ಫೆಂಗಲ್ ಚಂಡಮಾರುತ; ಮೈಸೂರು,ಕೋಲಾರ, ಚಿಕ್ಕಬಳ್ಳಾಪುರದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ, ಉಳಿದೆಡೆ ಎಲ್ಲೆಲ್ಲಿ ಏನಿದೆ ಪರಿಸ್ಥಿತಿ ಇಲ್ಲಿದೆ ವಿವರ
Cyclone Fengal: ಫೆಂಗಲ್ ಚಂಡಮಾರುತದ ಕಾರಣ ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಇಂದು (ಡಿಸೆಂಬರ್ 2) ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಎಲ್ಲೆಲ್ಲಿ ರಜೆ ಇಲ್ಲಿದೆ ವಿವರ (ವರದಿ- ಎಚ್ ಮಾರುತಿ, ಬೆಂಗಳೂರು)
ಬೆಂಗಳೂರು: ಫೆಂಗಲ್ ಚಂಡಮಾರುತದ ಪರಿಣಾಮ ಕರ್ನಾಟಕದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಇಂದು (ಡಿಸೆಂಬರ್ 2) ಮತ್ತು ನಾಳೆ ಮಳೆ ತೀವ್ರಗೊಳ್ಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಇನ್ನುಳಿದಂತೆ, ರಾಮನಗರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ರಜೆ ನೀಡುವುದನ್ನು ಶಾಲಾ ಮುಖ್ಯಸ್ಥರ ವಿವೇಚನೆಗೆ ಬಿಡಲಾಗಿದೆ. ಕೆಲವು ಶಾಲೆಯವರು ಈಗಾಗಲೇ ರಜೆ ಘೋಷಿಸಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸುವ ಮುನ್ನ ಪಾಲಕರು ಈ ವಿಚಾರವಾಗಿ ಗಮನಿಸಬಹುದು
ಬೆಂಗಳೂರು ನಗರ ಜಿಲ್ಲೆಯಲ್ಲಿ ಶಾಲೆಗೆ ರಜೆ ಇಲ್ಲ
ಬೆಂಗಳೂರು ನಗರ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಮಾತ್ರ ಇದೆ. ಸಾಧಾರಣ ಮಳೆ ಬೀಳುವ ಕಾರಣ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಿಲ್ಲ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ನಗರದಲ್ಲಿ ಭಾನುವಾರ 4.5 ಮಿಮೀಯಷ್ಟು ಮಳೆಯಾಗಿದೆ. ದಿನವಿಡೀ ಮೋಡ ಕವಿದ ವಾತಾವರಣವಿದ್ದು, ಭಾನುವಾರದ ರಜೆಯ ಮೋಜು ಅನುಭವಿಸುವವರಿಗೆ ನಿರಾಶೆ ಮೂಡಿದ್ದು ಸುಳ್ಳಲ್ಲ. ಫೆಂಗಲ್ ಚಂಡಮಾರುತದ ಪರಿಣಾಮ ಭಾನುವಾರ ರಾಜ್ಯ ರಾಜಧಾನಿ ಬೆಂಗಳೂರು ನಗರದಾದ್ಯಂತಭಾನುವಾರದಿಂದಲೇ ಮಳೆ ಆರಂಭವಾಗಿದೆ. ದಿನವಿಡೀ ಅಲ್ಲಲ್ಲಿ ಮಳೆಯಾಗುತ್ತಲೇ ಇತ್ತು. ಕೆಲವೊಮ್ಮೆ ಜಿಟಿಜಿಟಿ ಮತ್ತೆ ಕೆಲವೊಮ್ಮೆ ಜೋರು ಮಳೆಯಾಗಿದೆ.
ಯಾವೆಲ್ಲ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಕೋಲಾರದಲ್ಲಿ ರಜೆ: ಫೆಂಗಲ್ ಚಂಡಮಾರುತದ ಪರಿಣಾಮ ಕಳೆದ ಎರಡು ದಿನಗಳಿಂದ ಹವಾಮಾನ ಬದಲಾವಣೆ ಆಗಿದ್ದು ಕೋಲಾರದಲ್ಲಿ ವಿಪರೀತ ಚಳಿ ಶುರುವಾಗಿದೆ. ಸಣ್ಣ ಪ್ರಮಾಣದಲ್ಲಿ ಜಿಟಿಜಿಟಿ ಮಳೆ ಬೀಳುತ್ತಿದ್ದು, ಇಂದು ಭಾರಿ ಮಳೆ ಬೀಳುವ ಮುನ್ನೆಚ್ಚರಿಕೆ ಆಧರಿಸಿ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಇಂದು (ಡಿಸೆಂಬರ್ 2) ರಜೆ ಘೋಷಿಸಿದ್ದಾರೆ. ಇಂದಿನ ರಜೆಯನ್ನು ಇನ್ನೊಂದು ರಜಾದಿನ ತರಗತಿ ನಡೆಸಿ ಸರಿದೂಗಿಸುವಂತೆ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗೆ ಅವರು ಸೂಚಿಸಿದ್ದಾರೆ.
ಮೈಸೂರಲ್ಲಿ ರಜೆ: ಮೈಸೂರು ಜಿಲ್ಲೆ ಮತ್ತು ಸುತ್ತಮುತ್ತ ಇಂದು (ಡಿಸೆಂಬರ್ 2) ಭಾರಿ ಮಳೆಯಾಗುವ ಸಾಧ್ಯತೆ ಇದ್ದು ಆರೆಂಜ್ ಅಲರ್ಟ್ ಘೋಷಣೆಯಾಗಿದೆ. ಈಗಾಗಲೇ ಸುರಿಯುತ್ತಿರುವ ಜಿಟಿಜಿಟಿ ಮಳೆ ಮತ್ತು ವಿಪರೀತ ಚಳಿ ಕಾರಣ ಮೈಸೂರು ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರ ಸೂಚನೆ ಮೇರೆಗೆ ಡಿಡಿಪಿಐ ಎಸ್‌ಟಿ ಜವರೇಗೌಡ ರಜೆ ಘೋಷಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ರಜೆ: ಜಿಲ್ಲೆಯಲ್ಲೂ ವಿಪರೀತ ಚಳಿ ಮತ್ತು ಮಳೆಯ ವಾತಾವರಣದಿಂದಾಗಿ ಹವಾಮಾನ ಬದಲಾಗಿದೆ. ಇಂದು ಭಾರಿ ಮಳೆಯ ಮುನ್ಸೂಚನೆ ಇರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ. ಇಂದಿನ ರಜೆಯ ತರಗತಿಗಳನ್ನು ಡಿಸೆಂಬರ್ 8 ರಂದು ಭಾನುವಾರ ತರಗತಿ ನಡೆಸಿ ಸರಿದೂಗಿಸುವಂತೆ ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ ಸೂಚಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲೂ ರಜೆ: ಮಂಡ್ಯ ಜಿಲ್ಲೆಯಲ್ಲೂ ನಿರಂತರ ಮಳೆ ಬೀಳುತ್ತಿದ್ದು, ಇಂದು ಭಾರಿ ಮಳೆಯ ಮುನ್ಸೂಚನೆ ಇರುವ ಕಾರಣ ಮುನ್ನೆಚ್ಚರಿಕೆಯ ಕ್ರಮವಾಗಿ ಜಿಲ್ಲಾಡಳಿತವು ಜಿಲ್ಲೆಯ ಅಂಗನವಾಡಿ, ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ಇಂದು (ಡಿಸೆಂಬರ್ 2) ರಜೆ ಘೋಷಿಸಿದೆ. ಇದು ಮಂಡ್ಯ ಜಿಲ್ಲೆಯ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ (ದ್ವಿತೀಯ ಪಿಯುಸಿವರೆಗೆ) ಅನ್ವಯವಾಗುತ್ತದೆ. ಈ ರಜೆಯನ್ನು ಇನ್ನೊಂದು ರಜಾ ದಿನದಲ್ಲಿ ತರಗತಿ ಮಾಡುವ ಮೂಲಕ ಭರ್ತಿಮಾಡಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲೂ ರಜೆ: ಚಾಮರಾಜನಗರ ಜಿಲ್ಲೆಯಲ್ಲಿ ಕೂಡ ಭಾರಿ ಮಳೆಯ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಇಂದು ಶಾಲಾ ಕಾಲೇಜುಗಳಿಗೆ (ಪದವಿಪೂರ್ವ) ರಜೆ ಘೋಷಿಸಿದೆ.ಪರೀಕ್ಷೆ ನಡೆಯುತ್ತಿರುವ ಪದವಿ ಕಾಲೇಜುಗಳಿಗೆ ಇಂದಿನ (ಡಿಸೆಂಬರ್ 2) ರಜೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಹೇಳಿದ್ದು, ಈ ದಿನದ ರಜೆಯನ್ನು ಇನ್ನೊಂದು ಭಾನುವಾರ ತರಗತಿ ನಡೆಸಿ ಸರಿದೂಗಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
(ವರದಿ- ಎಚ್ ಮಾರುತಿ, ಬೆಂಗಳೂರು)
ವಿಭಾಗ