New Year 2025: ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಹೇಗಿರುತ್ತೆ? ನಗರದ ಈ ಪ್ರದೇಶಗಳಲ್ಲಿ ನಡೆಯುತ್ತೆ ಅದ್ಧೂರಿ ಸಂಭ್ರಮಾಚರಣೆ
ಕನ್ನಡ ಸುದ್ದಿ  /  ಜೀವನಶೈಲಿ  /  New Year 2025: ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಹೇಗಿರುತ್ತೆ? ನಗರದ ಈ ಪ್ರದೇಶಗಳಲ್ಲಿ ನಡೆಯುತ್ತೆ ಅದ್ಧೂರಿ ಸಂಭ್ರಮಾಚರಣೆ

New Year 2025: ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಹೇಗಿರುತ್ತೆ? ನಗರದ ಈ ಪ್ರದೇಶಗಳಲ್ಲಿ ನಡೆಯುತ್ತೆ ಅದ್ಧೂರಿ ಸಂಭ್ರಮಾಚರಣೆ

ಹೊಸ ವರ್ಷಾಚರಣೆ ಎಂದರೆ ಮೊದಲಿಗೆ ನೆನಪಾಗುವುದೇ ಬೆಂಗಳೂರಿನ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಇಂದಿರಾ ನಗರ ಹಾಗೂ ಕೋರಮಂಗಲದಂತಹ ಜನದಟ್ಟಣೆಯ ಪ್ರದೇಶಗಳು. ನಗರದಲ್ಲಿ ಹೊಸ ವರ್ಷಾಚರಣೆಗೆ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳ ಸಿದ್ದತೆಗಳು ಹೇಗಿರುತ್ತದೆ ಎಂಬುದನ್ನು ತಿಳಿಯಿರಿ.

ಬೆಂಗಳೂರಿನ ಎಂಜಿ ರಸ್ತೆಯಲ್ಲಿ 2024ರ ಹೊಸ ವರ್ಷಾಚರಣೆಗೆ ನೆರೆದಿದ್ದ ಯುವ ಸಮೂಹ
ಬೆಂಗಳೂರಿನ ಎಂಜಿ ರಸ್ತೆಯಲ್ಲಿ 2024ರ ಹೊಸ ವರ್ಷಾಚರಣೆಗೆ ನೆರೆದಿದ್ದ ಯುವ ಸಮೂಹ

2024 ರ ಹಳೆಯ ವರ್ಷಕ್ಕೆ ಗುಡ್ ಬೈ ಹೇಳಿ 2025ರ ಹೊಸ ವರ್ಷವನ್ನು ಸ್ವಾಗತಿಸಲು ಕೆಲವೇ ಕೆಲವು ದಿನಗಳು ಬಾಕಿ ಇವೆ. ಹೊಸ ವರ್ಷವನ್ನು ಬರಮಾಡಿಕೊಳ್ಳಲು ಇಡೀ ಜಗತ್ತು ಕಾತುರದಿಂದ ಕಾಯುತ್ತಿದೆ. ಭಾರತದ ಪ್ರಮುಖ ನಗರಗಳಲ್ಲಿ ಅದ್ಧೂರಿಯಾಗಿ ಹೊಸ ವರ್ಷವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ನ್ಯೂ ಇಯರ್ ಎನ್ನುವಷ್ಟುವರಲ್ಲಿ ಮೊದಲಿಗೆ ನೆನಪಾಗುವುದೇ ಸಿಲಿಕಾನ್ ಸಿಟಿ ಬೆಂಗಳೂರು. ನಗರದಲ್ಲಿ ಹೊಸ ವರ್ಷಕ್ಕೆ ಸಿದ್ಧತೆಗಳು ಜೋರಾಗಿಯೇ ನಡೆಯುತ್ತಿವೆ. ಪ್ರಮುಖ ಸ್ಟ್ರೀಟ್ ಗಳು, ಹೋಟೆಲ್ ಗಳು, ರೆಸ್ಟೋರೆಂಟ್ ಗಳು, ಕ್ಲಬ್ ಹಾಗೂ ಪಬ್ ಗಳಲ್ಲಿ ಹೊಸ ವರ್ಷಕ್ಕೆ ಗ್ರಾಹಕರನ್ನು ಸಳೆಯುವ ಪ್ರಯತ್ನಗಳು ನಡೆಯುತ್ತವೆ. ಕೆಲವೊಂದು ಕಡೆ ತಿಂಗಳ ಮೊದಲೇ ಬುಕಿಂಗ್ ಕೂಡ ಮುಗಿದಿರುತ್ತದೆ.

ನಗರದ ಆಯ್ದ ಪ್ರದೇಶಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಲಕ್ಷಾಂತರ ಮಂದಿ ಯುವಜನರು ಸೇರುತ್ತಾರೆ. ವಿಶೇಷವಾಗಿ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಇಂದಿರಾ ನಗರ, ಕೋರಮಂಗಲ ಹಾಗೂ ಇತರೆ ಪ್ರಮುಖ ಏರಿಯಾಗಳಲ್ಲಿ ಜನರು ಕಿಕ್ಕಿರಿದು ಸೇರುತ್ತಾರೆ. ಬೈಬೈ 2024, ಹ್ಯಾಪಿ ನ್ಯೂ ಇಯರ್, ವೆಲ್ ಕಂ 2025 ಎಂಬ ಹರ್ಷೋದ್ಗಾರಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಇದೇ ಖುಷಿಯಲ್ಲಿ ಕುಣಿದು ಕುಪ್ಪಳಿಸುತ್ತಾರೆ. ಒಬ್ಬರಿಗೊಬ್ಬರು ಹಸ್ತಲಾಘವ ನೀಡಿ ಸಂಭ್ರಮಿಸುತ್ತಾರೆ.

ಬ್ರಿಗೇಡ್ ಮತ್ತು ಎಂಜಿ ರೋಡ್ ಹೇಗಿರುತ್ತೆ

ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಬ್ರಿಗೇಡ್ ಮತ್ತು ಎಂಜಿ ರೋಡ್ ನಲ್ಲಿ ಲಕ್ಷಾಂತರ ಮಂದಿ ಸೇರುತ್ತಾರೆ. ಡಿಸೆಂಬರ್ 31 ರ ರಾತ್ರಿ 8 ಗಂಟೆಯಿಂದ ಮಧ್ಯರಾತ್ರಿಯವರಿಗೆ ಯುವ ಜನತೆ ಜಮಾವಣೆಗೊಂಡು ಶಿಳ್ಳೆ, ಚಪ್ಪಾಳೆಗಳೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ. ಈಗಾಗಲೇ ಬಿಗ್ರೇಡ್ ರಸ್ತೆಗಳಲ್ಲಿ ಬಣ್ಣ ಬಣ್ಣದ ದೀಪಾಲಂಕಾರವನ್ನು ಮಾಡಲಾಗಿದ್ದು, ಕಣ್ಮನ ಸೆಳೆಯುತ್ತಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟೆಚರ ವಹಿಸುತ್ತಾರೆ. ಜನರ ಅನುಕೂಲಕ್ಕಾಗಿ ತಡರಾತ್ರಿಯವರಿಗೆ ಬಸ್ ಹಾಗೂ ಮೆಟ್ರೋ ಸಂಚಾರದ ವ್ಯವಸ್ಥೆ ಮಾಡಲಾಗಿರುತ್ತದೆ. ಇಂದಿರಾ ನಗರ, ಕೋರಮಂಗಲ ಹಾಗೂ ಚರ್ಚ್ ಸ್ಟ್ರೀಟ್ ಗಳಲ್ಲೂ ಅದ್ಧೂರಿಯಾಗಿ ಹೊಸ ವರ್ಷವನ್ನು ಆಚರಿಸಲಾಗುತ್ತದೆ.

ಹೊಸ ವರ್ಷಕ್ಕೆ ಹೋಟೆಲ್ ಗಳಿಂದ ಸಿದ್ಧತೆ

ಸಾಮಾನ್ಯವಾಗಿ ಹೊಸ ವರ್ಷ ಬಂದಾಗ ಹೋಟೆಲ್ ಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿರುತ್ತದೆ. ಜನರು ತಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಹೋಟೆಲ್ ಗಳನ್ನು ಬುಕ್ ಮಾಡಿಕೊಂಡಿರುತ್ತಾರೆ. ಹೀಗಾಗಿ ಗ್ರಾಹಕರಿಗೆ ವಿನೂತನ ಅನುಭವವನ್ನು ನೀಡುವ ಸಲುವಾಗಿ ಹೊಸ ಕಾನ್ಸೆಪ್ಟ್ ಗಳೊಂದಿಗೆ ಹೊಸ ವರ್ಷದ ಕಾರ್ಯಕ್ರಮಗಳನ್ನು ಹೋಟೆಲ್ ಗಳಲ್ಲಿ ಆಯೋಜಿಸಲಾಗುತ್ತದೆ. ಡಿಜೆ, ಹಾಡು, ನೃತ್ಯ, ಹಾಸ್ಯ, ಇಷ್ಟದ ಊಟ, ಮದ್ಯ, ಸಿಹಿ-ತಿಂಡಿಗಳೊಂದಿಗೆ ಗ್ರಾಹಕರಿಗೆ ಗರಿಷ್ಠ ಮಟ್ಟದ ಮನರಂಜನೆಯನ್ನು ನೀಡುತ್ತವೆ. ಇಡೀ ರಾತ್ರಿ ಹೋಟೆಲ್ ಗಳಲ್ಲಿ ಸಂಭ್ರಮಾಚರಣೆ ಮಾಡಲಾಗುತ್ತದೆ.

ರೆಸ್ಟೋರೆಂಟ್ ಗಳು ಹೌಸ್ ಫುಲ್ ಆಗುತ್ತವೆ

ಹೋಟೆಲ್ ಗಳಂತೆ ರೆಸ್ಟೋರೆಂಟ್ ಗಳಲ್ಲೂ ಹೊಸ ವರ್ಷಾಚರಣೆಯ ದಿನದಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ವಿವಿಧ ರೀತಿಯ ಆಫರ್ ಗಳನ್ನು ಈಗಾಗಲೇ ಘೋಷಣೆ ಮಾಡಿವೆ. ವಿಶೇಷವಾಗಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ರೆಸ್ಟೋರೆಂಟ್ ಗಳನ್ನು ಬುಕ್ ಮಾಡಿ ಅಲ್ಲಿ ಹೊಸ ವರ್ಷಾಚರಣೆಯನ್ನು ಸಂಭ್ರಮಿಸುತ್ತಾರೆ. ಇಲ್ಲೂ ಕೂಡ ಕೊಟ್ಟ ಕಾಸಿಗೆ ತಕ್ಕಂತೆ ಮನರಂಜನೆ ಸಿಗುತ್ತದೆ.

ಕ್ಲಬ್-ಪಬ್ ಗಳಲ್ಲೂ ಹೊಸ ವರ್ಷಾಚರಣೆ

ಹೊಸ ವರ್ಷಾಚರಣೆ ದಿನ ಬೆಂಗಳೂರಿನ ಕ್ಲಬ್ ಮತ್ತು ಪಬ್ ಗಳು ಕೆಲವು ದಿನಗಳ ಮುಂಚಿತವಾಗಿ ಬುಕ್ ಆಗಿರುತ್ತದೆ. ಕ್ಲಬ್ ಗಳಲ್ಲಿ ಕುಟುಂಬ ಸಮೇತರಾಗಿ ನ್ಯೂ ಇಯರ್ ಪಾರ್ಟಿ ಮಾಡುತ್ತಾರೆ. ಕೆಲವೊಂದು ಸಂಸ್ಥೆಗಳ ತಮ್ಮ ಉದ್ಯೋಗಿಗಳು ಅಥವಾ ಸದಸ್ಯರಿಗೆ ಕ್ಲಬ್ ಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ನೃತ್ಯ, ಡಿಜೆ, ಊಟ ಸೇರಿದಂತೆ ಎಲ್ಲವೂ ನ್ಯೂ ಇಯರ್ ಕಾರ್ಯಗಳ ಭಾಗವಾಗಿರುತ್ತದೆ. ಪಬ್ ಗಳಲ್ಲಿ ಕುಡಿದು ಕುಣಿದು ಕುಪ್ಪಳಿಸುವ ಮಂದಿಯೇ ಹೆಚ್ಚಿರುತ್ತಾರೆ. ಕುಡಿದು ಎಂಜಾಯ್ ಮಾಡುವ ಸಲುವಾಗಿಯೇ ಕೆಲವು ಪಬ್ ಗಳು ಸಿದ್ಧತೆಗಳನ್ನು ಮಾಡಿಕೊಂಡಿರುತ್ತವೆ.

Whats_app_banner