‘ರಾಜ್ಯದ ಮಗಳ ಕೊಲೆಯಾಗಿದೆ, ಎಲ್ಲಿದ್ದೀರಿ ಪ್ರಕಾಶ್ ರಾಜ್, ಚೇತನ್ ಅಹಿಂಸಾ, ಎಲ್ಲೋಯ್ತು ನಿಮ್ಮ ಆ ಧ್ವನಿ?’ ಪ್ರಥಮ್ ಪ್ರಶ್ನೆ
ನೇಹಾ ಹಿರೇಮಠ ಹತ್ಯೆ ಬಗ್ಗೆ ನಟ ಪ್ರಥಮ್ ಕೊಂಚ ಬಿರುಸಾಗಿಯೇ ಮಾತನಾಡಿದ್ದಾರೆ. ಹುಬ್ಬಳ್ಳಿಯ ನೇಹಾ ಮನೆಗೆ ತೆರಳಿದ ಅವರು, ಆರೋಪಿಗೆ ಈ ಕೂಡಲೇ ಶಿಕ್ಷೆ ಪ್ರಕಟವಾಗಬೇಕು ಎಂದಿದ್ದಾರೆ. ಜತೆಗೆ ಪ್ರಕಾಶ್ ರಾಜ್ ಮತ್ತು ಚೇತನ್ ಅಹಿಂಸಾ ಬಗ್ಗೆಯೂ ಮಾತನಾಡಿದ್ದಾರೆ.

Pratham on Prakash Raj: ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಬೆಳವಣಿಗೆಗಳು ನಡೆಯುತ್ತಿವೆ. ನೇಹಾ ಅವರ ಮನೆಗೆ ಮಹಿಳಾ ಆಯೋಗ ಭೇಟಿ ನೀಡಿದೆ. ನಟ ಮತ್ತು ಬಿಗ್‌ಬಾಸ್ ವಿಜೇತ ಪ್ರಥಮ್ ಸಹ ಹುಬ್ಬಳ್ಳಿಯ ನೇಹಾ ಅವರ ಮನೆಗೆ ತೆರಳಿ ಸಾಂತ್ವನ ಹೇಳಿದ್ದಾರೆ. ನೇಹಾ ಹಂತನ ಬಗ್ಗೆ ಕಿಡಿ ಕಾರಿರುವ ಪ್ರಥಮ್, ಈ ಕೂಡಲೇ ಆತನಿಗೆ ಉಗ್ರ ಶಿಕ್ಷೆ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ. ಜತೆಗೆ ನಟ ಪ್ರಕಾಶ್ ರಾಜ್ ಮತ್ತು ಚೇತನ್ ಅಹಿಂಸಾ ಬಗ್ಗೆಯೂ ಮಾತನಾಡಿದ್ದಾರೆ.
ನೇಹಾ ತಂದೆ ನಿರಂಜನ್ ಹಿರೇಮಠ ಅವರನ್ನು ಭೇಟಿ ಮಾಡಿದ ಪ್ರಥಮ್, ಸಾಂತ್ವನ ಹೇಳಿದ್ದಾರೆ. ಅದಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಕೊಂಚ ಕಟುವಾಗಿಯೇ ಮಾತನಾಡಿದ ಅವರು, ಇಂದು ನಮ್ಮ ಸರ್ಕಾರ ಆರೋಪಿ ಮನೆಗೆ ಭದ್ರತೆ ನೀಡಿದೆ. ಇತ್ತ ನೇಹಾ ಹೆತ್ತವರ ಜತೆಗೆ ಇಡೀ ದೇಶ ಹಂತಕನನ್ನು ಗಲ್ಲಿಗೇರಿಸಿ ಎಂದು ಆಗ್ರಹಿಸುತ್ತಿದೆ. ಈ ಕೂಡಲೇ ಇಂಥ ಪ್ರಕರಣಗಳನ್ನು ನಿಯಂತ್ರಿಸಲು ಕಠಿಣ ಕಾನೂನು ಜಾರಿಗೆ ತರಬೇಕು ಎಂದಿದ್ದಾರೆ.
ಮಗನಿಗೆ ಇದ್ದನ್ನೇ ಹೇಳಿಕೊಟ್ರಾ?
ರಾಜಕೀಯ ನಾಯಕರ ಬಗ್ಗೆ ಮಾತನಾಡಿದ ಅವರು, ನಿಮ್ಮ ಈ ಹೇಳಿಕೆಗಳು ನೇಹಾ ಕುಟುಂಬಕ್ಕೆ ನೋವುಂಟು ಮಾಡುತ್ತಿವೆ. ಈ ಮೂಲಕ ನೀವು ಸಾವಿನ ಮನೆಯಲ್ಲಿ ರಾಜಕಾರಣ ಮಾಡಬೇಡಿ. ಆದಷ್ಟು ಬೇಗ ಹಂತಕನಿಗೆ ಶಿಕ್ಷೆ ಆಗಬೇಕು. ಈ ಮೂಲಕ ನೇಹಾ ಕುಟುಂಬಕ್ಕೆ ನ್ಯಾಯ ಸಿಗಬೇಕು. ನನ್ನ ಮಗ ಅಂಥವನಲ್ಲ ಎಂದು ಫಯಾಜ್ ತಾಯಿ ಹೇಳಿದ್ದಾರೆ. ನೀವೂ ಒಬ್ಬ ಶಿಕ್ಷಕಿಯಾಗಿ ನಿಮ್ಮ ಮಗನಿಗೆ ಹೇಳಿಕೊಟ್ಟಿದ್ದು ಇದೇನಾ? ಎಂದು ಅವರ ಪೋಷಕರಿಗೂ ಪ್ರಶ್ನೆ ಮೂಲಕ ತಿವಿದಿದ್ದಾರೆ.
ಎಲ್ಲಿದ್ದೀರಿ ಪ್ರಕಾಶ್ ರಾಜ್, ಚೇತನ್ ಅಹಿಂಸಾ
ಇನ್ನೊಂದು ಕಡೆ ಸೋಷಿಯಲ್ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ವಿಚಾರಗಳಿಗೆ ಸುದ್ದಿಯಲ್ಲಿರುವ ನಟ ಪ್ರಕಾಶ್ ರಾಜ್ ಮತ್ತು ಚೇತನ್ ಅಹಿಂಸಾ ಬಗ್ಗೆಯೂ ಪ್ರಥಮ್, ಮಾತನಾಡಿದ್ದಾರೆ. ಏನೇ ಆದರೂ ಪ್ರಧಾನಿ ಮೋದಿ ಅವರನ್ನೇ ಪ್ರಶ್ನೆ ಮಾಡುತ್ತೀರಿ, ಈಗ ಹುಬ್ಬಳ್ಳಿಯಲ್ಲಿ ಮಗಳು ನೇಹಾ ಹಿರೇಮಠ ಕೊಲೆಯಾಗಿದ್ದಾಳೆ. ನೀವ್ಯಾಕೆ ಧ್ವನಿ ಎತ್ತುತ್ತಿಲ್ಲ. ಹೆಸರಿನ ಮುಂದೆ ಬರೀ ಅಹಿಂಸಾ ಎಂದು ಇಟ್ಟುಕೊಳ್ಳುವುದಲ್ಲ. ಇಂಥ ಘಟನೆಗಳು ನಡೆದಾಗ ಖಂಡಿಸುವ ಕೆಲಸವನ್ನೂ ಮಾಡಬೇಕು. ನಿಮ್ಮ ನಿಮ್ಮ ಅನುಕೂಲಗಳಿಗೆ ತಕ್ಕಂತೆ ಮಾತನಾಡುವುದನ್ನು ನಿಲ್ಲಿಸಿ ಎಂದು ಖಾರವಾಗಿಯೇ ಮಾತನಾಡಿದ್ದಾರೆ ಪ್ರಥಮ್.
ಸಾವಲ್ಲೂ ರಾಜಕಾರಣ ಬೇಡ
"ನಮಗಂತೂ ನೇಹಾ ಅವರ ಹತ್ಯೆ ತುಂಬ ನೋವು ತರಿಸಿದೆ. ಈ ನಡುವೆ ರಾಜಕೀಯ ಪಕ್ಷಗಳು ಮಾತ್ರ ಬಗೆಬಗೆ ಹೇಳಿಕೆ ನೀಡುತ್ತಿವೆ. ಇವರ ಆ ಹೇಳಿಕೆಯಿಂದ ಕುಟುಂಬ ನೋವು ಅನುಭವಿಸುತ್ತಿದೆ" ಎಂದಿದ್ದಾರೆ. “ಈ ಸಾವಿನಲ್ಲಿ ರಾಜಕಾರಣ ಮಾಡಬೇಡಿ. ಓಲೈಕೆ ರಾಜಕಾರಣ ಕೈಬಿಡಿ. ಆದಷ್ಟು ಬೇಗ ನೇಹಾ ಹಂತಕನಿಗೆ ಶಿಕ್ಷೆ ಆಗಬೇಕು. ಆಗ ನೇಹಾ ಕುಟುಂಬಕ್ಕೆ ನ್ಯಾಯ ಸಿಕ್ಕಂತೆ. ಫಯಾಜ್ ಬರೋಬ್ಬರಿ 9 ಬಾರಿ ನೇಹಾಗೆ ಚಾಕು ಇರಿದಿದ್ದಾನೆ. ಇದು ನಿಜಕ್ಕೂ ಕ್ಷಮಿಸಲಾರ್ಹ ತಪ್ಪು” ಎಂದಿದ್ದಾರೆ.
ಹಿಂದೂ ಹುಡುಗೀರ ತಂಟೆಗೆ ಬರಬೇಡಿ
"ಇಂಥ ಅಯೋಗ್ಯರನ್ನು ಒಂದು ಗತಿ ಕಾಣಿಸುವ ಕೆಲಸವನ್ನು ಮುಸ್ಲಿಂ ಸಮುದಾಯವೇ ಮಾಡಬೇಕು. ಯಾರೂ ಅವನ ಪರವಾಗಿ ವಕಾಲತ್ತು ವಹಿಸಕೂಡದು. ಅದರಲ್ಲೂ ನಿಮಗೆ ಯಾಕ್ರಯ್ಯ ಹಿಂದೂ ಹುಡುಗಿಯರ ಸಹವಾಸ" ಎಂದಿದ್ದಾರೆ. "ನಿಮ್ಮ ಧರ್ಮದಲ್ಲಿ ಒಂದಲ್ಲ ಎರಡಲ್ಲ ಹತ್ತು ಮದುವೆಯಾಗಿ ಖುಷಿಯಾಗಿರಿ. ನಿಮಗೆ ಯಾರೂ ಬೇಡ ಅಂದಿಲ್ಲ. ಆದರೆ, ಯಾವುದೇ ಕಾರಣಕ್ಕೂ ಹಿಂದೂ ಹುಡುಗಿಯರ ತಂಟೆಗೆ ಬರಬೇಡಿ. ನಮ್ಮ ಹಿಂದೂಗಳ ಸಹವಾಸಕ್ಕೆ ಮಾತ್ರ ಬರಬೇಡಿ, ಚೆನ್ನಾಗಿರಲ್ಲಅಷ್ಟೇ" ಎಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ ಪ್ರಥಮ್.

ವಿಭಾಗ