ಕನ್ನಡ ಸುದ್ದಿ  /  ಮನರಂಜನೆ  /  Duniya Vijay: ಸೌಜನ್ಯ ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಬಾರದು ಎನ್ನಿಸುತ್ತಿದೆ; ದುನಿಯಾ ವಿಜಯ್‌

Duniya Vijay: ಸೌಜನ್ಯ ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಬಾರದು ಎನ್ನಿಸುತ್ತಿದೆ; ದುನಿಯಾ ವಿಜಯ್‌

ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ. ಸತ್ಯ ಎಂಬುದು ಸೂರ್ಯನ ಬೆಳಕಿದ್ದಂತೆ ಯಾವುದನ್ನೂ ಹೆಚ್ಚು ಸಮಯ ಮರೆಮಾಚಲಾಗದು ಎಂದು ದುನಿಯಾ ವಿಜಯ್‌ ಬರೆದುಕೊಂಡಿದ್ದಾರೆ

ಸೌಜನ್ಯ ಪ್ರಕರಣ ಸಂಬಂಧ ಟ್ವೀಟ್‌ ಮಾಡಿದ ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್
ಸೌಜನ್ಯ ಪ್ರಕರಣ ಸಂಬಂಧ ಟ್ವೀಟ್‌ ಮಾಡಿದ ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್ (PC: Duniya vijya Social Media)

ಉಜಿರೆ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮತ್ತೆ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ಪ್ರಕರಣ ಸಂಬಂಧ 11 ವರ್ಷಗಳ ಹಿಂದೆ ಬಂಧಿತನಾಗಿದ್ದ ಸಂತೋಷ್‌ ರಾವ್‌, ದೋಷಮುಕ್ತ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡುತ್ತಿದ್ದಂತೆ ಮತ್ತೆ ಸೌಜನ್ಯ ಪ್ರಕರಣ ಮುನ್ನೆಲೆಗೆ ಬಂದಿದೆ.‌

ಟ್ರೆಂಡಿಂಗ್​ ಸುದ್ದಿ

ಧರ್ಮಸ್ಥಳದ ಬಗ್ಗೆ ಸೋಷಿಯಲ್‌ ಮೀಡಿಯಾ ಪೋಸ್ಟ್‌

ಸೌಜನ್ಯ ಪ್ರಕರಣವನ್ನು ಮುಂದಿಟ್ಟುಕೊಂಡು ಕೆಲವರು ಧರ್ಮಸ್ಥಳದ ಬಗ್ಗೆ ಅವಹೇಳನಾಕಾರಿ ಮಾತುಗಳನ್ನು ಆಡುತ್ತಿದ್ಧಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನೂ ಕೆಲವರು ಸೌಜನ್ಯ ಕೊಲೆ ಅತ್ಯಾಚಾರ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವವರೆಗೂ ಧರ್ಮಸ್ಥಳಕ್ಕೆ ತೆರಳಬಾರದು ಎಂದು ನಿರ್ಧರಿಸಿದ್ದಾರೆ, ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಳ್ಳುತ್ತಿದ್ಧಾರೆ. ಈ ಸಂಬಂಧ ಕೆಲವು ಭಕ್ತರು, ಸೌಜನ್ಯ ಕೊಲೆ ಮಾಡಿದ ನಿಜವಾದ ಆರೋಪಿಗಳು ದೊರೆಯುಂತೆ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಜೊತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಮಾತಾಡುವವರಿಗೆ ಶಿಕ್ಷೆ ನೀಡು ಎಂದು ವಿಶೇಷ ಪೂಜೆ ಮಾಡುತ್ತಿದ್ದಾರೆ. ಈ ನಡುವೆ ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್‌ ಕೂಡಾ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್‌ ಮಾಡಿದ್ಧಾರೆ.

ಸತ್ಯ ಎಂಬುದು ಸೂರ್ಯನ ಬೆಳಕಿದ್ದಂತೆ ಎಂದ ದುನಿಯಾ ವಿಜಯ್

ಧರ್ಮಸ್ಥಳ ಮಂಜುನಾಥನ ಫೋಟೋ ಹಾಗೂ ಸೌಜನ್ಯ ಫೋಟೋಗಳನ್ನು ಹಂಚಿಕೊಂಡಿರುವ ದುನಿಯಾ ವಿಜಯ್‌, ''ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆಯಾಗಿತ್ತು, ಆದರೆ ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ, ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ. ಸತ್ಯ ಎಂಬುದು ಸೂರ್ಯನ ಬೆಳಕಿದ್ದಂತೆ ಯಾವುದನ್ನೂ ಹೆಚ್ಚು ಸಮಯ ಮರೆಮಾಚಲಾಗದು'' ಎಂದು ಬರೆದುಕೊಂಡಿದ್ದಾರೆ. ವಿಜಯ್‌ ಟ್ವೀಟ್‌ಗೆ ಪರ ವಿರೋಧ ಚರ್ಚೆ ಎದುರಾಗುತ್ತಿದೆ.

ನಿಮ್ಮ ಈ ನಡೆ, ಕಳ್ಳ ನಿದ್ದೆ ಮಾಡುವವರ ಕಣ್ಣು ತೆರೆಸಲಿ, ತೋರಿಕೆಗಾಗಿ ಶ್ರದ್ಧೆ, ಭಕ್ತಿ ತೋರಿಸುತ್ತಾ ನೋಡುಗರನ್ನು ಯಾಮಾರಿಸಿಕೊಂಡು, ನಿಜ ಜೀವನದಲ್ಲಿ ನೈತಿಕತೆ, ಮೌಲ್ಯಗಳನ್ನು ಅಳವಡಿಸಿಕೊಳ್ಳದೇ ಇರುವವರು ಧಾರ್ಮಿಕ ಕೇಂದ್ರಗಳಿಂದ ದೂರವಿರುವುದು ಒಳ್ಳೆಯದು, ನಾನು ಕೂಡಾ ಪ್ರತಿ ವರ್ಷ ಧರ್ಮಸ್ಥಳಕೆ ಹೋಗ್ತಿದ್ದೆ. ಈ ಪ್ರಕರಣದ ಆಳ ಅಧ್ಯಯನ ಮಾಡಿದ ಮೇಲೆ ಹೋಗೋಕೆ ಮನಸಿಲ್ಲ, ನೀವು ದರ್ಶನ ಮಾಡ್ಲಿಲ್ಲ ಅಂದ್ರೆ ಆ ಮಂಜುನಾಥನಿಗೆ ಯಾವುದೇ ನಷ್ಟವಿಲ್ಲ, ಅಪರಾಧ ಕೃತ್ಯಕ್ಕೂ ದೇವರಿಗೂ ತಳುಕು ಹಾಕೋದು ಬೇಡ' ಎಂದೆಲ್ಲಾ ನೆಟಿಜನ್ಸ್‌ ಕಾಮೆಂಟ್‌ ಮಾಡುತ್ತಿದ್ದಾರೆ.

ಏನಿದು ಪ್ರಕರಣ?

ಅಕ್ಟೋಬರ್‌ 9 2012 ರಂದು ಉಜಿರೆ ಎಸ್‌ಡಿಎಂ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸೌಜನ್ಯ, ಕಾಲೇಜಿನಿಂದ ಮನೆಗೆ ವಾಪಸ್‌ ಹೋಗುವ ವೇಳೆ ದುಷ್ಕರ್ಮಿಗಳು ಕಾಡಿನ ಮಧ್ಯೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದರು. ಈ ಘಟನೆ ಭಾರೀ ಸದ್ದು ಮಾಡಿತ್ತು. ಸೌಜನ್ಯ ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನೆ ನಡೆಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಸಂಬಂಧ ಸಂತೋಷ್‌ ರಾವ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಕೊನೆಗೆ ಪ್ರಕರಣದ ವಿಚಾರಣೆಯನ್ನು ಸರ್ಕಾರ ಸಿಬಿಐಗೆ ವಹಿಸಿತ್ತು. ಆದರೆ ಇತ್ತೀಚೆಗೆ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿ ಸಂತೋಷ್‌ ರಾವ್‌ ದೋಷಮುಕ್ತ ಎಂದಿತ್ತು. ಈ ತೀರ್ಪಿನ ನಂತರ ಮತ್ತೆ ಸೌಜನ್ಯ ಸುದ್ದಿ ಮುನ್ನೆಲೆಗೆ ಬಂದಿದೆ.

IPL_Entry_Point