ಫೆಂಗಲ್ ಚಂಡಮಾರುತ; ಬೆಂಗಳೂರು ಸೇರಿ 7 ಜಿಲ್ಲೆಗಳಲ್ಲಿ ಭಾರಿ ಮಳೆ, ಮೈಸೂರು ಸೇರಿ 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ - ಕರ್ನಾಟಕ ಹವಾಮಾನ
Cyclon Fengal: ಫೆಂಗಲ್ ಚಂಡಮಾರುತದ ಪರಿಣಾಮ ಇಂದು (ಡಿಸೆಂಬರ್ 2) ಕರ್ನಾಟಕದಲ್ಲಿ ವ್ಯಾಪಕವಾಗಿ ಮಳೆಯಾಗಬಹುದು. ದಕ್ಷಿಣ ಒಳನಾಡಿನ 14 ಜಿಲ್ಲೆಗಳಲ್ಲಿ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ. ಬೆಂಗಳೂರು ಸೇರಿ 7 ಜಿಲ್ಲೆಗಳಲ್ಲಿ ಭಾರಿ ಮಳೆ, ಮೈಸೂರು ಸೇರಿ 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಇದೆ. ಕರ್ನಾಟಕ ಹವಾಮಾನ ವಿವರ ಹೀಗಿದೆ.
Cyclon Fengal: ಫೆಂಗಲ್ ಚಂಡಮಾರುತದ ಪ್ರಭಾವದ ಕಾರಣ, ಕರ್ನಾಟಕದ ದಕ್ಷಿಣ ಒಳನಾಡು ಭಾಗದ ಜಿಲ್ಲೆಗಳಲ್ಲಿ ಇಂದು (ಡಿಸೆಂಬರ್ 2) ಮತ್ತು ನಾಳೆ (ಡಿಸೆಂಬರ್ 3) ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಹೀಗಾಗಿ, ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಮತ್ತು ಸುತ್ತಮುತ್ತಲಿನ 5 ಜಿಲ್ಲೆ ಮತ್ತು ಕರಾವಳಿಯ 2 ಜಿಲ್ಲೆಗಳಿಗೆ ಸೋಮವಾರ ಮತ್ತು ಮಂಗಳವಾರ ಯೆಲ್ಲೋ ಅಲರ್ಟ್ ಘೋಷಿಸಿದೆ. ಅದೇ ರೀತಿ ಮೈಸೂರು, ಮಂಡ್ಯ ಸೇರಿ 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಪ್ರಕಟಿಸಿದೆ. ಕೆಲವು ಪ್ರದೇಶಗಳಲ್ಲಿ 100 ಮಿಮೀಗಿಂತ ಹೆಚ್ಚು ಮಳೆಯಾಗಬಹುದು ಎಂದು ಎಚ್ಚರಿಸಿದೆ. ಕಳೆದ ಎರಡು ದಿನಗಳಿಂದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆಯ ವಾತಾವರಣ ಇದ್ದು, ಮೋಡ ಕವಿದ ಆಕಾಶ, ಕೆಲವು ಕಡೆ ಮಳೆ ಬಿದ್ದಿದೆ. ಕೆಲವು ಪ್ರದೇಶಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಕೆಳಕ್ಕೆ ಕುಸಿದಿದ್ದು, ಚಳಿ ಅನುಭವವನ್ನು ಇನ್ನಷ್ಟು ಹೆಚ್ಚು ಮಾಡಿದೆ.
ಬೆಂಗಳೂರು ಹವಾಮಾನ ಇಂದು; ಚಳಿ ಮತ್ತು ಭಾರಿ ಮಳೆ ಸಾಧ್ಯತೆ
ಬೆಂಗಳೂರು ನಗರದಲ್ಲಿ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಸಣ್ಣ ಪ್ರಮಾಣದಲ್ಲಿ ತುಂತುರು ಮಳೆಯಾಗಿದೆ. ಫೆಂಗಲ್ ಚಂಡಮಾರುತದ ಕಾರಣ, ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆಯಾಗಿದೆ, ಬೆಂಗಳೂರಿನಲ್ಲಿ ಶನಿವಾರ ಗರಿಷ್ಠ ತಾಪಮಾನ 22.6 ಡಿಗ್ರಿ ಸೆಲ್ಸಿಯಸ್ ಮತ್ತು ಭಾನುವಾರ ಬೆಳಿಗ್ಗೆ ಕನಿಷ್ಠ 19.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇನ್ನು ಕೆಲವು ದಿನ ಸೆಂಟ್ರಲ್ ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 17 ರಿಂದ 18 ಡಿಗ್ರಿ ಸೆಲ್ಸಿಯಸ್ ಇರಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಭಾನುವಾರ ಬೆಳಿಗ್ಗೆ 10.30 ರ ಹೊತ್ತಿಗೆ, ಬೆಂಗಳೂರಿನ ಪ್ರತ್ಯೇಕ ಪ್ರದೇಶಗಳು ಮತ್ತು ನೆರೆಯ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಮಳೆ ದಾಖಲಾಗಿದೆ.
ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ವರದಿ ಪ್ರಕಾರ, ಡಿಸೆಂಬರ್ 3 ರ ಬೆಳಗ್ಗೆ ತನಕ ಬೆಂಗಳೂರು ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗಬಹುದು. ಕೆಲವೊಮ್ಮೆ ಭಾರಿ ಮಳೆ ಬೀಳುವ ಸಾಧ್ಯತೆಯೂ ಇದೆ. ಕೆಲವು ಪ್ರದೇಶಗಳಲ್ಲಿ ಮುಂಜಾನೆ ಮಂಜು, ಇಬ್ಬನಿ ಇರಲಿದ್ದು, ಚಳಿಯೂ ಹೆಚ್ಚಾಗಲಿದೆ.ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 23 ಡಿಗ್ರಿ ಸೆಲ್ಶಿಯಸ್ ಮತ್ತು 19 ಡಿಗ್ರಿ ಸೆಲ್ಶಿಯಸ್ ಇರಬಹುದು.
ಕರ್ನಾಟಕ ಹವಾಮಾನ ಇಂದು; ಮೈಸೂರು, ಮಂಡ್ಯ ಸೇರಿ 7 ಜಿಲ್ಲೆಗಳಲ್ಲಿ ಭಾರಿ ಮಳೆ, ಆರೆಂಜ್ ಅಲರ್ಟ್
ಮೈಸೂರು, ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಪ್ರತ್ಯೇಕ ಭಾರೀ ಮಳೆಯಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರತ್ಯೇಕ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡು ಉಳಿದ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ವಿಜ್ಞಾನಿ ಸಿಎಸ್ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯೆಲ್ಲೋ ಅಲರ್ಟ್ ಇರುವ ಜಿಲ್ಲೆಗಳು - ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ,
ಆರೆಂಜ್ ಅಲರ್ಟ್ ಇರುವ ಜಿಲ್ಲೆಗಳು- ಮೈಸೂರು, ಮಂಡ್ಯ, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ
ತಾಪಮಾನ ಸಾಧ್ಯತೆ: ಬೆಂಗಳೂರು ಭಾಗದಲ್ಲಿ ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಶಿಯಸ್ ಮತ್ತು ಗರಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಶಿಯಸ್, ಮಂಗಳೂರಲ್ಲಿ ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಶಿಯಸ್ ಮತ್ತು ಗರಿಷ್ಠ 32 ಡಿಗ್ರಿ ಸೆಲ್ಶಿಯಸ್, ಚಿತ್ರದುರ್ಗದಲ್ಲಿ ಕನಿಷ್ಠ 21, ಗರಿಷ್ಠ 27, ಗದಗದಲ್ಲಿ ಕನಿಷ್ಠ 20, ಗರಿಷ್ಠ 30, ಹೊನ್ನಾವರದಲ್ಲಿ ಕನಿಷ್ಠ 23, ಗರಿಷ್ಠ 34, ಕಲಬುರಗಿ ಕನಿಷ್ಠ 22, ಗರಿಷ್ಠ 31 ಡಿಗ್ರಿ ಸೆಲ್ಶಿಯಸ್ ಇರಲಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರದ ಹವಾಮಾನ ಮುನ್ಸೂಚನೆ ವಿಡಿಯೋ ಇಲ್ಲಿದೆ ನೋಡಿ-