ಕನ್ನಡ ಸುದ್ದಿ  /  Entertainment  /  Prakash Raj Offered To Distribute Ambulances To Five Districts Of The State With The Help Of Yash Surya And Chiranjeevi

Prakash Raj: ‌ರಾಜ್ಯದ ಐದು ಜಿಲ್ಲೆಗಳಲ್ಲಿ ಅಪ್ಪು ಎಕ್ಸ್‌ಪ್ರೆಸ್‌ ಆಂಬುಲೆನ್ಸ್; ‘ಇದು ನನ್ನ ಮತ್ತು ಯಶ್‌ ರಾಜಕಾರಣ!’ ಎಂದ ಪ್ರಕಾಶ್‌ ರಾಜ್

ಬಹುಭಾಷಾ ನಟ ಪ್ರಕಾಶ್‌ ರಾಜ್‌ ತಮ್ಮ ಕನಸಿನ ಸಾಕಾರದ ಖುಷಿಯಲ್ಲಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆಗೆ ಅಪ್ಪು ಎಕ್ಸ್‌ಪ್ರೆಸ್‌ ಆಂಬುಲೆನ್ಸ್ ನೀಡಬೇಕೆಂಬ ಅವರ ಆಸೆಗೆ ಇದೀಗ ಮತ್ತಷ್ಟು ಬಲ ಬಂದಿದೆ.

‌ರಾಜ್ಯದ ಐದು ಜಿಲ್ಲೆಗಳಲ್ಲಿ ಅಪ್ಪು ಎಕ್ಸ್‌ಪ್ರೆಸ್‌ ಆಂಬುಲೆನ್ಸ್; ‘ಇದು ನನ್ನ ಮತ್ತು ಯಶ್‌ ರಾಜಕಾರಣ’ ಎಂದ ಪ್ರಕಾಶ್‌ ರಾಜ್
‌ರಾಜ್ಯದ ಐದು ಜಿಲ್ಲೆಗಳಲ್ಲಿ ಅಪ್ಪು ಎಕ್ಸ್‌ಪ್ರೆಸ್‌ ಆಂಬುಲೆನ್ಸ್; ‘ಇದು ನನ್ನ ಮತ್ತು ಯಶ್‌ ರಾಜಕಾರಣ’ ಎಂದ ಪ್ರಕಾಶ್‌ ರಾಜ್

Appu Express Ambulance: ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ದೈಹಿಕವಾಗಿ ನಮ್ಮ ನಡುವೆ ಇಲ್ಲ. ಆದರೆ, ಅವರು ಬಿಟ್ಟು ಹೋದ ಮಾನವೀಯ ಮೌಲ್ಯಗಳನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ನಟ ಪ್ರಕಾಶ್‌ ರಾಜ್‌, ಹೊಸ ಕಾರ್ಯಕ್ಕೆ ಕಳೆದ ವರ್ಷ ಮುನ್ನುಡಿ ಬರೆದಿದ್ದರು. ಅದುವೇ ಅಪ್ಪು ಎಕ್ಸ್‌ಪ್ರೆಸ್‌ ಆಂಬುಲೆನ್ಸ್.‌ ಕಳೆದ ವರ್ಷದ ಆಗಸ್ಟ್‌ನಲ್ಲಿ ಮೈಸೂರಿನಲ್ಲಿ ಮೊದಲ ಅಪ್ಪು ಎಕ್ಸ್‌ಪ್ರೆಸ್‌ ಆಂಬುಲೆನ್ಸ್ ವಾಹನ ರಸ್ತೆಗಿಳಿದಿತ್ತು. ಇದೀಗ ಒಂದಲ್ಲ ಎರಡಲ್ಲ ಐದು ಆಂಬುಲೆನ್ಸ್‌ಗಳು ರಾಜ್ಯದ ಐದು ಜಿಲ್ಲೆಗಳಲ್ಲಿ ಕಾರ್ಯಾರಂಭ ಮಾಡಲು ಸಜ್ಜಾಗಿವೆ.

ಈ ಕಾರ್ಯಕ್ಕೆ ನಟ ಯಶ್‌ ಸಹ ಕೈ ಜೋಡಿಸಿದ್ದರು. ಯಶೋಮಾರ್ಗದ ಮೂಲಕ ಆಂಬುಲೆನ್ಸ್ ನೀಡುವುದಾಗಿ ಹೇಳಿದ್ದರು. ಯಶ್‌ ರೀತಿ ತೆಲುಗಿನ ಮೆಗಾಸ್ಟಾರ್‌ ಚಿರಂಜೀವಿ ಮತ್ತು ತಮಿಳು ನಟ ಸೂರ್ಯ ಸಹ ಮುಂದೆ ಬಂದಿದ್ದರು. ಇದೀಗ ಒಟ್ಟು ಐದು ಅಪ್ಪು ಎಕ್ಸ್‌ಪ್ರೆಸ್‌ ಆಂಬುಲೆನ್ಸ್‌ಗಳು ರಸ್ತೆಗಳಿಯಲು ಸಜ್ಜಾಗಿವೆ. ಈ ವಿಚಾರವನ್ನು ಸ್ವತಃ ಪ್ರಕಾಶ್‌ ರಾಜ್‌ ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ. ಎಲ್ಲರಿಗೂ ಧನ್ಯವಾದ ಅರ್ಪಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನುಳಿದ ಜಿಲ್ಲೆಗಳಿಗೂ ಈ ಸೇವೆ ಸಿಗಲಿದೆ ಎಂದಿದ್ದಾರೆ.

ಪ್ರಕಾಶ್‌ ರಾಜ್‌ ವಿಡಿಯೋದಲ್ಲೇನಿದೆ.

ಸಜ್ಜನಿಕೆಯಿಂದ, ಧಾರಾಳ ಮನಸ್ಸಿನಿಂದ ಎಂದೆಂದಿಗೂ ಮರೆಯಲಾಗದ ನೆನಪಾಗಿರುವವರು ನಮ್ಮೆಲ್ಲರ ಕಣ್ಮಣಿ ಡಾ. ಪುನೀತ್‌ ರಾಜ್‌ಕುಮಾರ್‌. ಅವರು ಯಾವಾಗಲೂ ನಮ್ಮ ಜೊತೆಗೆ ಇರಬೇಕೆಂದರೆ, ಅವರು ಮಾಡುತ್ತಿದ್ದ ಒಳ್ಳೆಯ ಕೆಲಸಗಳನ್ನು ಮುಂದುವರಿಸುವುದರಿಂದ ಮಾತ್ರ ಸಾಧ್ಯ. ಆ ಕಾರಣಕ್ಕಾಗಿ ಆ ಕನಸಿನಂತೆ ಶುರುವಾಗಿದ್ದು, ಆ ಆಶಯದಂತೆ ಶುರುವಾಗಿದ್ದು ಅಪ್ಪು ಎಕ್ಸ್‌ಪ್ರೆಸ್‌ ಆಂಬುಲೆನ್ಸ್. ಕರ್ನಾಟಕದ ಎಲ್ಲ ಜಿಲ್ಲೆಗಳಿಗೂ ಒಂದೊಂದು ಇರಬೇಕೆಂಬುದು, ನನ್ನ ಮತ್ತು ನನ್ನ ಪ್ರಕಾಶ್‌ ರಾಜ್‌ ಫೌಂಡೇಶನ್‌ನ ಕನಸು.

ಮೈಸೂರಿನಲ್ಲಿ ಮೊದಲನೇ ಆಂಬುಲೆನ್ಸ್‌ ಶುರುವಾಯಿತು. ಈಗ ಐದು ಆಂಬುಲೆನ್ಸ್‌ಗಳು ನಮ್ಮ ಮುಂದಿವೆ. ಬೀದರ್‌, ಕಲಬುರ್ಗಿ, ಉಡುಪಿ, ಕೊಳ್ಳೆಗಾಲ ಮತ್ತು ಕೊಪ್ಪಳ ಜಿಲ್ಲೆ. ಆದರೆ ಈ ಸಲ ಈ ಕನಸು ನನಸಾಗಿಸಲು ನಾನೊಬ್ಬನೇ ಇಲ್ಲ. ನನಗೆ ಜತೆಯಾಗಿ ನಿಂತಿರುವವರು, ಮೆಗಾಸ್ಟಾರ್‌ ಚಿರಂಜೀವಿ, ತಮಿಳು ನಟ ಸೂರ್ಯ, ದೊಡ್ಡ ಮಟ್ಟದ ಬೆಂಬಲವಾಗಿ ನಿಂತಿರುವವರು ನಮ್ಮ ಪ್ರೀತಿಯ ಯಶ್‌. ಮತ್ತವರ ಸ್ನೇಹಿತ ವೆಂಕಟ್‌ ಅವರು.

ಪ್ರಕಾಶ್‌ ಸರ್‌ ಇದು ನಿಮ್ಮೊಬ್ಬರ ಕನಸಲ್ಲ. ಇನ್ಮೇಲೆ ಆ ಭಾರ ನಂದೂ ಕೂಡ ಎಂದು ದೊಡ್ಡ ಧಾರಾಳತನವನ್ನು ಮೆರೆದವರು ಯಶ್.‌ ಮತ್ತವರ ಯಶೋಮಾರ್ಗ. ದೊಡ್ಡ ಸಮಾರಂಭ ಮಾಡಬಹುದಿತ್ತು. ಆದರೆ ಆ ಕಾರ್ಯಕ್ರಮಕ್ಕೆ ಆಗೋ ಖರ್ಚನ್ನ ಉಳಿಸಿದರೆ ಇನ್ನೊಂದು ಆಂಬುಲೆನ್ಸ್‌ ಆಗುತ್ತಲ್ಲ ಅಂತ ಎಂಬುದು ನನ್ನ ಮತ್ತು ಯಶ್‌ ಅವರ ಅನಿಸಿಕೆ. ಹಾಗಾಗಿ ಈ ಸುದ್ದಿಯನ್ನು ವಿಡಿಯೋ ಮೂಲಕ ಹಂಚಿಕೊಳ್ಳುತ್ತಿದ್ದೇವೆ.

ಇದರ ಹಿಂದೆ ರಾಜಕಾರಣ ಇದೆಯಾ ಎಂದು ಕುಹಕವಾಗಿ ಮಾತನಾಡುವವರು ಇರ್ತಾರೆ. ಇರಲಿ. ಇದು ನನ್ನ ಮತ್ತು ಯಶ್‌ನ ರಾಜಕಾರಣ. ಪ್ರೀತಿಯನ್ನು ಹಂಚುವ, ಮಾನವೀಯತೆಯನ್ನು ಮೆರೆಯುವ ಪುನೀತ್‌ ರಾಜ್‌ಕುಮಾರ್‌ ಅವರನ್ನು ಸಂಭ್ರಮಿಸುವ ರಾಜಕಾರಣ. ಎಲ್ಲರಿಗೂ ಒಳ್ಳೆಯದಾಗಲಿ" ಎಂದು ಪ್ರಕಾಶ್‌ ರಾಜ್‌ ಸುದೀರ್ಘ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.

IPL_Entry_Point