ಬಲರಾಮನ ದಿನಗಳು ಚಿತ್ರದ ಮೂಲಕ ಕನ್ನಡಕ್ಕೆ ಬಂದ ಕಲ್ಕಿ 2898 ಎಡಿ ಚಿತ್ರದ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್
ದಕ್ಷಿಣದ ಜನಪ್ರಿಯ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಬಲರಾಮನ ದಿನಗಳು ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಕನ್ನಡಕ್ಕೆ ಆಗಮಿಸುತ್ತಿದ್ದಾರೆ. ಅಷ್ಟೇ ಅದ್ಧೂರಿಯಾಗಿಯೇ ಅವರನ್ನು ಚಿತ್ರತಂಡ ಸ್ವಾಗತಿಸಿದೆ.
Balaramana Dinagalu: ಆ ದಿನಗಳು ಸಿನಿಮಾ ಖ್ಯಾತಿಯ ಕೆ.ಎಂ.ಚೈತನ್ಯ ನಿರ್ದೇಶನದಲ್ಲಿ ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸುತ್ತಿರುವ 25 ನೇ ಚಿತ್ರ ಬಲರಾಮನ ದಿನಗಳು. ಕಳೆದ ಕೆಲವು ತಿಂಗಳ ಹಿಂದಷ್ಟೇ ಈ ಚಿತ್ರದ ಘೋಷಣೆಯಾಗಿತ್ತು. ಈಗ ಈ ಚಿತ್ರದ ಕುರಿತು ಮತ್ತೊಂದು ಮಹತ್ವದ ಸುದ್ದಿ ಹೊರಬಂದಿದೆ. ಜನಪ್ರಿಯ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕ ಹಾಗೂ ಗಾಯಕ ಸಂತೋಷ್ ನಾರಾಯಣನ್ ಅವರನ್ನು ಬಲರಾಮನ ದಿನಗಳು ಚಿತ್ರತಂಡ ಅದ್ದೂರಿಯಾಗಿ ಕನ್ನಡಕ್ಕೆ ಬರಮಾಡಿಕೊಂಡರು.
ಪ.ರಂಜಿತ್ ಅವರ ಅಟ್ಟಕತ್ತಿ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದ ಸಂತೋಷ್ ನಾರಾಯಣನ್, ಕಾಲ, ಕಬಾಲಿ, ಭೈರವ, ದಸರಾ ಹಾಗೂ ಇತ್ತೀಚಿಗೆ ತೆರೆಕಂಡ ಕಲ್ಕಿ ಸಿನಿಮಾವರೆಗೂ 50 ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಹಲವು ಚಿತ್ರಗಳಲ್ಲಿ ಹಾಡಿದ್ದಾರೆ ಕೂಡ. ಈ ಬಗ್ಗೆ ಮಾತನಾಡುವ ಸಂತೋಷ್, “ನನ್ನ ತಾಯಿಗೆ ಕನ್ನಡ ಬರುತ್ತದೆ. ಅವರು ನನಗೂ ಸ್ವಲ್ಪ ಕನ್ನಡ ಹೇಳಿಕೊಟ್ಟಿದ್ದಾರೆ. ಬೆಂಗಳೂರಿಗೆ ಆಗಾಗ ಬರುತ್ತಿರುತ್ತೇನೆ. ಬಲರಾಮನ ದಿನಗಳು ನನ್ನ 51ನೇ ಚಿತ್ರ ಹಾಗೂ ನಾನು ಸಂಗೀತ ನೀಡುತ್ತಿರುವ ಕನ್ನಡದ ಮೊದಲ ಚಿತ್ರ. ಪದ್ಮಾವತಿ ಫಿಲಂಸ್, ಚೈತನ್ಯ ಹಾಗೂ ವಿನೋದ್ ಪ್ರಭಾಕರ್ ಅವರ ಜೊತೆಗೆ ಕೆಲಸ ಮಾಡುತ್ತಿರುವುದು ಖುಷಿಯಾಗಿದೆ. ಈ ಸಂದರ್ಭದಲ್ಲಿ ಗುರುಗಳಾದ ಇಳಯರಾಜ, ಎ.ಆರ್.ರೆಹಮಾನ್ ಅವರನ್ನು ನೆನಪಿಸಿಕೊಳ್ಳುತ್ತೇನೆ" ಎಂದರು.
ಮುಂದುವರಿದು ಮಾತನಾಡಿ, "ರಘು ದೀಕ್ಷಿತ್ ಅವರ "ನಿನ್ನ ಪೂಜೆಗೆ ಬಂದೆ ಮಾದೇಶ್ವರ" ಸೇರಿದಂತೆ ಕೆಲವು ಹಾಡುಗಳಿಗೆ ಪ್ರೋಗ್ರಾಮರ್ ಆಗಿ ಕೆಲಸ ಮಾಡಿದ್ದೇನೆ. ಅಜನೀಶ್ ಲೋಕನಾಥ್ ಹಾಗೂ ರವಿ ಬಸ್ರೂರ್ ಅವರ ಸಂಗೀತ ಇಷ್ಟ ಎಂದು ಹೇಳಿದ ಸಂತೋಷ್ ನಾರಾಯಣನ್, ಈ ಚಿತ್ರದಲ್ಲೂ ಒಳ್ಳೆಯ ಹಾಡುಗಳನ್ನು ಕೊಡುವ ಪ್ರಯತ್ನ ಮಾಡುತ್ತೇನೆ ಎಂದರು.
ವಿನೋದ್ ಪ್ರಭಾಕರ್ ಏನಂದ್ರು?
"ಇದು ನನ್ನ 25ನೇ ಸಿನಿಮಾ, ಕೆ.ಎಂ. ಚೈತನ್ಯ ನಿರ್ದೇಶನದ 10ನೇ ಸಿನಿಮಾ. ಬಲರಾಮನ ದಿನಗಳು ಚಿತ್ರಕ್ಕೆ ಬಲ ನೀಡುವುದಕ್ಕೆ ಸಂತೋಷ್ ನಾರಾಯಣನ್ ಅವರು ಇಲ್ಲಿಗೆ ಬಂದಿದ್ದಾರೆ. ಸಂತೋಷ್ ನಾರಾಯಣನ್ ಅವರೇ ಯಾಕೆ? ಎಂಬ ಪ್ರಶ್ನೆ ಬರಬಹುದು. ಅವರ ಕೆಲಸವನ್ನು ನಮ್ಮಲ್ಲಿ ಜನ ಒಪ್ಪಿಕೊಂಡಿದ್ದಾರೆ. ಅವರು ಯಾರು ಎಂದು ಗೊತ್ತಿಲ್ಲದಿರಬಹುದು, ಅವರ ಮುಖ ನೋಡದಿರಬಹುದು. ಆದರೆ, ಗ್ಯಾಂಗ್‍ಸ್ಟರ್ ಸಿನಿಮಾ ಸಂಬಂಧ ಪಟ್ಟ ಯಾವುದೇ ಪೋಸ್ಟ್ ನೋಡಿ, ಇವರ ಸಿಗ್ನೇಚರ್ ಸಂಗೀತ ಇದ್ದೇ ಇರುತ್ತದೆ. ಹಾಗಾಗಿ, ನಮ್ಮ ಚಿತ್ರತಂಡದವರೆಲ್ಲಾ ನಿರ್ಧಾರ ತೆಗೆದುಕೊಂಡು ಅವರನ್ನು ಕರೆಸಿದ್ದೇವೆ" ಎಂದರು ವಿನೋದ್ ಪ್ರಭಾಕರ್.
80-90ರ ದಶಕದ ಕಥೆ..
"ಇದೊಂದು ಗ್ಯಾಂಗ್‍ಸ್ಟರ್ ಮತ್ತು ಕಲ್ಟ್ ಸಿನಿಮಾ ಆಗಿರುವುದರಿಂದ ಅವರೇ ಸೂಕ್ತ ಎಂದನಿಸಿತು. ಅವರು ದೊಡ್ಡ ಸಂಗೀತ ನಿರ್ದೇಶಕ. ಅವರನ್ನು ಕರೆದುಕೊಂಡು ಬರುವುದು ಅಷ್ಟು ಸುಲಭವಾಗಿರಲಿಲ್ಲ. ಬಹಳ ಕಷ್ಟಪಟ್ಟು ಅವರನ್ನು ಕರೆದುಕೊಂಡು ಬಂದಿದ್ದೇವೆ. ‘ಕಲ್ಕಿ’ ಬಿಡುಗಡೆಗೂ ಮೊದಲೇ, ಮೇ ತಿಂಗಳಲ್ಲಿ ಅವರನ್ನು ಮಾತನಾಡಿಸಿದ್ದೆವು. ಅವರಿಗೆ ಚಿತ್ರಕಥೆ ರೀಡಿಂಗ್ ಕೊಡುತ್ತಿದ್ದಂತೆಯೇ ಒಪ್ಪಿಕೊಂಡರು. ಚಿತ್ರ ವಿಭಿನ್ನವಾಗಿದೆ, 80-90ರ ಕಾಲಘಟ್ಟದ ಚಿತ್ರವಾಗಿರುವುದರಿಂದ ಸಾಕಷ್ಟು ಪ್ರಯೋಗ ಮಾಡಬಹುದು ಎಂದು ಖುಷಿಪಟ್ಟು ಒಪ್ಪಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕನ್ನಡಕ್ಕೆ ಕರೆದುಕೊಂಡು ಬಂದಿರುವ ಹೆಮ್ಮೆ ಇದೆ. ಚಿತ್ರದ ಕುರಿತು ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ" ಎಂದರು ನಾಯಕ ಟೈಗರ್.
ಕಾಲ್ಪನಿಕ ಕಥೆ
ಇದು 80- 90ರ ದಶಕದ ಕಾಲಘಟ್ಟದ ಭೂಗತಲೋಕದ ಕಥೆ. ಯಾವುದೇ ನೈಜ ಘಟನೆ ಅಥವಾ ವ್ಯಕ್ತಿಯ ಕುರಿತಾದ ಚಿತ್ರವಲ್ಲ. ಕಾಲ್ಪನಿಕ ಕಥೆ. ಟೈಗರ್ ಅವರ ಚಿತ್ರವನ್ನು ನಿರ್ದೇಶಿಸುವ ಆಸೆಯಿತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ. ನಿರ್ಮಾಪಕರಾದ ಪದ್ಮಾವತಿ ಜಯರಾಂ ಮತ್ತು ಶ್ರೇಯಸ್ ಗೆ ವಂದನೆಗಳು. ಸಂತೋಷ್ ನಾರಾಯಣ್ ಅವರ ಸಂಗೀತ ನಿರ್ದೇಶನದಲ್ಲಿ ಒಳ್ಳೆಯ ಹಾಡುಗಳು ಬರಲಿದೆ ಎಂದು ನಿರ್ದೇಶಕ ಕೆ.ಎಂ.ಚೈತನ್ಯ ತಿಳಿಸಿದರು.
ನಾನು ಚಿಕ್ಕ ವಯಸ್ಸಿನಿಂದ ಟೈಗರ್ ಅವರ ಅಭಿಮಾನಿ ಎಂದು ಮಾತನಾಡಿದ ನಿರ್ಮಾಪಕ ಶ್ರೇಯಸ್, ಇಂದು ಅವರು ನಾಯಕರಾಗಿ ನಟಿಸುತ್ತಿರುವ ಚಿತ್ರ ನಿರ್ಮಾಣ ಮಾಡುತ್ತಿರುವುದು ಸಂತೋಷವಾಗಿದೆ. ನಮ್ಮ ಪದ್ಮಾವತಿ ಫಿಲಂಸ್ ಲಾಂಛನದಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾವಿದು. ನಮ್ಮ ಮೊದಲ ಚಿತ್ರಕ್ಕೆ ಹೆಸರಾಂತ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಸಂಗೀತ ನೀಡುತ್ತಿದ್ದಾರೆ ಹಾಗೂ ಕೆ.ಎಂ.ಚೈತನ್ಯ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ನಮ್ಮ ಚಿತ್ರದ ಘೋಷಣೆ ಮಾಡಿದಾಗ ತಾವೆಲ್ಲರೂ ನೀಡಿದ ಪ್ರೋತ್ಸಾಹಕ್ಕೆ ಚಿರ ಋಣಿ. ನನ್ನ ಕನಸಿಗೆ ಆಸರೆಯಾದ ಅಪ್ಪ ಅಮ್ಮನಿಗೆ ಧನ್ಯವಾದ. ಮುಂದೆ ಕೂಡ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ ಎಂದರು ನಿರ್ಮಾಪಕ ಶ್ರೇಯಸ್.