ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿ ರಜನಿಕಾಂತ್‌ ‘ವೆಟ್ಟೈಯಾನ್‌’ ಸಿನಿಮಾ ಕಮಾಲ್; ಬೆಂಗಳೂರಲ್ಲಿ ಕನ್ನಡಕ್ಕಿಂತ ತಮಿಳು ವರ್ಷನ್‌ಗೇ ಸಿಂಹಪಾಲು!
ಕನ್ನಡ ಸುದ್ದಿ  /  ಮನರಂಜನೆ  /  ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿ ರಜನಿಕಾಂತ್‌ ‘ವೆಟ್ಟೈಯಾನ್‌’ ಸಿನಿಮಾ ಕಮಾಲ್; ಬೆಂಗಳೂರಲ್ಲಿ ಕನ್ನಡಕ್ಕಿಂತ ತಮಿಳು ವರ್ಷನ್‌ಗೇ ಸಿಂಹಪಾಲು!

ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿ ರಜನಿಕಾಂತ್‌ ‘ವೆಟ್ಟೈಯಾನ್‌’ ಸಿನಿಮಾ ಕಮಾಲ್; ಬೆಂಗಳೂರಲ್ಲಿ ಕನ್ನಡಕ್ಕಿಂತ ತಮಿಳು ವರ್ಷನ್‌ಗೇ ಸಿಂಹಪಾಲು!

Rajinikanth Vettaiyan Movie: ರಜನಿಕಾಂತ್‌ ನಟನೆಯ ವೆಟ್ಟೈಯಾನ್‌ ಸಿನಿಮಾ ಅಕ್ಟೋಬರ್‌ 10ರಂದು ವಿಶ್ವದಾದ್ಯಂತ ತೆರೆಗೆ ಬರುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ಈ ಸಿನಿಮಾಕ್ಕೆ ದೊಡ್ಡ ಹೈಪ್‌ ಕ್ರಿಯೇಟ್‌ ಆಗಿದೆ. ಅಚ್ಚರಿಯ ವಿಚಾರ ಏನೆಂದರೆ, ಮುಂಗಡ ಬುಕಿಂಗ್‌ನಲ್ಲಿ ಬೆಂಗಳೂರಿನಲ್ಲಿ ತಮಿಳು ಅವತರಣಿಕೆಯೇ ಮೇಲುಗೈ ಸಾಧಿಸಿದೆ.

ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿ ರಜನಿಕಾಂತ್‌ ‘ವೆಟ್ಟೈಯಾನ್‌’ ಸಿನಿಮಾ ಕಮಾಲ್
ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿ ರಜನಿಕಾಂತ್‌ ‘ವೆಟ್ಟೈಯಾನ್‌’ ಸಿನಿಮಾ ಕಮಾಲ್

Vettaiyan Advance Booking: ಸೂಪರ್‌ಸ್ಟಾರ್‌ ರಜನಿಕಾಂತ್‌ ನಟನೆಯ ವೆಟ್ಟೈಯಾನ್‌ ಸಿನಿಮಾ ಅಕ್ಟೋಬರ್‌ 10ರಂದು ವಿಶ್ವದಾದ್ಯಂತ ತೆರೆಗೆ ಬರುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ಈ ಸಿನಿಮಾಕ್ಕೆ ದೊಡ್ಡ ಹೈಪ್‌ ಕ್ರಿಯೇಟ್‌ ಆಗಿದೆ. ಬೆಂಗಳೂರೊಂದರಲ್ಲಿಯೇ ಈ ಸಿನಿಮಾಕ್ಕೆ ಸಾವಿರ ಸಾವಿರ ಶೋಗಳು ಮೀಸಲಾಗಿವೆ. ತಮಿಳು, ತೆಲುಗು, ಹಿಂದಿ, ಕನ್ನಡದಲ್ಲಿಯೂ ಈ ಸಿನಿಮಾ ರಿಲೀಸ್‌ ಆಗುತ್ತಿದೆ. ಆದರೆ ಕರ್ನಾಟಕದಲ್ಲಿ ಕಾಟಾಚಾರಕ್ಕೆ ಮಾತ್ರ ಕನ್ನಡದ ಡಬ್ಬಿಂಗ್‌ ವರ್ಷನ್‌ ಬಿಡುಗಡೆ ಆಗುತ್ತಿದೆ! ಸಿಂಹಪಾಲು ಶೋಗಳು ಮೂಲ ತಮಿಳು ವರ್ಷನ್‌ಗೆ ಮಾತ್ರ ಮೀಸಲಾಗಿವೆ.

ಸೂಪರ್‌ಸ್ಟಾರ್‌ ರಜನಿಕಾಂತ್‌ ಸಿನಿಮಾಗಳೆಂದರೆ ಅದರ ಕ್ರೇಜ್‌ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ತಮಿಳುನಾಡಿನಲ್ಲಿ ಮಾತ್ರವಲ್ಲದೆ, ಭಾರತದಾದ್ಯಂತ ಆ ಚಿತ್ರದ ಹೈಪ್‌ ತುಸು ಹೆಚ್ಚೇ ಇರುತ್ತದೆ. ಈಗ ಇದೇ ವರ್ಷ ಲಾಲ್‌ ಸಲಾಮ್‌ ಅನ್ನೋ ಪ್ಲಾಪ್‌ ಸಿನಿಮಾ ನೀಡಿದ ಬಳಿಕ, ಮತ್ತೊಂದು ಬಹುತಾರಾಗಣದ ವೆಟ್ಟೈಯಾನ್‌ ಸಿನಿಮಾ ಮೂಲಕ ಅವರ ಆಗಮನವಾಗುತ್ತಿದೆ. ಈ ಸಿನಿಮಾ ಅಕ್ಟೋಬರ್‌ 10ರಂದು ದೇಶ ಮಾತ್ರವಲ್ಲದೆ, ವಿದೇಶದಲ್ಲಿಯೂ ತೆರೆಗೆ ಬರಲಿದೆ. ತಮಿಳು, ತೆಲುಗು, ಹಿಂದಿ, ಕನ್ನಡದಲ್ಲಿಯೂ ಈ ಸಿನಿಮಾ ರಿಲೀಸ್‌ ಆಗಲಿದೆ. ಈ ನಡುವೆ ಮುಂಗಡ ಬುಕಿಂಗ್‌ ವಿಚಾರದಲ್ಲಿಯೂ ಕೋಟಿ ಕೋಟಿ ಬಾಚಿಕೊಂಡಿದೆ ಈ ಸಿನಿಮಾ.

ಜೈ ಭೀಮ್ ಸಿನಿಮಾ ನಿರ್ದೇಶಿಸಿದ್ದ ಟಿ ಜಿ ಜ್ಞಾನವೇಲ್‌ ವೆಟ್ಟೈಯಾನ್‌ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಲೈಕಾ ಸಂಸ್ಥೆ ಈ ಬಿಗ್‌ ಬಜೆಟ್‌ ಚಿತ್ರವನ್ನು ನಿರ್ಮಿಸಿದೆ. ವೆಟ್ಟೈಯಾನ್‌ ಚಿತ್ರದಲ್ಲಿ ರಜನಿಕಾಂತ್‌ ಪೊಲೀಸ್‌ ಅಧಿಕಾರಿಯಾದರೆ, ಬಿಗ್ ಬಿ ಅಮಿತಾಬ್‌ ಬಚ್ಚನ್‌ ನ್ಯಾಯಾಧೀಶರಾಗಿ ಕಾಣಿಸಿಕೊಂಡಿದ್ದಾರೆ. ಮಲಯಾಳಿ ಸ್ಟಾರ್‌ ನಟ ಫಹಾದ್ ಫಾಸಿಲ್ ಮತ್ತು ಟಾಲಿವುಡ್‌ ನಟ ರಾಣಾ ದಗ್ಗುಬಾಟಿ ಅವರೂ ಈ ಚಿತ್ರದಲ್ಲಿದ್ದಾರೆ. ರಿತಿಕಾ ಸಿಂಗ್, ದುಶಾರಾ ವಿಜಯನ್, ಮಂಜು ವಾರಿಯರ್ ಸಹ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಈ ಚಿತ್ರದ ಟ್ರೇಲರ್‌ ಸಹ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿತ್ತು.

ಮುಂಗಡ ಬುಕಿಂಗ್‌ನಲ್ಲಿ ದಾಖಲೆ

ಸೂಪರ್‌ಸ್ಟಾರ್ ರಜನಿಕಾಂತ್ ಮುಖ್ಯಭೂಮಿಕೆಯ ವೆಟ್ಟೈಯಾನ್ ಸಿನಿಮಾ, ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಆ ಹೈಪ್‌ನ ಹಿನ್ನೆಲೆಯಲ್ಲಿಯೇ ದಸರಾ ಪ್ರಯುಕ್ತ ರಿಲೀಸ್‌ ಆಗುತ್ತಿರುವ ಈ ಸಿನಿಮಾ ಮುಂಗಡ ಬುಕಿಂಗ್‌ನಲ್ಲಿ ದೊಡ್ಡ ಮೊತ್ತವನ್ನೇ ಕಲೆಹಾಕಿದೆ. ಭಾರತದಲ್ಲಿ ಅಡ್ವಾನ್ಸ್‌ ಬುಕಿಂಗ್‌ನಿಂದಲೇ 10.96 ಕೋಟಿ ರೂ ಕಮಾಯಿ ಮಾಡಿದೆ. ಟ್ರ್ಯಾಕಿಂಗ್ ವೆಬ್‌ಸೈಟ್ Sacnilk ಪ್ರಕಾರ, ವೆಟ್ಟೈಯಾನ್‌ನ ತಮಿಳು ಆವೃತ್ತಿಯು 10.2 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದರೆ, ತೆಲುಗು ಆವೃತ್ತಿಯು 74 ಲಕ್ಷ ರೂಪಾಯಿಗಳನ್ನು ಗಳಿಸಿದೆ. ಹಿಂದಿ ಆವೃತ್ತಿ ದೇಶದಲ್ಲಿ 93 ಸಾವಿರ ರೂಪಾಯಿಯನ್ನು ಮುಂಗಡ ಟಿಕೆಟ್‌ ಮೂಲಕ ಪಡೆದಿದೆ.

ಬೆಂಗಳೂರಿನಲ್ಲಿ ಹೇಗಿದೆ ಕ್ರೇಜ್‌

ರಜನಿಕಾಂತ್‌ ಸಿನಿಮಾಗಳಿಗೆ ಬೆಂಗಳೂರಿನಲ್ಲಿಯೂ ದೊಡ್ಡ ಅಭಿಮಾನಿ ಬಳಗವಿದೆ. ಮೊದಲ ದಿನವೇ ಮೊದಲ ಶೋ ನೋಡುವ ಫ್ಯಾನ್ಸ್‌ ಇದ್ದಾರೆ. ಅದೇ ರೀತಿ ಇದೇ ಸಿನಿಮಾ ಕರ್ನಾಟಕದಲ್ಲಿ ಕನ್ನಡದ ಜತೆಗೆ ಇತರೆ ಭಾಷೆಗಳಲ್ಲಿಯೂ ಬಿಡುಗಡೆ ಆಗುತ್ತಿದೆ. ಆದರೆ, ಕನ್ನಡಕ್ಕಿಂತ ತಮಿಳಿಗೇ ಹೆಚ್ಚಿನ ಬೇಡಿಕೆ ಇದೆ. ಕನ್ನಡ ಅವತರಣಿಕೆಗೆ ಕೇವಲ 12 ಶೋಗಳು ಸಿಕ್ಕಿರೆ, ತಮಿಳು ಅವತರಣಿಕೆಗೆ ಸಾವಿರ ಶೋಗಳು ಸಿಕ್ಕಿವೆ. ತೆಲುಗು ಭಾಷೆಗೆ 90 ಶೋಗಳು ಸಿಕ್ಕಿವೆ.

ಮೊದಲ ದಿನದ ಗಳಿಕೆ ಎಷ್ಟಾಗಬಹುದು?

ಸದ್ಯ ಹೈಪ್‌ ಮತ್ತು ಕ್ರೇಜ್‌ ಗಮನಿಸಿದರೆ, ಮೊದಲ ದಿನವೇ ವೆಟ್ಟೈಯಾನ್ ಸಿನಿಮಾ ದೇಶಾದ್ಯಂತ ಒಟ್ಟಾರೆಯಾಗಿ 25 ಕೋಟಿ ರೂ. ಕಲೆಕ್ಷನ್‌ ಮಾಡುವ ನಿರೀಕ್ಷೆಯಿದೆ. ರಜನಿಕಾಂತ್‌ ಕಳೆದ ವರ್ಷದ ಜೈಲರ್‌ ಸಿನಿಮಾ ಮೊದಲ ದಿನವೇ 48. 35 ಕೋಟಿ ರೂ. ಗಳಿಕೆ ಕಂಡಿತ್ತು. ಭಾರತದಾದ್ಯಂತ 348 ಕೋಟಿ ರೂ. ಗಳಿಸಿತ್ತು. ವಿಶ್ವದಾದ್ಯಂತ 600 ಕೋಟಿಯ ಗಡಿ ದಾಟಿತ್ತು. ಈಗ ವೆಟ್ಟೈಯಾನ್ ಸಿನಿಮಾ ಆ ಮಟ್ಟಿಗೆ ರೀಚ್‌ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ತಾಂತ್ರಿಕವಾಗಿ ಹೇಗಿದೆ ವೆಟ್ಟೈಯಾನ್?

ವೆಟ್ಟೈಯಾನ್ ಸಿನಿಮಾಗೆ ರಾಕ್ ಸ್ಟಾರ್ ಖ್ಯಾತಿಯ ಅನಿರುದ್ಧ್ ರವಿಚಂದರ್ ಸಂಗೀತ, ಎಸ್.ಆರ್. ಕಥಿರ್ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಸಂಕಲನವಿರಲಿದೆ. ತಿರುವನಂತಪುರಂ, ತಿರುನೆಲ್ವೇಲಿ, ಚೆನ್ನೈ, ಮುಂಬೈ, ಆಂಧ್ರಪ್ರದೇಶ ಮತ್ತು ಹೈದರಾಬಾದ್‌ನಲ್ಲಿ ಚಿತ್ರದ ಚಿತ್ರೀಕರಣ‌ ನಡೆಸಲಾಗಿದೆ. ಇಂಡಿಯನ್, ಖೈದಿ ನಂಬರ್ 150, ರೋಬೋ 2.0, ದರ್ಬಾರ್ ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ ಪ್ರೊಡಕ್ಷನ್ ವೆಟ್ಟೈಯಾನ್ ಸಿನಿಮಾ ನಿರ್ಮಿಸಿದೆ.

Whats_app_banner