Ravindar Chandrasekaran: ಲವ್ ಯು ಅಮ್ಮು, ಮೊದಲಿನಂತೆ ಪ್ರೀತಿಸು; ಪತಿ ಜೈಲಿನಿಂದ ಹೊರ ಬರುತ್ತಿದ್ದಂತೆ ನಟಿ ಮಹಾಲಕ್ಷ್ಮೀ ಹೊಸ ಪೋಸ್ಟ್
Ravindar Chandrasekaran: ರವೀಂದರ್ ಚಂದ್ರಶೇಖರನ್ ವಂಚನೆ ಪ್ರಕರಣದಲ್ಲಿ ಅರೆಸ್ಟ್ ಆಗಿ ಜಾಮೀನು ಪಡೆದು ರಿಲೀಸ್ ಆಗಿದ್ದಾರೆ. ಪತಿ ಹೊರಗೆ ಬರುತ್ತಿದ್ದಂತೆ ಮಹಾಲಕ್ಷ್ಮೀ ಹೊಸ ಪೋಸ್ಟ್ ಹಂಚಿಕೊಂಡು ಪತಿಗೆ ಐ ಲವ್ ಯು ಹೇಳಿದ್ದಾರೆ.
Ravindar Chandrasekaran: ತಮಿಳು ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಹಾಗೂ ನಿರೂಪಕಿ, ನಟಿ ಮಹಾಲಕ್ಷ್ಮೀ ಮದುವೆ ಆದಾಗಿನಿಂದ ಟ್ರೋಲ್ ಆಗುತ್ತಲೇ ಇದ್ದಾರೆ. ವಂಚನೆ ಪ್ರಕರಣದಲ್ಲಿ ಇತ್ತೀಚೆಗೆ ಜೈಲು ಸೇರಿದ್ದ ಚಂದ್ರಶೇಖರನ್ ಷರತ್ತುಬದ್ಧ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಪತಿ ಮನೆಗೆ ಬರುತ್ತಿದ್ದಂತೆ ಮಹಾಲಕ್ಷ್ಮೀ ಹೊಸ ಪೋಸ್ಟ್ ಹಂಚಿಕೊಂಡಿದ್ದು ನಟಿಯ ಪೋಸ್ಟ್‌ಗೆ ಪರ ವಿರೋಧ ಕಾಮೆಂಟ್ ಹರಿದುಬರುತ್ತಿದೆ.
2022 ಸೆಪ್ಟೆಂಬರ್ 1 ರಂದು ಮದುವೆ ಆಗಿದ್ದ ಜೋಡಿ
ರವೀಂದರ್ ಚಂದ್ರಶೇಖರನ್ ಹಾಗೂ ಮಹಾಲಕ್ಷ್ಮೀ ಕಳೆದ ವರ್ಷ ಸೆಪ್ಟೆಂಬರ್ 1 ರಂದು ತಿರುಪತಿಯಲ್ಲಿ ಸರಳವಾಗಿ ಮದುವೆ ಆಗಿದ್ದರು. ರವೀಂದರ್ ಹಾಗೂ ಮಹಾಲಕ್ಷ್ಮೀ ಇಬ್ಬರಿಗೂ ಇದು ಎರಡನೇ ಮದುವೆ. ಮಹಾಲಕ್ಷ್ಮೀಗೆ ಒಬ್ಬ ಮಗ ಕೂಡಾ ಇದ್ದಾನೆ. ಮದುವೆ ಫೋಟೋಗಳು ವೈರಲ್ ಆಗುತ್ತಿದ್ದಂತೆ ಇಬ್ಬರೂ ಬಹಳ ಟ್ರೋಲ್ ಆಗಿದ್ದರು. ಮಹಾಲಕ್ಷ್ಮೀ ನೋಡಲು ಬಹಳ ಸುಂದರವಾಗಿದ್ದಾರೆ. ಆದರೆ ರವೀಂದರ್ ಬಹಳ ದಢೂತಿ ವ್ಯಕ್ತಿ. ಮಹಾಲಕ್ಷ್ಮೀ ರವೀಂದರ್‌ನನ್ನು ನಿಜವಾಗಿ ಪ್ರೀತಿಸಿ ಮದುವೆ ಆಗಿಲ್ಲ. ಹಣಕ್ಕಾಗಿ ಮದುವೆ ಆಗಿದ್ದಾರೆ ಎಂದು ಜನರು ಟ್ರೋಲ್ ಮಾಡಿದ್ದರು. ಆದರೆ ಕೆಲವೇ ಕೆಲವರು ದಂಪತಿಗೆ ಹಾರೈಸಿದ್ದರು.
ವಂಚನೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ರವೀಂದರ್ ಚಂದ್ರಶೇಖರನ್
ಸೆಪ್ಟೆಂಬರ್ 1 ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದ ದಂಪತಿಗೆ ಪೊಲೀಸರು ಶಾಕ್ ನೀಡಿದ್ದರು. ವಂಚನೆ ಪ್ರಕರಣದ ಆರೋಪದ ಮೇರೆಗೆ ರವೀಂದರ್ ಚಂದ್ರಶೇಖರ್‌ನನ್ನು ಪೊಲೀಸರು ಬಂಧಿಸಿದ್ದರು. ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಪ್ರಾಜೆಕ್ಟ್ ಒಂದನ್ನು ಆರಂಭಿಸುತ್ತಿರುವುದಾಗಿ ನಕಲಿ ದಾಖಲೆ ಪತ್ರಗಳನ್ನು ತೋರಿಸಿ ಬಾಲಾಜಿ ಎಂಬ ಉದ್ಯಮಿಯೊಬ್ಬರಿಗೆ ವಂಚನೆ ಮಾಡಿದ ಆರೋಪ ರವೀಂದರ್ ಚಂದ್ರಶೇಖರನ್ ಮೇಲಿದೆ. ಪತಿ ಜೈಲಿನಲ್ಲಿದ್ದರೆ ಇತ್ತ ಮಹಾಲಕ್ಷ್ಮೀ, ಹೊಸ ಫೋಟೋಶೂಟ್ ಮಾಡಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿದ್ದರು.
ರವೀಂದರ್‌ಗೆ ಷರತ್ತುಬದ್ಧ ಜಾಮೀನು
ಮಹಾಲಕ್ಷ್ಮೀಗೆ ಪತಿಯ ಮೇಲೆ ಸ್ವಲ್ಪವೂ ಪ್ರೀತಿ ಇಲ್ಲ, ಆತ ಜೈಲಿನಲ್ಲಿದ್ದಾಗ ಇದೆಲ್ಲಾ ಅವಶ್ಯಕತೆ ಇದೆಯೇ ಎಂದು ಜನರು ಪ್ರಶ್ನಿಸುತ್ತಿದ್ದರು. ಮಹಾಲಕ್ಷ್ಮೀ ಮಾತ್ರ ಪತಿಗಾಗಿ ಕಾಯುತ್ತಿರುವುಂತೆ ಪೋಸ್ಟ್ ಹಂಚಿಕೊಳ್ಳುತ್ತಲೇ ಇದ್ದರು. ಇದೀಗ ರವೀಂದರ್ ಚಂದ್ರಶೇಖರನ್, ಜಾಮೀನು ಪಡೆದು ರಿಲೀಸ್ ಆಗಿದ್ದಾರೆ. ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದೆ. ಪತಿ ಹೊರಗೆ ಬರುತ್ತಿದ್ದಂತೆ ಮಹಾಲಕ್ಷ್ಮೀ ಮತ್ತೊಂದು ಪೋಸ್ಟ್ ಶೇರ್ ಮಾಡಿದ್ದಾರೆ.
ಮಹಾಲಕ್ಷ್ಮೀ ಹೊಸ ಪೋಸ್ಟ್
''ನನ್ನ ಮುಖದಲ್ಲಿ ನಗು ತರಿಸುವಲ್ಲಿ ನೀನು ಎಂದಿಗೂ ಸೋಲುವುದಿಲ್ಲ, ಅದಕ್ಕೆ ಕಾರಣ ಪ್ರೀತಿ ಹಾಗೂ ನಂಬಿಕೆ, ಆದರೆ ಇಲ್ಲ ನಂಬಿಕೆಯು ನನಗಿಂತ ನಿನ್ನನ್ನು ಬಹಳ ಪ್ರೀತಿಸುತ್ತದೆ. ಮೊದಲಿನ ಪ್ರೀತಿಯನ್ನು ತೋರಿಸು, ಮೊದಲಿನಂತೆ ನನ್ನನ್ನು ಕಾಪಾಡು, ಲವ್ ಯು ಅಮ್ಮು'' ಎಂದು ಮಹಾಲಕ್ಷ್ಮೀ ಬರೆದುಕೊಂಡಿದ್ದಾರೆ. ರವೀಂದರ್ ಜೈಲಿಗೆ ಹೋಗುತ್ತಿದ್ದಂತೆ ಮಹಾಲಕ್ಷ್ಮೀ, ಆತ ನನಗೆ ಮೋಸ ಮಾಡಿದ್ದಾಗಿ ಅಳುತ್ತಿರುವುದಾಗಿ ಕೆಲವೊಂದು ತಮಿಳು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಮಹಾಲಕ್ಷ್ಮೀ ಸೋಷಿಯಲ್ ಮೀಡಿಯಾದಲ್ಲಾಗಲೀ, ಯಾವುದೇ ವಾಹಿನಿಯಲ್ಲಾಗಲೀ ಆ ರೀತಿ ಹೇಳಿಕೆ ನೀಡಿಲ್ಲ.