ಒಂದು ಕಾಲಕ್ಕೆ ಭಾರತದಲ್ಲಿ ಸೂಪರ್ ಹೀರೋ ಪರಿಕಲ್ಪನೆ ಸಾಧ್ಯವಾ ಎನ್ನುವಂತಿತ್ತು, ಈಗ ಭಾಷೆಗೊಬ್ಬ ಸೂಪರ್ ಹೀರೋ: ಸಿನಿಸ್ಮೃತಿ ಅಂಕಣ
ಈ ಸೂಪರ್ ಹೀರೋ ಎಂಬ ಕಲ್ಪನೆ ಹಲವು ವರ್ಷಗಳ ಹಿಂದಿನಿಂದಲೇ ಇದೆ. ಆದರೆ, ಅವೆಲ್ಲವೂ ಕಾಮಿಕ್‍ಗಳಾಗಿ ಜನಪ್ರಿಯವಾಗಿದ್ದವು. ಅದಕ್ಕೊಂದು ಚಿತ್ರರೂಪ ಸಿಕ್ಕಿದ್ದು 1970ರ ದಶಕದ ಕೊನೆಯಲ್ಲಿ. ಅದಕ್ಕೂ ಮೊದಲು ಅಮೇರಿಕಾದಲ್ಲಿ ‘ಸೂಪರ್ ಮ್ಯಾನ್’ನನ್ನು ಟಿವಿ ಸರಣಿಯಾಗಿ ನೋಡಿದ್ದ ಜನ, ಚಿತ್ರಮಂದಿರಗಳಲ್ಲಿ ‘ಸೂಪರ್ ಮ್ಯಾನ್’ ಸಾಹಸಗಳನ್ನು ನೋಡಿದ್ದು 1978ರಲ್ಲಿ.
Indian Super Hero Movies: ಅಂಥದ್ದೊಂದು ಕೊರಗು ಪ್ರೇಕ್ಷಕರಲ್ಲಿ ಇದ್ದೇ ಇತ್ತು. ಹಾಲಿವುಡ್‍ನಲ್ಲಿ ಸೂಪರ್ ಮ್ಯಾನ್, ಸ್ಫೈಡರ್ ಮ್ಯಾನ್, ಬ್ಯಾಟ್‍ಮ್ಯಾನ್, ಐರನ್ ಮ್ಯಾನ್, ಆಕ್ವಾಮ್ಯಾನ್, ಥಾರ್, ದಿ ಅವೆಂಜರ್ಸ್, ಕ್ಯಾಪ್ಟನ್ ಅಮೇರಿಕಾ, ಹಲ್ಕ್, ದಿ ಮಾಸ್ಕ್ ಮುಂತಾದ ಸೂಪರ್ ಹೀರೋ ಚಿತ್ರಗಳು ಒಂದರಹಿಂದೊಂದು ಬಿಡುಗಡೆಯಾಗುತ್ತಿರುವಾಗ, ಭಾರತದಲ್ಲಿ ಏನೇ ಪ್ರಯೋಗಗಳಾಗುತ್ತಿದ್ದರೂ ಸೂಪರ್ ಹೀರೋ ಚಿತ್ರಗಳು ತಯಾರಾಗುತ್ತಿದ್ದುದು ಕಡಿಮೆಯೇ. ಬಿಡುಗಡೆಯಾದರೂ ಹಾಲಿವುಡ್ ಚಿತ್ರಗಳ ತಂತ್ರಜ್ಞಾನ ಮತ್ತು ತಯಾರಿಕೆಯ ಎದುರು ಕಳಪೆಯಾಗಿ ಕಾಣುತ್ತಿದ್ದವು. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಭಾರತದಲ್ಲಿ ಸೂಪರ್ ಹೀರೋ ಚಿತ್ರಗಳ ಸಂಖ್ಯೆ ಜಾಸ್ತಿಯಾಗುವುದರ ಜೊತೆಗೆ ಗುಣಮಟ್ಟವೂ ಸುಧಾರಿಸುತ್ತಿದೆ. ಭಾರತದಲ್ಲಿ ಸೂಪರ್ ಹೀರೋ ಚಿತ್ರಗಳ ಬಗ್ಗೆ ಒಂದು ಅವಲೋಕನ …
ಶ್ರೀಮುರಳಿ ಅಭಿನಯದ ‘ಬಘೀರ’ ಚಿತ್ರವು ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬೇರೆ ಭಾಷೆಗಳಲ್ಲಿ ಈ ತರಹದ ಚಿತ್ರಗಳು ಈ ಹಿಂದೆ ಬಿಡುಗಡೆಯಾದರೂ ಕನ್ನಡದಲ್ಲಿ ಈ ತರಹದ ಪ್ರಯೋಗಗಳು ಕಡಿಮೆಯೇ. ಆ ನಿಟ್ಟಿನಲ್ಲಿ ‘ಬಘೀರ’ನನ್ನು ಕನ್ನಡದ ಮೊದಲ ಸೂಪರ್ ಹೀರೋ ಎಂದು ಕರೆಯಲಾಗುತ್ತಿದೆ. ಈ ಚಿತ್ರವು ಯಶಸ್ವಿಯಾಗುತ್ತಿದ್ದಂತೆಯೇ ಮುಂದಿನ ದಿನಗಳಲ್ಲಿ, ಇದರ ಮುಂದಿನ ಭಾಗ ಬರಲಿದೆ ಎಂದು ನಿರ್ದೇಶಕ ಡಾ. ಸೂರಿ ಹಿಂಟ್ ಕೊಟ್ಟಿದ್ದಾರೆ. ‘ಬಘೀರ’ನ ಸಾಹಸಗಳು ಮುಂದುವರೆದ ಭಾಗಗಳಲ್ಲಿ ಮುಂದೆ ಯಾವಾಗ ಬರುತ್ತದೋ ಗೊತ್ತಿಲ್ಲ. ಒಟ್ಟಿನಲ್ಲಿ ಕನ್ನಡದಲ್ಲೂ ಇಂಥದ್ದೊಂದು ಪ್ರಯೋಗವಾಗಿರುವುದು ಗಮನಾರ್ಹ.
ಕನ್ನಡದಲ್ಲಿ ಬಘೀರನ ಆಗಮನ
ಸೂಪರ್ ಹೀರೋ ಎಂದರೆ ಅತೀಂದ್ರಿಯ ಶಕ್ತಿಗಳಿರುವ (Super Natural Powers) ಮನುಷ್ಯ ಎಂಬ ನಂಬಿಕೆ ಇದೆ. ಅದಕ್ಕೆ ಪೂರಕವಾಗಿ ಇದುವರೆಗೂ ಬಂದಿರುವ ಸೂಪರ್ ಹೀರೋಗಳೆಲ್ಲರಿಗೂ ವಿಚಿತ್ರ ಶಕ್ತಿಗಳಿದ್ದವು ಮತ್ತು ಅವರೆಲ್ಲಾ ಅದೇ ತರಹದ ಶಕ್ತಿಗಳಿರುವ ದುಷ್ಟಶಕ್ತಿಗಳ ವಿರುದ್ಧ ಹೋರಾಡಿದ್ದರು. ಆದರೆ, ‘ಬಘೀರ’ ಹಾಗಿಲ್ಲ. ಅವನಿಗೆ ಆ ರೀತಿಯ ಯಾವುದೇ ಶಕ್ತಿಗಳಿಲ್ಲ. ಶಕ್ತಿ ಮತ್ತು ಯುಕ್ತಿಯನ್ನೇ ನಂಬಿಕೊಂಡಿರುವ ‘ಬಘೀರ’, ತನ್ನಂತೆಯೇ ಯಾವುದೇ ಶಕ್ತಿಗಳಿಲ್ಲದಿರುವ ವ್ಯಕ್ತಿಗಳ ವಿರುದ್ಧ ಹೋರಾಟ ಮಾಡುತ್ತಾನೆ. ಸೂಪರ್ ಹೀರೋ ಎಂದರೆ ಅತೀಂದ್ರಿಯ ಶಕ್ತಿಗಳಿರುವವನಾದ್ದರಿಂದ ‘ಬಘೀರ’ನನ್ನು ಸೂಪರ್ ಹೀರೋ ಎಂದು ಕರೆಯಬೇಕೋ ಬೇಡವೋ ಎಂಬ ಜಿಜ್ಞಾಸೆ ಇದ್ದೇ ಇದೆ. ಸೂಪರ್ ಹೀರೋ ಅಲ್ಲದಿದ್ದರೂ, ದುಷ್ಟಶಕ್ತಿಗಳ ವಿರುದ್ಧ ಹೋರಾಡುವ ಒಬ್ಬ ಹೀರೋ ಅಂತೂ ಖಂಡಿತಾ ಸಿಕ್ಕಿದ್ದಾನೆ ಎಂದರೆ ತಪ್ಪಿಲ್ಲ.
70ರ ದಶಕದಲ್ಲಿಯೇ ಸಿಕ್ಕಿತ್ತು ಚಿತ್ರರೂಪ
ಈ ಸೂಪರ್ ಹೀರೋ ಎಂಬ ಕಲ್ಪನೆ ಹಲವು ವರ್ಷಗಳ ಹಿಂದಿನಿಂದಲೇ ಇದೆ. ಆದರೆ, ಅವೆಲ್ಲವೂ ಕಾಮಿಕ್‍ಗಳಾಗಿ ಜನಪ್ರಿಯವಾಗಿದ್ದವು. ಅದಕ್ಕೊಂದು ಚಿತ್ರರೂಪ ಸಿಕ್ಕಿದ್ದು 1970ರ ದಶಕದ ಕೊನೆಯಲ್ಲಿ. ಅದಕ್ಕೂ ಮೊದಲು ಅಮೇರಿಕಾದಲ್ಲಿ ‘ಸೂಪರ್ ಮ್ಯಾನ್’ನನ್ನು ಟಿವಿ ಸರಣಿಯಾಗಿ ನೋಡಿದ್ದ ಜನ, ಚಿತ್ರಮಂದಿರಗಳಲ್ಲಿ ‘ಸೂಪರ್ ಮ್ಯಾನ್’ ಸಾಹಸಗಳನ್ನು ನೋಡಿದ್ದು 1978ರಲ್ಲಿ. ಕ್ರೀಸ್ಟೋಫರ್ ರೀವ್ ಮೊದಲ ಸೂಪರ್ ಹೀರೋ ಆಗಿ ತೆರೆಯ ಮೇಲೆ ಕಾಣಿಸಿಕೊಂಡರು. ಇದಾಗಿ ಕೆಲವೇ ವರ್ಷಗಳಲ್ಲಿ ‘ಬ್ಯಾಟ್ ಮ್ಯಾನ್’, ‘ಸೂಪರ್ ಮ್ಯಾನ್’ ಮುಂತಾದವರು ಬಂದರು. ನೋಡನೋಡುತ್ತಿದ್ದಂತೆಯೇ, ಐರನ್ ಮ್ಯಾನ್, ಆಕ್ವಾಮ್ಯಾನ್, ಥಾರ್, ದಿ ಅವೆಂಜರ್ಸ್, ಕ್ಯಾಪ್ಟನ್ ಅಮೇರಿಕಾ, ಹಲ್ಕ್, ದಿ ಮಾಸ್ಕ್, ಡೆಡ್‍ಪೂಲ್, ಕ್ಯಾಪ್ಟನ್ ಮಾರ್ವೆಲ್, ಬ್ಲಾಕ್ ಪ್ಯಾಂಥರ್, ವಂಡರ್ ವುಮನ್, ಡೆಡ್‍ಪೂಲ್, ಲೋಗನ್, ಆ್ಯಂಟ್ ಮ್ಯಾನ್, ಎಕ್ ಮೆನ್, ಫೆಂಟಾಸ್ಟಿಕ್ ಫೋರ್, ಫ್ಲಾಶ್ ಸೇರಿದಂತೆ ಹಲವು ಸೂಪರ್ ಹೀರೋಗಳು ಹುಟ್ಟಿಕೊಂಡಿದ್ದಾರೆ. ಇವರ ಸಾಹಸಗಳು ಹಲವು ಭಾಗಗಳಲ್ಲಿ ಮೂಡಿಬಂದಿವೆ. ಬರೀ ಮುಂದುವರೆದ ಭಾಗಗಳಷ್ಟೇ ಅಲ್ಲ, ಮಲ್ಟಿವರ್ಸ್ಗಳು (ಒಬ್ಬ ಸೂಪರ್ ಹೀರೋನ ಚಿತ್ರದಲ್ಲಿ, ಇನ್ನೊಬ್ಬ ಸೂಪರ್ ಹೀರೋ) ಸಹ ಶುರುವಾಗಿವೆ. ಇವತ್ತು ಜಗತ್ತಿನಾದ್ಯಂತ ಈ ತರಹದ ಸೂಪರ್ ಹೀರೋ ಚಿತ್ರಗಳಿಗೆ ದೊಡ್ಡ ಮಾರುಕಟ್ಟೆಯಷ್ಟೇ ಅಲ್ಲ, ದೊಡ್ಡ ಪ್ರೇಕ್ಷಕವರ್ಗವೂ ಇದೆ.
ಭಾರತದಲ್ಲಿ 1980ರಲ್ಲಿ ಬಂದಿತ್ತು ಸೂಪರ್‌ಮ್ಯಾನ್
ಭಾರತದಲ್ಲೂ ಈ ಸೂಪರ್ ಹೀರೋ ಚಿತ್ರಗಳಿಗೆ ದೊಡ್ಡ ಪ್ರೇಕ್ಷಕವರ್ಗವೇ ಇದೆ. ತೆರೆಯ ಮೇಲೆ ಅತೀಂದ್ರಿಯ ಶಕ್ತಿಗಳು ಮತ್ತು ಅತ್ಯುನ್ನತ ಗ್ರಾಫಿಕ್ಸ್ ನೋಡಿದ್ದ ಪ್ರೇಕ್ಷಕರು, ಭಾರತದಲ್ಲಿ ಯಾವಾಗ ಈ ತರಹದ ಚಿತ್ರಗಳು ಬರುತ್ತವೆ ಎಂದು ಕಾಯುತ್ತಲೇ ಇದ್ದರು. ಅದಕ್ಕೆ ಪೂರಕವಾಗಿ ಇತ್ತೀಚಿನ ದಿನಗಳಲ್ಲಿ ಭಾರತದಲ್ಲೂ ಸಾಕಷ್ಟು ಸಂಖ್ಯೆಯ ಸೂಪರ್ ಹೀರೋ ಚಿತ್ರಗಳು ಬರುತ್ತಿವೆ ಎನ್ನುವುದು ವಿಶೇಷ. ಭಾರತದ ಮೊದಲ ಸೂಪರ್ ಹೀರೋ ಯಾರು ಗೊತ್ತಾ? ಎನ್.ಟಿ. ರಾಮರಾವ್ ಎಂಬುದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಹೌದು, ಪೌರಾಣಿಕ ಪಾತ್ರಗಳಿಗೆ ಹೆಚ್ಚು ಜನಪ್ರಿಯವಾಗಿರುವ ಎನ್.ಟಿ. ರಾಮರಾವ್, ಭಾರತದ ಮೊದಲ ಸೂಪರ್ ಹೀರೋ ಸಹ ಹೌದು. 1978ರಲ್ಲಿ ಹಾಲಿವುಡ್‍ನಲ್ಲಿ ‘ಸೂಪರ್ ಮ್ಯಾನ್’ ಚಿತ್ರ ಬಿಡುಗಡೆಯಾದರೆ, ಅದಾಗಿ ಎರಡು ವರ್ಷಗಳಲ್ಲೇ ಅಂದರೆ, 1980ರಲ್ಲಿ ಭಾರತದಲ್ಲಿ ‘ಸೂಪರ್ ಮ್ಯಾನ್’ ಚಿತ್ರ ಬಂದಿತ್ತು ಮತ್ತು ಎನ್.ಟಿ. ರಾಮರಾವ್, ‘ಸೂಪರ್ ಮ್ಯಾನ್’ ಆಗಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಅವರಿಗೆ ನಾಯಕಿಯಾಗಿದ್ದವರು ಜಯಪ್ರದಾ.
ಆ ನಂತರ 1985ರಲ್ಲಿ ಹಿಂದಿಯಲ್ಲಿ ‘ಶಿವಾ ಕಾ ಇನ್ಸಾಫ್’ ಎಂಬ ಚಿತ್ರ ಬಂದಿತ್ತು. ಭಾರತದ ಮೊದಲ 3ಡಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಚಿತ್ರದಲ್ಲಿ ಜಾಕಿ ಶ್ರಾಫ್, ಸೂಪರ್ ಹೀರೋ ಶಿವ ಆಗಿ ಕಾಣಿಸಿಕೊಂಡಿದ್ದರು. 1987ರಲ್ಲಿ ಬಿಡುಗಡೆಯಾದ ‘ಸೂಪರ್ ಮ್ಯಾನ್’ ಚಿತ್ರದಲ್ಲಿ ಪುನೀತ್ ಇಸ್ಸಾರ್ ನಾಯಕರಾಗಿದ್ದರು. ಅಲ್ಲಿಯವರೆಗೂ ಸೂಪರ್ ಹೀರೋ ಎಂದರೆ, ಅತೀಂದ್ರಿಯ ಶಕ್ತಿ ಇರುವವರು, ಎಷ್ಟು ಎತ್ತರಕ್ಕೆ ಬೇಕಾದರೂ ಹಾರುವವರು, ಎಷ್ಟು ಜನರಿಗೆ ಬೇಕಾದರೂ ಹೊಡೆಯುವವರು ಎಂಬ ಕಲ್ಪನೆ ಇತ್ತು. ಅಷ್ಟೇ ಅಲ್ಲ, ಸೂಪರ್ ಹೀರೋಗಳೆಂದರೆ ಪ್ಯಾಂಟ್ ಮೇಲೆ ಚಡ್ಡಿ ತೊಡುವವರು ಮತ್ತು ಹೆಗಲಿಗೊಂದು ಪರದೆ ಹಾಕಿಕೊಳ್ಳುವವರು ಎಂದು ತಮಾಷೆ ಮಾಡಲಾಗುತ್ತಿತ್ತು. ಅದನ್ನು ಸುಳ್ಳು ಮಾಡಿದ್ದು, ‘ಮಿಸ್ಟರ್ ಇಂಡಿಯಾ’. ಇಲ್ಲಿ ‘ಮಿಸ್ಟರ್ ಇಂಡಿಯಾ’ಗೆ ಆ ತರಹದ ಅತೀಂದ್ರಿಯ ಶಕ್ತಿ ಇರಲಿಲ್ಲ. ಆದರೆ, ಅಗೋಚರವಾಗುವ ಶಕ್ತಿ ಇತ್ತು. ಅದನ್ನು ಬಳಸಿಕೊಂಡು ಮೊಗ್ಯಾಂಬೋ ವಿರುದ್ಧ ಮಿಸ್ಟರ್ ಇಂಡಿಯಾ ಹೋರಾಡುತ್ತಾನೆ.
ಇದರ ಮುಂದುವರೆದ ರೂಪವಾಗಿ ಅಮಿತಾಭ್ ಬಚ್ಚನ್ ಅಭಿನಯದ ‘ಶೇಹನ್‍ಶಾ’ ಬಂತು. ಇಲ್ಲೂ ನಾಯಕನಿಗೆ ಯಾವುದೇ ಬೇರೆ ಶಕ್ತಿಗಳಿರುವುದಿಲ್ಲ. ಆತ ಒಬ್ಬ ಪೊಲೀಸ್ ಆಫೀಸರ್ ಆಗಿದ್ದು, ತನಗಿರುವ ಶಕ್ತಿ ಮತ್ತು ಯುಕ್ತಿಗಳನ್ನು ಬಳಸಿಕೊಂಡೇ ರಾತ್ರಿ ಹೊತ್ತು ದುಷ್ಟರ ವಿರುದ್ಧ ಹೋರಾಡುತ್ತಾನೆ. ‘ಬಘೀರ’, ಅದೇ ‘ಶೆಹನ್‍ಷಾ’ನ ಇನ್ನೊಂದು ರೂಪ ಎಂದರೆ ತಪ್ಪಿಲ್ಲ. ‘ಶೆಹನ್‍ಷಾ’ ತರಹವೇ ಅಮಿತಾಭ್ ಬಚ್ಚನ್, ‘ತೂಫಾನ್’ ಮತ್ತು ‘ಅಜೂಬಾ’ ಚಿತ್ರಗಳಲ್ಲೂ ಸೂಪರ್ ಹೀರೋ ಆಗಿ ಕಾಣೀಸಿಕೊಂಡಿದ್ದರು.
ಇನ್ನು, 1988ರಲ್ಲಿ ರವಿಕಾಂತ್ ನಾಗಾಯಿಚ್ ಎಂಬ ಜನಪ್ರಿಯ ಛಾಯಾಗ್ರಾಹಕ ಮತ್ತು ನಿರ್ದೇಶಕ ಕನ್ನಡದಲ್ಲಿಇ ‘ಸೂಪರ್ ಬಾಯ್’ ಎಂಬ 3ಡಿ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಹೆಸರೇ ಹೇಳುವಂತೆ ಬಾಲಕನೊಬ್ಬ ತನ್ನ ಅತಿಮಮಾನುಷ ಶಕ್ತಿಯಿಂದ ದುಷ್ಟರ ವಿರುದ್ಧ ಹೋರಾಡುವ ಕಥೆ ಇದೆ. ಈ ಚಿತ್ರದಲ್ಲಿ ಶ್ರೀನಾಥ್, ಸುಜಾತಾ, ಚಾರುಹಾಸನ್, ಹರೀಶ್ ಮುಂತಾದವರು ನಟಿಸಿದ್ದರು. ಈ ಚಿತ್ರವು ಬೇರೆ ಭಾಷೆಗಳಲ್ಲೂ ಏಕಕಾಲದಲ್ಲಿ ನಿರ್ಮಾಣವಾಗಿತ್ತು.
ಆ ನಂತರ ಹಲವು ವರ್ಷಗಳ ಕಾಲ ಈ ತರಹದ ಸೂಪರ್ ಹೀರೋಗಳನ್ನು ನೋಡುವ ಭಾಗ್ಯ ಭಾರತೀಯರಿಗೆ ಸಿಕ್ಕಿರಲಿಲ್ಲ. ಅಂಥದ್ದೊಂದು ಅವಕಾಶ ಮಾಡಿಕೊಟ್ಟಿದ್ದು, ರಾಕೇಶ್ ರೋಶನ್. 2006ರಲ್ಲಿ ಅವರು ಹೃತಿಕ್ ರೋಶನ್ ಅಭಿನಯದಲ್ಲಿ ‘ಕ್ರಿಷ್’ ಎಂಬ ಸೂಪರ್ ಹೀರೋನನ್ನು ಹುಟ್ಟುಹಾಕಿದರು. ಈ ಚಿತ್ರ ಯಶಸ್ವಿಯಾಗುತ್ತಿದ್ದಂತೆಯೇ ಮುಂದಿನ ವರ್ಷಗಳಲ್ಲಿ ‘ಕ್ರಿಷ್ 3’ ಸಹ ಬಂತು. ಇದಾಗಿ ಎರಡೇ ವರ್ಷಗಳಲ್ಲಿ ಅಭಿಷೇಕ್ ಬಚ್ಚನ್ ಅಭಿನಯದ ‘ದ್ರೋಣ’ ಎಂಬ ಚಿತ್ರ ಬಂತು. ಶಾರೂಖ್ ಖಾನ್ ಅಭಿನಯದ ‘ರಾ ಒನ್’, ಟೈಗರ್ ಶ್ರಾಫ್ ಅಭಿನಯದ ‘ಎ ಫ್ಲೈಯಿಂಗ್ ಜಾಟ್’, ‘ಜೊಕ್ಕೊಮಾನ್’ ‘ಬ್ರಹ್ಮಾಸ್ತ್ರ’ ಹಿಂದಿಯಲ್ಲಿ ಬಂದ ಇತರೆ ಸೂಪರ್ ಹೀರೋ ಚಿತ್ರಗಳು. ಇನ್ನು, ಮಲಯಾಳಂನಲ್ಲಿ ‘ಮಿನ್ನಲ್ ಮುರಳಿ’, ತೆಲುಗಿನಲ್ಲಿ ‘ಹನುಮ್ಯಾನ್’ ಈ ಸಾಲಿನ ಇನ್ನಷ್ಟು ಚಿತ್ರಗಳು. ಇದು ಜನಪ್ರಿಯ ಚಿತ್ರಗಳ ಪಟ್ಟಿಯಷ್ಟೇ. ಹೆಚ್ಚು ಜನಪ್ರಿಯವಾಗದ ಸೂಪರ್ ಹೀರೋಗಳು ಇನ್ನಷ್ಟು ಸಂಖ್ಯೆಯಲ್ಲಿ ಇದ್ದಾರೆ.
ಇನ್ನು, ತಮಿಳಿನಲ್ಲಿ ಸೂಪರ್ ಹೀರೋ ಹೆಸರಿನಲ್ಲಿ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡುವ (‘ಬಘೀರ’ ಮಾದರಿಯ) ಕೆಲವು ಚಿತ್ರಗಳು ಬಂದಿವೆ. ವಿಕ್ರಮ್ ಅಭಿನಯದ ‘ಕಂದಸ್ವಾಮಿ’, ವಿಶಾಲ್ ಅಭಿನಯದ ‘ಮುಗಮೂಡಿ’, ಶಿವಕಾರ್ತಿಕೇಯನ್ ಅಭಿನಯದ ‘ಹೀರೋ’ ಮುಂತಾದ ಚಿತ್ರಗಳು ಬಂದಿವೆ. ಇವರ್ಯಾರೂ ಅತಿಮಾನುಷ ಶಕ್ತಿ ಇರುವ ಹೀರೋಗಳಲ್ಲ ಎಂಬುದು ವಿಶೇಷ.
ಒಂದು ಕಾಲಕ್ಕೆ ಭಾರತದಲ್ಲಿ ಇಂಥ ಪರಿಕಲ್ಪನೆ ಸಾಧ್ಯವಾ? ಎಂಬ ಪ್ರಶ್ನೆ ಇತ್ತು. ಆದರೆ, ಈಗ ಸೂಪರ್ ಹೀರೋಗಳು ಭಾರತದಲ್ಲಿ ಸರ್ವೇಸಾಮಾನ್ಯರಾಗಿದ್ದಾರೆ. ‘ಮಿಸ್ಟರ್ ಇಂಡಿಯಾ’ ಬಂದಾಗ ಭಾರತದ ಮೊದಲ ಹೀರೋ ಎಂದು ಹೇಳಲಾಯ್ತು. ಈಗ ಭಾಷೆಗೊಬ್ಬ ಸೂಪರ್ ಹೀರೋ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಾದರೆ ಅಚ್ಚರಿಯಿಲ್ಲ.
ಚೇತನ್ ನಾಡಿಗೇರ್ ಪರಿಚಯ
ಕಳೆದ ಎರಡು ದಶಕಗಳಿಂದ ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡುತ್ತಿರುವ ಚೇತನ್ ನಾಡಿಗೇರ್, ‘ಉದಯವಾಣಿ’, ‘ರೂಪತಾರಾ’, ‘ಕನ್ನಡ ಪ್ರಭ’, ‘ವಿಜಯವಾಣಿ’ ಮತ್ತು ‘ವಿಜಯ ಕರ್ನಾಟಕ’ ಪತ್ರಿಕೆಗಳಲ್ಲಿ ಸಿನಿಮಾ ವರದಿಗಾರರಾಗಿ, ವಿಮರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ರಮೇಶ್ ಅರವಿಂದ್ ಅವರ ‘ಖುಷಿಯಿಂದ ರಮೇಶ್’ ಪುಸ್ತಕದ ನಿರೂಪಣೆ ಮಾಡುವುದರ ಜೊತೆಗೆ, ಭಾರತೀಯ ಚಿತ್ರರಂಗದ ಹಲವು ಹೆಗ್ಗಳಿಕೆ ಮತ್ತು ದಾಖಲೆಗಳನ್ನು ಸಾರುವ ‘ಸ್ಕ್ರೀನ್ ಶಾಟ್ - ದಾಖಲಾಗದ ದಾಖಲೆಗಳು’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಸದ್ಯ ಸ್ವತಂತ್ರ ಪರ್ತಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ ಅವರು 'ಹಿಂದೂಸ್ಥಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ‘ಸಿನಿಸ್ಮೃತಿ’ ಅಂಕಣದ ಮೂಲಕ ಮನರಂಜನಾ ಕ್ಷೇತ್ರದ ಹಲವು ವಿಷಯಗಳನ್ನು ಹಂಚಿಕೊಳ್ಳಲಿದ್ದಾರೆ.
ವಿಭಾಗ