Jayachitra: ಹುಲಿಯ ಹಾಲಿನ ಮೇವು ಸಿನಿಮಾ ನಟಿ ಜಯಚಿತ್ರ ಮಗ ಕೂಡಾ ಹೀರೋ; ಸಂಗೀತ ನಿರ್ದೇಶಕನಾಗಿಯೂ ಗುರುತಿಸಿಕೊಂಡಿರುವ ಅಮರೀಶ್ ಗಣೇಶ್
ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ಜಯಚಿತ್ರ, ಉದ್ಯಮಿ ಗಣೇಶ್ ಎಂಬುವರನ್ನು ಮದುವೆ ಆದರು. ಈ ದಂಪತಿಗೆ ಅಮರೀಶ್ ಗಣೇಶ್ ಎಂಬ ಮಗ ಇದ್ಧಾರೆ. ಮಗನನ್ನು ಚಿತ್ರರಂಗಕ್ಕೆ ಪರಿಚಯಿಸಲು ಜಯಚಿತ್ರ ತಾವೇ ಒಂದು ಸಿಇಮಾ ನಿರ್ಮಿಸಿ ನಿರ್ದೇಶಿಸಿದರು.
ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ... ತನ್ನ ಮೇಲೆ ಮುನಿಸು ತೋರುವ ಪ್ರಿಯತಮೆಯನ್ನು ರಮಿಸಲು ಡಾ. ರಾಜ್‌ಕುಮಾರ್ ಹಾಡುವ 'ಹುಲಿಯ ಹಾಲಿನ ಮೇವು' ಚಿತ್ರದ ಈ ಹಾಡು ಇಂದಿಗೂ ಫೇಮಸ್. ಚಿತ್ರದಲ್ಲಿ ಅಣ್ಣಾವ್ರ ಜೋಡಿಯಾಗಿ ಜಯಚಿತ್ರ ಹಾಗೂ ಜಯಪ್ರದಾ ನಟಿಸಿದ್ದರು.
ಜಯಪ್ರದಾ ಸಿನಿಮಾಗಳಿಂದ ದೂರ ಉಳಿದು ರಾಜಕೀಯದಲ್ಲಿ ಸಕ್ರಿಯರಾಗಿದ್ದರೆ, ಜಯಚಿತ್ರ ಅಪರೂಪಕ್ಕೆ ಒಮ್ಮೆ ಸಿನಿಮಾಗಳಲ್ಲಿ ನಟಿಸುತ್ತಾ ಕುಟುಂಬದೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ. ಜಯಚಿತ್ರ ಸದ್ಯಕ್ಕೆ ಚೆನ್ನೈನಲ್ಲಿ ನೆಲೆಸಿದ್ದಾರೆ. ಜಯಚಿತ್ರ ಅವರಿಗೆ ಒಬ್ಬರು ಮಗ ಇದ್ದು ಅವರೂ ಕೂಡಾ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ.
ಆಂಧ್ರಪ್ರದೇಶಕ್ಕೆ ಸೇರಿದ ಜಯಚಿತ್ರ
ಜಯಚಿತ್ರ, ಮೂಲತ: ಆಂಧ್ರಪ್ರದೇಶದ ಕಾಕಿನಾಡ ಮೂಲದವರು. ಇವರ ತಂದೆ ಡಾಕ್ಟರ್ ತಾಯಿ ಅಮ್ಮಾಜಿ (ಜಯಶ್ರೀ) ಕೂಡಾ ನಟಿಯಾಗಿ ಹೆಸರು ಮಾಡಿದ್ದರು. ಜಯಚಿತ್ರ ಮೊದಲ ಹೆಸರು ಲಕ್ಷ್ಮಿ ರೋಹಿಣಿ ದೇವಿ. ತಾಯಿ ಚಿತ್ರರಂಗದಲ್ಲಿ ಇದ್ದಿದ್ದರಿಂದ ಜಯಚಿತ್ರ ಕೂಡಾ ಚಿಕ್ಕ ವಯಸ್ಸಿನಲ್ಲೇ ನಟನೆ ಆರಂಭಿಸಿದರು. 6ನೇ ವಯಸ್ಸಿಗೆ ತೆಲುಗು ಸಿನಿಮಾ ಮೂಲಕ ಕರಿಯರ್ ಆರಂಭಿಸಿದರು. 14 ವರ್ಷ ತುಂಬುತ್ತಲೇ ನಿರ್ದೇಶಕ ಕೆಎಸ್ ಗೋಪಾಲಕೃಷ್ಣ ನಿರ್ದೇಶನದ ತಮಿಳು ಸಿನಿಮಾಗೆ ನಾಯಕಿಯಾಗಿ ಆಯ್ಕೆ ಆದರು. ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ.
ನಾಯಕಿಯಾಗಿ ಪೋಷಕ ನಟಿಯಾಗಿ ಜಯಚಿತ್ರ ಅನೇಕ ಸಿನಿಮಾಗಳಲ್ಲಿ ನಟಿಸಿದರು. ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ 150 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಜಯಚಿತ್ರ ನಟಿಸಿದ್ದಾರೆ. 1968 ರಲ್ಲಿ 'ಮಣ್ಣಿನ ಮಗ' ಚಿತ್ರದ ಮೂಲಕ ಜಯಚಿತ್ರ ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ಹುಲಿಯ ಹಾಲಿನ ಮೇವು, ಕುಳ್ಳ ಕುಳ್ಳಿ, ಮನೆ ಮನೆ ಕಥೆ, ಅಪರಂಜಿ, ಪ್ರೇಮಲೋಕ, ರಣಧೀರ, ಅಟ್ಟಹಾಸ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲವು ವರ್ಷಗಳ ಕಾಲ ನಟನೆಯಿಂದ ದೂರ ಉಳಿದಿದ್ದ ಹಿರಿಯ ನಟಿ ಈಗ ಅಪರೂಪಕ್ಕೆ ಎಂಬಂತೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ತೆರೆ ಕಂಡ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಚಿತ್ರದಲ್ಲಿ ಕೂಡಾ ಜಯಚಿತ್ರ ನಟಿಸಿದ್ದರು.
ಸಂಗೀತ ನಿರ್ದಶಕನಾಗಿ ಗುರುತಿಸಿಕೊಂಡಿರುವ ಜಯಚಿತ್ರ ಮಗ
ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ಜಯಚಿತ್ರ, ಉದ್ಯಮಿ ಗಣೇಶ್ ಎಂಬುವರನ್ನು ಮದುವೆ ಆದರು. ಈ ದಂಪತಿಗೆ ಅಮರೀಶ್ ಗಣೇಶ್ ಎಂಬ ಮಗ ಇದ್ಧಾರೆ. ಮಗನನ್ನು ಚಿತ್ರರಂಗಕ್ಕೆ ಪರಿಚಯಿಸಲು ಜಯಚಿತ್ರ ತಾವೇ ಒಂದು ಸಿಇಮಾ ನಿರ್ಮಿಸಿ ನಿರ್ದೇಶಿಸಿದರು. ಆದರೆ ಅಮರೀಶ್ ನಾಯಕನಾಗಿ ಮಿಂಚಲು ಸಾಧ್ಯವಾಗಲಿಲ್ಲ. ಸದ್ಯಕ್ಕೆ ಅವರು ಸಂಗೀತ ನಿರ್ದೇಶನದಲ್ಲಿ ಬ್ಯುಸಿ ಇದ್ದಾರೆ. ತಮಿಳು, ತೆಲುಗಿನ ಕೆಲವೊಂದು ಸಿನಿಮಾಗಳಿಗೆ ಅಮರೀಶ್ ಟ್ಯೂನ್ ಹಾಕಿದ್ದಾರೆ. ಸಂದೇಶ್ ನಾಗರಾಜ್ ನಿರ್ಮಾಣದ ಪ್ಯಾನ್ ಇಂಡಿಯಾ ಸಿನಿಮಾ 'ವೂಲ್ಫ್' ಚಿತ್ರಕ್ಕೆ ಕೂಡಾ ಅಮರೀಶ್ ಸಂಗೀತ ನೀಡಿದ್ದಾರೆ.
ಜಯಚಿತ್ರ ಕನ್ನಡದಲ್ಲಿ ನಟಿಸಿದ್ದು ಕೆಲವೇ ಸಿನಿಮಾಗಳಾದರೂ ಅವರು ಇಂದಿಗೂ ಕನ್ನಡ ಸಿನಿಪ್ರಿಯರ ಅಚ್ಚುಮೆಚ್ಚಿನ ನಟಿ. ಮತ್ತೆ ಅವರು ಕನ್ನಡ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವುದು ಅಭಿಮಾನಿಗಳ ಕನಸು. ಜಯಚಿತ್ರ ಪತಿ ಗಣೇಶ್ 2020ರಲ್ಲಿ ನಿಧನರಾದರು. ಈಗ ಅವರು ಮಗ ಸೊಸೆ ಮೊಮ್ಮಗಳ ಜೊತೆ ಚೆನ್ನೈನಲ್ಲಿ ಸೆಟಲ್ ಆಗಿದ್ದಾರೆ.