Yash playing with son: ಮಗನಿಗೆ ತೋಳ್ಬಲ ತೋರಿಸಿದ ಯಶ್!; ನಾನೇನ್ ಕಮ್ಮೀನಾ ಎಂದ ಪುತ್ರ ಯಥರ್ವ ಸುಮ್ಮನಿರ್ತಾನಾ? VIDEO ನೋಡಿ
ಮನೆಯೊಳಗೆ ನಟ ಯಶ್ ಹೇಗೆ? ಅದರಲ್ಲೂ ಇಬ್ಬರು ಮಕ್ಕಳ ಜತೆ ಯಶ್ ಹೇಗಿರುತ್ತಾರೆ? ಅವರೊಂದಿಗೆ ಹೇಗೆ ಸಮಯ ಕಳೆಯುತ್ತಾರೆ? ಇಲ್ಲಿದೆ ನೋಡಿ ವಿಡಿಯೋ..
Yash playing with son: ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್ ಸದ್ಯ ತೆರೆಮರೆಯಲ್ಲಿಯೇ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ತಾವೇನು ಮಾಡುತ್ತಿದ್ದೇನೆ ಎಂಬ ಗುಟ್ಟು ಬಿಟ್ಟುಕೊಡದ ಯಶ್, ಸದ್ಯ ಬೆಂಗಳೂರಿನಲ್ಲಿಯೇ ಇದ್ದಾರೆ. ಜಿಮ್, ವರ್ಕೌಟ್, ಫ್ಯಾಮಿಲಿ, ಮಕ್ಕಳೊಡನೆ ಕ್ವಾಲಿಟಿ ಟೈಮ್ ಕಳೆಯುತ್ತಿದ್ದಾರೆ. ಈ ನಡುವೆ ಮನೆ ಬಳಿ ತಮ್ಮನ್ನು ಹುಡುಕಿಕೊಂಡು ಬರುತ್ತಿರುವ ಸಾವಿರಾರು ಅಭಿಮಾನಿಗಳಿಗೆ ತಾಳ್ಮೆಯಿಂದಲೇ ಫೋಟೋಕ್ಕೆ ಪೋಸ್ ನೀಡುತ್ತಿದ್ದಾರೆ.
ಇದೀಗ ಮನೆಯೊಳಗೆ ಯಶ್ ಹೇಗೆ? ಅದರಲ್ಲೂ ಇಬ್ಬರು ಮಕ್ಕಳ ಜತೆ ಯಶ್ ಹೇಗಿರುತ್ತಾರೆ? ಅವರೊಂದಿಗೆ ಹೇಗೆ ಸಮಯ ಕಳೆಯುತ್ತಾರೆ? ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಒಂದಷ್ಟು ವಿಡಿಯೋಗಳನ್ನು ಯಶ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಇದೀಗ ಪುತ್ರ ಯಥರ್ವನ ಜತೆಗೆ ನಡೆಸಿದ ಕೀಟಲೆಯ ವಿಡಿಯೋವನ್ನು ನಟ ಯಶ್ ಹಂಚಿಕೊಂಡಿದ್ದಾರೆ. ಮಗನೊಂದಿಗೆ ತಮ್ಮ ತೋಳ್ಬಲ ತೋರಿಸಿದ್ದಾರೆ.
ಹೀಗಿತ್ತು ಅಪ್ಪ- ಮಗನ ಸಂಭಾಷಣೆ..
"ನೋಡು ನೋಡು.. ಮಸಲ್ ನೋಡು.. ಎಂದು ಯಶ್ ತಮ್ಮ ತೋಳನ್ನು ಮಗನಿಗೆ ತೋರಿಸಿದ್ದಾರೆ. ಅದನ್ನು ಒತ್ತಿದ ಯಥರ್ವ, ಅಯ್ಯೋ ಸಾಫ್ಟ್ ಆಗಿದೆ ಎಂದಿದ್ದಾನೆ. ಇದಕ್ಕೆ ಯಶ್.. ಏನು ಸಾಫ್ಟಾ? ಎಂದಿದ್ದಾರೆ. ಬಳಿಕ ನಿನ್ನ ಶಕ್ತಿ ತೋರಿಸು ಮಗನೆ ಎಂದು ಯಥರ್ವನಿಗೆ ಹೇಳಿದ್ದಾರೆ. ಅದಕ್ಕೆ ತನ್ನ ತೋಳ್ಬಲ ತೋರಿಸಿದ ಯಥರ್ವ, ನೋಡು ನಂದು ಹಾರ್ಡ್ ಎಂದಿದ್ದಾನೆ. ಅಯ್ಯೋ ಸಖತ್ ಹಾರ್ಡ್ ಇದೆ.. ನೀನೇ ಸ್ಟ್ರಾಂಗ್ ಮಗನೇ.." ಹೀಗೆ ಅಪ್ಪ- ಮಗನ ಸಂಭಾಷಣೆ ನಡೆದಿದೆ. ಈ ವಿಡಿಯೋವನ್ನು ನಟ ಯಶ್ ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದ್ದಾರೆ. ಲಕ್ಷಾಂತರ ಮಂದಿ ಈ ವಿಡಿಯೋ ಮೆಚ್ಚಿದ್ದಾರೆ. ಅಪ್ಪ ಮಗನ ಕೀಟಲೆ ಬಗ್ಗೆ ಬಗೆಬಗೆ ಕಮೆಂಟ್ ಹಾಕುತ್ತಿದ್ದಾರೆ.
ಯಶ್ ಮನೆ ಬಳಿ ಅಭಿಮಾನಿಗಳ ಸರತಿ ಸಾಲು...
ಇನ್ನೇನು ಹತ್ರತ್ರ ಒಂದು ವರ್ಷವಾಗುತ್ತ ಬಂತು, ಯಶ್ ಈ ವರೆಗೂ ಒಂದೇ ಒಂದು ಸಿನಿಮಾ ಘೋಷಣೆ ಮಾಡಿಲ್ಲ. ಇತ್ತ ಅಭಿಮಾನಿಗಳು ಮಾತ್ರ ಕಾದಿದ್ದು ಬಂತೇ ವಿನಃ ಏನೂ ದಕ್ಕಿಲ್ಲ. ಸಿನಿಮಾ ಘೋಷಿಸದಿದ್ದರೆ ಏನಂತೆ, ಅವರನ್ನಾದರೂ ನೋಡಿ ಬರೋಣ ಎಂದು ನೇರವಾಗಿ ಅವರ ಮನೆಗೆ ಹೋಗುತ್ತಿದ್ದಾರೆ. ಅದೂ ಒಬ್ಬಿಬ್ಬರಲ್ಲ; ಸಾವಿರಾರು ಅಭಿಮಾನಿಗಳು! ಏರ್‌ಪೋರ್ಟ್ ರಸ್ತೆಯಲ್ಲಿನ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನ ಪ್ಲಾಟ್‌ನಲ್ಲಿ ನಟ ಯಶ್ ಕುಟುಂಬ ವಾಸವಿದೆ. ಯಶ್ ಅಲ್ಲಿರುವುದು ತಿಳಿಯುತ್ತಿದ್ದಂತೆ, ನಿತ್ಯ ಅವರನ್ನು ನೋಡಲು ಸಾವಿರಾರು ಸಂಖ್ಯೆಯ ಅಭಿಮಾನಿಗಳು ಅಪಾರ್ಟ್‌ಮೆಂಟ್ ಬಳಿ ಆಗಮಿಸುತ್ತಿದ್ದಾರೆ.
ಹಾಗಂತ ನಟ ಯಶ್ ಹಾಗೆ ಕಾದು ಕುಳಿತ ಅಭಿಮಾನಿಗಳಿಗೆ ನಿರಾಸೆ ಮಾಡಿಲ್ಲ. ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ತಾಳ್ಮೆಯಿಂದಲೇ ಸಾವಿರಾರು ಅಭಿಮಾನಿಗಳಿಗೆ ಫೋಟೋ ನೀಡಿದ್ದರು. ಇದೀಗ ಅದರಂತೆಯೇ ಮನೆ ಬಳಿ ಬಂದ ಫ್ಯಾನ್ಸ್ ಜತೆ ಫೋಟೋ ನೀಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಯಶ್ ಅವರನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದರು. ಹಾಗೆ ಆಗಮಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೈಯಲ್ಲಿ ಕಟೌಟ್ ಹಿಡಿದು, ಜೈಕಾರ ಕೂಗುತ್ತ ಸರತಿ ಸಾಲಿನಲ್ಲಿ ನಿಂತ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.