ಕಲಾವಿದರಿಗೆ ಜವಾಬ್ದಾರಿ ಇರಬೇಕು, ಹೇಳದೆ ಕೇಳದೆ ಧಾರಾವಾಹಿಯಿಂದ ಹೊರ ಹೋಗುವುದು ತಪ್ಪು; ಹಂಸ ಪ್ರತಾಪ್ ವಿರುದ್ಧ ಆರೂರು ಜಗದೀಶ್ ಬೇಸರ
ಹಂಸ ಪ್ರತಾಪ್ ನಮಗೆ ತಿಳಿಸದೆ ಧಾರಾವಾಹಿಯಿಂದ ಹೊರ ಹೋಗಿದ್ದಾರೆ. ಕಲಾವಿರಿಗೆ ಜವಾಬ್ದಾರಿ ಇರಬೇಕು. ಅವರು ಬಿಗ್‌ಬಾಸ್‌ಗೆ ಹೋಗಿದ್ದಾರೆ ಎಂದು ನಮಗೆ ಪ್ರೋಮೋ ನೋಡಿದಾಗಲೇ ತಿಳಿದದ್ದು. ಈಗ ಹಂಸ ಬದಲಿಗೆ ಮತ್ತೊಬ್ಬ ನಟಿಯನ್ನು ಕರೆ ತರುತ್ತಿದ್ದೇವೆ ಎಂದು ನಿರ್ದೇಶಕ ಆರೂರು ಜಗದೀಶ್ ಹಂಸ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ 800 ಸಂಚಿಕೆಗಳನ್ನು ಪೂರೈಸಿದೆ. ಧಾರಾವಾಹಿ ಕಥೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಪುಟ್ಟಕ್ಕನ ಮಗಳು ಸ್ನೇಹ ಸಾವನ್ನಪ್ಪಿದ್ದಾಳೆ. ಸತ್ತೇ ಹೋದಳು ಎಂದುಕೊಂಡಿದ್ದ ಸಹನಾ ಮತ್ತೆ ಪುಟ್ಟಕ್ಕನ ಮನೆಗೆ ವಾಪಸ್ ಬಂದಿದ್ದಾಳೆ. ಹೆಂಡತಿಯನ್ನು ಕೊಲೆ ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಕಂಠಿ ಕಾಯುತ್ತಿದ್ದಾನೆ.
ರಾಜೇಶ್ವರಿ ಪಾತ್ರ ಇನ್ನೂ ಕೊನೆಯಾಗಿಲ್ಲ
ಈ ನಡುವೆ ಧಾರಾವಾಹಿಯಲ್ಲಿ ರಾಜಿ/ರಾಜೇಶ್ವರಿ ಪಾತ್ರ ಮಾಡುತ್ತಿದ್ದ ಹಂಸ ಪ್ರತಾಪ್ ಬಿಗ್‌ಬಾಸ್‌ಗೆ ಹೋಗುವ ಅವಕಾಶ ಸಿಕ್ಕಿದ್ದರಿಂದ ಧಾರಾವಾಹಿ ಬಿಟ್ಟು ಹೊರ ಬಂದಿದ್ದರು. ಸ್ನೇಹಾ ಪಾತ್ರದಂತೆ ರಾಜಿ ಪಾತ್ರ ಕೂಡಾ ಕೊನೆಗೊಳ್ಳಬಹುದು ಎಂದೇ ಎಲ್ಲರೂ ತಿಳಿದಿದ್ದರು. ಆದರೆ ಅಸಲಿಗೆ ಹಂಸ ಪ್ರತಾಪ್ ಅಭಿನಯಿಸುತ್ತಿದ್ದ ರಾಜೇಶ್ವರಿ ಪಾತ್ರ ಇನ್ನೂ ಕೊನೆಗೊಂಡಿಲ್ಲ. ಹಂಸ ಅವರು ಧಾರಾವಾಹಿಯಿಂದ ಹೊರ ಹೋಗಿದ್ದಾರೆ ಎಂಬ ವಿಚಾರ ನಮಗೆ ತಿಳಿದಿರಲಿಲ್ಲ, ಅವರು ಬಿಗ್‌ಬಾಸ್‌ಗೆ ಹೋಗಿದ್ದಾರೆ ಎಂಬ ವಿಚಾರ ನಮಗೆ ತಿಳಿದದ್ದು ಅದರ ಪ್ರೋಮೋ ನೋಡಿದಾಗಲೇ, ಯಾವ ಮುನ್ಸೂಚನೆ ನೀಡದೆ ಅವರು ಧಾರಾವಾಹಿ ಬಿಟ್ಟಿದ್ದರಿಂದ ನಮಗೆ ಅವರ ಪಾತ್ರವನ್ನು ಇಷ್ಟು ದಿನಗಳ ಕಾಲ ತೋರಿಸಲಾಗಲಿಲ್ಲ ಎಂದು ನಿರ್ದೇಶಕ ಆರೂರು ಜಗದೀಶ್ ಹೇಳಿದ್ದಾರೆ.
ಹಂಸ ಬಗ್ಗೆ ಬೇಸರ ವ್ಯಕ್ತಪಡಿಸಿದ ನಿರ್ದೇಶಕ ಆರೂರು ಜಗದೀಶ್
ಹಿಂದೂಸ್ತಾನ್ ಟೈಮ್ಸ್ ಕನ್ನಡ ತಂಡದೊಂದಿಗೆ ಮಾತನಾಡಿದ ನಿರ್ದೇಶಕ ಆರೂರು ಜಗದೀಶ್, ಧಾರಾವಾಹಿಗೆ ಆಯ್ಕೆಯಾಗುವ ಮುನ್ನ ವಾಹಿನಿ , ಕಲಾವಿದರ ನಡುವೆ ಒಪ್ಪಂದವಾಗಿರುತ್ತದೆ. ಆದರೆ ಏನೇ ಒಪ್ಪಂದ ಮಾಡಿಕೊಂಡರೂ ಕಲಾವಿದರು ಅದಕ್ಕೆ ಬದ್ಧರಾಗಿರಬೇಕು. ಅವರಿಗೆ ಅವರದ್ದೇ ಆದ ಜವಾಬ್ದಾರಿ ಇರಬೇಕು. ಹೇಳದೆ ಕೇಳದೆ ಬಿಗ್‌ಬಾಸ್‌ಗೆ ಹೋಗಿದ್ದಾರೆ, ಅಲ್ಲಿಂದ ವಾಪಸ್ ಕೂಡಾ ಬಂದಿದ್ದಾರೆ. ಯಾವುದೇ ಕಲಾವಿದರಾಗಲೀ ಒಂದು ಪ್ರಾಜೆಕ್ಟ್ ಮಾಡುತ್ತಿದ್ದು, ಅದರಿಂದ ಹೊರ ಹೋಗುವಾಗ ಸಂಬಂಧಿಸಿದವರ ಅನುಮತಿ ಪಡೆಯಬೇಕು ಅಥವಾ ಮನವಿ ಮಾಡಬೇಕು ಎಂಬುದು ಗೊತ್ತಿರಬೇಕು. ಆದರೆ ಹಂಸ , ಅದರ ಪ್ರಕಾರ ನಡೆದುಕೊಳ್ಳಲಿಲ್ಲ.
ವಿದೇಶದಲ್ಲಿ ಶೂಟಿಂಗ್ ಇದೆ ಎಂದು ಸುಳ್ಳು ಹೇಳಿದ್ದರು
ನನಗೆ ವಿದೇಶದಲ್ಲಿ ಸಿನಿಮಾವೊಂದರ ಶೂಟಿಂಗ್ ಇದೆ, ಅಲ್ಲಿಗೆ ಹೋಗುತ್ತಿದ್ದೇನೆ, 40 ದಿನಗಳ ಕಾಲ ಧಾರಾವಾಹಿ ಚಿತ್ರೀಕರಣಕ್ಕೆ ಬರಲಾಗುವುದಿಲ್ಲ ಎಂದು ಹಂಸ ನನ್ನ ಬಳಿ ಹೇಳಿದ್ದರು. ಉಮಾಶ್ರೀ ಮೇಡಂ ಕೂಡಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ರಾಜಕೀಯದಲ್ಲಿ ಕೂಡಾ ಸಕ್ರಿಯರಾಗಿದ್ದಾರೆ. ಅವರೂ ಧಾರಾವಾಹಿಯಲ್ಲಿ ತಮ್ಮ ಭಾಗದ ಚಿತ್ರೀಕರಣ ಮುಗಿಸಿ ಕೆಲವು ದಿನಗಳು ಇತರ ಕೆಲಸಗಳನ್ನು ಮುಗಿಸಿ ವಾಪಸ್ ಬಂದಿದ್ದಾರೆ. ಅದಕ್ಕಾಗಿ ನಾನು ಹಂಸ ಅವರಿಗೆ ಸರಿ ಹೋಗಿ ಬನ್ನಿ ಎಂದೆ. ಆದರೆ ಅವರು ಬಿಗ್‌ಬಾಸ್‌ಗೆ ಹೋಗಿದ್ದಾರೆ ಅನ್ನೋದು ಅದರ ಪ್ರೋಮೋ ನೋಡಿದಾಗಲೇ ನಮಗೆ ಗೊತ್ತಾಗಿದ್ದು. ಅಲ್ಲಿಂದ ವಾಪಸ್ ಬಂದಾಗಲೂ ಮತ್ತೆ ಧಾರಾವಾಹಿಗೆ ಬರ್ತೀರ ಎಂದು ಕೇಳಿದ್ದೆವು. ಇಲ್ಲ, ಬಿಗ್‌ಬಾಸ್ ಕಮಿಟ್‌ಮೆಂಟ್ ಇನ್ನೂ ಇದೆ ಎಂದರು. ಹಾಗಾಗಿ ನಾವು ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಅವರ ಪೇಮೆಂಟ್ ಸೆಟಲ್ ಆಗಿದೆ. ಅವರ ಬದಲಿಗೆ ಬೇರೆ ಕಲಾವಿದರನ್ನು ಹುಡುಕುತ್ತಿದ್ದೇವೆ. ಶೀಘ್ರದಲ್ಲೇ ಎಲ್ಲಾ ಫೈನಲ್ ಆಗಲಿದೆ.
ಹಂಸ ಪಾತ್ರಕ್ಕೆ ಬೇರೆಯವರನ್ನು ಹುಡುಕುತ್ತಿದ್ದೇವೆ
ಸಂಜನಾ ಬುರ್ಲಿ, ಧಾರಾವಾಹಿಯಿಂದ ಹೊರ ಹೋಗುತ್ತಿರುವುದು ನಮಗೆ ಮಾಹಿತಿ ಇತ್ತು. ಆದರೆ ಹಂಸ ಈ ರೀತಿ ಮಾಡಿದ್ದು ಸರಿಯಲ್ಲ. ಕಲಾವಿದರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಹೇಳದೆ ಕೇಳದೆ ಈ ರೀತಿ ಮಾಡುವುದರಿಂದ ನಿರ್ಮಾಪಕರಿಗೆ, ಮಾರ್ಕೆಂಟಿಂಗ್ ಎಲ್ಲಾ ಸಮಸ್ಯೆ ಆಗುತ್ತದೆ. ಈ ವಿಚಾರವಾಗಿ ಮೊದಲು ಪ್ರೊಡ್ಯೂಸರ್ ಅಸೋಸಿಯೇಷನ್, ಟೆಲಿವಿಷನ್ ಅಸೋಸಿಯೇಷನ್‌ಗೆ ದೂರು ನೀಡಿದ್ದೆವು. ಆದರೆ ಈಗ ಕಾನೂನು ಎಂದೆಲ್ಲಾ ಹೋದರೆ ನಮಗೆ ಚಿತ್ರೀಕರಣ, ಧಾರಾವಾಹಿ ಪ್ರಸಾರಕ್ಕೆ ಸಮಸ್ಯೆ ಆಗುತ್ತದೆ. ಆದ್ದರಿಂದ ಬೇರೆಯವರನ್ನು ಹಂಸ ಅವರ ಜಾಗಕ್ಕೆ ಕರೆ ತರುತ್ತಿದ್ದೇವೆ ಎಂದು ಆರೂರು ಜಗದೀಶ್ ಹಂಸ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ವಿಭಾಗ