Tamannaah Bhatia: ವಿಜಯ್‌ ಜೊತೆಗಿನ ಸುರ ಚಿತ್ರದ ಬಗ್ಗೆ ತಮನ್ನಾ ನೆಗೆಟಿವ್‌ ಮಾತು; ಮಿಲ್ಕಿ ಬ್ಯೂಟಿ ಕ್ಷಮೆ ಕೇಳಬೇಕೆಂದ ದಳಪತಿ ಫ್ಯಾನ್ಸ್‌
ಕನ್ನಡ ಸುದ್ದಿ  /  ಮನರಂಜನೆ  /  Tamannaah Bhatia: ವಿಜಯ್‌ ಜೊತೆಗಿನ ಸುರ ಚಿತ್ರದ ಬಗ್ಗೆ ತಮನ್ನಾ ನೆಗೆಟಿವ್‌ ಮಾತು; ಮಿಲ್ಕಿ ಬ್ಯೂಟಿ ಕ್ಷಮೆ ಕೇಳಬೇಕೆಂದ ದಳಪತಿ ಫ್ಯಾನ್ಸ್‌

Tamannaah Bhatia: ವಿಜಯ್‌ ಜೊತೆಗಿನ ಸುರ ಚಿತ್ರದ ಬಗ್ಗೆ ತಮನ್ನಾ ನೆಗೆಟಿವ್‌ ಮಾತು; ಮಿಲ್ಕಿ ಬ್ಯೂಟಿ ಕ್ಷಮೆ ಕೇಳಬೇಕೆಂದ ದಳಪತಿ ಫ್ಯಾನ್ಸ್‌

ಇದುವರೆಗೂ ನೀವು ಅಭಿನಯಿಸಿರುವ ಸಿನಿಮಾಗಳಲ್ಲಿ ಇಷ್ಟವಾಗದ ಯಾವುದಾದರೂ ಪಾತ್ರಗಳಿವೆಯಾ ಎಂದು ಕೇಳಿದ ನಿರೂಪಕರ ಪ್ರಶ್ನೆಗೆ ಉತ್ತರಿಸಿದ ತಮನ್ನಾ 'ಸುರ' ಚಿತ್ರದ ಬಗ್ಗೆ ಮಾತನಾಡಿದ್ದಾರೆ.

ದಳಪತಿ ವಿಜಯ್‌ ಜೊತೆಗೆ ನಟಿಸಿದ್ದ ಸುರ ಚಿತ್ರದ ಬಗ್ಗೆ ತಮನ್ನಾ ನೆಗೆಟಿವ್‌ ಮಾತು
ದಳಪತಿ ವಿಜಯ್‌ ಜೊತೆಗೆ ನಟಿಸಿದ್ದ ಸುರ ಚಿತ್ರದ ಬಗ್ಗೆ ತಮನ್ನಾ ನೆಗೆಟಿವ್‌ ಮಾತು

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಇಷ್ಟು ವರ್ಷಗಳ ಸಿನಿ ಕರಿಯರ್‌ನಲ್ಲಿ ಯಾವುದೇ ವಿವಾದವನ್ನು ಮೈ ಮೇಲೆ ಎಳೆದುಕೊಂಡವರಲ್ಲ, ತಾನಾಯಿತು ತನ್ನ ಕೆಲಸವಾಯ್ತು ಎಂದುಕೊಂಡಿದ್ದ ತಮನ್ನಾ ಈ ವರ್ಷದ ಆರಂಭದಿಂದ ಪ್ರಿಯಕರನ ವಿಚಾರದಿಂದ ಸುದ್ದಿಯಲ್ಲಿದ್ದಾರೆ. ಜೊತೆಗೆ 'ಜೈಲರ್‌' ಚಿತ್ರದ ಕಾವಾಲಯ್ಯ ಹಾಡು ಅವರಿಗೆ ಇನ್ನಷ್ಟು ಹೆಸರು ತಂದುಕೊಟ್ಟಿದೆ.

ತಮ್ಮ ಪ್ರೀತಿಯ ವಿಚಾರವನ್ನು ಎಲ್ಲಿಯೂ ಹೇಳಿಕೊಳ್ಳದ ತಮನ್ನಾ ಹಾಗೂ ವಿಜಯ್‌ ವರ್ಮಾ ಈಗ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಒಬ್ಬರ ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳಿಗೆ ಕಾಮೆಂಟ್‌ ಮಾಡುತ್ತಿದ್ದಾರೆ. ತಮನ್ನಾ ಪ್ರೀತಿ ವಿಚಾರ ತಿಳಿದು ಕೆಲವರಿಗೆ ಹಾರ್ಟ್‌ ಬ್ರೇಕ್‌ ಆಗಿದೆ. ಹೋಗಲಿ ಬೇಗ ಮದುವೆ ಆಗಿ ಗುಡ್‌ ನ್ಯೂಸ್‌ ಕೊಡಿ ಎಂದು ಹಾರೈಸುತ್ತಿದ್ದಾರೆ. ಈ ನಡುವೆ ತಮನ್ನಾ ದಳಪತಿ ವಿಜಯ್‌ ಜೊತೆ ನಟಿಸಿದ್ದ ಸಿನಿಮಾವೊಂದರ ಬಗ್ಗೆ ನೆಗೆಟಿವ್‌ ಆಗಿ ಮಾತನಾಡಿ ವಿಜಯ್‌ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ಧಾರೆ.

ಸುರ ಚಿತ್ರದ ಬಗ್ಗೆ ತಮನ್ನಾ ನೆಗೆಟಿವ್‌ ಮಾತುಗಳು

'ಜೈಲರ್‌' ಸಿನಿಮಾ ಪ್ರಮೋಷನ್‌ಗಾಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ತಮನ್ನಾ 'ಸುರ' ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಇದುವರೆಗೂ ನೀವು ಅಭಿನಯಿಸಿರುವ ಸಿನಿಮಾಗಳಲ್ಲಿ ಇಷ್ಟವಾಗದ ಯಾವುದಾದರೂ ಪಾತ್ರಗಳಿವೆಯಾ ಎಂದು ಕೇಳಿದ ನಿರೂಪಕರ ಪ್ರಶ್ನೆಗೆ ಉತ್ತರಿಸಿದ ತಮನ್ನಾ, ''ಆ ರೀತಿಯ ಬಹಳ ಸಿನಿಮಾಗಳಿವೆ, ಅದರಲ್ಲಿ ಸುರ ಪ್ರಮುಖವಾದುದು, ಆ ಸಿನಿಮಾದಲ್ಲಿ ನಾನು ಚೆನ್ನಾಗಿ ಕಾಣುತ್ತಿರಲಿಲ್ಲ, ಯಾಕಾದರೂ ಆಕ್ಟ್‌ ಮಾಡಿದೆನೋ ಎನ್ನಿಸಿತು, ಆ ರೀತಿಯ ಪಾತ್ರಗಳನ್ನು ಮತ್ತೆ ಎಂದಿಗೂ ಮಾಡುವುದಿಲ್ಲ, ನಮಗೆ ಸುರ ಸಿನಿಮಾ ವರ್ಕೌಟ್‌ ಆಗುವುದಿಲ್ಲವೆಂದು ಗೊತ್ತು, ಆದರೂ ಕಮಿಟ್‌ಮೆಂಟ್‌ ಆಗಿದ್ದರಿಂದ ನಟಿಸಬೇಕಾಯ್ತು'' ಎಂದು ತಮನ್ನಾ ಹೇಳಿದ್ದಾರೆ.

ತಮನ್ನಾ ಮಾತುಗಳು ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಆಕೆ ಹೀಗೆ ನಮ್ಮ ಮೆಚ್ಚಿನ ನಟನ ಸಿನಿಮಾ ಬಗ್ಗೆ ಮಾತನಾಡಿರುವುದು ನಮಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ತಮನ್ನಾ ಈ ವಿಚಾರವಾಗಿ ಕ್ಷಮೆ ಕೇಳಬೇಕು ಎಂದು ವಿಜಯ್‌ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಇನ್ಮುಂದೆ ದಯವಿಟ್ಟು ತಮನ್ನಾ ಜೊತೆ ನಟಿಸಲು ಒಪ್ಪಬೇಡಿ ಎಂದು ಕೂಡಾ ವಿಜಯ್‌ ಫ್ಯಾನ್ಸ್‌ ತಮ್ಮ ಮೆಚ್ಚಿನ ನಟನಿಗೆ ಸೋಷಿಯಲ್‌ ಮೀಡಿಯಾ ಮೂಲಕ ಮನವಿ ಮಾಡುತ್ತಿದ್ದಾರೆ. ಈ ಮಾತುಗಳಿಗೆ ತಮನ್ನಾ ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಕಾದು ನೋಡಬೇಕು.

2010ರಲ್ಲಿ ತೆರೆ ಕಂಡಿದ್ದ ಸಿನಿಮಾ

2010 ರಲ್ಲಿ ತೆರೆ ಕಂಡಿದ್ದ 'ಸುರ' ಚಿತ್ರವನ್ನು ಸನ್‌ ಪಿಕ್ಚರ್ಸ್‌ ಬ್ಯಾನರ್‌ ಅಡಿ ಎಸ್‌ಪಿ ರಾಜ್‌ಕುಮಾರ್‌ ನಿರ್ದೇಶಿಸಿದ್ದಾರೆ. ಇದು ವಿಜಯ್‌ ಅಭಿನಯದ 50ನೇ ಸಿನಿಮಾ. ಚಿತ್ರದಲ್ಲಿ ವಿಜಯ್‌, ತಮನ್ನಾ ಜೊತೆಗೆ ವಡಿವೇಲು, ದೇವ್‌ ಗಿಲ್‌ ಹಾಗೂ ಇನ್ನಿತರರು ನಟಿಸಿದ್ದಾರೆ. ಸಿನಿಮಾ ಬಿಡುಗಡೆಯಾದಾಗ ಜನರಿಂದ ನೆಗೆಟಿವ್‌ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಮಣಿ ಶರ್ಮಾ ಸಂಗೀತ ನಿರ್ದೇಶನದ ಚಿತ್ರದ ಹಾಡುಗಳು ಹಿಟ್‌ ಆಗಿತ್ತು.

Whats_app_banner