ಮಾರ್ಟಿನ್ ಚಿತ್ರಕ್ಕೆ ಅದ್ದೂರಿ ಸ್ವಾಗತ: ನರ್ತಕಿ ಥಿಯೇಟರ್ ಮುಂದೆ ನೆರೆದಿದ್ದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಧ್ರುವ ಸರ್ಜಾ
ಸಾಕಷ್ಟು ಅಡೆತಡೆಗಳ ನಡುವೆಯೂ ಮಾರ್ಟಿನ್ ಸಿನಿಮಾ ನವರಾತ್ರಿಯಂದು ಅಭಿಮಾನಿಗಳ ಮುಂದೆ ಬಂದು ನಿಂತಿದೆ. 13 ಭಾಷೆಗಳಲ್ಲಿ ರಿಲೀಸ್ ಆಗಿರುವ ಚಿತ್ರಕ್ಕೆ ಗ್ಯ್ರಾಂಡ್ ವೆಲ್‌ಕಮ್ ದೊರೆತಿದೆ. ನರ್ತಕಿ ಚಿತ್ರಮಂದಿರಕ್ಕೆ ಭೇಟಿ ನೀಡಿದ ಧ್ರುವ ಸರ್ಜಾ, ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
ಬಹಳ ದಿನಗಳಿಂದ ಕಾದಿದ್ದ ಮಾರ್ಟಿನ್ ಸಿನಿಮಾ ರಿಲೀಸ್ ಆಗಿದೆ. ಸಾಕಷ್ಟು ಅಡೆತಡೆಗಳ ನಡುವೆಯೂ ಸಿನಿಮಾ ಬಿಡುಗಡೆ ಆಗಿ ಒಳ್ಳೆ ಪ್ರತಿಕ್ರಿಯೆ ಪಡೆಯುತ್ತಿದೆ. ಧ್ರುವ ಸರ್ಜಾ ಕಟೌಟ್‌ಗಳು ಕರ್ನಾಟಕ ಮಾತ್ರವಲ್ಲದೆ, ಆಂಧ್ರ ಪ್ರದೇಶ, ತೆಲಂಗಾಣದಲ್ಲೂ ಮಿಂಚುತ್ತಿದೆ. ಎಪಿ ಅರ್ಜುನ್ ನಿರ್ದೇಶನಕ್ಕೆ ತೆಲುಗು ಪ್ರೇಕ್ಷಕರು ಕೂಡಾ ಹ್ಯಾಟ್ಸ್ ಆಫ್ ಹೇಳಿದ್ದಾರೆ.
ಆಂಧ್ರ, ತೆಲಂಗಾಣದಲ್ಲಿ ಪಾಸಿಟಿವ್ ರೆಸ್ಪಾನ್ಸ್
ಗುರುವಾರವೇ ಬಹಳಷ್ಟು ಕಡೆ ಪೇಯ್ಡ್ ಪ್ರೀಮಿಯರ್ ಏರ್ಪಡಿಸಲಾಗಿತ್ತು. ತೆಲುಗು ಸಿನಿ ಪ್ರೇಕ್ಷಕರು ಮಾರ್ಟಿನ್ ಚಿತ್ರವನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಸಿನಿಮಾ ನೋಡಿ ಧ್ರುವ ಫಿಟ್ನೆಸ್, ಆಕ್ಷನ್, ಡೈಲಾಗ್‌ಗೆ ಚಪ್ಪಾಳೆ ತಟ್ಟಿದ್ದಾರೆ. ಸಿನಿಮಾ ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಚೆನ್ನಾಗಿದೆ. ಸಿನಿಮಾದಲ್ಲಿ ಕಂಟೆಂಟ್ ಬೇರೆಯದ್ದೇ ಲೆವೆಲ್‌ನಲ್ಲಿದೆ. ಕೆಜಿಎಫ್, ಕಾಂತಾರದಂತೆ ಮಾರ್ಟಿನ್ ಸಿನಿಮಾ ಕೂಡಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಲಿದೆ. 1000 ಕೋಟಿ ರೂ. ಕ್ಲಬ್ ಸೇರೋದು ಪಕ್ಕಾ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅರ್ಜುನ್ ಸರ್ಜಾ ಸೊದರಳಿಯ ಧ್ರುವ ಸರ್ಜಾ ಮಾವನಿಗಿಂತ ದೊಡ್ಡ ಹೆಸರು ಮಾಡುತ್ತಾರೆ ಎಂದು ಆಶೀರ್ವಾದ ಮಾಡುತ್ತಿದ್ದಾರೆ. ನೆರೆ ರಾಜ್ಯದಲ್ಲಿ ತಮ್ಮ ಚಿತ್ರಕ್ಕೆ ದೊರೆತ ಪ್ರತಿಕ್ರಿಯೆ ಕಂಡು ಧ್ರುವ ಸರ್ಜಾ ಸಂತೋಷ ವ್ಯಕ್ತಪಡಿಸಿದ್ದಾರೆ.
ಧ್ರುವ ಸರ್ಜಾ ಟೆಂಪಲ್ ರನ್
ಇಂದು ಮನೆಯಲ್ಲಿ ಆಯುಧ ಪೂಜೆ ಮುಗಿಸಿ, ಧ್ರುವ ಸರ್ಜಾ ನರ್ತಕಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದಾರೆ. ಧ್ರುವ ಸರ್ಜಾ ನೋಡಲು ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು. ನವರಾತ್ರಿ ಜೊತೆಗೆ ಅಭಿಮಾನಿಗಳಿಗೆ ಮಾರ್ಟಿನ್ ಹಬ್ಬದ ಸಂಭ್ರಮ ಕೂಡಾ ಜೋರಾಗಿದೆ. ಥಿಯೇಟರ್ ಮುಂದೆ ಧ್ರುವ ಸರ್ಜಾ ಕಟೌಟ್, ಬಂಟಿಂಗ್ಸ್, ಡೋಲಿನ ಸದ್ದು, ಇಲ್ಲಿ ಯಾವುದೋ ಹಬ್ಬ ನಡೆಯುತ್ತಿರುವಂತೆ ಫೀಲ್ ಕೊಡುತ್ತಿತ್ತು. ವಾಹವೊಂದರ ಮೇಲೆ ಹತ್ತಿ, ಒಂದೆರಡು ಸ್ಟೆಪ್ಸ್ ಹಾಕಿದ ಧ್ರುವ ಫ್ಯಾನ್ಸ್‌ನತ್ತ ಕೈ ಬೀಸಿದರು. ಈ ಸಮಯದಲ್ಲಿ ಅಭಿಮಾನಿಗಳು ಧ್ರುವ ಮೇಲೆ ಹೂವಿನ ಮಳೆ ಸುರಿಸಿದರು. ಅಭಿಮಾನಿಗಳ ಪ್ರೀತಿಗೆ ಧ್ರುವ ಸರ್ಜಾ ಕೈ ಮುಗಿದು ಧನ್ಯವಾದ ಅರ್ಪಿಸಿದರು. ಥಿಯೇಟರ್‌ಗೆ ಹೊರಡುವ ಮುನ್ನ ಧ್ರುವ ಸರ್ಜಾ ಮನೆ ಬಳಿ ಬಂದ ಗೋವಿನ ಪೂಜೆ ಮಾಡಿದ್ದಾರೆ. ನಂತರ ಜಯನಗರದ ಗಣೇಶ ದೇವಸ್ಥಾನ, ಶಾಸ್ತ್ರಿ ನಗರದ ಉಮಾ ಮಹೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಆಕ್ಷನ್ ಪ್ರಿನ್ಸ್
ಮಾಧ್ಯಮಗಳೊಂದಿಗೆ ಮಾತನಾಡಿದ ಧ್ರುವ ಸರ್ಜಾ, ಪ್ರತಿ ಸಿನಿಮಾ ಮಾಡುವಾಗಲೂ ಒಂದಲ್ಲಾ ಒಂದು ಸಮಸ್ಯೆ ಇದ್ದೇ ಇರುತ್ತದೆ. ಆದರೆ ಈ ಸಿನಿಮಾ ಮಾಡುವಾಗ ಸಾಕಷ್ಟು ಅಡೆ ತಡೆಗಳನ್ನು ಎದುರಿಸಿದ್ದೇವೆ. ಅದೆಲ್ಲವನ್ನೂ ದಾಟಿ ಬಂದು ಇಂದು ಸಿನಿಮಾ ರಿಲೀಸ್ ಮಾಡಿದ್ದೇವೆ. ಕನ್ನಡ ಕಲಾಭಿಮಾನಿಗಳು, ಎಲ್ಲಾ ತಾಯಂದಿರು ಆಶೀರ್ವಾದ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ದಸರಾ ಶುಭ ಸಂದರ್ಭದಲ್ಲಿ ಸಿನಿಮಾ ಬಿಡುಗಡೆ ಆಗಿದೆ. ಆ ಚಾಮುಂಡೇಶ್ವರಿ ಆಶೀರ್ವಾದ ನಮ್ಮ ಸಿನಿಮಾ ಮೇಲೆ ಇರಲಿ, ಬೆಳಗ್ಗೆ ಏಳುತ್ತಿದ್ದಂತೆ ಮನೆ ಮುಂದೆ ಗೋವು ಬಂದಿತ್ತು. ಅದೊಂದು ಶುಭ ಶಕುನ, ಇದಾದ ನಂತರ ಆಂಧ್ರದಲ್ಲಿ ಸಿನಿಮಾ ಬಗ್ಗೆ ಒಳ್ಳೆ ಪ್ರತಿಕ್ರಿಯೆ ಸಿಕ್ತು. ಈಗ ನಮ್ಮಲ್ಲೂ ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಬಹಳ ಖುಷಿಯಾಗುತ್ತಿದೆ, ಅಭಿಮಾನಿಗಳನ್ನು ನಂಬಿದ್ದೇನೆ, ಜೈ ಆಂಜನೇಯ ಎಂದು ಧ್ರುವ ಸಿನಿಮಾ ಬಗ್ಗೆ ಪ್ರೀತಿ ತೋರುತ್ತಿರುವ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ್ದಾರೆ.