ಸಾಕು ಮಾಡಿ ನಿಮ್ಮ ಕಪಟ ನಾಟಕ; ಕಾವೇರಿ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್‌ಗೆ ಚುಚ್ಚಿದ ನಿಖಿಲ್ ಕುಮಾರಸ್ವಾಮಿ
ಕಾವೇರಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಟ, ರಾಜಕಾರಣಿ ನಿಖಿಲ್ ಕುಮಾರ್ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Cauvery Water Dispute: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ತಮಿಳು ನಾಡು ಕ್ಯಾತೆ ಮುಂದುವರಿಸಿದೆ. ನೀರಿನ ಅಭಾವವಿದ್ದರೂ, ನಿಗದಿತ ಪ್ರಮಾಣದಲ್ಲಿ ನಮಗೆ ನೀರು ಬೇಕೇಬೇಕು ಎಂದು ಪಟ್ಟು ಹಿಡಿದಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ, ರಾಜ್ಯದ ಸರ್ವಪಕ್ಷ ನಿಯೋಗ ದೆಹಲಿಯಲ್ಲಿ ಬೀಡು ಬಿಟ್ಟಿದೆ. ಇತ್ತ ಸಿನಿಮಾ ಮಂದಿ ಮತ್ತು ಕನ್ನಡ ಪರ ಸಂಘಟನೆಗಳೂ ಈ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಶೇರ್ ಮಾಡುತ್ತಿದ್ದಾರೆ. ಇದೀಗ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಸಹ ರಾಜ್ಯ ಸರ್ಕಾರವನ್ನು ಕಾವೇರಿ ವಿಚಾರದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾದ ಪೋಸ್ಟ್ ಹಂಚಿಕೊಂಡಿರುವ ನಿಖಿಲ್, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ತಿವಿದಿದ್ದಾರೆ. ಕಾವೇರಿ ಕನ್ನಡಿಗರ ಹಕ್ಕು, ರಾಜ್ಯ ಸರ್ಕಾರ ಈ ವಿಚಾರದಲ್ಲಿ ಕಪಟ ನಾಟಕವನ್ನಾಡುತ್ತಿದೆ. ಮಳೆಯಿಂದ ರಾಜ್ಯದಲ್ಲಿ ನೀರಿನ ಕೊರತೆ ಎದುರಾಗಿದೆ. ಹೀಗಿದ್ದರೂ ಏಕಪಕ್ಷೀಯವಾಗಿ ತಮಿಳುನಾಡಿಗೆ ನೀರು ಹರಿಸಿದ್ದ ಅಕ್ಷಮ್ಯ ಎಂದು ನಿಖಿಲ್ ಕಿಡಿಕಾರಿದ್ದಾರೆ.
ನಿಖಿಲ್ ಹೇಳಿದ್ದೇನು?
ಕಾವೇರಿ ಕನ್ನಡಿಗರ ಹಕ್ಕು. ಕಾವೇರಿ ಕನ್ನಡಿಗರ ಜೀವನಾಡಿ, ಈ ವಿಷಯದಲ್ಲಿ ಅನ್ಯಾಯ ಸಹಿಸುವುದಿಲ್ಲ ಹಾಗೂ ರಾಜಿ ಪ್ರಶ್ನೆಯೇ ಇಲ್ಲ. ರಾಜ್ಯ ಕಾಂಗ್ರೆಸ್ ಸರಕಾರ ಈ ಬಗ್ಗೆ ಆಡುತ್ತಿರುವ ಕಪಟ ನಾಟಕ ಸಾಕು. ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸುವ ಯಾವುದೇ ಕೃತ್ಯವನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ.
ರಾಜ್ಯದಲ್ಲಿ ನೀರಿನ ಕೊರತೆ ಇದೆ ಮಳೆ ಕೈಕೊಟ್ಟಿದೆ. ಜಲಾಶಯಗಳು ಬರಿದಾಗಿವೆ. ಆದರೂ ತಮಿಳುನಾಡಿಗೆ ರಾಜ್ಯ ಸರಕಾರ ಏಕಪಕ್ಷೀಯವಾಗಿ ನೀರು ಹರಿಸಿದ್ದು ಅಕ್ಷಮ್ಯ. ಬ್ರಿಟೀಷರ ಕಾಲದಲ್ಲಿಯೇ ಶುರುವಾದ ಅನ್ಯಾಯದ ಪರಂಪರೆಯನ್ನು ನಮ್ಮ ರಾಜ್ಯ ಸರಕಾರವೇ ಮುಂದುವರಿಸಿದೆ.
ಸ್ವಾತಂತ್ರ್ಯ ನಂತರವೂ ಮುಂದುವರಿದಿದೆ. ಕಾಂಗ್ರೆಸ್ ಪಕ್ಷಕ್ಕೆ ಕಾವೇರಿ ಎನ್ನುವುದು ರಾಜಕೀಯ ಲಾಭದ ವಸ್ತುವಂತೆ ಆಗಿರುವುದು ನೋವಿನ ಸಂಗತಿ. ಕಾವೇರಿ ವಿಷಯದಲ್ಲಿ ಕನ್ನಡಿಗರ ನಿಲುವೇ ನನ್ನ ನಿಲುವು. ಆರೂವರೆ ಕೋಟಿ ಕನ್ನಡಿಗರ ದನಿಯೇ ನನ್ನ ದನಿ. ತಾಯಿ ಕಾವೇರಿಗಾಗಿ ಯಾವುದೇ ಹೋರಾಟಕ್ಕೆ ನಾನು ಸಿದ್ಧನಿದ್ದೇನೆ.
ಕರ್ನಾಟಕಕ್ಕೆ ಹಿನ್ನೆಡೆ
ತಮಿಳುನಾಡಿಗೆ ಮುಂದಿನ ಹದಿನೈದು ದಿನ ಕಾವೇರಿ ನೀರು ಹರಿಸಬೇಕು ಎಂದು ಸುಪ್ರೀಂಕೋರ್ಟ್‌ಗೆ ತೀರ್ಪು ನೀಡಿದೆ. ಇದರಿಂದ ಕಾವೇರಿ ಜಲ ವಿವಾದದ ವಿಚಾರದಲ್ಲಿ ಹೋರಾಟ ನಡೆಸುತ್ತಲೇ ಕರ್ನಾಟಕಕ್ಕೆ ತೀವ್ರ ಹಿನ್ನಡೆಯಾಗಿದೆ. ಈಗಾಗಲೇ ಕಾವೇರಿ ನೀರು ಮೇಲ್ವಿಚಾರಣಾ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್ ಮುಂದಿನ ಹದಿನೈದು ದಿನ ತಮಿಳುನಾಡಿಗೆ ನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಹರಿಸಬೇಕ ಎಂದು ಸ್ಪಷ್ಟ ನಿರ್ದೇಶನ ನೀಡಿದೆ.
ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ