ಕನ್ನಡ ಸುದ್ದಿ  /  ಮನರಂಜನೆ  /  Kantara: ಪಂಜುರ್ಲಿ, ಗುಳಿಗ ದೈವದ ಮೂಲ ಕಥೆಯ ಕಾಂತಾರ ಚಾಪ್ಟರ್‌ 1ಗಾಗಿ ಬೃಹತ್‌ ಸೆಟ್‌; ಶೂಟಿಂಗ್‌ ಅಪ್‌ಡೇಟ್‌ ನೀಡಿದ್ರು ರಿಷಬ್‌ ಶೆಟ್ಟಿ

Kantara: ಪಂಜುರ್ಲಿ, ಗುಳಿಗ ದೈವದ ಮೂಲ ಕಥೆಯ ಕಾಂತಾರ ಚಾಪ್ಟರ್‌ 1ಗಾಗಿ ಬೃಹತ್‌ ಸೆಟ್‌; ಶೂಟಿಂಗ್‌ ಅಪ್‌ಡೇಟ್‌ ನೀಡಿದ್ರು ರಿಷಬ್‌ ಶೆಟ್ಟಿ

Kantara Chapter 1: ಕಾಂತಾರ ಚಾಪ್ಟರ್‌ 1ಗಾಗಿ ಊರಿನಲ್ಲಿ ಬೃಹತ್‌ ಸೆಟ್‌ ನಿರ್ಮಾಣವಾಗುತ್ತಿದೆ. ಏಪ್ರಿಲ್‌ ತಿಂಗಳಿನಿಂದ ಕಾಂತಾರ ಶೂಟಿಂಗ್‌ ಆರಂಭವಾಗಲಿದೆ ಎಂದು ರಿಷಬ್‌ ಶೆಟ್ಟಿ ಮಾಹಿತಿ ನೀಡಿದ್ದಾರೆ. ಸಾಯಿ ಪಲ್ಲವಿ, ಆಲಿಯಾ ಭಟ್‌, ಸಪ್ತಮಿ ಗೌಡ, ರುಕ್ಮಿಣಿ ವಸಂತ್‌ರಲ್ಲಿ ಕಾಂತಾರ ಹೀರೋಯಿನ್‌ ಯಾರಾಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ.

ಕಾಂತಾರ ಚಾಪ್ಟರ್‌ 1- ರಿಷಬ್‌ ಶೆಟ್ಟಿ
ಕಾಂತಾರ ಚಾಪ್ಟರ್‌ 1- ರಿಷಬ್‌ ಶೆಟ್ಟಿ

Kantara Chapter 1: ರಿಷಬ್‌ ಶೆಟ್ಟಿ ನಟನೆ ಮತ್ತು ನಿರ್ದೇಶನದ ಕಾಂತಾರ ಚಾಪ್ಟರ್‌ 1 ಸಿನಿಮಾಕ್ಕಾಗಿ ಸಿನಿಮಾ ಪ್ರೇಮಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಇದೀಗ ರಿಷಬ್‌ ಶೆಟ್ಟಿಯವರು ಕಾಂತಾರ ಶೂಟಿಂಗ್‌ ಕುರಿತು ಒಂದಿಷ್ಟು ಅಪ್‌ಡೇಟ್‌ ನೀಡಿದ್ದಾರೆ. ದೇಶ-ವಿದೇಶಗಳಲ್ಲಿ ಸೂಪರ್‌ಹಿಟ್‌ ಆದ ಕನ್ನಡ ಕಾಂತಾರ ಸಿನಿಮಾದ ಪ್ರೀಕ್ವೆಲ್‌ ಮೂಲಕ ಪಂಜುರ್ಲಿ, ಗುಳಿಗ ದೈವದ ಮೂಲ ಕಥೆಯನ್ನು ಹೇಳುವ ಪ್ರಯತ್ನವನ್ನು ಚಿತ್ರತಂಡ ಮಾಡಲಿದೆ. ಈಗಾಗಲೇ ತಮ್ಮ ಊರಿನಲ್ಲಿ ಕಾಂತಾರ ಚಾಪ್ಟರ್‌ ಒನ್‌ಗಾಗಿ ಬೃಹತ್‌ ಸೆಟ್‌ ನಿರ್ಮಿಸಲಾಗುತ್ತಿದೆ ಎಂಬ ಮಾಹಿತಿಯನ್ನು ರಿಷಬ್‌ ಶೆಟ್ಟಿ ನೀಡಿದ್ದಾರೆ. ಮುಂಬೈನಲ್ಲಿ ನಡೆದ ಅಮೆಜಾನ್‌ ಪ್ರೈಮ್‌ ವಿಡಿಯೋ ಕಾರ್ಯಕ್ರಮದಲ್ಲಿ ಕಾಂತಾರ ಶೂಟಿಂಗ್‌ ಕುರಿತು ರಿಷಬ್‌ ಶೆಟ್ಟಿ ಒಂದಿಷ್ಟು ವಿವರ ನೀಡಿದ್ದಾರೆ.

ಅಮೆಜಾನ್‌ ಪ್ರೈಮ್‌ ವಿಡಿಯೋದ ಕಾರ್ಯಕ್ರಮದಲ್ಲಿ ರಿಷಬ್‌ ಶೆಟ್ಟಿಯವರು ಕಾಂತಾರ ಶೂಟಿಂಗ್‌ ಕುರಿತಾದ ಪ್ರಶ್ನೆಗೆ ಉತ್ತರಿಸಿದ್ದಾರೆ. "ನಾನು ಇಲ್ಲಿಂದಲೇ ನನ್ನ ನಟನಾ ಕರಿಯರ್‌ ಆರಂಭಿಸಿದೆ. ನಾನು 6 ನೇ ತರಗತಿಯಲ್ಲಿದ್ದಾಗ ನಟಿಸಿದ್ದೆ. ದೊಡ್ಡ ಪರದೆಯಲ್ಲಿ ನಮ್ಮ ಗ್ರಾಮದ ಕಥೆ, ಜನಪದೀಯ ಕಥೆ ಬರಬೇಕು. ಇದಕ್ಕೆ ತಕ್ಕಂತೆ ಚಿತ್ರಕಥೆ ಬರೆದಿದ್ದೇನೆ. ಸಿನಿಮಾದ ಶೂಟಿಂಗ್‌ ಆರಂಭವಾಗಲು ಪ್ರೀಕ್ವೆಲ್‌ಗೆ ಸಂಬಂಧಪಟ್ಟ ಇನ್ನಿತರ ಸಿದ್ಧತೆಗಳನ್ನು ನಡೆಸುತ್ತಿದ್ದೇವೆ. ನಮಗೆ ವೀಕ್ಷಕರಿಂದ ದೊಡ್ಡಮಟ್ಟದ ಬೆಂಬಲ ದೊರಕಿದೆ. ಈಗ ನಾವು ನಮ್ಮ ಊರಿನಲ್ಲಿ ಕಾಂತಾರ ಚಾಪ್ಟರ್‌ 1ಗಾಗಿ ದೊಡ್ಡದಾದ ಸೆಟ್‌ ಮಾಡುತ್ತಿದ್ದೇವೆ. ಏಪ್ರಿಲ್‌ ತಿಂಗಳಿನಿಂದ ಶೂಟಿಂಗ್‌ ಆರಂಭವಾಗಲಿದೆ" ಎಂದು ರಿಷಬ್‌ ಶೆಟ್ಟಿ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

"ಪಂಜುರ್ಲಿ, ಗುಳಿಗ ದೈವದ ಮೂಲ ಕಥೆಯನ್ನು ಕಾಂತಾರ ಚಾಪ್ಟರ್‌ 1 ಹೊಂದಿರಲಿದೆ. ಹೀಗಾಗಿ ಈ ಚಿತ್ರದಲ್ಲಿ ಪುರಾತನ ವಿಷಯಗಳು ಇರಲಿವೆ" ಎಂದು ಚಿತ್ರತಂಡದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಉಳಿದಂತೆ ಕಾಂತಾರದ ಯಾವುದೇ ಅಪ್‌ಡೇಟ್‌ ಚಿತ್ರತಂಡದ ಕಡೆಯಿಂದ ಬಂದಿಲ್ಲ. ಚಿತ್ರದ ಸ್ಟೋರಿ, ಪಾತ್ರಗಳ ಕುರಿತು ಮಾಹಿತಿ ಸೋರಿಕೆಯಾಗದಂತೆ ಕಾಂತಾರ ಟೀಮ್‌ ಎಚ್ಚರಿಕೆ ವಹಿಸುತ್ತಿದೆ.

ಕಾಂತಾರ ಚಾಪ್ಟರ್‌ 1 ನಾಯಕಿ ಯಾರು?

ಕಾಂತಾರ ಚಾಪ್ಟರ್‌ 1ನಲ್ಲಿ ನಾಯಕ ಪಾತ್ರಕ್ಕೆ ರಿಷಬ್‌ ಶೆಟ್ಟಿ ಬಣ್ಣ ಹಚ್ಚುವ ಸಂಗತಿ ಎಲ್ಲರಿಗೂ ಗೊತ್ತು. ಆದರೆ, ನಾಯಕಿ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಲಾಗಿದೆ? ಎಂಬ ವಿವರ ಇನ್ನೂ ಲಭ್ಯವಿಲ್ಲ. ಕಾಂತಾರ ಸಿನಿಮಾದ ಪ್ರೀಕ್ವೆಲ್‌ ಕುರಿತು ಹೆಚ್ಚಿನ ವಿವರ ಪಡೆಯಲು ಮಾಧ್ಯಮಗಳು ಮತ್ತು ಜನರು ಕಾಯುತ್ತಿದ್ದಾರೆ. ಆದರೆ, ಈ ಸಿನಿಮಾದ ಕಥೆ ಅಥವಾ ಇತರೆ ಮಾಹಿತಿಯ ಸುಳಿವನ್ನು ಚಿತ್ರತಂಡ ಜತನದಿಂದ ಕಾಪಾಡಿಕೊಳ್ಳುತ್ತಿದೆ. ವಿಶೇಷವಾಗಿ ಕಾಂತಾರ ಚಿತ್ರದಲ್ಲಿ ನಾಯಕಿ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಲಾಗಿದೆ? ಯಾರೆಲ್ಲ ನಟಿಸಲಿದ್ದಾರೆ ಇತ್ಯಾದಿ ವಿವರವನ್ನು ಚಿತ್ರತಂಡ ನೀಡಿಲ್ಲ.

ಕೆಲವು ವರದಿಗಳ ಪ್ರಕಾರ, ಸಾಯಿ ಪಲ್ಲವಿ, ಆಲಿಯಾ ಭಟ್‌, ಸಪ್ತಮಿ ಗೌಡ, ರುಕ್ಮಿಣಿ ವಸಂತ್‌ರಲ್ಲಿ ಯಾರಾದರೂ ಒಬ್ಬರನ್ನು ಕಾಂತಾರಕ್ಕೆ ಹೀರೋಯಿನ್‌ ಆಗಿ ಆಯ್ಕೆ ಮಾಡಲಾಗುತ್ತದೆ. ಈ ನಾಲ್ವರ ಹೆಸರನ್ನು ಕಾಂತಾರ ಟೀಮ್‌ ಶಾರ್ಟ್‌ಲಿಸ್ಟ್‌ ಮಾಡಿದೆ ಎಂದು ಹೇಳಲಾಗುತ್ತಿದೆ. ಪಾನ್‌ ಇಂಡಿಯಾ ಸಿನಿಮಾವಾಗಿರುವುದರಿಂದ ಆಲಿಯಾ ಭಟ್‌, ಸಾಯಿ ಪಲ್ಲವಿಯರ ಕಡೆಗೂ ಚಿತ್ರತಂಡ ಒಲವು ತೋರಿಸುವ ಸಾಧ್ಯತೆ ಇದೆ. ಕೆಲವು ಮೂಲಗಳ ಪ್ರಕಾರ ಕಾಂತಾರ ಚಾಪ್ಟರ್‌ 1ಕ್ಕೆ ರುಕ್ಮಿಣಿ ವಸಂತ್‌ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ರುಕ್ಮಿಣಿ ವಸಂತ್‌ ಅವರು ಕಾಂತಾರ ಸಿನಿಮಾಕ್ಕಾಗಿ ಲುಕ್‌ ಟೆಸ್ಟ್‌ನಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗುತ್ತಿದೆ.