ಕನ್ನಡ ಸುದ್ದಿ  /  ಮನರಂಜನೆ  /  Kaatera Review: ಕಟು ಪದ್ಧತಿಗಳ ವಿರುದ್ಧ ಕುಲುಮೆಯಲ್ಲಿ ಬೆಂದು ಮೊನಚಾದ ‘ಕಾಟೇರ’ನ ಮಚ್ಚು! ‘ಕಾಟೇರ’ ಸಿನಿಮಾ ವಿಮರ್ಶೆ

Kaatera Review: ಕಟು ಪದ್ಧತಿಗಳ ವಿರುದ್ಧ ಕುಲುಮೆಯಲ್ಲಿ ಬೆಂದು ಮೊನಚಾದ ‘ಕಾಟೇರ’ನ ಮಚ್ಚು! ‘ಕಾಟೇರ’ ಸಿನಿಮಾ ವಿಮರ್ಶೆ

Kaatera Kannada Movie Review: ಒಬ್ಬ ಕಟ್ಟುಮಸ್ತಾದ ಯುವಕ ಮತ್ತವನ ರೋಷಾವೇಷವನ್ನು‌ ಕಾಟೇರ ಸಿನಿಮಾದಲ್ಲಿ ಭರ್ತಿಯಾಗಿ ತುಂಬಿಸಿದ್ದಾರೆ ನಿರ್ದೇಶಕ ತರುಣ್.‌ ನಿರ್ದೇಶಕರ ಆ ಕಲ್ಪನೆಯ ಪಾತ್ರಕ್ಕೆ ಚೆಂದದ ಶಿಲೆಯಾಗಿ ಅವರು ಬದಲಾಗಿದ್ದಾರೆ.‌ ‌ ಒಂದು ರೀತಿ ಮೈಗಂಟಿದ ಹಳೇ ಪೊರೆ ಕಳಚಿದಂತೆ ಕಾಣಿಸುತ್ತಾರೆ ದರ್ಶನ್. ಇಲ್ಲಿದೆ ಕಾಟೇರ ಚಿತ್ರದ ರಿವ್ಯೂವ್.

Kaatera Review: ಕಟು ಪದ್ಧತಿಗಳ ವಿರುದ್ಧ ಕುಲುಮೆಯಲ್ಲಿ ಬೆಂದು ಮೊನಚಾದ ‘ಕಾಟೇರ’ನ ಮಚ್ಚು! ‘ಕಾಟೇರ’ ಸಿನಿಮಾ ವಿಮರ್ಶೆ
Kaatera Review: ಕಟು ಪದ್ಧತಿಗಳ ವಿರುದ್ಧ ಕುಲುಮೆಯಲ್ಲಿ ಬೆಂದು ಮೊನಚಾದ ‘ಕಾಟೇರ’ನ ಮಚ್ಚು! ‘ಕಾಟೇರ’ ಸಿನಿಮಾ ವಿಮರ್ಶೆ

ಚಿತ್ರ: ಕಾಟೇರ, ನಿರ್ಮಾಣ: ರಾಕ್‌ಲೈನ್ ವೆಂಕಟೇಶ್, ನಿರ್ದೇಶನ: ತರುಣ್ ಸುಧೀರ್, ತಾರಾಗಣ: ದರ್ಶನ್, ಆರಾಧನಾ ರಾಮ್, ಜಗಪತಿ ಬಾಬು, ಶ್ರುತಿ, ಕುಮಾರ್ ಗೋವಿಂದ್, ಅವಿನಾಶ್, ಅಚ್ಯುತ್ ಕುಮಾರ್, ವೈಜನಾಥ ಬಿರಾದಾರ, ಮಾಸ್ಟರ್‌ ರೋಹಿತ್, ರೇಟಿಂಗ್: 3.5/5

ಟ್ರೆಂಡಿಂಗ್​ ಸುದ್ದಿ

Kaatera Review: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಕ್ಷರಶಃ ಬದಲಾಗಿದ್ದಾರೆ. ಈ ಹಿಂದಿನ ಸಿನಿಮಾಗಳಿಗಿಂತ ಹೆಚ್ಚು ಮಾಗಿದ್ದಾರೆ. ಮಾಗಿದ ಹಣ್ಣಿನ ರುಚಿ ಹೇಗಿರುತ್ತದೆ? ಅದನ್ನು ವಿವರಿಸುವ ಅಗತ್ಯವಿಲ್ಲ. ಏಕೆಂದರೆ ಮಾಗಿದ ಹಣ್ಣಿನ ಸ್ವಾದ ಬಾಯಿಗಷ್ಟೇ ಅಲ್ಲ‌, ಅದು ಮನಸ್ಸಿಗೂ ಮುಟ್ಟುತ್ತದೆ. ಇದೀಗ ಕಾಟೇರ ಸಿನಿಮಾದಲ್ಲಾಗಿದ್ದೂ ಅದೇ. ಮಾಸ್‌ ಕ್ಲಾಸ್‌ ಎರಡೂ ವರ್ಗದ ಪ್ರೇಕ್ಷಕನ ತಟ್ಟೆಗೆ ಭರ್ಜರಿ ಬಾಡೂಟವನ್ನೇ ಬಡಿಸಿದ್ದಾರೆ ದರ್ಶನ್.‌ ಹಾಗಾಗಿ ಈ ಕಾಟೇರ ಸಖತ್‌ ಟೇಸ್ಟಿ!

ದರ್ಶನ್‌ ಸಿನಿಮಾ ಅಂದ ಮೇಲೆ ಅಲ್ಲೊಂದಿಷ್ಟು ಸಹಜ ಊಹೆಗಳಿರುತ್ತವೆ. ಮಾಸ್‌ ಸಾಹಸ ದೃಶ್ಯಗಳು, ಕಲರ್‌ಫುಲ್‌ ಹಾಡುಗಳು, ಕೌಟುಂಬಿಕ ಸೆಂಟಿಮೆಂಟ್‌ಗಳು ಇತ್ಯಾದಿ.. ಹೀಗೆ ಅಭಿಮಾನಿಗಳು ತಾವೇ ಒಂದಷ್ಟು ಕಲ್ಪನೆಗಳಲ್ಲಿ ಮಿಂದಿರುತ್ತಾರೆ. ಆದರೆ, ಆ ಊಹೆಗೂ ಮೀರಿದ ಹೊಸ ಕಾಲಘಟ್ಟವನ್ನು ಕಾಟೇರ ಸಿನಿಮಾದಲ್ಲಿ ಕಣ್ತುಂಬಿಕೊಳ್ಳಬಹುದು. 70ರ ಕಾಲಘಟ್ಟದ ಸಾಮಾಜಿಕ ಪಿಡುಗುಗಳ ಅನಾವರಣವನ್ನು ಕಾಟೇರನ ಮೂಲಕ ಮಾಡಿಸಿದ್ದಾರೆ ನಿರ್ದೇಶಕರು.

ಕಾಟೇರನ ಅಸಲಿ ಕಥೆ ಏನು?

ಇದು 1974ರಲ್ಲಿ ನಡೆಯುವ ಕಥೆ. ಭೀಮನಹಳ್ಳಿಯಲ್ಲಿ ಕುಲುಮೆ ಕೆಲಸ ಮಾಡುವ ಕಟ್ಟುಮಸ್ತು ದೇಹದ ಯುವಕ ಕಾಟೇರ. ಆತನಿಗೆ ತನ್ನ ಕೆಲಸವೇ ದೈವ. ದುಡಿಮೆನೇ ಆತನ ಮನೆದೇವ್ರು. ಇಂತ ಭೀಮನಹಳ್ಳಿಯಲ್ಲಿ ಜಮಿನ್ದಾರಿಕೆ ಪದ್ಧತಿ ಚಾಲ್ತಿಯಲ್ಲಿರುತ್ತದೆ. ಕೃಷಿ ಮಾಡೋ ಕೃಷಿಕರು ಒಂದೆಡೆಯಾದರೆ, ಅವರ ಮೇಲೆ ಕುಳಿತ ಉಳ್ಳವರ ದಬ್ಬಾಳಿಕೆ ಮತ್ತೊಂದು ಕಡೆ. ಕಷ್ಟಪಟ್ಟು ಬೆಳೆದ ಬೆಳೆ ಕೈ ಸೇರದೆ, ಜಮಿನ್ದಾರನ ಹೊಟ್ಟೆ ಸೇರುತ್ತಿರುತ್ತದೆ. ಈ ಹೋರಾಟಕ್ಕೆ ಧುಮುಕುವ ಕಥಾನಾಯಕ ಕಾಟೇರ, ಆ ಸರ್ವಾಧಿಕಾರಿತನವನ್ನು ಹೇಗೆ ಮಟ್ಟ ಹಾಕುತ್ತಾನೆ ಎಂಬುದೇ ಕಾಟೇರನ ಒನ್‌ ಲೈನ್‌ ಸ್ಟೋರಿ.

ನೋಡುಗನ ಎದೆಗೆ ರೋಚಕತೆಯ ನಾಟಿ

ಸಿಂಪಲ್‌ ಎಳೆಯನ್ನೇ ಅಷ್ಟೇ ಮಜಬೂತಾಗಿ ಕಟ್ಟಿಕೊಡುವ ಕೆಲಸ ಸಿನಿಮಾದಲ್ಲಾಗಿದೆ. 1970ರ ಕಾಲಘಟ್ಟವನ್ನು ಮರು ಸೃಷ್ಟಿಸಿ ಅಂದಿನ ದಿನಮಾನಗಳ ಸಣ್ಣ ಸಣ್ಣ ಏರಿಳಿತಗಳನ್ನೂ ತೆರೆಮೇಲೆ ಪ್ರಸೆಂಟ್‌ ಮಾಡುವಲ್ಲಿ ನಿರ್ದೇಶಕರ ಶ್ರಮ ಮೆಚ್ಚುವಂಥದ್ದು. ಆ ಕಾಲದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಪದ್ಧತಿಗಳನ್ನು ಕಣ್ಣಿಗೆ ಕಟ್ಟುವಂತೆ, ರೋಚಕತೆಯ ಒಗ್ಗರಣೆಯೊಂದಿಗೆ ಹದವಾಗಿ ನೋಡುಗನ ಎದೆಗೆ ನಾಟಿ ಮಾಡಿದ್ದಾರೆ ನಿರ್ದೇಶಕ ತರುಣ್‌ ಸುಧೀರ್.‌ ಪ್ರತಿ ಫ್ರೇಮ್‌ನಲ್ಲೂ ನಿರ್ದೇಶಕರ ಶ್ರಮ ಎದ್ದು ಕಾಣುತ್ತದೆ.

ಉಳ್ಳವರ ವಿರುದ್ಧ ತೊಡೆತಟ್ಟುವ ಕಾಟೇರ

ಕಾಟೇರ ಸಿನಿಮಾದಲ್ಲಿ ಮೊದಲೇ ಹೇಳಿದಂತೆ ಧಣಿಗಳ ಅಡಿಯಾಳಾಗಿ ದುಡಿಯುವ ಕೃಷಿಕರ ಬದುಕು ಮತ್ತು ಬವಣೆಯನ್ನು ಕಥಾನಾಯಕನಿಂದ ಹೇಳಿಸಲಾಗಿದೆ. ಮೇಲ್ಜಾತಿ ಕೀಳ್ಜಾತಿಗಳ ನಡುವಿನ ಪದರವನ್ನು ತೊಡೆದುಹಾಕುವ, ಸಾಮಾಜಿಕ ಪಿಡುಗಗಳ ವಿರುದ್ಧ ಧ್ವನಿ ಎತ್ತುವ ಕೆಲಸ ಕಾಟೇರ ಸಿನಿಮಾದಲ್ಲಾಗಿದೆ. ಜಾತಿ ಹೆಸರಿನ ಕುಲುಮೆಯಲ್ಲಿ ಬೆಂದು ಶೋಷಣೆಗೊಳಗಾದವರ, ಸಮಸ್ಯೆಗಳನ್ನೇ ಹೊದ್ದು ಜೀವಿಸುವ ರೈತರ, ಮರ್ಯಾದಾ ಹತ್ಯೆಯಂಥ ಕಟು ಪದ್ಧತಿಗಳ ವಿರುದ್ಧ ಸಿನಿಮಾ ಮಾತನಾಡಿದೆ. ನೋಡುಗರಿಗೆ ಅದು ಎಲ್ಲಿಯೂ ಉಪದೇಶ ಎನಿಸದೇ, ಚಿತ್ರದೊಳಗೆ ಲೀನವಾಗಿ ಹೇಳಬೇಕಾದ ವಿಷಯವನ್ನು ನೋಡುಗರತ್ತ ದಾಟಿಸಿದೆ ಕಾಟೇರ ಚಿತ್ರ.

ಹೊಸ ಪ್ರಯೋಗಕ್ಕಿಳಿದ ದರ್ಶನ್‌

ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ, ನಟ ದರ್ಶನ್‌ ಇಲ್ಲಿ ಹೊಸ ಪ್ರಯೋಗಕ್ಕೆ ಇಳಿದು, ಅಕ್ಷರಶಃ ಜೀವಿಸಿದ್ದಾರೆ. ಕಾಟೇರ ಸಿನಿಮಾ ಶುರುವಾಗುತ್ತಿದ್ದಂತೆ, ದೊಡ್ಡ ಬಿಲ್ಡಪ್‌ ಮೂಲಕವೇ ದರ್ಶನ್‌ ಕಾಣಿಸುವುದಿಲ್ಲ. ಬಂದ ತಕ್ಷಣವೇ ಹೊಡಿ ಬಡಿ ಆಟದ ಕಣಕ್ಕೂ ಇಳಿಯಲ್ಲ. ಅನಗತ್ಯ ಹೆಚ್ಚುವರಿ ದೃಶ್ಯಗಳ ಹೆಣಿಗೆ ಸಿನಿಮಾದಲ್ಲಿ ಎಲ್ಲಿಯೂ ಕಾಣಿಸುವುದಿಲ್ಲ. ಒಬ್ಬ ಕಟ್ಟುಮಸ್ತಾದ ಯುವಕ ಮತ್ತವನ ರೋಷಾವೇಷವನ್ನು ಸಿನಿಮಾದಲ್ಲಿ ಭರ್ತಿಯಾಗಿ ತುಂಬಿಸಿದ್ದಾರೆ ತರುಣ್.‌ ನಿರ್ದೇಶಕರ ಆ ಕಲ್ಪನೆಯ ಪಾತ್ರಕ್ಕೆ ಚೆಂದದ ಶಿಲೆಯಾಗಿ ಬದಲಾಗಿದ್ದಾರೆ.‌ ‌ ಒಂದು ರೀತಿ ಮೈಗಂಟಿದ ಹಳೇ ಪೊರೆ ಕಳಚಿದಂತೆ ಕಾಣಿಸುತ್ತಾರೆ ದರ್ಶನ್.

ಪಾತ್ರಧಾರಿಗಳ ನಟನೆ ಹೇಗಿದೆ?

ಚಿತ್ರದಲ್ಲಿ ಎರಡು ಶೇಡ್‌ಗಳಲ್ಲಿ ಕಾಣಿಸುವ ದರ್ಶನ್‌, ಆ ಎರಡೂ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡಿದ್ದಾರೆ. ದರ್ಶನ್‌ ಇಂಥ ಪಾತ್ರವನ್ನೂ ಮಾಡ್ತಾರಾ ಅನ್ನೋ ಮಟ್ಟಿಗೆ ಅವರನ್ನು ಕಾಟೇರ ಸಿನಿಮಾದಲ್ಲಿ ನೋಡಬಹುದು. ಅಭಿನಯಕ್ಕೆ ಹೆಚ್ಚು ಒತ್ತು ನೀಡುವ ಪಾತ್ರದಲ್ಲಿ ಕಾಣಿಸಿಕೊಂಡು, ಇಡೀ ಸಿನಿಮಾ ಆವರಿಸಿದ್ದಾರೆ. ಅವರ ಮುಗ್ಧತೆಯ, ಅಬ್ಬರದ ನಟನೆಗೆ ಪೂರ್ಣಾಂಕ ಸಂದಾಯವಾಗಲೇಬೇಕು. ಇನ್ನು ಇದೇ ಸಿನಿಮಾ ಮೂಲಕ ಮಾಲಾಶ್ರೀ ಪುತ್ರಿ ಸ್ಟಾರ್‌ ಕಿಡ್‌ ಆರಾಧನಾ ಚಂದನವನ ಪ್ರವೇಶಿಸಿದ್ದಾರೆ. ಹೆಚ್ಚುಕಾಲ ಪರದೆ ಸ್ಪೇಸ್‌ ಗಿಟ್ಟಿಸಿಕೊಂಡ ಆರಾಧನಾ, ಮೊದಲ ಚಿತ್ರಕ್ಕೆ ಪ್ರಯತ್ನ ಮೀರಿ ಶ್ರಮಹಾಕಿದ್ದಾರೆ. ಉಳ್ಳವರ ಮನೆ ಮಗಳಾಗಿ ಅವರಿಲ್ಲಿ ಕಾಣಿಸಿಕೊಂಡಿದ್ದಾರೆ.

ಬಹುತಾರಾಗಣದಲ್ಲಿ ಬಲವಿದೆ..

ಸ್ಟಾರ್‌ ತಾರಾಗಣವೇ ಈ ಚಿತ್ರದ ಹೈಲೈಟ್‌. ಜಗಪತಿ ಬಾಬು, ವಿನೋದ್‌ ಆಳ್ವಾ, ಶ್ರುತಿ, ಕುಮಾರ್‌ ಗೋವಿಂದ್‌, ಅವಿನಾಶ್‌, ಅಚ್ಯುತ್‌ ಕುಮಾರ್‌, ವೈಜನಾಥ್‌ ಬಿರಾದಾರ, ಮಾಸ್ಟರ್‌ ರೋಹಿತ್‌ ಸೇರಿ ಹತ್ತಾರು ಪಾತ್ರಗಳು ಕಾಟೇರನ ಮಡಿಲಲ್ಲಿವೆ. ಅದರಲ್ಲೂ ಕಾಟೇರನ ಸಂಗಡಿಗರಾಗಿ ಬಿರಾದಾರ ಮತ್ತು ರೋಹಿತ್‌ ಪಾತ್ರ ಕೊನೇ ವರೆಗೂ ನೆನಪಿನಲ್ಲಿ ಉಳಿಯುತ್ತದೆ. ಅಕ್ಕ ಭಾವನಾಗಿ ಶ್ರುತಿ ಮತ್ತು ಕುಮಾರ್‌ ಗೋವಿಂದ ಕೊಟ್ಟ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಶಾನುಭೋಗರಾಗಿ ಅವಿನಾಶ್‌, ದೇವರಾಯನಾಗಿ ಜಗಪತಿ ಬಾಬು, ಕಾಳೇಗೌಡನಾಗಿ ವಿನೋದ್‌ ಆಳ್ವಾ ಪಾತ್ರಗಳಲ್ಲಿ ಜೀವಿಸಿದ್ದಾರೆ.

ಕ್ಯಾಮರಾ ಕಣ್ಣುಗಳು ಚೆಂದ, ಸಂಭಾಷಣೆ ಇನ್ನೂ ಚಂದ

ಇಡೀ ಸಿನಿಮಾದ ಹೈಲೈಟ್‌ ಸಿನಿಮಾಟೋಗ್ರಫಿ. 70 ಕಾಲಘಟ್ಟವನ್ನು ಅಷ್ಟೇ ಮನಮುಟ್ಟಿವಂತೆ ಕ್ಯಾಮರಾ ಕಣ್ಣುಗಳಲ್ಲಿ ತೆರೆದಿಟ್ಟಿದ್ದಾರೆ ಕ್ಯಾಮರಾಮನ್‌ ಸುಧಾಕರ್.‌ ಅದರ ಜತೆಗೆ ಮಾಸ್ತಿ ಅವರ ಬಿಗಿ ಹಿಡಿತದ ಬರವಣಿಗೆ ಸಿನಿಮಾದ ತೂಕ ಹೆಚ್ಚಿಸಿದೆ. ಚಿತ್ರದಲ್ಲಿ ಬರುವ ಸಂಭಾಷಣೆಗಳು ನೈಜತೆಗೆ ಹೆಚ್ಚು ಹತ್ತಿರ ಎನಿಸುತ್ತವೆ. ಹಿನ್ನೆಲೆ ಸಂಗೀತವೂ ಮೋಡಿ ಮಾಡುತ್ತದೆ. ಆದರೆ, ಹಾಡುಗಳಲ್ಲಿ ಪದೇ ಪದೆ ಕೇಳುವ ಗುಣವಿಲ್ಲ. ಅದೇ ರೀತಿ ಇಡೀ ಸಿನಿಮಾಗಳಲ್ಲಿ ಕಥೆ ಕುತೂಹಲದಿಂದ ನೋಡಿಸಿಕೊಂಡು ಹೋಗುತ್ತಿದೆ ಎನ್ನುತ್ತಿರುವಾಗಲೇ, ಅನವಶ್ಯಕವಾಗಿ ಎದುರಾಗುವ ಹಾಡುಗಳು ನೋಡುಗನ ತಾಳ್ಮೆ ಪರೀಕ್ಷಿಸುತ್ತವೆ.

IPL_Entry_Point