ಕಿರುತೆರೆಯ ಕಟ್ಟುಪಾಡುಗಳ ಗೋಡೆಯೊಡೆದು ಬರ್ತಿದೆ ಹೊಸ ಧಾರಾವಾಹಿ; ಅತಿದೊಡ್ಡ ಕುಟುಂಬದ ಅಪರೂಪದ ಕತೆ, ಬೃಂದಾವನ
ಪ್ರೀತಿ ತುಂಬಿರೋ ಈ ಬೃಂದಾವನಕ್ಕೆ (Brundavan serial) ಗೌರವದ ಕಿರೀಟ ಈ ಸುಧಾ ಮೂರ್ತಿ. ಇವರಿಗಿರೋ ದೊಡ್ಡ ಆಸೆ, ಪ್ರೀತಿಯ ಮೊಮ್ಮಗನಿಗೆ ಸಂಗಾತಿ ಹುಡುಕೋದು. ಜಾತಕದ ಮೂವತ್ತಾರು ಗಣ ಕೂಡೋದು ಮುಖ್ಯ ಅಲ್ಲ, ಮನೆಯ ಮೂವತ್ತಾರು ಜನ ಒಪ್ಪಿದವಳಷ್ಟೇ ಈ ಮನೆಗೆ ಸೊಸೆಯಾಗಿ ಬರೋದು. ತುಂಬು ಕುಟುಂಬದ ಕಥೆ ಬೃಂದಾವನ.
Brundavana Serial: ಕಿರುತೆರೆಯಲ್ಲಿ ಹೊಸ ಹೊಸ ಪ್ರಯತ್ನಗಳು ನಡೆಯುತ್ತಿವೆ. ಮೇಕಿಂಗ್, ನಿರೂಪಣೆ ಮತ್ತು ಅದ್ಧೂರಿತನದ ವಿಚಾರದಲ್ಲಿ ಸಾಕಷ್ಟು ಬೆಳವಣಿಗೆಗಳಾಗುತ್ತಿವೆ. ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿಯೊಂದು ಬರುತ್ತಿದೆ. ಅದರ ಹೆಸರು ಬೃಂದಾವನ. ಹೆಸರಿಗೆ ತಕ್ಕಂತೆ, ತುಂಬು ಕುಟುಂಬದ ಕಥೆಯಿದು. ಹಾಗಂತ, ಅತ್ತೆ ಸೊಸೆ ಜಗಳ, ವೈರತ್ವ, ಅದೂ ಇದೂ ಎಂಬ ಕಥೆಯಾಚೆಗೂ ಭಿನ್ನ ರೀತಿಯಲ್ಲಿ ಬೃಂದಾವನವನ್ನು ಪ್ರಸೆಂಟ್ ಮಾಡುತ್ತಿದೆ ಕಲರ್ಸ್ ಕನ್ನಡ. ಸದ್ಯಕ್ಕೆ ಬಿಡುಗಡೆ ಆಗಿರುವ ಪ್ರೋಮೋ ಅದಕ್ಕೆ ಸಾಕ್ಷಿ.
ಕಲರ್ಸ್ ಕನ್ನಡದಲ್ಲಿ ಈಗಾಗಲೇ ರಾಮಾಚಾರಿ, ಗೀತಾ ಅನ್ನೋ ಹಿಟ್ ಸೀರಿಯಲ್‌ಗಳನ್ನು ನೀಡುತ್ತಿರುವ ನಿರ್ದೇಶಕ ರಾಮ್‌ಜಿ, ಇದೀಗ ಬೃಂದಾವನವನ್ನೂ ನಿರ್ದೇಶನ ಮಾಡುತ್ತಿದ್ದಾರೆ. ಹತ್ತಲ್ಲ, ಇಪತ್ತಲ್ಲ ಬರೋಬ್ಬರಿ 36 ಮಂದಿ ಕೂಡಿ ಇರುವ ತುಂಬು ಕುಟುಂಬವಿದು. ಈ ಇಡೀ ಕುಟುಂಬದ ಹೆಡ್ ಕನ್ನಡತಿ ಸೀರಿಯಲ್ ಖ್ಯಾತಿಯ ಅಮ್ಮಮ್ಮ ಎಂದೇ ಫೇಮಸ್ ಆದ ಚಿತ್ಕಳಾ ಬಿರಾದಾರ್. ಕನ್ನಡತಿ ಬಳಿಕ ಒಂದಷ್ಟು ತಿಂಗಳ ಗ್ಯಾಪ್‌ನ ಬಳಿಕ ಮತ್ತೆ ಕಲರ್ಸ್ ಬಳಗವನ್ನೇ ಸೇರಿಕೊಂಡಿದ್ದಾರೆ.
ಪ್ರೋಮೋದಲ್ಲೇನಿದೆ?
ಇದೀಗ ಇದೇ ಸೀರಿಯಲ್‌ನ ಪ್ರೋಮೋ ನೋಡುಗರ ಗಮನ ಸೆಳೆಯುತ್ತಿದೆ. ಸಿನಿಮಾ ನಿರ್ದೇಶಕ ಯೋಗರಾಜ್ ಭಟ್, ತಮ್ಮ ಧ್ವನಿ ಮೂಲಕವೇ ಈ ತುಂಬು ಕುಟುಂಬದ ಪರಿಚಯ ಮಾಡಿಕೊಟ್ಟಿದ್ದಾರೆ. " ಈಗಿನ ಕಾಲದಲ್ಲಿ ಒಂದು ಜಾಯಿಂಟ್ ಫ್ಯಾಮಿಲಿ ಎಂದರೆ ಎಷ್ಟು ಜನ ಇರಬಹುದು? ಒಂದು ನಾಲ್ಕು ಜನ, ಎಂಟು ಜನ, ಅಥವಾ 16 ಜನ? ಈ ಫ್ಯಾಮಿಲಿ ಫೋಟೋ ತೆಗೆಯಬೇಕು ಎಂದರೆ ಟ್ರಾಫಿಕ್ನೇ ಸ್ಟಾಪ್ ಮಾಡಬೇಕಾಗುತ್ತದೆ. ಇದು 36 ಜನ ಇರೋ ತುಂಬು ಕುಟುಂಬ. ಈ ಕುಟುಂಬಕ್ಕೆ ಡೈನಿಂಗ್ ಟೇಬಲ್ ಅಲ್ಲ, ಡೈನಿಂಗ್ ಹಾಲ್ ಸಹ ಸಾಕಾಗಲ್ಲ.
ತರಲೆಗೆ ಮಿತಿಯಿಲ್ಲ, ಆಟ ತುಂಟಾಟಕ್ಕೆ ವಯಸ್ಸಿನ ಅಂತರವಿಲ್ಲ. ಏನೇ ಆದರೂ ಪ್ರೀತಿಗೆ ಕೊರತೆನೇ ಇಲ್ಲ. ಪ್ರೀತಿ ತುಂಬಿರೋ ಈ ಬೃಂದಾವನಕ್ಕೆ ಗೌರವದ ಕಿರೀಟ ಈ ಸುಧಾ ಮೂರ್ತಿ. ಇವರಿಗಿರೋ ದೊಡ್ಡ ಆಸೆ, ಪ್ರೀತಿಯ ಮೊಮ್ಮಗನಿಗೆ ಸಂಗಾತಿ ಹುಡುಕೋದು. ಜಾತಕದ ಮೂವತ್ತಾರು ಗಣ ಕೂಡೋದು ಮುಖ್ಯ ಅಲ್ಲ, ಮನೆಯ ಮೂವತ್ತಾರು ಜನ ಒಪ್ಪಿದವಳಷ್ಟೇ ಈ ಮನೆಗೆ ಸೊಸೆ ಬರೋದು.. ಹೀಗೆ ಒಂದಷ್ಟು ಕುತೂಹಲದ ಜತೆಗೆ ಆಗಮಿಸುತ್ತಿದೆ ಬೃಂದಾವನ.
ಹಿರಿ ಕಿರಿ ಕಲಾವಿದರ ದೊಡ್ಡ ಬಳಗ
ಇಡೀ ಕುಟುಂಬದ ಮುಖ್ಯಸ್ಥೆಯಾಗಿ ಚಿತ್ಕಳಾ ಬಿರಾದಾರ್ ಕಾಣಿಸಿಕೊಂಡರೆ, ಅವರ ಮೊಮ್ಮಗನಾಗಿ ಗಾಯಕ, ಮಾಜಿ ಬಿಗ್ ಬಾಸ್ ಸ್ಪರ್ಧಿ ವಿಶ್ವನಾಥ್ ಹಾವೇರಿ ನಟಿಸುತ್ತಿದ್ದಾರೆ. ಆತನಿಗೆ ಹೆಣ್ಣು ಹುಡುಕಿ ಮದುವೆ ಮಾಡುವ ಕಥೆಯೇ ಈ ಬೃಂದಾವನದ ಅಸಲಿ ಸ್ಟೋರಿ. ರಿಯಲ್ ದಂಪತಿ ಸುಂದರ್ ಮತ್ತು ವೀಣಾ ರೀಲ್‌ನಲ್ಲಿಯೂ ದಂಪತಿಗಳಾಗಿದ್ದಾರೆ. ಇನ್ನುಳಿದಂತೆ ಹಿರಿ ಕಿರಿ ಕಲಾವಿದರ ದೊಡ್ಡ ಬಳಗವೇ ಈ ಸೀರಿಯಲ್‌ನಲ್ಲಿದೆ.
ಯಾವಾಗ ಪ್ರಸಾರ?
ಕಲರ್ಸ್ ಕನ್ನಡದಲ್ಲಿ ಹಲವು ಧಾರಾವಾಹಿಗಳು ಮುಕ್ತಾಯದ ಹಂತಕ್ಕೆ ಬರುತ್ತಿವೆ. ಮತ್ತೊಂದು ಮಗ್ಗಲಲ್ಲಿ ಬಿಗ್‌ಬಾಸ್‌ಗೂ ದಿನಾಂಕ ನಿಗದಿಯಾಗಿದೆ. ಹಾಗಾಗಿ ಸದ್ಯಕ್ಕೆ ಬೃಂದಾವನ ಧಾರಾವಾಹಿಗೆ ದಿನಾಂಕ ನಿಗದಿಯಾಗಿಲ್ಲ. ಅಂದುಕೊಂಡಂತೆ, ಧಾರಾವಾಹಿಗಳು ಮುಗಿದ ಬಳಿಕವೇ ಹೊಸ ಕಥೆಗೆ ವಾಹಿನಿ ಜಾಗ ಮಾಡಿಕೊಡಬೇಕಿದೆ.
ಹೊಸ ಧಾರಾವಾಹಿ ಪ್ರೋಮೋ ನೋಡಿ ಜನ ಏನಂದ್ರು?
- ಬೃಂದಾವನ ಹೆಸರು ಕೇಳಿದಾಗಲೇ ಗೊತ್ತಿತ್ತು ಇದು ಕೂಡು ಕುಟುಂಬ ಅಂತ ಆದರೆ ಇಷ್ಟೊಂದು ದೊಡ್ಡ ಕುಟುಂಬ ಅಂತ ಗೊತ್ತಿರಲಿಲ್ಲ. ಪ್ರೊಮೊ ಮಾತ್ರ ಯಾವ ಸಿನಿಮಾ ಟೀಸರ್ ಗೂ ಕಡಿಮೆ ಇಲ್ಲ
- ಅಮ್ಮಮ್ಮ ವಾಪಸ್ ಬಂದ್ರು
- ಬೃಂದಾವನ ದರ್ಶನ್ ಅವರ ಹೆಸರು. ಹಾಗಾದರೆ ಈ ಧಾರಾವಾಹಿನು ಬ್ಲಾಕ್ ಬಸ್ಟರ್ ಬಿಡಿ.