Appu Cup Season 2ರ ಅಪ್ಪು ಬೆಳ್ಳಿ ಟ್ರೋಫಿ ಅನಾವರಣ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್, ಶ್ರೀಮುರಳಿ
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ನಟ ಶ್ರೀಮುರಳಿ ಅವರಿಂದ ಅಪ್ಪು ಕಪ್ ಸೀಸನ್ 2ರ ಐದು ಕೆಜಿ ತೂಕದ (ಬ್ಯಾಡ್ಮಿಂಟನ್ ಟೂರ್ನಿ) ಟ್ರೋಫಿ ಅನಾವರಣಗೊಂಡಿದೆ.
Appu Cup Season 2: ಓರಾಯನ್ ಮಾಲ್ ನ ಹೊರಾಂಗಣದಲ್ಲಿ ತಣ್ಣನೆ ಬೀಸುತ್ತಿದ್ದ ಗಾಳಿ. ಪಕ್ಕದಲ್ಲೊಂದು ಕೆರೆ. ಆ ಸುಂದರ ಪರಿಸರದಲ್ಲೊಂದು ವರ್ಣರಂಜಿತ ವೇದಿಕೆ. ಆ ವೇದಿಕೆಯಲ್ಲಿ ಚೇತನ್ ಸೂರ್ಯ ಅವರ ಸ್ಟೆಲ್ಲರ್ ಸ್ಟುಡಿಯೋ ಮತ್ತು ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ, PRK Audio ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿರುವ ಅಪ್ಪು ಕಪ್ ಸೀಸನ್ 2 (ಶಟಲ್ ಬ್ಯಾಡ್ಮಿಂಟನ್ ಟೂರ್ನಿ) ಅಪ್ಪು ಸಂಭ್ರಮ ಸಮಾರಂಭ ಅದ್ದೂರಿಯಾಗಿ ನಡೆಯಿತು.
ಸಾಯಿ ಗೋಲ್ಡ್ ಪ್ಯಾಲೆಸ್‌ನ ಶರವಣ ಅವರು ನಿರ್ಮಿಸಿರುವ ಐದು ಕೆಜಿ ತೂಕದ ಅಪ್ಪು ಭಾವಚಿತ್ರವುಳ್ಳ ಬೆಳ್ಳಿ ಕಪ್ ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ಶ್ರೀಮುರಳಿ ಅವರಿಂದ ಅನಾವರಣವಾಯಿತು. ರಾಮನಗರ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಸಾ.ರಾ.ಗೋವಿಂದು ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿದ್ದೇನು?
ಟ್ರೋಫಿ ಅನಾವರಣಗೊಳಿಸಿ ಮಾತನಾಡಿದ ಅಶ್ವಿನಿ ಪುನೀತ್ ರಾಜಕುಮಾರ್, ಶೆಟಲ್ ಆಟ, ಅಪ್ಪು ಅವರ ಮೆಚ್ಚಿನ ಆಟ. ಕಳೆದ ವರ್ಷದಿಂದ ಅಪ್ಪು ಕಪ್ ಟೂರ್ನಿಯನ್ನು ಚೇತನ್ ಅವರು ಚೆನ್ನಾಗಿ ಆಯೋಜಿಸಿಕೊಂಡು ಬರುತ್ತಿದ್ದಾರೆ. ಅವರಿಗೆ ಹಾಗೂ ಭಾಗವಹಿಸಿರುವ ಎಲ್ಲರಿಗೂ ಒಳ್ಳೆಯದಾಗಲಿ ಎಂದರು.
ಶ್ರೀಮುರಳಿಯಿಂದಲೂ ಸಿಕ್ತು ಮೆಚ್ಚುಗೆ ಮಾತು
'ಯಾವುದಾದರೂ ಆಟದ ನೆಪದಲ್ಲಿ ಕಲಾವಿದರನ್ನು ಒಟ್ಟಾಗಿ ಸೇರಿಸುವ ಆಸೆ ಅಪ್ಪು ಅವರಿಗಿತ್ತು. ಅದು ಹೊರದೇಶದಲ್ಲಿ ಅದನ್ನು ನಡೆಸಬೇಕೆಂಬುದು ಅವರ ಯೋಚನೆಯಾಗಿತ್ತು. ಸದಾ ಒಬ್ಬರಿಗೆ ಒಳೆಯದನ್ನೇ ಬಯಸುವ ಹೃದಯ ಅವರಿಗಿತ್ತು. ಅಂತಹ ಪುನೀತ್ ರಾಜಕುಮಾರ್ ಅವರ ನೆನಪಿನಲ್ಲಿ ನಡೆಯುತ್ತಿರುವ "ಅಪ್ಪು ಕಪ್ ಸೀಸನ್ 2" ಯಶಸ್ವಿಯಾಗಲಿ' ಎಂದು ಶ್ರೀಮುರಳಿ ಹಾರೈಸಿದರು.
'ನಾಡು ಕಂಡ ಶ್ರೇಷ್ಠ ನಟ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ನಡೆಯುತ್ತಿರುವ ಈ ಅಪ್ಪು ಕಪ್ ಶೆಟಲ್ ಬ್ಯಾಡ್ಮಿಂಟನ್ ಟೂರ್ನಿಯ ಬಗ್ಗೆ ಚೇತನ್ ಸೂರ್ಯ ಅವರು ಹೇಳಿದಾಗ ಬಹಳ ಸಂತೋಷವಾಯಿತು. ನಾನು ಮೊದಲೇ ತಿಳಿಸಿದಂತೆ ಈ ಟೂರ್ನಿಯ ಮೊದಲ ವಿಜೇತರಿಗೆ ನೂರು ಗ್ರಾಮ್ ಬಂಗಾರ, ದ್ವಿತೀಯ ವಿಜೇತರಿಗೆ ಐವತ್ತು ಗ್ರಾಮ್ ಬಂಗಾರ ಹಾಗೂ ಮೂರನೇ ವಿಜೇತರಿಗೆ ಇಪ್ಪತ್ತೈದು ಗ್ರಾಂ ಬಂಗಾರವನ್ನು ಬಹುಮಾನ ನೀಡುವುದಾಗಿ ಸಾಯಿ ಗೋಲ್ಡ್ ಪ್ಯಾಲೆಸ್ ನ ಶರವಣ ತಿಳಿಸಿದರು.
ನಾವು ಕಳೆದ ವರ್ಷದಿಂದ ಆಯೋಜಿಸುತ್ತಿರುವ ಅಪ್ಪು ಕಪ್‌ಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಸಹಕಾರ ನೀಡಿರುವುದು ಬಹಳ ಖುಷಿಯಾಗಿದೆ. ಶ್ರೀಮುರಳಿ ಅವರು ಹೇಳಿದಂತೆ ಮುಂದಿನ ವರ್ಷ ಹೊರದೇಶದಲ್ಲಿ ಈ ಟೂರ್ನಿಯ ಸೆಮಿಫೈನಲ್ ಹಾಗೂ ಫೈನಲ್ ಆಯೋಜಿಸಲು ಪ್ರಯತ್ನ ಪಡುತ್ತೇನೆ. ಈ ಬಾರಿ ಟೂರ್ನಿಯಲ್ಲಿ ಹತ್ತು ತಂಡಗಳಿವೆ. ಇದೇ ಸಂದರ್ಭದಲ್ಲಿ ಹತ್ತು ತಂಡಗಳ ಲೋಗೊ, ಜರ್ಸಿ ಅನಾವರಣ ಮಾಡಿ, ತಂಡದ ಮಾಲೀಕರ ಹಾಗೂ ಆಟಗಾರರ ಪರಿಚಯ ಮಾಡಿಕೊಡಲಾಯಿತು.
ALL OK (ಅಲೋಕ್), ಸಮರ್ಜಿತ್ ಲಂಕೇಶ್, ಐಶ್ವರ್ಯ ಸಿಂದೋಗಿ, ಅಭಿಲಾಶ್ ದಳಪತಿ, ಕಾವ್ಯ ಶಾ, ಶರತ್ ಕ್ಷತ್ರಿಯ, ದಿಲೀಪ್ ಕೆಂಪೇಗೌಡ, ಸಿರಿ ರಾಜು, ರಾಮ್ ಪವನ್, ಐಶಾನ, ಲಾವಣ್ಯ, ದೇವನ್, ರಾಘವ್ ನಾಗ್, ಸುನಾಮಿ ಕಿಟ್ಟಿ, ವಿಜಯ್ ಸಿದ್ದರಾಜ್, ವ್ಯಾಸರಾಜ ಸೋಸಲೆ, ಜ್ಯೋತಿ ವ್ಯಾಸರಾಜ್ ಸೇರಿದಂತೆ ಹೆಸರಾಂತ ಕಲಾವಿದರಿಂದ ಮನೋರಂಜನಾ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು.
ಅಪ್ಪು ಕಪ್‌ನಲ್ಲಿ ಆಡುತ್ತಿರುವ 10 ತಂಡಗಳು ಹೀಗಿವೆ
- ಅರಸು ಹಂಟರ್ಸ್ ಮಾಲೀಕರು ಆನಂದ್, ನಾಯಕ ಹರೀಶ್ ನಾಗರಾಜ್.
- ಬಿಂದಾಸ್ ರಾಯಲ್ ಚಾಲೆಂಜರ್ಸ್ ಮಾಲೀಕರು ಪರಿತೋಷ್ ಮೂರ್ತಿ, ನಾಯಕ ರವಿ ಚೇತನ್.
- ಪವರ್ ಪೈತಾನ್ಸ್ ಮಾಲೀಕರು ಐಶ್ವರ್ಯ, ನಾಯಕ ಸದಾಶಿವ ಶೆಣೈ.
- ದೊಡ್ಮನೆ ಡ್ರಾಗನ್ಸ್ ಮಾಲೀಕರು ಮಹೇಶ್ ಗೌಡ, ನಾಯಕ ಪ್ರಮೋದ್ ಶೆಟ್ಟಿ
- ಜಾಕಿ ರೈಡರ್ಸ್ ಮಾಲೀಕರು ಶ್ರೀಹರ್ಷ, ನಾಯಕ ಮನು ರವಿಚಂದ್ರನ್
- ರಾಜಕುಮಾರ ಕಿಂಗ್ಸ್, ಮಾಲೀಕರು ವಿ.ರವಿಕುಮಾರ್ & ಶಂಶುದ್ದೀನ್, ನಾಯಕ ವಿಕ್ರಮ್ ರವಿಚಂದ್ರನ್
- ಗಂಧದಗುಡಿ ವಾರಿಯರ್ಸ್ ಮಾಲೀಕರು ಡಾ. ಚೇತನ ಆರ್ ಎಸ್, ನಾಯಕ ಭುವನ್ ಗೌಡ,
- ವೀರ ಕನ್ನಡಿಗ ಬುಲ್ಸ್ ಮಾಲೀಕರು ಮೋನೀಶ್ ಸಿ., ನಾಯಕ ದಿಲೀಪ್ ರಾಜ್.
- ಯುವರತ್ನ ಚಾಂಪಿಯನ್ಸ್ ಮಾಲೀಕರು ಬಿ.ಎಂ. ಶ್ರೀರಾಮ್ ಕೋಲಾರ್, ನಾಯಕ ಪ್ರವೀಣ್ ತೇಜ್
- ಮೌರ್ಯ ವೈಟ್ ಗೋಲ್ಡ್, ಮಾಲೀಕರು ಬಾಬು ಸಿ.ಜೆ, ನಾಯಕ ನಿರಂಜನ್ ದೇಶಪಾಂಡೆ.