Anand Mahindra: ನಿಮ್ಮ ಕಾರುಗಳ ವಿನ್ಯಾಸ ಸೆಗಣಿ! ಗುಣಮಟ್ಟ ಶೂನ್ಯ; ವ್ಯಕ್ತಿಯ ಕಟು ವಿಮರ್ಶೆಗೆ ಹೀಗಿತ್ತು ಆನಂದ್ ಮಹೀಂದ್ರ ಪ್ರತಿಕ್ರಿಯೆ
Anand Mahindra: ಮಹೀಂದ್ರ ಗ್ರೂಪ್‌ನ ಚೇರ್ಮನ್ ಆನಂದ್ ಮಹೀಂದ್ರ ಅವರು ತನ್ನ ಕಂಪನಿಯ ಕಾರು ವಿನ್ಯಾಸ, ಸೇವಾ ಗುಣಮಟ್ಟ, ವಿಶ್ವಾಸಾರ್ಹತೆಯನ್ನು ಗುರಿಯಾಗಿಸಿಕೊಂಡು ಎಕ್ಸ್‌ನಲ್ಲಿ (ಟ್ವೀಟ್) ವ್ಯಕ್ತಿಯೊಬ್ಬರು ಮಾಡಿರುವ ಟೀಕೆ/ವಿಮರ್ಶೆಗೆ ಪ್ರತಿಕ್ರಿಯೆ ನೀಡಿದ್ದಾರೆ.
Anand Mahindra: ಮಹೀಂದ್ರ ಗ್ರೂಪ್‌ನ ಚೇರ್ಮನ್ ಆನಂದ್ ಮಹೀಂದ್ರ ಅವರು ತನ್ನ ಕಂಪನಿಯ ಕಾರು ವಿನ್ಯಾಸ, ಸೇವಾ ಗುಣಮಟ್ಟ, ವಿಶ್ವಾಸಾರ್ಹತೆಯನ್ನು ಗುರಿಯಾಗಿಸಿಕೊಂಡು ಎಕ್ಸ್‌ನಲ್ಲಿ (ಟ್ವೀಟ್) ವ್ಯಕ್ತಿಯೊಬ್ಬರು ಮಾಡಿರುವ ಟೀಕೆ/ವಿಮರ್ಶೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಹೀಂದ್ರ ಕಂಪನಿಯು ತನ್ನ ಎಲೆಕ್ಟ್ರಿಕ್ ವಾಹನಗಳಾದ ಬಿಇ6ಇ ಮತ್ತು ಎಕ್ಸ್‌ಇವಿ 9ಇಗಳನ್ನು ಬಿಡುಗಡೆ ಮಾಡಿದ ಬಳಿಕ ಈ ಟೀಕೆ ವ್ಯಕ್ತವಾಗಿದೆ. ಟೀಕೆ ಮಾಡಿದ ವ್ಯಕ್ತಿ ತನ್ನ ಪೋಸ್ಟ್ ಡಿಲೀಟ್ ಮಾಡಿದರೂ ಆ ಪೋಸ್ಟ್‌ನ ಸ್ಕ್ರೀನ್‌ಶಾಟ್ ಇಟ್ಟುಕೊಂಡು ಆನಂದ್ ಮಹೀಂದ್ರ ಮಾರುತ್ತರ ನೀಡಿದ್ದಾರೆ.
"ಯಾರು ಸ್ಟಡಿ ಮತ್ತು ರಿಸರ್ಚ್ ಮಾಡುವುದಿಲ್ಲವೋ ಅವರಿಗಾಗಿ ನಿಮ್ಮ ಪ್ರತಿಯೊಂದು ಉತ್ಪನ್ನಗಳು ಇವೆ. ಸೌಂದರ್ಯದ ವಿಷಯದಲ್ಲಿ ನಿಮ್ಮ ಕಾರುಗಳು ಹ್ಯುಂಡೈಗೆ ಸರಿಸಾಟಿಯೇ ಆಗುವುದಿಲ್ಲ. ನಿಮ್ಮ ಡಿಸೈನ್ ತಂಡ ಮತ್ತು ನೀವು ಕೆಟ್ಟ ವಿನ್ಯಾಸದ ಜ್ಞಾನ ಹೊಂದಿರುವಿರೋ ನನಗೆ ಅರ್ಥವಾಗುತ್ತಿಲ್ಲ. ಸೀರಿಯಸ್ ಆಗಿ ಹೇಳುವೆ, ಯಾರು ಗುಡ್ಡ ಗಾತ್ರದ ಕಾರು ಬಯಸುತ್ತಾರೋ ಅವರಿಗಾಗಿ ನಿಮ್ಮ ಕಾರುಗಳು ಇರುವುದು. ವಿಶ್ವಾಸಾರ್ಹತೆ ಮತ್ತು ಗುಣಮಟ್ಟದ ಬಗ್ಗೆ ನೀವು ಯಾವುದೇ ಕಲ್ಪನೆ ಹೊಂದಿರುವಂತೆ ಇಲ್ಲ. ಮಹೀಂದ್ರಾದ ಕಾರುಗಳು ಸೌಂದರ್ಯದ ಆಕರ್ಷಣೆ ಮತ್ತು ವಿಶ್ವಾಸಾರ್ಹತೆಯನ್ನು ಹೊಂದಿಲ್ಲ. ನಿಮ್ಮ ಕೆಲವು ಕಾರುಗಳು ಗೋಬರ್(ಸೆಗಣಿ)" ಎಂದು ಎಕ್ಸ್‌ನಲ್ಲಿ ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದಾರೆ.
ಈ ಕಾಮೆಂಟ್ ನೋಡಿ ಆನಂದ್ ಮಹೀಂದ್ರ ನೋಡದಂತೆ ಹೋಗಿಲ್ಲ. ಈ ಕಾಮೆಂಟ್ ಅನ್ನು ಇಗ್ನೋರ್ ಕೂಡ ಮಾಡಿಲ್ಲ. ಎಕ್ಸ್‌ನಲ್ಲಿ ವ್ಯಕ್ತಿಯೊಬ್ಬರು ಮಾಡಿರುವ ಪೋಸ್ಟ್ (ಈಗ ಡಿಲೀಟ್ ಮಾಡಲಾಗಿದೆ)ನ ಸ್ಕ್ರೀನ್‌ಶಾಟ್ ಜತೆ ಹೊಸ ಪೋಸ್ಟ್ ಅನ್ನು ಆನಂದ್ ಮಹೀಂದ್ರ ಹಂಚಿಕೊಂಡಿದ್ದಾರೆ. "ಕಂಪನಿಯು ಇನ್ನೂ ಬಹಳ ದೂರ ಸಾಗಬೇಕಾಗಿದೆ" ಎಂದು ಆನಂದ್ ಮಹೀಂದ್ರ ಒಪ್ಪಿಕೊಂಡಿದ್ದಾರೆ. 1990 ರ ದಶಕದಿಂದ "ಕಾರು ವ್ಯವಹಾರದಿಂದ ನಿರ್ಗಮಿಸಲು" ತಜ್ಞರು ಕಂಪನಿಗೆ ಸಲಹೆ ನೀಡಿದ ನಂತರ ಮಹೀಂದ್ರ ಕಂಪನಿ ಇಲ್ಲಿಯವರೆಗೆ ಎಷ್ಟು ದೂರ ಸಾಗಿದೆ ಎಂದು ಆನಂದ್ ಮಹೀಂದ್ರ ನೆನಪಿಸಿಕೊಂಡಿದ್ದಾರೆ.
"ನಾನು 1991ರಲ್ಲಿ ಕಂಪನಿಗೆ ಸೇರಿದ ಸಂದರ್ಭದಲ್ಲಿ ಆರ್ಥಿಕತೆಯು ಆಗಷ್ಟೇ ತೆರೆದುಕೊಂಡಿತ್ತು. ಜಾಗತಿಕ ಸಲಹಾ ಸಂಸ್ಥೆಯು ನಮಗೆ ಕಾರು ವ್ಯವಹಾರದಿಂದ ನಿರ್ಗಮಿಸಲು ಬಲವಾಗಿ ಸಲಹೆ ನೀಡಿತ್ತು. ಏಕೆಂದರೆ, ಅವರ ದೃಷ್ಟಿಯಲ್ಲಿ ಆ ಸಮಯದಲ್ಲಿ ಭಾರತ ಪ್ರವೇಶಿಸಲಿರುವ ವಿದೇಶಿ ಬ್ರ್ಯಾಂಡ್‌ಗಳ ಜತೆ ಸ್ಪರ್ಧಿಸಲು ನಮಗೆ ಯಾವುದೇ ಅವಕಾಶವಿಲ್ಲ. ಈಗ ಮೂರು ದಶಕ ಕಳೆದಿದೆ. ನಾವೂ ಇನ್ನೂ ಸುತ್ತಲಿದ್ದೇವೆ. ತೀವ್ರವಾಗಿ ಸ್ಪರ್ಧಿಸುತ್ತೇವೆ" ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ. "ಯಶಸ್ವಿಯಾಗುವ ಹಪಾಹಪಿಯಿಂದ ನಿರಂತರ ಸುಧಾರಣೆಗೆ ಪ್ರಯತ್ನಿಸುತ್ತೇವೆ. ನಿಮ್ಮ ಪೋಸ್ಟ್‌ನಲ್ಲಿರುವಂತೆ ನಾವು ನಮ್ಮ ಸುತ್ತಮುತ್ತಲಿನ ಎಲ್ಲಾ ಸಿನಿಕತೆ, ಸಂದೇಹ, ಅಸಭ್ಯತೆಗಳನ್ನು ನಮ್ಮ ಯಶಸ್ಸು ಎಂಬ ಹಸಿವನ್ನು ತಣಿಸಲು ಬಳಸಿದ್ದೇವೆ. ನಮ್ಮ ಹೊಟ್ಟೆಯಲ್ಲಿ ಬೆಂಕಿ ಹಾಕಿದ ವಿಮರ್ಶಕರಿಗೆ ಧನ್ಯವಾದ" ಎಂದು ಆನಂದ್ ಮಹೀಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಮಹೀಂದ್ರ ಕಾರುಗಳನ್ನು ಹೊಗಳಿದ ನೆಟ್ಟಿಗರು
ಆನಂದ್ ಮಹೀಂದ್ರ ಹಂಚಿಕೊಂಡಿರುವ ಪೋಸ್ಟ್‌ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಸಾಕಷ್ಟು ಜನರು ಮಹೀಂದ್ರ ಕಾರುಗಳನ್ನು ಹೊಗಳಿದ್ದಾರೆ. ಕೆಲವರು ಮಹೀಂದ್ರ ಡೀಲರ್‌ಗಳನ್ನು ದೂರಿದ್ದಾರೆ. "ಟೀಕೆಗಳನ್ನು ಹೇಗೆ ತೆಗೆದುಕೊಳ್ಳಬೇಕು ಎನ್ನುವುದಕ್ಕೆ ಈ ಪೋಸ್ಟ್ ಉದಾಹರಣೆ" ಎಂದು ಸಾಕಷ್ಟು ಜನರು ಆನಂದ್ ಮಹೀಂದ್ರರ ಗುಣಗಾನ ಮಾಡಿದ್ದಾರೆ.