BBK 10: ಬಂದೇ ಬಿಡ್ತು ಬಿಗ್‌ಬಾಸ್ ಫಿನಾಲೆ, ಕಾಯ್ತಿದೆ ಸೆಲಬ್ರೇಷನ್ ಸರಮಾಲೆ; ಆರರಲ್ಲಿ ಗೆಲುವಿನ ಕಪ್ ಯಾರಿಗೆ?
ಬಿಗ್ ಬಾಸ್ ಇದೀಗ ಫಿನಾಲೆ ಹಂತಕ್ಕೆ ಬಂದಿದೆ. ಕಲರ್‌ಫುಲ್ ವೇದಿಕೆ ಮೇಲೆ ಸೀಸನ್ 10ರ ಮಾಜಿ ಸ್ಪರ್ಧಿಗಳು ಹೆಜ್ಜೆ ಹಾಕಿದ್ದಾರೆ. ಉಳಿದಿರುವ ಆರು ಮಂದಿ ಸ್ಪರ್ಧಿಗಳಲ್ಲಿ ಯಾರ ಕೈಗೆ ಈ ಸಲದ ಕಪ್ ಸೇರಲಿದೆ ಎಂಬ ಕೌತುಕಕ್ಕೆ ತೆರೆ ಬೀಳುವ ಸಮಯವೂ ಬಂದಿದೆ.
BBK 10: ಬಿಗ್‌ಬಾಸ್ ಕನ್ನಡ ಹತ್ತನೇ ಸೀಸನ್ ಆರಂಭವಾಗಿದ್ದು ನಿನ್ನೆ ಮೊನ್ನೆ ಎನ್ನುವ ಹಾಗೆ ನೆನಪಿದೆ. ವಾರ ವಾರಕ್ಕೂ, ದಿನದಿನಕ್ಕೂ ತನ್ನ ರಂಗು, ರಂಜನೆಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಬಂದ ಬಿಗ್‌ಬಾಸ್ ಕನ್ನಡದ ಗ್ರ್ಯಾಂಡ್ ಫಿನಾಲೆ ನೋಡನೋಡುತ್ತಿದ್ದಂತೆಯೇ ಬಂದೇ ಬಿಟ್ಟಿದೆ. ಇನ್ನೊಂದು ವಾರ, ಇನ್ನೆರಡು ದಿನ ಎಂದೆಲ್ಲ ಕೌಂಟ್‌ಡೌನ್‌ಗಳು ಮುಗಿದು ಕೊನೆಗೂ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ‘ಇಂದು’ ಎಂದು ಹೇಳುವ ಗಳಿಗೆ ಬಂದೇಬಿಟ್ಟಿದೆ.
ಹತ್ತೊಂಬತ್ತು ಸ್ಪರ್ಧಿಗಳ ಎಂಟ್ರಿಯ ಜೊತೆಗೆ ಶುರುವಾಗಿದ್ದ ಬಿಗ್‌ಬಾಸ್ ಕನ್ನಡ ಸೀಸನ್ 10 ಹದಿನಾರು ವಾರಗಳನ್ನು ದಾಟಿದೆ. ಫಿನಾಲೆ ವಾರದಲ್ಲಿ ಆರು ಸ್ಪರ್ಧಿಗಳಷ್ಟೇ ಮನೆಯೊಳಗೆ ಇದ್ದಾರೆ. ತಮ್ಮದೇ ಜರ್ನಿಯ ಸಿಹಿ-ಕಹಿ ನೆನಪುಗಳ ಮಳೆಯಲ್ಲಿ ತೋಯುತ್ತಿದ್ದಾರೆ. ಸೀಸನ್ ಉದ್ದಕ್ಕೂ ಅವರ ಪ್ರಯಾಣದಲ್ಲಿ ಮಾನಸಿಕವಾಗಿ ಜೊತೆಯಾಗಿದ್ದ ಪ್ರೇಕ್ಷಕರಿಗೂ ಇದು ಭಾವುಕ ಗಳಿಗೆ. ಎಲ್ಲ ಸ್ಪರ್ಧಿಗಳು ಎದುರಿಸಿದ ದಿನದಿನದ ಕ್ಷಣಕ್ಷಣದ ಅಗ್ನಿಪರೀಕ್ಷೆಯ ಪರಿಣಾಮವಾಗಿ ‘ಬಿಗ್‌ಬಾಸ್ ಕನ್ನಡ’ ರಿಯಾಲಿಟಿ ಷೋ ಮತ್ತೊಮ್ಮೆ ಅದ್ಭುತ ಗೆಲುವನ್ನು ಕಂಡಿದೆ. ಹಿಂದೆಂದೂ ಕಂಡಿರದ ಸ್ಪಂದನವನ್ನು ಕಂಡಿದೆ. ಯಶಸ್ಸಿನ ಸವಿಯನ್ನು ಮತ್ತೊಮ್ಮೆ ಉಂಡಿದೆ.
ಬಿಗ್‌ಬಾಸ್ ಕನ್ನಡ ಮತ್ತು ಪ್ರೇಕ್ಷಕರ ನಡುವಿನ ಈ ಸುಧೀರ್ಘ ಪ್ರಯಾಣಕ್ಕೆ ಇಂದು ಮತ್ತು ನಾಳೆ ನಡೆಯಲಿರುವ ಗ್ರ್ಯಾಂಡ್ ಫಿನಾಲೆಯೊಟ್ಟಿಗೆ ಅಲ್ಪವಿರಾಮ ಬೀಳಲಿದೆ. ಇಷ್ಟು ದೊಡ್ಡ ಷೋದ, ಇಷ್ಟು ದೊಡ್ಡ ಯಶಸ್ಸಿನ ಅಂತಿಮ ಘಟ್ಟವೂ ಅದ್ದೂರಿಯಾಗಿ ಇರಲೇಬೇಕಲ್ಲವೇ? ಅನುಮಾನವೇ ಬೇಡ, ಬಿಗ್‌ಬಾಸ್ ರಿಯಾಲಿಟಿ ಷೋದ ಈ ಸೀಸನ್‌ನ ಫಿನಾಲೆ ಕೂಡ ಸಖತ್ ಸ್ಪೆಷಲ್ ಆಗಿಯೇ ಇರಲಿದೆ. ಅದರ ಝಲಕ್ ಅನ್ನು ಜಿಯೊಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ನೋಡಬಹುದಾಗಿದೆ.
ಇಂದು ಮತ್ತು ನಾಳೆ, ಅಂದರೆ ಶನಿವಾರ-ಭಾನುವಾರ ರಾತ್ರಿ 7.30ಗೆ ಜಿಯೊಸಿನಿಮಾದಲ್ಲಿ ಬಿಗ್‌ಬಾಸ್ ಫಿನಾಲೆಯನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿಯೂ 7.30ಕ್ಕೆ ಫಿನಾಲೆ ವೀಕ್ಷಿಸಬಹುದು.