾಭ್ಯಾಸಕ್ಕೆ ಎಷ್ಟು ಖರ್ಚು ಮಾಡಿದ್ದೇನೆ ಎಂದು ಬರೆದಿದ್ದೇನೆ.
ಈ ಬೆಂಗಳೂರಿನಂಥ ಸಿಟಿಯಲ್ಲಿ ನಾನು ಹಸು, ಎಮ್ಮೆ ಸಾಕೋಕೆ ಸಾಧ್ಯವಿಲ್ಲ, ನನ್ನ ಮಗ ಚೆನ್ನಾಗಿರಲಿ ಎಂಬ ಕಾರಣಕ್ಕೆ ಹಣ ಖರ್ಚು ಮಾಡಿ ಹಾಲು, ತುಪ್ಪ ಕೊಂಡು ನಿನ್ನನ್ನು ಸಾಕಿದ್ದೇನೆ. ಅದಕ್ಕೂ ಲೆಕ್ಕ ಬರೆದಿದ್ದೇನೆ. ನೀನು ಕಾಲೇಜಿಗೆ ಹೋಗಲಿ ಅಂತ ಸ್ಕೂಟರ್ ಕೊಡಿಸಿದ್ದೆವು, ಅದನ್ನೂ ಬರೆದಿದ್ದೇನೆ ಎಂದು ಕುಸುಮಾ ಹೇಳಿದಾಗ ತಾಂಡವ್ ಸಿಟ್ಟಾಗುತ್ತಾನೆ. ಪ್ರಪಂಚದಲ್ಲಿ ನಿನ್ನಂಥ ತಾಯಿ ಎಲ್ಲರಿಗೂ ಇರಬೇಕು. ಮುಂದೆ ದೊಡ್ಡವರಾದ ನಂತರ ತಂದೆ ತಾಯಿ ನಮ್ಮನ್ನು ಬೆಳೆಸಿದ್ದಕ್ಕೆ ಖರ್ಚು ಕೇಳುತ್ತಾರೆ ಎಂದು ಮೊದಲೇ ಗೊತ್ತಿದ್ದರೆ ಚೆನ್ನಾಗಿರುತ್ತದೆ. ನಾನು ಕಾಲೇಜು ಸ್ಕಾಲರ್‌ಶಿಪ್‌ನಲ್ಲಿ ಓದಿದ್ದು, ಹಾಗೇ ನನಗೆ ಬೈಕ್ ಕೊಡಿಸಿ ಎಂದು ನಾನು ನಿಮಗೆ ಕೇಳಿದ್ನಾ, ನೀವೇ ಕೊಡಿಸಿ ನನ್ನನ್ನು ಲೆಕ್ಕ ಕೇಳುತ್ತಿದ್ದೀರ? ಎನ್ನುತ್ತಾನೆ.
ಬಾಡಿಗೆ ಮನೆಗೆ ಹೋಗಲು ನಿರ್ಧರಿಸಿದ ಕುಸುಮಾ
ಸರಿ ನಿಮಗೆ ಹಣ ತಾನೇ ಬೇಕು, 17 ಲಕ್ಷ ಚಿಲ್ಲರೆ ಆಗಿದೆ ತಾನೇ ರೌಂಡ್ ಫಿಗರ್ 18 ಲಕ್ಷ ಕೊಟ್ಟುಬಿಡುತ್ತೇನೆ. ಬೇಡ ಅದಕ್ಕೆ ಬಡ್ಡಿ, ಚಕ್ರಬಡ್ಡಿ ಸೇರಿಸಿ 20-25 ಲಕ್ಷ ಕೊಡುತ್ತೇನೆ ಎಂದಾಗ ಕುಸುಮಾ ತಾಂಡವ್‌ಗೆ ಕೆನ್ನೆಗೆ ಹೊಡೆಯುತ್ತಾಳೆ. ಯಾವ ತಂದೆ ತಾಯಿಯೂ ಮಕ್ಕಳ ಬಳಿ ದುಡ್ಡು ಕೇಳುವುದಿಲ್ಲ. ನೀನು ಬಹಳ ಬದಲಾಗಿದ್ದೀಯ, ನಿನ್ನ ದುಡ್ಡು ನಮಗೆ ಬೇಕಿಲ್ಲ, ನಾನು ನಿನಗೆ ಲೆಕ್ಕ ಕೇಳಿದಾಗ ನೀನು ಹಣ ಕೊಡಲು ಸಿದ್ಧನಿದ್ದಿ ಆದರೆ ಅಮ್ಮ ಏನೋ ಪಾಠ ಕಲಿಸಲು ಮುಂದಾಗಿದ್ದಾಳೆ ಅನ್ನೋದು ನಿನ್ನ ತಲೆಗೆ ಹೊಳೆಯಲಿಲ್ಲ.
ನೀನು ಆ ಮನೆ ಕಟ್ಟಿಸಲು ಎಷ್ಟು ಕಷ್ಟ ಪಟ್ಟಿದ್ದೀಯ ಎಂದು ನನಗೆ ಗೊತ್ತು. ಸಾಧ್ಯವಾದರೆ ಕಂತು ಕಟ್ಟಿ ಆ ಮನೆ ಉಳಿಸಿಕೋ. ಸ್ವಲ್ಪ ದಿನಗಳಲ್ಲೇ ನಿಮ್ಮ ಅಪ್ಪ ಮನೆಗೆ ವಾಪಸಾಗುತ್ತಾರೆ. ಅವರು ಬಂದ ಕೂಡಲೇ ನಾವೆಲ್ಲಾ ಹಳೆ ಬಾಡಿಗೆ ಮನೆಗೆ ಹೋಗುತ್ತೇವೆ. ನನಗೆ ಇಂಥ ಮಗನೂ ಬೇಡ, ಭಾಗ್ಯಾ ನಿನಗೆ ಇಂಥ ಗಂಡನೂ ಬೇಡ ನಡಿ ಎಂದು ಕುಸುಮಾ, ಸೊಸೆ ಭಾಗ್ಯಾ ಕೈ ಹಿಡಿದು ಅಲ್ಲಿಂದ ಹೋಗುತ್ತಾಳೆ.
ಮಗನ ಬಳಿ ಚಾಲೆಂಜ್ ಮಾಡಿದಂತೆ ಕುಸುಮಾ, ಬಾಡಿಗೆ ಮನೆಗೆ ಹೋಗುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.