Kaatera Meaning: ಕಾಟೇರ ಪದದ ಅರ್ಥ ಏನು? ಕಾಟೇರಕ್ಕೆ ಹೊಸ ವ್ಯಾಖ್ಯಾನ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ
Kaatera Meaning: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಸಿನಿಮಾ ಬಿಡುಗಡೆಯಾಗಿದೆ. ಇದೇ ಸಮಯದಲ್ಲಿ ಕಾಟೇರ ಪದದ ಅರ್ಥವೇನು? ಕಾಟೇರಕ್ಕೆ ಇಂಗ್ಲಿಷ್‌ನಲ್ಲಿ ಏನು ಹೇಳುತ್ತಾರೆ? ಕಾಟೇರಮ್ಮ, ಕಾಟಿ, ಕಾಟೇರಮ್ಮ ದೇವಸ್ಥಾನದ ಕುರಿತೂ ಜನರು ಹುಡುಕಾಟ ನಡೆಸುತ್ತಿದ್ದಾರೆ. ಇದಕ್ಕೆ ಉತ್ತರ ಇಲ್ಲಿದೆ.
ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ, ತರುಣ್ ಸುಧೀರ್ ನಿರ್ದೇಶನದ ಕಾಟೇರ ಸಿನಿಮಾ ಬಿಡುಗಡೆಯಾಗಿದೆ. ಇದೇ ಸಿನಿಮಾದ ಮೂಲಕ ಮಾಲಾಶ್ರಿ ಮಗಳು ಆರಾಧನಾ ರಾಮ್ ಅವರು ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪದಾರ್ಪಣೆ ಮಾಡಿದ್ದಾರೆ. ಥಿಯೇಟರ್‌ಗಳ ಮುಂದೆ ದಚ್ಚು ಅಭಿಮಾನಿಗಳು ನೆರೆದಿದ್ದಾರೆ. ನಿನ್ನೆ ರಾತ್ರಿಯಿಂದಲೇ ಚಿತ್ರ ಪ್ರದರ್ಶನ ಆರಂಭವಾಗಿದ್ದು, ಸಿನಿಮಾ ಟಿಕೆಟ್ ದೊರಕದೆ ಇರುವ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ, ಗೂಗಲ್‌ನಲ್ಲಿ ಕಾಟೇರ ಅರ್ಥವೇನು ಎಂದು ಎಲ್ಲರೂ ಹುಡುಕುತ್ತಿದ್ದಾರೆ.
ಕಾಟೇರ ಪದದ ಅರ್ಥವೇನು?
ಇತ್ತೀಚೆಗೆ ದರ್ಶನ್ ಅವರು ಯೂಟ್ಯೂಬ್ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದರು. ಕಾಟೇರ ಎಂದರೆ ಕೆಲವರ ಮನೆಯ ಕುಲದೇವರು. ನಮ್ಮ ಮನೆಯ ಕುಲದೇವರು ಕೂಡ ಕಾಟೇರಮ್ಮ. ನಾವು ಕಾಟೇರಮ್ಮನಿಗೆ ಪೂಜೆ ಮಾಡಿಯೇ ಆಮೇಲೆ ಮುನೇಶ್ವರ ದೇವರಿಗೆ ಪೂಜೆ ಮಾಡಿಯೇ ಮುಂದಿನ ಕೆಲಸ ಮಾಡೋದು. ಸುಮಾರು ಮನೆಗಳಲ್ಲಿ ಕುಲದೇವರು ಇರುವಂತೆ ನಮ್ಮಲ್ಲಿ ಇರುತ್ತದೆ. ಆದರೆ, ಸಿನಿಮಾದಲ್ಲಿ ಅದೇ ರೀತಿ ಏನು ಇಲ್ಲ. ಇದು ಹೆಸರು ಚೆನ್ನಾಗಿದೆ ಅಂತ ಇಟ್ಟಿರೋದು. ಕಾಟೇರಕ್ಕೆ ಬೈಸನ್ ಅಥವಾ ಕಾಟಿ (ಕೋಣ, ಕಾಡುಕೋಣ) ಎಂಬ ಅರ್ಥವಿದೆ.ಕಾಡಿನಲ್ಲಿ ಕಾಟಿ ಮತ್ತು ಆನೆಯನ್ನು ನಂಬಲು ಸಾಧ್ಯವಿಲ್ಲ.
ಕಾಟೇರ ಪದದ ಅರ್ಥವನ್ನು ಇತ್ತೀಚೆಗೆ ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಕೂಡ ತಿಳಿಸಿದ್ದರು. "ಕಾಟೇರಮ್ಮ ಶಕ್ತಿಶಾಲಿ ದೇವತೆ. ಆ ತಾಯಿಯ ಕಾವಲುಗಾರ, ಸೇವಕನನ್ನು ಕಾಟೇರಾ ಎನ್ನುತ್ತಾರೆ ಎಂದು ಅವರು ಮಾಹಿತಿ ನೀಡಿದ್ದರು. ಹೀರೋನ ಹಿನ್ನೆಲೆ, ಶಕ್ತಿ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಕಾಟೇರ ಎಂಬ ಹೆಸರನ್ನು ನೀಡಿದ್ದೇವೆ" ಎಂದು ತರುಣ್ ಸಾಗರ್ ಹೇಳಿದ್ದರು.
ಕಾಟೇರಮ್ಮ ದೇವಸ್ಥಾನ
ಕರ್ನಾಟಕದಲ್ಲಿ ಕಾಟೇರಮ್ಮ ದೇವಸ್ಥಾನಗಳು ಇವೆ. ಸಾಕಷ್ಟು ಜನರು ಕುಲದೇವರಾಗಿ ಕಾಟೇರಮ್ಮನ ಆರಾಧನೆ ಮಾಡುತ್ತಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಸೂಲಿಬೆಲೆ ಹೋಬಳಿಯಲ್ಲಿ ಶ್ರೀ ಕ್ಷೇತ್ರ ಕಂಬಳಿಪುರ ಕಾಟೇರಮ್ಮ ದೇವಸ್ಥಾನವಿದೆ. ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದ ವಿವಿಧ ಕಡೆಗಳಲ್ಲಿ ಕಾಟೇರಮ್ಮ ದೇವಸ್ಥಾನಗಳಿವೆ.
ಕಾಟಿ ಕಾಡು ಪ್ರಾಣಿಯೂ ಹೌದು
ಕಾಡೆಮ್ಮೆಗೆ ಕಾಟಿ ಅಥವಾ ಕಾಟೇರ ಎಂದು ಕರೆಯಲಾಗುತ್ತದೆ. ಕಾಡುಕೋಣ ಕರ್ನಾಟಕದಲ್ಲಿಯೂ ಸಾಕಷ್ಟಿದೆ. ಕಾಡಿನಲ್ಲಿರುವ ಕಾಟಿಗಳು ಆಗಾಗ ಕೃಷಿ ತೋಟಗಳಿಗೂ ನುಗ್ಗುವುದುಂಟು. ಕಾಡಿನಲ್ಲಿ ಮನುಷ್ಯರ ಮೇಲೆ ದಾಳಿ ಮಾಡಲು ಇವು ಹಿಂಜರಿಯುವುದಿಲ್ಲ. ಇದೇ ಕಾರಣಕ್ಕೆ ಕಾಡಿನಲ್ಲಿ ಕಾಟಿಯನ್ನು ನಂಬಲು ಸಾಧ್ಯವಿಲ್ಲ ಎಂದು ದರ್ಶನ್ ಹೇಳಿದ್ದಾರೆ.
ಕಾಟೇರಕ್ಕೆ ಹೊಸ ಅರ್ಥ ನೀಡಿದ ದರ್ಶನ್
ಕಾಟೇರ ಸಿನಿಮಾದಲ್ಲಿ ಕಾಟೇರಮ್ಮ, ಕಾಟಿ ಇತ್ಯಾದಿಗಳ ಬದಲು ಕೃಷಿಕರ ಒಳಿತಿಗಾಗಿ ಹೋರಾಡುವ ಹೀರೋ ಆಗಿ, ಊರಿನ ಪ್ರಮುಖ ಹೋರಾಟಗಾರನಾಗಿ, ಜನರ ಕಷ್ಟಗಳಿಗೆ ಸ್ಪಂಧಿಸುವ ವ್ಯಕ್ತಿಯಾಗಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಕಾಟೇರಕ್ಕೆ ಜನರನ್ನು ಕಾಯುವ ನಾಯಕ ಎಂಬ ಅರ್ಥವನ್ನೂ ಈ ಸಿನಿಮಾದ ಮೂಲಕ ನೀಡಿದ್ದಾರೆ.
ವಿಭಾಗ