OTT Movies: ಒಟಿಟಿಗಳಲ್ಲಿ ಕನ್ನಡ ಸಿನಿಮಾಗಳ ತಾತ್ಸಾರ, ರಿಷಬ್ ಶೆಟ್ಟಿ ಬೇಸರ; ಹಿಂದಿಗೆ ರೆಸ್ಪೆಕ್ಟ್ ನೀಡಿ ಎಂದ ನೆಟ್ಟಿಗರಿಗೆ ತರಾಟೆ
OTT Platforms Kannada Movies: ಒಟಿಟಿ ಪ್ಲಾಟ್‌ಫಾರ್ಮ್‌ಗಳು ಕನ್ನಡ ಸಿನಿಮಾಗಳನ್ನು ಕಡೆಗಣಿಸುತ್ತಿವೆ ಎಂದು ಕಾಂತಾರ ನಟ ರಿಷಬ್ ಶೆಟ್ಟಿ ಹೇಳಿಕೆ ನೀಡಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.ಉದಾ
ಬೆಂಗಳೂರು: ಕನ್ನಡ ನಟ-ನಿರ್ದೇಶಕ ರಿಷಬ್ ಶೆಟ್ಟಿಗೆ ಇತ್ತೀಚೆಗೆ 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದ್ದಾಗ ದೇಶಕ್ಕೆ ದೇಶವೇ ಖುಷಿಪಟ್ಟಿತ್ತು. ಕಾಂತಾರ ಸಿನಿಮಾದ ಮೂಲಕ ಎಲ್ಲರಿಗೂ ರೋಮಾಂಚನ ಉಂಟುಮಾಡಿದ ಶೆಟ್ರಿಗೆ ಈ ಬಹುಮಾನ ಸೂಕ್ತ ಆಯ್ಕೆ ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದರು. ಇದೇ ಸಮಯದಲ್ಲಿ ರಿಷಬ್ ಶೆಟ್ಟಿ ಅವರು ಒಟಿಟಿ ವೇದಿಕೆಗಳು ಕನ್ನಡ ಸಿನಿಮಾ, ವೆಬ್ ಸರಣಿಗಳನ್ನು ಕಡೆಗಣಿಸುತ್ತವೆ ಎಂದು ಬೇಸರವ್ಯಕ್ತಪಡಿಸಿದ್ದರು. ಈ ಹೇಳಿಕೆಗೆ ಸಂಬಂಧಪಟ್ಟಂತಹ ಪೋಸ್ಟ್‌ಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ನಾನಾ ಬಗೆಯ ಪ್ರತಿಕ್ರಿಯೆಗಳು ಬಂದಿವೆ.
ಕಾಂತಾರ ಸಿನಿಮಾದ ನಟನೆಗೆ ಬೆಸ್ಟ್ ಆಕ್ಟರ್ ಪ್ರಶಸ್ತಿ ಪಡೆದ ಬಳಿಕ ಪಿಟಿಐ ಜತೆ ಮಾತನಾಡುತ್ತಿದ್ದ ವೇಳೆ ರಿಷಬ್ ಶೆಟ್ಟಿ ಹೀಗೆ ಹೇಳಿದ್ದರು. "ನಮ್ಮ ಸಿನಿಮಾಗಳು ಸಿನಿಹಬ್ಬಗಳಲ್ಲಿ ಪ್ರದರ್ಶನಗೊಳ್ಳುತ್ತವೆ. ಪ್ರಶಸ್ತಿಗಳನ್ನು ಪಡೆಯುತ್ತವೆ. ಆದರೆ, ಅಂತಹ ಸಿನಿಮಾಗಳಿಗೆ ಯಾವುದೇ ಒಟಿಟಿ ಫ್ಲಾಟ್‌ಫಾರ್ಮ್‌ಗಳು ದೊರಕುತ್ತಿಲ್ಲ. ಇದರಿಂದಾಗಿ ಅಂತಹ ಸಿನಿಮಾಗಳನ್ನು ಯೂಟ್ಯೂಬ್‌ಗೆ ಹಾಕಬೇಕಾದ ಅನಿವಾರ್ಯತೆ ನಮಗೆ ಬಂದಿದೆ. ನಾನು ಕೂಡ ಇದೇ ರೀತಿ ಮಾಡಿದ್ದೇನೆ. ಇದರಿಂದ ನಾವು ಆ ಸಿನಿಮಾ ನಿರ್ಮಾಣಕ್ಕೆ ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕುವುದಿಲ್ಲ" ಎಂದು ರಿಷಬ್ ಶೆಟ್ಟಿ ಹೇಳಿದ್ದರು.
"ಈ ಹಿಂದಿನ ನನ್ನ ಕೆಲವು ಸಿನಿಮಾಗಳಿಗೆ ಒಟಿಟಿಯಲ್ಲಿ ಅವಕಾಶ ದೊರಕಿಲ್ಲ. ಪೆಡ್ರೊ ಮತ್ತು ವಾಗಚಿಪಾನಿಯಂತಹ ಸಿನಿಮಾಗಳನ್ನು ನಾನು ನಿರ್ಮಾಣ ಮಾಡುತ್ತಿದ್ದೇನೆ. ಭವಿಷ್ಯದಲ್ಲಿ ಏನಾಗುತ್ತದೆ ಎಂದು ನೋಡಬೇಕಿದೆ" ಎಂದು ರಿಷಬ್ ಶೆಟ್ಟಿ ಹೇಳಿದ್ದರು. ಈ ಸಂದರ್ಭದಲ್ಲಿ ಪ್ರಶಸ್ತಿ ದೊರಕಿರುವುದಕ್ಕೆ ಸಂಬಂಧಪಟ್ಟಂತೆ ರಿಷಬ್ ಶೆಟ್ಟಿ ನೀಡಿದ ಇತರೆ ಹೇಳಿಕೆಗಳನ್ನು ಕೆಲವು ದಿನಗಳ ಹಿಂದೆಯೇ ಹಿಂದೂಸ್ತಾನ್ ಟೈಮ್ಸ್ ಪ್ರಕಟಿಸಿದೆ.
ಸೋಷಿಯಲ್ ಮೀಡಿಯಾ ಬಳಕೆದಾರರ ಅಭಿಪ್ರಾಯ
ರಿಷಬ್ ಶೆಟ್ಟಿ ನೀಡಿರುವ ಈ ಹೇಳಿಕೆಯನ್ನು ಇಟ್ಟುಕೊಂಡು ಸೋಷಿಯಲ್ ಮೀಡಿಯಾದಲ್ಲಿ ನಾನಾ ಬಗೆಯ ಪೋಸ್ಟ್‌ಗಳು ಹರಿದಾಡುತ್ತಿವೆ. ಇದಕ್ಕೆ ನೆಟ್ಟಿಗರು ಬಗೆಬಗೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವರು ರಿಷಬ್ ಶೆಟ್ಟಿ ಅಭಿಪ್ರಾಯಕ್ಕೆ ಸಮ್ಮತಿ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಕೆಲವರು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಭಾಷಾ ದ್ವೇಷದ ಹೇಳಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಉದಾಹರಣೆಗೆ ಇನ್‌ಸ್ಟಾಂಟ್ ಬಾಲಿವುಡ್ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಹರ್ಷ್ ಎಂಬ ವ್ಯಕ್ತಿ ನೀಡಿರುವ ಹೇಳಿಕೆಯನ್ನು ಗಮನಿಸಿ.
"ನೀವು ಹಿಂದಿ ಭಾಷಿಕರಿಗೆ ಗೌರವ ನೀಡುತ್ತಿಲ್ಲ. ಈಗ ರೆಸ್ಪೆಕ್ಟ್‌ಗಾಗಿ ಅಳುತ್ತಿದ್ದೀರಿ" ಎಂದು ಪೋಸ್ಟ್ ಮಾಡಿದ್ದಾರೆ. ಆತನ ಹೇಳಿಕೆಗೆ ಸರಿಯಾದ ಪ್ರತಿಕ್ರಿಯೆ ಅಲ್ಲೇ ದೊರಕಿದೆ. "ಎಲ್ಲರೂ ಪ್ರತ್ಯೇಕ ಪ್ರತ್ಯೇಕ ದೇಶ ಮಾಡುವ ತನಕ ನಿಮ್ಮ ದ್ವೇಷ ಮುಂದುವರೆಸಿ" "ನಿಮ್ಮ ಊರಿನ ಪಟ್ಟಣಕ್ಕೆ ಹೋಗಿ, ಅಲ್ಲಿ ಒಂದು ಡೀಸೆಂಟ್ ಕೆಲಸ ಹುಡುಕಿ" "ನಿಮಗೆ ಇತರೆ ಭಾಷೆಗಳಿಗೆ ಗೌರವ ನೀಡಲು ಸಾಧ್ಯವಾಗದೆ ಇದ್ದರೆ ಯಾಕೆ ಆ ರಾಜ್ಯಕ್ಕೆ ಕೆಲಸಕ್ಕೆ ಹೋಗುವಿರಿ. ನಾನು ಮಲಯಾಳಿ, ಹಲವು ರಾಜ್ಯಗಳಲ್ಲಿ ಕೆಲಸ ಮಾಡಿದ್ದೇನೆ. ಹಲವು ಭಾಷೆಗಳನ್ನು ಕಲಿತಿದ್ದೇನೆ. ಕನ್ನಡವೂ ಗೊತ್ತು. ನೀವೂ ಯಾಕೆ ಆ ರೀತಿ ಕಲಿಯಲು ಪ್ರಯತ್ನಿಸಬಾರದು" ಎಂದು ಹಲವು ಪ್ರತಿಕ್ರಿಯೆಗಳು ಹರ್ಷ್ ಎಂಬಾತನ ಕಾಮೆಂಟ್‌ಗೆ ಬಂದಿವೆ. ಹರ್ಷ್‌ನಂತೆಯೇ ಇನ್ನೂ ಕೆಲವು ಜನರು ಕಾಮೆಂಟ್ ಮಾಡಿದ್ದಾರೆ. ಅಲ್ಲೇ ಡ್ರಾ, ಅಲ್ಲೇ ಬಹುಮಾನ ಎಂಬಂತೆ ಅವರಿಗೆಲ್ಲ ಅಲ್ಲೇ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ಹಿಂದಿ ಭಾಷಿಕರೇ ಇಂತಹ ಕಾಮೆಂಟ್‌ಗಳನ್ನು ವಿರೋಧಿಸಿದ್ದಾರೆ. "ನಾವು ಹಲವು ವರ್ಷಗಳಿಂದ ಕರ್ನಾಟಕದಲ್ಲಿದ್ದೇವೆ. ಅಲ್ಲಿನ ಜನರು ತುಂಬಾ ಒಳ್ಳೆಯವರು" ಎಂದೆಲ್ಲ ಪ್ರತಿಕ್ರಿಯೆ ನೀಡಿದ್ದಾರೆ.
"ಬಾಲಿವುಡ್‌ನ ಪ್ಲಾಪ್ ಸಿನಿಮಾಗಳಿಗೆ ಒಟಿಟಿಯಲ್ಲಿ ಅವಕಾಶ ದೊರಕುತ್ತವೆ. ಇತರೆ ಉತ್ತಮ ಸಿನಿಮಾಗಳಿಗೆ ಅವಕಾಶ ದೊರಕುತ್ತಿಲ್ಲ" "ರಿಷಬ್ ಶೆಟ್ಟಿಯವರೇ ನಿಮ್ಮ ಸಿನಿಮಾಗಳು ನೆಕ್ಸ್ಟ್ ಲೆವೆಲ್‌ನಲ್ಲಿರುತ್ತವೆ" "ಮುಂದೊಂದು ದಿನ ಅವರೇ ಕೇಳಿಕೇಳಿ ಕನ್ನಡ ಸಿನಿಮಾ ತೆಗೆದುಕೊಳ್ಳುತ್ತಾರೆ ನೋಡಿ" ಎಂದೆಲ್ಲ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.