Matinee: ಬಾರಲ್ಲಿ ಧನಂಜಯ್ ಕೈಯಿಂದಲೇ ಬಾಟಲ್ ಓಪನ್ ಮಾಡಿಸಿದ ನೀನಾಸಂ ಸತೀಶ್; ಆಮೇಲಾಗಿದ್ದೇ ಬೇರೆ! VIDEO
Baaro Baaro Bottle Tharo Song: ಬಾರೋ ಬಾರೋ ಬಾಟಲ್ ತಾರೋ ಹಾಡನ್ನು ಅಷ್ಟೇ ವಿಶೇಷ ಅತಿಥಿ ಕಡೆಯಿಂದ ಬಿಡುಗಡೆ ಮಾಡಿಸಬೇಕೆಂಬುದು ನೀನಾಸಂ ಸತೀಶ್ ಅವರ ಪ್ಲಾನ್ ಆಗಿತ್ತು. ಅದರಂತೆ ಆ ಅತಿಥಿಗೂ ಗೊತ್ತಾಗದಂತೆ ಅವರಿಂದಲೇ ಬಿಡುಗಡೆ ಮಾಡಿಸಿ ಕೊನೆಗೆ ಅವರಿಗೇ ಶಾಕ್ ಕೊಟ್ಟಿದ್ದಾರೆ. ಹಾಗೆ ಶಾಕ್ ಆದವರು ಡಾಲಿ ಧನಂಜಯ್.
Matinee: ಹೊಸ ವರ್ಷವನ್ನು ಸ್ವಾಗತಿಸಲು ಇನ್ನೇನು ಕೆಲವೇ ಗಂಟೆಗಳಷ್ಟೇ ಬಾಕಿ ಉಳಿದಿವೆ. ಈಗಾಗಲೇ ಹೈಕ್ಳು ಪಾರ್ಟಿ ಮಾಡುವ, ಪ್ಲೇಸ್ ಫಿಕ್ಸ್ ಮಾಡುವ ಎಂದೆಲ್ಲ ವಿಚಾರ ಮಾಡ್ತಿದ್ದಾರೆ. ಇನ್ನು ಕೆಲವರು ಗೋವಾ ಪ್ಲಾನ್ ಬೇರೆ ಹಾಕ್ತಿದ್ದಾರೆ. ಹೀಗಿರುವಾಗ ಸಿನಿಮಾ ಹೀರೋಗಳು ಹೊಸ ವರ್ಷವನ್ನು ಮತ್ತಷ್ಟು ಕಲರ್‌ಫುಲ್ ಮಾಡಲು ಹೊರಟಿದ್ದಾರೆ. ಅದರಂತೆ ಇದೀಗ ಬಾರ್‌ನಲ್ಲಿಯೇ ಕುಳಿತು, ಬಾಟಲ್ ತಾರೋ ಹಾಡನ್ನೂ ರಿಲೀಸ್ ಮಾಡಿಸಿದ್ದಾರೆ.
ಹೊಸ ವರ್ಷಕ್ಕೆ ಅಂದ್ರೆ ಅಲ್ಲಿ ಕಿಕ್ ಕೊಡುವ ಹಾಡುಗಳೇ ಹೈಲೈಟ್. ಪಾರ್ಟಿ ಸಾಂಗ್‌ಗಳಿಗೂ ಬೇಡಿಕೆ ಹೆಚ್ಚು. ತಮ್ಮ ಸಿನಿಮಾ ತಂಡದ ಕಡೆಯಿಂದ ಅದನ್ನು ಪೂರೈಸಲು ಮುಂದೆ ಬಂದಿದ್ದಾರೆ ನಟ ನೀನಾಸಂ ಸತೀಶ್ ಮತ್ತು ಸಂಗಡಿಗರು. ಸತೀಶ್ ನೀನಾಸಂ ನಟಿಸಿರುವ ಮ್ಯಾಟ್ನಿ ಸಿನಿಮಾ ಈಗಾಗಲೇ ಬಹುತೇಕ ಚಿತ್ರೀಕರಣದ ಕೆಲಸಗಳನ್ನು ಮುಗಿಸಿಕೊಂಡಿದೆ. ಇದೀಗ ಹೊಸ ವರ್ಷದ ಪ್ರಯುಕ್ತ "ಬಾರೋ ಬಾರೋ ಬಾಟಲ್ ತಾರೋ.." ಹಾಡನ್ನು ಹೊರತಂದಿದೆ.
ಈ ವಿಶೇಷ ಹಾಡನ್ನು ಅಷ್ಟೇ ವಿಶೇಷ ಅತಿಥಿ ಕಡೆಯಿಂದ ಬಿಡುಗಡೆ ಮಾಡಿಸಬೇಕೆಂಬುದು ನೀನಾಸಂ ಸತೀಶ್ ಅವರ ಪ್ಲಾನ್ ಆಗಿತ್ತು. ಅದರಂತೆ ಆ ಅತಿಥಿಗೂ ಗೊತ್ತಾಗದಂತೆ ಅವರಿಂದಲೇ ಬಿಡುಗಡೆ ಮಾಡಿಸಿ ಕೊನೆಗೇ ಅವರಿಗೇ ಶಾಕ್ ಕೊಡಿಸಿದ್ದಾರೆ. ಹಾಗೆ ಶಾಕ್ ಆದವರು ಡಾಲಿ ಧನಂಜಯ್. ಅಂದರೆ, ಆ ಹಾಡು ಗೊತ್ತಿಲ್ಲದೆ ಬಿಡುಗಡೆ ಮಾಡಿದ್ದು ಧನಂಜಯ್! ಹೂ ಗುಚ್ಛ ನೀಡಿ ಥ್ಯಾಂಕ್ಯು ಹಾಡು ಬಿಡುಗಡೆ ಮಾಡಿದ್ದಕ್ಕೆ ಎಂದಾಗಲೇ ಡಾಲಿಗೆ ಈ ವಿಚಾರ ತಿಳಿದಿದೆ.
ಬಾರ್‌ವೊಂದರಲ್ಲಿ ರೌಂಡ್ ಟೇಬಲ್‌ನಲ್ಲಿ ನೀನಾಸಂ ಸತೀಶ್, ಡಾಲಿ ಧನಂಜಯ್, ನಾಗಭೂಷಣ್, ಶಿವರಾಜ್ ಕೆ.ಆರ್ ಪೇಟೆ, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ನಟ ಪೂರ್ಣ ಸೇರಿ ಇನ್ನೂ ಹಲವರು ಕೂತಿದ್ದಾರೆ. ಆದಷ್ಟು ಬೇಗ ಹಾಡು ಬಿಡುಗಡೆ ಮಾಡಬೇಕು ಕಣೋ ಎಂದು ಮಾತು ಶುರುಮಾಡಿದ್ದಾರೆ ಸತೀಶ್. ಆ ಹಾಡನ್ನಾದ್ರೂ ತೋರ್ಸೋ ಎಂದಿದ್ದಾರೆ ಡಾಲಿ. ಹಾಡನ್ನು ಕ್ಲಿಕ್ ಮಾಡುವ ಮೂಲಕ ನೋಡಿ ಖುಷಿ ಪಟ್ಟಿದ್ದಾರೆ. ಹಿಟ್ ಆಗುತ್ತೆ ಡೋಂಟ್ ವರಿ. ಒಳ್ಳೇ ಲಿರಿಕ್ಸ್, ಒಳ್ಳೇ ಮ್ಯೂಸಿಕ್ ಇದೆ ಎಂದಿದ್ದಾರೆ.
ಅದಾದ ಬಳಿಕ "ಹಾಡು ಚೆನ್ನಾಗಿದೆ ಆದಷ್ಟು ಬೇಗ ಒಬ್ಬ ಒಳ್ಳೆಯ ಜೆನ್ಯೂನ್ ವ್ಯಕ್ತಿ ಕಡೆಯಿಂದ ಬಿಡುಗಡೆ ಮಾಡ್ಸು, ಇನ್ನೇನು ನ್ಯೂ ಇಯರ್ ಬಂದೇ ಬಿಡ್ತು ಲಾಂಚ್ ಮಾಡ್ಸು" ಎಂದು ಸತೀಶ್ ನೀನಾಸಂಗೆ ಧನಂಜಯ್ ಹೇಳಿದ್ದಾರೆ. ಅಷ್ಟೊತ್ತಿಗೆ, "ಲಾಂಚ್ ಆಯ್ತಲ್ಲ. ನೀನೇ ಬಿಡುಗಡೆ ಮಾಡಿದ್ಯಲ್ಲ. ಯಾಕೆ ನೀನು ಜೆನ್ಯೂನ್ ಅಲ್ವಾ? ನಿನಗೆ ಒಳ್ಳೆಯ ಹೃದಯ ಇಲ್ವಾ? ಒಳ್ಳೇ ಕಥೆ ಆಯ್ತಲ್ಲ" ಎಂದು ಹೇಳುತ್ತಿದ್ದಂತೆ, ಎಣ್ಣೆ ಹೊಡದಷ್ಟೇ ಖುಷಿಯಾಯ್ತು ಎಂದು ಸತೀಶ್ ಅವರನ್ನು ಬಿಗಿದಪ್ಪಿ ಬಾರೋ ಬಾಟಲ್ ತಾರೋ ಎಂದು ನಗಾಡಿದ್ದಾರೆ.
ಮನೋಹರ್ ಕಾಂಪಳ್ಳಿ ನಿರ್ದೇಶನದಲ್ಲಿ ಮೂಡಿಬಂದಿರುವ ಮ್ಯಾಟ್ನಿ ಸಿನಿಮಾದಲ್ಲಿ ಸತೀಶ್ ನೀನಾಸಂ, ರಚಿತಾ ರಾಮ್, ಅದಿತಿ ಪ್ರಭುದೇವ ಮುಖ್ಯಭೂಮಿಕೆಯಲ್ಲಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ, ಕೀರ್ತನ್ ಪೂಜಾರಿ ಛಾಯಾಗ್ರಹಣ ಮಾಡಿರುವ ಈ ಚಿತ್ರವನ್ನು ಎಫ್3 ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಲಾಗಿದೆ.