ಕಳೆದುಕೊಂಡಲ್ಲೇ ಹುಡುಕಬೇಕು! ಡೀಪ್ ಫೇಕ್‌ ವಿರುದ್ಧ ಹೋರಾಟಕ್ಕೆ ರಾಯಭಾರಿಯಾದ ನಟಿ ರಶ್ಮಿಕಾ ಮಂದಣ್ಣ
ಕನ್ನಡ ಸುದ್ದಿ  /  ಮನರಂಜನೆ  /  ಕಳೆದುಕೊಂಡಲ್ಲೇ ಹುಡುಕಬೇಕು! ಡೀಪ್ ಫೇಕ್‌ ವಿರುದ್ಧ ಹೋರಾಟಕ್ಕೆ ರಾಯಭಾರಿಯಾದ ನಟಿ ರಶ್ಮಿಕಾ ಮಂದಣ್ಣ

ಕಳೆದುಕೊಂಡಲ್ಲೇ ಹುಡುಕಬೇಕು! ಡೀಪ್ ಫೇಕ್‌ ವಿರುದ್ಧ ಹೋರಾಟಕ್ಕೆ ರಾಯಭಾರಿಯಾದ ನಟಿ ರಶ್ಮಿಕಾ ಮಂದಣ್ಣ

Rashmika Mandanna: ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್ ದಾಳಕ್ಕೆ ಬಲಿಯಾಗಿದ್ದರು. ಆದರೆ ಈಗ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು ನಟಿ ರಶ್ಮಿಕಾ ಮಂದಣ್ಣ ಅವರನ್ನು 'ಸೈಬರ್ ಸುರಕ್ಷತೆಯನ್ನು ಉತ್ತೇಜಿಸುವ ರಾಷ್ಟ್ರೀಯ ರಾಯಭಾರಿ' ಎಂದು ಹೆಸರಿಸಿದೆ.

ಡೀಪ್ ಫೇಕ್‌ ವಿರುದ್ಧ ಹೋರಾಟಕ್ಕೆ ರಾಯಭಾರಿಯಾದ ನಟಿ ರಶ್ಮಿಕಾ ಮಂದಣ್ಣ
ಡೀಪ್ ಫೇಕ್‌ ವಿರುದ್ಧ ಹೋರಾಟಕ್ಕೆ ರಾಯಭಾರಿಯಾದ ನಟಿ ರಶ್ಮಿಕಾ ಮಂದಣ್ಣ

ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್ ದಾಳಕ್ಕೆ ಬಲಿಯಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಇದೀಗ ಮತ್ತೆ ಡೀಪ್‌ ಫೇಕ್ ವಿಚಾರದಲ್ಲಿ ನಟಿ ರಶ್ಮಿಕಾ ಮಂದಣ್ಣ ಸುದ್ದಿಯಲ್ಲಿದ್ದಾರೆ. ಗೃಹ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು ನಟಿ ರಶ್ಮಿಕಾ ಮಂದಣ್ಣ ಅವರನ್ನು 'ಸೈಬರ್ ಸುರಕ್ಷತೆಯನ್ನು ಉತ್ತೇಜಿಸುವ ರಾಷ್ಟ್ರೀಯ ರಾಯಭಾರಿ' ಎಂದು ಹೆಸರಿಸಿದೆ. ಮಟ್ಟಹಾಕುವ ಕೆಲಸಕ್ಕೆಂದು ರಚನೆಯಾಗಿರುವ ಈ ಸಮನ್ವಯ ಕೇಂದ್ರದ ರಾಯಭಾರಿಯಾಗಿ ರಶ್ಮಿಕಾ ಮಂದಣ್ಣ ಜವಾಬ್ದಾರಿ ನಿಭಾಯಿಸಲಿದ್ದಾರೆ. ಈ ಪಾತ್ರದಲ್ಲಿ, ಸೈಬರ್ ಬೆದರಿಕೆಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಟಿ ರಶ್ಮಿಕಾ ನಡೆಸಲಿದ್ದಾರೆ. ಜೊತೆಗೆ ಆನ್‌ಲೈನ್ ವಂಚನೆ, ಡೀಪ್‌ಫೇಕ್ ವೀಡಿಯೊಗಳು, ಸೈಬರ್‌ ಜಗತ್ತಿನಲ್ಲಿ ನಡೆಯುವ ಕಿರುಕುಳ ಮತ್ತು AI-ಚಾಲಿತ ಕೃತಕ ಬುದ್ದಿಮತ್ತೆ ಬಳಸಿ ದುರುದ್ದೇಶಪೂರಿತ ವಿಷಯ ಪ್ರಚಾರದ ವಿರುದ್ಧ ಜಾಗೃತಿ ಮೂಡಿಸಲು ರಶ್ಮಿಕಾ ಮಂದಣ್ಣ ಕೈಜೋಡಿಸಲಿದ್ದಾರೆ.

ಹೊಸ ಜವಾಬ್ದಾರಿ ಹೊತ್ತ ರಶ್ಮಿಕಾ ಮಂದಣ್ಣ

ಸೈಬರ್ ಜಗತ್ತಿನಲ್ಲಿ ಜಾಗೃತಿ ಮೂಡಿಸಲಿರುವ ತಮ್ಮ ಹೊಸ ಜವಾಬ್ದಾರಿಯ ಕುರಿತು ಪ್ರತಿಕ್ರಿಯೆ ನೀಡಿರುವ ರಶ್ಮಿಕಾ ಮಂದಣ್ಣ, "ಸೈಬರ್ ಅಪರಾಧವು ಜಾಗತಿಕ ಮಟ್ಟದಲ್ಲಿ ವ್ಯಕ್ತಿಗಳು, ವ್ಯವಹಾರಗಳು ಮತ್ತು ಸಮುದಾಯಗಳ ಮೇಲೆ ಗಂಭೀರ ಪರಿಣಾಮ ಬೀರುವ ವ್ಯಾಪಕ ಅಪಾಯವಾಗಿದೆ. ಅದನ್ನು ಸ್ವತಃ ಅನುಭವಿಸಿದ ನಂತರ, ಅರ್ಥಪೂರ್ಣ ಬದಲಾವಣೆಯ ಬಗ್ಗೆ ಪ್ರೇರೇಪಣೆ ನೀಡುವ ಅರಿವು ಮೂಡಿಸಲು ಮತ್ತು ಸೈಬರ್ ಸುರಕ್ಷತೆಯ ಸಂದೇಶವನ್ನು ಹರಡಲು ನಾನು ಬದ್ಧನಾಗಿದ್ದೇನೆ. ಈ ಬೆದರಿಕೆಗಳ ವಿರುದ್ಧ ಹೋರಾಡಲು ಮತ್ತು ನಮ್ಮ ಡಿಜಿಟಲ್ ಜಗತ್ತನ್ನು ರಕ್ಷಿಸಲು ನಾವು ಈ ಆಂದೋಲನದ ಜೊತೆ ಒಗ್ಗೂಡುವುದು ಅತ್ಯಗತ್ಯ" ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದ ಡೀಪ್‌ಫೇಕ್ ವಿಡಿಯೋಗಳಿಗೆ ಬಲಿಯಾದವರಲ್ಲಿ ರಶ್ಮಿಕಾ ಮಂದಣ್ಣ ಪ್ರಮುಖರಾಗಿದ್ದರು. ರಶ್ಮಿಕಾ ಮಂದಣ್ಣ ಕುರಿತಾದ ಡೀಪ್ ಫೇಕ್ ವೀಡಿಯೊವನ್ನು ರಚಿಸಲು ಜನರೇಟಿವ್ ಕೃತಕ ಬುದ್ಧಿಮತ್ತೆ (AI) ಉಪಕರಣಗಳನ್ನು ಬಳಕೆ ಮಾಡಲಾಗಿತ್ತು.

ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಡೀಪ್ ಫೇಕ್ ಬಳಸಿ ಡಿಜಿಟಲ್ ಜಗತ್ತಿನಲ್ಲಿ ನಕಾರಾತ್ಮಕ ಅಂಶಗಳನ್ನು ಪ್ರಚುರಪಡಿಸುತ್ತಿರುವ ಕುರಿತು ದೇಶದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಡೀಪ್ ಫೇಕ್ ವಿಡಿಯೋ ಬಿಡುಗಡೆಗೊಂಡ ಎರಡು ತಿಂಗಳ ನಂತರ ದೆಹಲಿ ಪೊಲೀಸರು ಪ್ರಕರಣದ ಹಿಂದಿನ ಆರೋಪಿಯನ್ನು ಬಂಧಿಸಿದ್ದರು. ನಂತರ ನಡೆದ ಬೆಳವಣಿಗೆಗಳಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಂ ಪ್ರಕರಣಗಳನ್ನು ಹತ್ತಿಕ್ಕಲು ಶಂಕಿತರ ಕೇಂದ್ರೀಯ ನೋಂದಣಿಯನ್ನು ರಚಿಸುವ ಕುರಿತು ಕೇಂದ್ರ ಸರ್ಕಾರವು ಗಂಭೀರ ಹೆಜ್ಜೆಯಿಟ್ಟಿದೆ.

ಸೈಬರ್ ಅಪರಾಧವನ್ನು ಎದುರಿಸಲು ಗೃಹ ಸಚಿವಾಲಯದ ಅಡಿಯಲ್ಲಿ ಸ್ಥಾಪಿಸಲಾದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು 600 ಕ್ಕೂ ಹೆಚ್ಚು ಸಲಹೆಗಳನ್ನು ನೀಡಿದೆ. ಜೊತೆಗೆ ಹಲವಾರು ವೆಬ್‌ಸೈಟ್‌ಗಳು, ಸಾಮಾಜಿಕ ಮಾಧ್ಯಮ ಪುಟಗಳು, ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಸೈಬರ್ ಅಪರಾಧಿಗಳು ನಿರ್ವಹಿಸುವ ಖಾತೆಗಳನ್ನು ನಿರ್ಬಂಧಿಸಿದೆ ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು. ಸದ್ಯ ಡೀಪ್‌ ಫೇಕ್‌ ಕುರಿತು ಶಿಕ್ಷೆ ಇನ್ನೂ ಯಾವುದೇ ಭಾರತೀಯ ಕಾನೂನುಗಳ ಅಡಿಯಲ್ಲಿ ಒಳಗೊಂಡಿಲ್ಲ. ಆದರೆ ಡೀಪ್ ಫೇಕ್ ವಿರುದ್ಧ ಹೋರಾಡಲು ಮಾಹಿತಿ ತಂತ್ರಜ್ಞಾನ ಕಾಯಿದೆಯು ವೈಯಕ್ತಿಕ ಗೌಪ್ಯತೆಗೆ ಸಂಬಂಧಿಸಿ ಕೆಲವು ರಕ್ಷಣೆಗಳನ್ನು ಒದಗಿಸುತ್ತದೆ. ಡಿಜಿಟಲ್ ಜಗತ್ತನ್ನೇ ಆಧಾರವಾಗಿಟ್ಟುಕೊಂಡಿರುವ ಕಂಪನಿಗಳು ಡೀಪ್ ಫೇಕ್ ವಿಷಯದ ಹರಡುವಿಕೆಯನ್ನು ತಡೆಯುವ ಜವಾಬ್ದಾರಿಯನ್ನು ಹೊಂದಿವೆ. ಜೊತೆಗೆ ಯಾವುದೇ ವ್ಯಕ್ತಿಯ ಸ್ಪಷ್ಟ ಒಪ್ಪಿಗೆಯಿಲ್ಲದೆ ವೀಡಿಯೊವನ್ನು ಮಾಡಿದರೆ ಭಾರತೀಯ ದಂಡ ಸಂಹಿತೆಯ (IPC) ವಿವಿಧ ನಿಬಂಧನೆಗಳ ಅಡಿಯಲ್ಲಿ ನ್ಯಾಯಾಲಯಗಳನ್ನು ಮತ್ತು ದೂರುಗಳನ್ನು ಸಲ್ಲಿಸಬಹುದಾಗಿದೆ.

Whats_app_banner