Darshan Thoogudeepa: ಮಾಧ್ಯಮಗಳನ್ನು ನಿಂದಿಸಿದ ಆರೋಪ; ಪತ್ರದ ಮೂಲಕ ಕ್ಷಮಾಪಣೆ ಕೇಳಿದ್ರಾ ದರ್ಶನ್, ವೈರಲ್ ಆಗ್ತಿರೋ ಪತ್ರದ ಅಸಲಿಯತ್ತೇನು?
ಯಾವುದೇ ಒಂದು ಗಳಿಯಲ್ಲಿ ಕೆಲವು ಅಚಾತುರ್ಯದಿಂದ ಮಾತನಾಡಿರುತ್ತೇನೆ. ಮಾಧ್ಯಮ ಸಹೋದರರಿಗೆ-ಸಹೋದರಿಯರಿಗೆ ನೋವು ಉಂಟಾಗಿರುವುದರಿಂದ ಅದನ್ನು ನಾನು ವಿಷಾದಿಸುತ್ತೇನೆ. ಜೀವನವೆಂಬುದು ಬಹಳ ಅಮೂಲ್ಯ ಹಾಗೂ ತುಂಬಾ ಚಿಕ್ಕದ್ದು.
ನಟ ದರ್ಶನ್ ಮಾಧ್ಯಮದವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎನ್ನಲಾದ ಆಡಿಯೋವೊಂದು ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ಈ ಆಡಿಯೋ ಕೇಳುತ್ತಿದ್ದಂತೆ ವಿದ್ಯುನ್ಮಾನ ಮಾಧ್ಯಮಗಳ ಅವರ ಸುದ್ದಿ ಪ್ರಸಾರ ಮಾಡುವುದನ್ನು ನಿಲ್ಲಿಸಿತ್ತು. 'ಕ್ರಾಂತಿ' ಸಿನಿಮಾ ರಿಲೀಸ್ ವೇಳೆ ಯೂಟ್ಯೂಬ್‌ಗಳಲ್ಲೇ ಹೆಚ್ಚಾಗಿ ಸಿನಿಮಾವನ್ನು ಪ್ರಚಾರ ಮಾಡಲಾಗಿತ್ತು. ಆದರೆ ಇದೀಗ ದರ್ಶನ್ ಮಾಧ್ಯಮಗಳಿಗೆ ಕ್ಷಮಾಪಣೆ ಕೇಳಿ ಪತ್ರವೊಂದನ್ನು ಬರೆದಿದ್ದಾರೆ ಎನ್ನಲಾಗುತ್ತಿದೆ.
ದರ್ಶನ್ ಮಾಧ್ಯಮಗಳಿಗೆ ಕ್ಷಮೆ ಕೋರಿ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಇದು ನಿಜವಾಗಿಯೂ ದರ್ಶನ್ ಬರೆದಿದ್ದಾ? ಅಥವಾ ಅವರ ಹೆಸರಿನಲ್ಲಿ ಬೇರೆ ಯಾರಾದರೂ ಬರೆದಿರಬಹುದಾ ಎಂಬ ಅನುಮಾನ ಕಾಡುತ್ತಿದೆ. ದರ್ಶನ್ ತೂಗುದೀಪ ಹೆಸರಿನ ಲೆಟರ್ ಹೆಡ್‌ನಲ್ಲಿ ಬರೆದಿರುವ ಪತ್ರದ ಸಾರಾಂಶ ಹೀಗಿದೆ.
ಎಲ್ಲಾ ಮಾಧ್ಯಮ ಮಿತ್ರರಿಗೂ ನಮಸ್ಕಾರ
75 ವರ್ಷಗಳ ಇತಿಹಾಸವಿರುವ ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದ ಕೆಲವು ವ್ಯಕ್ತಿಗಳು ಮತ್ತು ಕೆಲವು ಹೆಸರುಗಳು ಮಾತ್ರ ಚರಿತ್ರೆಯಲ್ಲಿ ಉಳಿದಿರುತ್ತವೆ. ಆ ಸಾಲಿನಲ್ಲಿ ಡಾ ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್‌ನಾಗ್, ತೂಗುದೀಪ ಶ್ರೀನಿವಾಸ್, ಬಾಲಕೃಷ್ಣ, ದಿನೇಶ್ ಇವರ ಸಮಕಾಲೀನ ದಿಗ್ಗಜರುಗಳನ್ನು ಪ್ರೋತ್ಸಾಹಿಸಿರುತ್ತೀರಿ, ಈ ಸಾಲಿನಲ್ಲಿ ಇದ್ದತಂಹ ಕನ್ನಡ ಚಿತರಂಗ ಮರೆಯಲಾರದಂತಹ ನಟ ತೂಗುದೀಪ್ ಶ್ರೀನಿವಾಸ್ ಅವರ ಕುಟುಂಬದಿಂದ ಬಂದಂತಹ ಸಣ್ಣ ಕುಡಿ ನಾನು. ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗ ನನ್ನನ್ನು ಆಶೀರ್ವದಿಸಿ ಪ್ರೋತ್ಸಾಹಿಸಿ ಹಲವಾರು ಬಾರಿ ನಾನು ಮಾಡಿರುವ ಪಾತ್ರಗಳ ಬಗ್ಗೆ ವಿಶ್ಲೇಷಣೆ ಮಾಡಿ, ನನ್ನ ಪಾತ್ರದಲ್ಲಿರುವ ತಪ್ಪುಗಳನ್ನು ತಿದ್ದಿ ಹೇಳಿರುವಿರಿ. ನಾನು ಸಹ ನನ್ನ ಪಾತ್ರಗಳಲ್ಲಿ ಬರುವ ತಪ್ಪುಗಳ ಬಗ್ಗೆ ಎಚ್ಚೆತ್ತುಕೊಂಡು ಉತ್ತಮ ಚಿತ್ರಗಳನ್ನು ಆಯ್ಕೆ ಮಾಡಿಕೊಂಡಿರುವೆನು.
ಅದೇ ರೀತಿಯಲ್ಲಿ ನಿಜ ಜೀವನದಲ್ಲಿ ಕೂಡಾ ಯಾವುದೇ ಒಂದು ಗಳಿಯಲ್ಲಿ ಕೆಲವು ಅಚಾತುರ್ಯದಿಂದ ಮಾತನಾಡಿರುತ್ತೇನೆ. ಮಾಧ್ಯಮ ಸಹೋದರರಿಗೆ-ಸಹೋದರಿಯರಿಗೆ ನೋವು ಉಂಟಾಗಿರುವುದರಿಂದ ಅದನ್ನು ನಾನು ವಿಷಾದಿಸುತ್ತೇನೆ. ಜೀವನವೆಂಬುದು ಬಹಳ ಅಮೂಲ್ಯ ಹಾಗೂ ತುಂಬಾ ಚಿಕ್ಕದ್ದು. ಈ ಚಿಕ್ಕ ಸಮಯದಲ್ಲಿ ನಗು ನಗುತ್ತಾ ಬಾಳೋಣ. ನನ್ನ ಈ ಭಾವನೆಯನ್ನು ನನ್ನ ಎಲ್ಲಾ ಮಿತ್ರರು ಹಾಗೂ ಅಭಿಮಾನಿಗಳು ಅರ್ಥ ಮಾಡಿಕೊಂಡು ಗೌರವಿಸಬೇಕು ಎಂದು ಪತ್ರದಲ್ಲಿ ಬರೆಯಲಾಗಿದೆ. ಜೊತೆಗೆ ದರ್ಶನ್ ಎಂದು ಕನ್ನಡದಲ್ಲಿ ಸಹಿ ಇದೆ.
ಇದೀಗ ಈ ಲೆಟರ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಗೊಂದಲ ಮೂಡಿಸಿದೆ. ಒಂದು ವೇಳೆ ದರ್ಶನ್ ಕ್ಷಮೆ ಕೇಳಬೇಕು ಎಂದಾದಲ್ಲಿ ಅವರು ಪ್ರೆಸ್‌ಮೀಟ್ ಮೂಲಕವೋ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡುವ ಮೂಲಕವೋ ಕ್ಷಮೆ ಕೇಳುತ್ತಿದ್ದರು. ಈ ರೀತಿ ಅನಾಮಿಕವಾಗಿ ಪತ್ರ ಬರೆಯುತ್ತಿರಲಿಲ್ಲ. ಮಿಮಿಕ್ರಿ ಆರ್ಟಿಸ್ಟ್ ಬಳಸಿ ಆಡಿಯೋ ರೆಕಾರ್ಡ್ ಮಾಡಿ ವೈರಲ್ ಮಾಡಿದವರಿಗೆ ಈ ರೀತಿ ಪತ್ರ ಸೃಷ್ಟಿಸುವುದು ಕಷ್ಟ ಅಲ್ಲ ಎಂದು ದರ್ಶನ್ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ಪತ್ರದ ಬಗ್ಗೆ ಇರುವ ಗೊಂದಲಗಳನ್ನು ಸ್ವತ: ದರ್ಶನ್ ಅವರೇ ನಿವಾರಿಸಬೇಕಿದೆ.
ದರ್ಶನ್ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಸದ್ಯಕ್ಕೆ ಅವರು 'ಕಾಟೇರ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದ ತರುಣ್ ಸುಧೀರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಟಿಸುತ್ತಿದ್ದಾರೆ.