ಪುಷ್ಪ 2 ದ ರೂಲ್ ಸಿನಿಮಾ ರಿಲೀಸ್‌ಗೂ ಮೊದಲೇ ನಟ ಅಲ್ಲು ಅರ್ಜುನ್ ವಿರುದ್ಧ ಪೊಲೀಸ್ ದೂರು, ಕಾರಣ ಅದೊಂದು ಪದ ಬಳಕೆ
Allu Arjun: ಪುಷ್ಪ 2 ದ ರೂಲ್ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 5 ರಂದು ಸಿನಿಮಾ ತೆರೆ ಕಾಣಲಿದೆ. ಈಗ ಪುಷ್ಪ2 ದ ರೂಲ್ ಸಿನಿಮಾ ರಿಲೀಸ್‌ಗೂ ಮೊದಲೇ ನಟ ಅಲ್ಲು ಅರ್ಜುನ್ ವಿರುದ್ಧ ಪೊಲೀಸ್ ದೂರು ದಾಖಲಾಗಿರುವುದು ಗಮನಸೆಳೆದಿದೆ. ಮುಂಬಯಿಯಲ್ಲಿ ಸಿನಿಮಾ ಪ್ರಚಾರದ ವೇಳೆ ಬಳಸಿದ ಒಂದು ಪದ ಅದಕ್ಕೆ ಕಾರಣ. ದೂರಿನ ವಿವರ ಇಲ್ಲಿದೆ.
Allu Army Controversy: ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ದ ರೂಲ್ ಸಿನಿಮಾ ತೆರೆಕಾಣಲು ಬೆರಳೆಣಿಕೆ ದಿನ ಬಾಕಿ ಇದೆ. ಈ ಸನ್ನಿವೇಶದಲ್ಲಿ ಸ್ಟಾರ್ ಅಲ್ಲು ಅರ್ಜುನ್ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಅವರು ಇತ್ತೀಚೆಗೆ ಮುಂಬೈನಲ್ಲಿ ಪುಷ್ಪ 2 ಸಿನಮಾದ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದ ವೇಳೆ ತಮ್ಮ ಅಭಿಮಾನಿ ಬಳಗವನ್ನು ‘ಅಲ್ಲು ಆರ್ಮಿ’ (Allu Army) ಎಂದು ಸಂಬೋಧಿಸಿದ್ದರು. ಇಲ್ಲಿ ಆರ್ಮಿ ಪದ ಬಳಕೆ ಮಾಡಿದ್ದು ಸರಿಯಲ್ಲ. ಆರ್ಮಿ ಪದಕ್ಕೆ ಅದರದ್ದೇ ಆದ ಘನತೆ ಇದೆ. ಇದರಿಂದ ತನ್ನ ಭಾವನೆಗೆ ಧಕ್ಕೆಯಾಗಿದೆ ಎಂದು ಶ್ರೀನಿವಾಸ್ ಗೌಡ್ ಎಂಬ ವ್ಯಕ್ತಿ ಹೈದರಾಬಾದ್‌ನ ಜವಾಹರ್ ನಗರ ಪೊಲೀಸ್ ಠಾಣೆಯಲ್ಲಿ ನಟ ಅಲ್ಲು ಅರ್ಜುನ್ ವಿರುದ್ಧ ದೂರು ದಾಖಲಿಸಿದ್ದಾರೆ.
ಏನಿದು ಅಲ್ಲು ಆರ್ಮಿ ವಿವಾದ; ದೂರು ಯಾಕೆ
ಗ್ರೀನ್ ಪೀಸ್ ಎನ್ವಿರಾನ್‌ಮೆಂಟ್ ಮತ್ತು ವಾಟರ್ ಹಾರ್ವೆಸ್ಟಿಂಗ್ ಫೌಂಡೇಶನ್‌ನ ಅಧ್ಯಕ್ಷ ಶ್ರೀನಿವಾಸ್ ಗೌಡ್ ಅವರು ಈ ಬಗ್ಗೆ ವಿಡಿಯೋ ಒಂದರಲ್ಲಿ “ತೆಲುಗು ಚಿತ್ರರಂಗದ ಸ್ಟಾರ್ ನಟ ಅಲ್ಲು ಅರ್ಜುನ್ ಅವರು ತಮ್ಮ ಅಭಿಮಾನಿಗಳ ಗುಂಪನ್ನು “ಅಲ್ಲು ಆರ್ಮಿ” ಎಂದು ಸಂಬೋಧಿಸಬಾರದು. ಆರ್ಮಿ ಎಂಬ ಪದಕ್ಕೆ ಅದರದ್ದೇ ಆದ ಗೌರವ ಮತ್ತು ಘನತೆ ಇದೆ. ಸೇನೆ ಅಥವಾ ಸೈನ್ಯ ಎಂಬುದನ್ನು ನಾವು ದೇಶ ರಕ್ಷಣೆ ವಿಚಾರದಲ್ಲಿ ಬಹಳ ಗೌರವಯುತವಾಗಿ ಕಾಣುತ್ತೇವೆ. ಆದ್ದರಿಂದ ಆರ್ಮಿ ಎಂಬ ಪದವನ್ನು ನಿಮ್ಮ ಅಭಿಮಾನಿ ವರ್ಗಕ್ಕೆ ಬಳಸಬೇಡಿ. ಅವರನ್ನು ಸಂಬೋಧಿಸಲು ಬೇರೆ ಬೇಕಾದಷ್ಟು ಪದಗಳಿವೆ. ಅವುಗಳನ್ನು ಬಳಸಿ" ಎಂದು ಮನವಿ ಮಾಡುವಂತಹ ಪೊಲೀಸ್ ದೂರನ್ನು ದಾಖಲಿಸಿದ್ದೇವೆ ಎಂದು ಹೇಳಿದ್ದಾಗಿ ಟೈಮ್ಸ್‌ನೌ ವರದಿ ಮಾಡಿದೆ.
ಪುಷ್ಪ 2 ಸಿನಿಮಾ ಡಿಸೆಂಬರ್ 5ಕ್ಕೆ 12000ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆ ನಿರೀಕ್ಷೆ
ಪುಷ್ಟ 2 ಸಿನಿಮಾವು ಆರು ಭಾಷೆಗಳಲ್ಲಿ ಬರಲಿದ್ದು, ಜಗತ್ತಿನಾದ್ಯಂತ 12,000ಕ್ಕೂ ಹೆಚ್ಚು ಸಿನಿಮಾ ಮಂದಿರಗಳಲ್ಲಿ ಡಿಸೆಂಬರ್ 5 ರಂದು ತೆರೆ ಕಾಣಲಿದೆ. ಅದಕ್ಕೂ ಮೊದಲು ಅಮೆರಿಕದಲ್ಲಿ ಡಿಸೆಂಬರ್ 4ರಂದೇ ಪ್ರೀಮಿಯರ್ ಪ್ರದರ್ಶನ ಇದ್ದು, ಅದಕ್ಕೆ ಬುಕ್ಕಿಂಗ್ ಶುರುವಾಗಿದೆ. ದಾಖಲೆಯ 974 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತದೆ ಎಂಬ ವರದಿ ಇದೆ. ಈಗಾಗಲೇ, 58,000ಕ್ಕೂ ಹೆಚ್ಚು ಟಿಕೆಟ್‍ಗಳು ಮಾರಾಟವಾಗಿದ್ದು, ಇದರಿಂದ 1.66 ಮಿಲಿಯನ್ ಡಾಲರ್ ಗಳಿಕೆ ಆಗಿದೆ. ಭಾರತೀಯ ಮೌಲ್ಯದ ಪ್ರಕಾರ ಸುಮಾರು 14.04 ಕೋಟಿ ರೂ. ಬಿಡುಗಡೆಗೆ ಮುನ್ನವೇ ಬಂದಿದೆ ಎಂದು ಹೇಳಲಾಗುತ್ತಿದೆ.
ಭಾರತದಲ್ಲಿ ಕೇರಳ, ಗುಜರಾತ್, ಪಂಜಾಬ್ ಮತ್ತು ದೆಹಲಿಯಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಈಗಾಗಲೇ ಶುರುವಾಗಿದ್ದು, ಈ ಪೈಕಿ ಕೇರಳದಲ್ಲಿ ಅತೀ ಹೆಚ್ಚು ಟಿಕೆಟ್‍ಗಳು ಮಾರಾಟವಾಗಿವೆ. ಇದೀಗ ಮಧ್ಯ ಪ್ರದೇಶ, ರಾಜಾಸ್ತಾನ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮುಂತಾದ ಇತರೆ ರಾಜ್ಯಗಳಲ್ಲೂ ಹಿಂದಿ ಅವತರಣಿಕೆಯ ಬುಕ್ಕಿಂಗ್ ಪ್ರಾರಂಭವಾಗಿದೆ. ಬರೀ ಹಿಂದಿ ಅವತರಣಿಕೆಯ 1.88 ಲಕ್ಷ ಟಿಕೆಟ್‍ಗಳು ಇದುವರೆಗೂ ಮಾರಾಟವಾಗಿದೆ ಎಂಬ ವರದಿ ಇದೆ.
ಪುಷ್ಪ 2 ದ ರಿಲೀಸ್ ಚಿತ್ರದ ಮುಖ್ಯಪಾತ್ರದಲ್ಲಿ ಅಲ್ಲು ಅರ್ಜುನ್ ಅವರಿಗೆ ಜೊತೆಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಧನಂಜಯ್, ಫಹಾದ್ ಫಾಸಿಲ್, ಸುನೀಲ್, ಅನುಸೂಯ ಭಾರದ್ವಾಜ್, ಶ್ರೀಲೀಲಾ ಮುಂತಾದವರು ನಟಿಸಿದ್ದು, ಚಿತ್ರಕ್ಕೆ ಸುಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ‘ರಾಕ್‍ಸ್ಟಾರ್’ ದೇವಿಶ್ರೀ ಪ್ರಸಾದ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
ವಿಭಾಗ