Rishab shetty: ದೈವ ನಂಬಿ ಕಾಂತಾರ ಮಾಡಿದ್ವಿ, ನಾನು ನಂಬಿರೋ ಅದೇ ದೈವ ನಮ್ಮನ್ನು ಇಲ್ಲಿಯವರೆಗೆ ಕರೆತಂದಿದೆ; ರಿಷಬ್‌ ಶೆಟ್ಟಿ-national film awards 2024 kantara rishab shetty reacted for the first time when the national award was announced mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Rishab Shetty: ದೈವ ನಂಬಿ ಕಾಂತಾರ ಮಾಡಿದ್ವಿ, ನಾನು ನಂಬಿರೋ ಅದೇ ದೈವ ನಮ್ಮನ್ನು ಇಲ್ಲಿಯವರೆಗೆ ಕರೆತಂದಿದೆ; ರಿಷಬ್‌ ಶೆಟ್ಟಿ

Rishab shetty: ದೈವ ನಂಬಿ ಕಾಂತಾರ ಮಾಡಿದ್ವಿ, ನಾನು ನಂಬಿರೋ ಅದೇ ದೈವ ನಮ್ಮನ್ನು ಇಲ್ಲಿಯವರೆಗೆ ಕರೆತಂದಿದೆ; ರಿಷಬ್‌ ಶೆಟ್ಟಿ

70th National Film Awards 2024: ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರ ಸಿನಿಮಾದ ನಟನೆಗೆ ರಿಷಬ್‌ ಶೆಟ್ಟಿಗೆ ಅತ್ಯುತ್ತಮ ನಟ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಈ ಬಗ್ಗೆ ಮೊದಲ ಸಲ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿನಿಮಾ ಈ ಮಟ್ಟಿಗೆ ತಲುಪಲಿದೆ ಎಂಬ ನಿರೀಕ್ಷೆಯೂ ಇರಲಿಲ್ಲ. ಇದೆಲ್ಲ ದೈವದ ಮಹಿಮೆ ಎಂದಿದ್ದಾರೆ.

ಕಾಂತಾರ ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾದ ಬಳಿಕ ಮೊದಲ ಸಲ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂತಾರ ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾದ ಬಳಿಕ ಮೊದಲ ಸಲ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.

National Film Awards 2024: ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾದ ಕಾಂತಾರ ಸಿನಿಮಾ ಎರಡೆರಡು ರಾಷ್ಟ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಅತ್ಯುತ್ತಮ ನಟ ವಿಭಾಗದಲ್ಲಿ ಕಾಂತಾರದ ಶಿವ ರಿಷಬ್‌ ಶೆಟ್ಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅದೇ ರೀತಿ ಅತ್ಯುತ್ತಮ ಮನರಂಜನಾ ಸಿನಿಮಾ ವಿಭಾಗದಲ್ಲಿಯೂ ಕಾಂತಾರ ಸಿನಿಮಾ ಪ್ರಶಸ್ತಿ ಪಡೆದಿದೆ. ಹೀಗೆ ಡಬಲ್‌ ಪ್ರಶಸ್ತಿ ಪಡೆದ ರಿಷಬ್‌ ಇದೀಗ ಸಂಭ್ರಮದಲ್ಲಿದ್ದಾರೆ. ಮಾಧ್ಯಮಗಳ ಜತೆಗೆ ಖುಷಿ ಹಂಚಿಕೊಂಡಿದ್ದಾರೆ.

ರಿಷಬ್‌ ಶೆಟ್ಟಿ ಮೊದಲ ಪ್ರತಿಕ್ರಿಯೆ

“ಬದಲಾವಣೆ ಜಗದ ನಿಯಮ. ಪ್ರಯತ್ನಗಳನ್ನು ನಾವು ಬಿಡಬಾರದು. ಸಿನಿಮಾದವರಿಗೆ ಒಂದು ಶುಕ್ರವಾರ ಸಾಕಷ್ಟು ಬದಲಾವಣೆಗಳನ್ನು ತರಬಹುದು. ಕಷ್ಟಪಟ್ಟು ಕೆಲಸ ಮಾಡಿದರೆ, ದೇವ್ರು ಎಲ್ಲೋ ಒಂದು ಕಡೆ ಜಾಗ ಮಾಡಿಕೊಡ್ತಾನೆ. ನಮಗೆಲ್ಲ ಮೊದಲು ಒಂದು ಗುರಿ ಇಟ್ಟುಕೊಳ್ಳುವಷ್ಟು ಪ್ರಭುದ್ಧತೆ ಇರಲಿಲ್ಲ. ಅದರ ಬಗ್ಗೆ ಯೋಚಿಸುವಷ್ಟೇ ನಮಗೆ ಆಗುತ್ತಿರಲಿಲ್ಲ. ದಾರಿ ಚೆನ್ನಾಗಿದ್ದಾಗ, ಆ ದಾರಿಯಲ್ಲಿ ಒಳ್ಳೆಯವರು ಸಿಗುತ್ತಾ ಹೋದಂತೆ, ಆ ದಾರಿಯೇ ನಮ್ಮ ಗುರಿಯನ್ನು ತಲುಪಿಸುತ್ತದೆ.”

ನಂಬಿರೋ ದೈವ ಇಲ್ಲಿಯವರೆಗೂ ಕರೆತಂದಿದೆ..

ಕಾಂತಾರ ಸಿನಿಮಾಕ್ಕೆ ಪ್ರಶಸ್ತಿ ಸಿಗುವುದು ಒತ್ತಟ್ಟಿಗಿರಲಿ, ಅದು ಹಿಟ್‌ ಆಗುತ್ತೆ ಅನ್ನೋ ನಿರೀಕ್ಷೆಯನ್ನೇ ಇಟ್ಟುಕೊಂಡಿರಲಿಲ್ಲವಂತೆ ರಿಷಬ್‌ ಶೆಟ್ಟಿ. ಈ ಬಗ್ಗೆ ಹೇಳಿರುವ ಅವರು “ನಾನು ಕಾಂತಾರ ಸಿನಿಮಾ ಮೇಲೆ ಈ ಮಟ್ಟದ ನಿರೀಕ್ಷೆ ಇಟ್ಟುಕೊಂಡಿಲಿಲ್ಲ. ಸೆಕೆಂಡ್‌ ಲಾಕ್‌ಡೌನ್‌ ಸಮಯದಲ್ಲಿ ಹೊಳೆದ ಕಥೆಯಿದು. ದೈವ ನಂಬಿ ಸಿನಿಮಾ ಮಾಡಿದ್ವಿ, ಅದೇ ನಾನು ನಂಬಿರೋ ದೈವ ಇಲ್ಲಿಯವರೆಗೆ ಕರೆತಂದಿದೆ. ಈಗ ಈ ಚಿತ್ರದ ಪ್ರೀಕ್ವೆಲ್‌ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ. ಈ ಪ್ರಶಸ್ತಿಯಿಂದ ಆ ಜವಾಬ್ದಾರಿಯ ತೂಕ ಮತ್ತಷ್ಟು ಹೆಚ್ಚಾಗಿದೆ” ಎಂದಿದ್ದಾರೆ ರಿಷಬ್.

ಕಾಂತಾರ ಮೇಲೆ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ..

"ರಾಜ್‌ ಶೆಟ್ಟಿ ಮತ್ತು ರಕ್ಷಿತ್‌ ಶೆಟ್ಟಿಗೂ ಇದರ ಶ್ರೇಯ ಸಲ್ಲಬೇಕು. ಈ ಸಿನಿಮಾ ಬಗ್ಗೆ ನಾನು ಸಾಕಷ್ಟು ಚರ್ಚೆ ಮಾಡಿದ್ದೆವು. ಸಿನಿಮಾ ರಿಲೀಸ್‌ಗೂ ಮುಂಚೆಯೂ ಯಾವುದೇ ನಿರೀಕ್ಷೆ ಇರಲಿಲ್ಲ. ಬಿಡುಗಡೆ ಬಳಿಕವೂ ಯಾವುದೇ ನಿರೀಕ್ಷೆ ಇರಲಿಲ್ಲ. ಅದರ ಪಾಡಿಗೆ ಅದೇ ದೊಡ್ಡ ಮಟ್ಟ ಪಡೆಯಿತು. ಇದು ಲೀಡ್‌ ಆಗಿ ನಟಿಸಿರುವ ನಾಲ್ಕನೇ ಸಿನಿಮಾ. ನಾನು ನಿರ್ದೇಶಿಸಿದ ನಾಲ್ಕನೇ ಸಿನಿಮಾ ಕೂಡ ಇದೇ. ಕಾಂತಾರ ಸಿನಿಮಾ ನಾನೇ ನಟಿಸಿ ನಿರ್ದೇಶನ ಮಾಡಿದ ಸಿನಿಮಾ. ನಟನಾಗಬೇಕು ಅನ್ನೋ ಆಸೆಯನ್ನೇ ನಾನು ಕೈ ಬಿಟ್ಟಿದ್ದೇ. 20 ವರ್ಷ ಆಯ್ತು ನಾನು ಇಂಡಸ್ಟ್ರಿಗೆ ಬಂದು. ಇಂಡಸ್ಟ್ರಿಗೆ ಬಂದ ಮೂರ್ನಾಲ್ಕು ವರ್ಷಕ್ಕೆ ನಮಗ್ಯಾರು ಚಾನ್ಸ್‌ ಕೊಡ್ತಾರೆ ಎಂದು ಕೈ ಬಿಟ್ಟಿದ್ದೆ. ಇದೀಗ ನೋಡಿದ್ರೆ, ನಟನೆಗೇ ಪ್ರಶಸ್ತಿ ಸಿಕ್ಕಿದೆ" ಎಂದಿದ್ದಾರೆ ರಿಷಬ್.‌