ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಕೀಳಾಗಿ ಪೋಸ್ಟ್‌ ಮಾಡಿದ ಕಿಡಿಗೇಡಿಗಳ ವಿರುದ್ಧ ದರ್ಶನ್‌ ಬೇಸರ; ಆನ್‌ಲೈನ್‌ ಅವಹೇಳನಕ್ಕೆ ಬೇಕು ಅಂಕುಶ
ಕನ್ನಡ ಸುದ್ದಿ  /  ಮನರಂಜನೆ  /  ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಕೀಳಾಗಿ ಪೋಸ್ಟ್‌ ಮಾಡಿದ ಕಿಡಿಗೇಡಿಗಳ ವಿರುದ್ಧ ದರ್ಶನ್‌ ಬೇಸರ; ಆನ್‌ಲೈನ್‌ ಅವಹೇಳನಕ್ಕೆ ಬೇಕು ಅಂಕುಶ

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಕೀಳಾಗಿ ಪೋಸ್ಟ್‌ ಮಾಡಿದ ಕಿಡಿಗೇಡಿಗಳ ವಿರುದ್ಧ ದರ್ಶನ್‌ ಬೇಸರ; ಆನ್‌ಲೈನ್‌ ಅವಹೇಳನಕ್ಕೆ ಬೇಕು ಅಂಕುಶ

Ashwini Puneeth Rajkumar: ಸೋಷಿಯಲ್‌ ಮೀಡಿಯಾದಲ್ಲಿ ಅಶ್ಚಿನಿ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಕೆಟ್ಟದ್ದಾಗಿ ಬರೆದ ಪೋಸ್ಟ್‌ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಗಮನಕ್ಕೆ ಬಂದಿದ್ದು, ಅವರು ಅತೀವ ಬೇಸರ ವ್ಯಕ್ತಪಡಿಸಿದ್ದಾರೆಂದು ವರದಿಗಳು ತಿಳಿಸಿವೆ.

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಕೆಟ್ಟ ಪೋಸ್ಟ್‌ಗೆ ದರ್ಶನ್‌ ಬೇಸರ
ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಕೆಟ್ಟ ಪೋಸ್ಟ್‌ಗೆ ದರ್ಶನ್‌ ಬೇಸರ

ಬೆಂಗಳೂರು: ಸೋಷಿಯಲ್‌ ಮೀಡಿಯಾಗಳಲ್ಲಿ ಕೆಟ್ಟ ಮನಸ್ಥಿತಿಗಳಿಗೆ ಬರವಿಲ್ಲ. ಕೆಲವರ ವರ್ತನೆ ಸುಸಂಸ್ಕೃತ ಸಮಾಜವೇ ತಲೆ ತಗ್ಗಿಸುವಂತೆ ಮಾಡುತ್ತದೆ. ಮಹಿಳೆಯರ ಬಗ್ಗೆ ಕೆಟ್ಟ ಮಾತು, ಅನಿಷ್ಟ ಪದಗಳ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ದಾಳಿ ನಡೆಸಲಾಗುತ್ತದೆ. ಕನ್ನಡ ಚಿತ್ರರಂಗದ ಜನಪ್ರಿಯರ ಕುರಿತು ಇದೇ ರೀತಿ ಫೇಕ್‌ ಖಾತೆಯಲ್ಲಿ ಮಾಡಿರುವ ಪೋಸ್ಟೊಂದು ಆಕ್ರೋಶಕ್ಕೆ ಕಾರಣವಾಗಿದೆ. ಗಜಪಡೆ ಹೆಸರಿನ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಅಶ್ಚಿನಿ ಪುನೀತ್‌ ರಾಜ್‌ ಕುಮಾರ್‌ ಕುರಿತು ಅವಹೇಳನಕಾರಿಯಾಗಿ ಪೋಸ್ಟ್‌ ಮಾಡಲಾಗಿತ್ತು. ಈ ವಿಷಯ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಗಮನಕ್ಕೂ ಬಂದಿದ್ದು, ಅವರು ನೊಂದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ದರ್ಶನ್‌ ಅಭಿಮಾನಿ ಸಂಘದ ಪ್ರಧಾನ ಕಾರ್ಯದರ್ಶಿ ಪುನೀತ್‌ ಅವರು ಮಾಧ್ಯಮಗಳಿಗೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಇದು ಕಿಡಿಗೇಡಿಗಳ ಕೈವಾಡ ಎಂದು ಅವರು ಹೇಳಿದ್ದಾರೆ. ಈ ವಿಷಯ ದರ್ಶನ್‌ ಗಮನಕ್ಕೂ ಬಂದಿದ್ದು, ಅವರು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಪುನೀತ್‌ ಹೇಳಿದ್ದಾರೆ.

"ಅಶ್ಚಿನಿ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಯಾರೋ ಹಾಕಿರುವ ಪೋಸ್ಟ್‌ ನೋಡಿ ದರ್ಶನ್‌ ಬೇಸರಮಾಡಿಕೊಂಡಿದ್ದಾರೆ. ನಮಗೆ ದರ್ಶನ್‌ ಸರ್‌ ಹಲವು ವರ್ಷಗಳ ಹಿಂದೆಯೇ ಒಂದು ಸೂಚನೆ ನೀಡಿದ್ರು. ಯಾರು ಏನೇ ಮಾಡಿದರೂ ಅವರಿಗೆ ಸೋಷಿಯಲ್‌ ಮೀಡಿಯಾ ಮೂಲಕ ಉತ್ತರ ನೀಡಬಾರದು. ಕೆಟ್ಟದ್ದಾಗಿ ಪೋಸ್ಟ್‌ ಮಾಡಬಾರದು ಎಂದು ಹೇಳಿದ್ದರು" ಎಂದು ದರ್ಶನ್‌ ಅಭಿಮಾನಿ ಸಂಘದ ಪ್ರಧಾನ ಕಾರ್ಯದರ್ಶಿ ಪುನೀತ್‌ ಹೇಳಿದ್ದಾರೆ. "ಈ ರೀತಿ ಪೋಸ್ಟ್‌ ಮಾಡಿದ್ದು ಯಾರೆಂದು ಗೊತ್ತಿಲ್ಲ. ಯಾರೋ ಕಿಡಿಗೇಡಿಗಳು ಈ ರೀತಿ ಮಾಡಿ ದರ್ಶನ್‌ ಅಭಿಮಾನಿಗಳ ಹೆಸರಿಗೆ ಕೆಟ್ಟ ಹೆಸರು ತಂದಿದ್ದಾರೆ" ಎಂದು ಅವರು ಹೇಳಿದ್ದಾರೆ.

ಏನಿದು ವಿವಾದ?

ರಾಯಲ್‌ ಚಾಲೆಂಜರ್ಸ್‌ ಬ್ಯಾಂಗಲೋರ್‌ ಇದ್ದ ಹೆಸರನ್ನು ಆರ್‌ಸಿಬಿ ಅನ್‌ಬಾಕ್ಸ್‌ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಎಂದು ಬದಲಾಯಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅತಿಥಿಯಾಗಿ ಆಗಮಿಸಿದ್ದರು. ಇವರು ಆಗಮಿಸಿರುವುದಕ್ಕೆ ಕೆಲವು ಕಿಡಿಗೇಡಿಗಳು ಆರ್‌ಸಿಬಿ ಮ್ಯಾಚ್‌ ಸೋಲುವುದಕ್ಕೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಬಂದಿರುವುದೇ ಕಾರಣ ಎಂದು ಪೋಸ್ಟ್‌ ಮಾಡಿದ್ದರು. "ಶುಭ ಕಾರ್ಯಕ್ಕೆ ಮುತ್ತೈದೆಯರನ್ನು ಕರೆಯಬೇಕು. ಗಂಡ ಸತ್ತ ಮುಂ.. ಯರನ್ನು ಕರೀಬಾರದು. ಆರ್‌ಸಿಬಿ ಅನ್‌ಬಾಕ್ಸ್‌ ಇವೆಂಟ್‌ಗೆ ಈ ಮುಂ...ಯನ್ನು ಕರೆದಿದ್ದಕ್ಕೆ ಎಲ್ಲ ಮ್ಯಾಚ್‌ ಸೋಲ್ತಾ ಇದ್ದಾರೆ" ಎಂದು ಕೆಟ್ಟದ್ದಾಗಿ ಗಜಪಡೆ ಎಂಬ ಟ್ವಿಟ್ಟರ್‌ ಖಾತೆಯಿಂದ ಪೋಸ್ಟ್‌ ಮಾಡಲಾಗಿತ್ತು.

ದೂರು ದಾಖಲಿಸಲು ಚಿಂತನೆ

ವರದಿಗಳ ಪ್ರಕಾರ ದರ್ಶನ್‌ ಅಭಿಮಾನಿಗಳ ವಿರುದ್ಧ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಈ ರೀತಿ ಕೆಟ್ಟದ್ದಾಗಿ ಪೋಸ್ಟ್‌ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಕನ್ನಡ ಪ್ರಭ ವರದಿ ತಿಳಿಸಿದೆ. ಇದೇ ಸಮಯದಲ್ಲಿ ಕೆಲವು ಅಪ್ಪು ಅಭಿಮಾನಿಗಳು ಕೂಡ ದರ್ಶನ್‌ ಬಗ್ಗೆ ಕೆಟ್ಟದ್ದಾಗಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಲು ಆರಂಭಿಸಿದ್ದಾರೆ. ಅಭಿಮಾನಿಗಳ ಈ ಜಗಳ ನೋಡಿರುವ ಸಹೃದಯರು "ದಯವಿಟ್ಟು ಈ ರೀತಿ ಮಾಡಬೇಡಿ" ಎಂದು ತಿಳಿಹೇಳುತ್ತಿದ್ದಾರೆ. "ಮಾನ್ಯರೆ, ದಯಮಾಡಿ ಈ ರೀತಿ ತಪ್ಪು ಮಾತಾಡಬೇಡಿ. ಟ್ವೀಟ್ ಡಿಲೀಟ್ ಮಾಡಿ. ಕನ್ನಡಿಗರಿಗೆ ಇದು ಶೋಭೆಯಲ್ಲ. ದ್ವೇಷ, ವಿರಸ ಎಂಬುದು ವಿಷ ಹಾಗೂ ಅಪಾಯಕಾರಿ. ಅದು ನಿಮ್ಮ ಮನ ಸೇರಿದೆ. ದಯಮಾಡಿ ಅಲ್ಲಿಂದ ಅದನ್ನು ತೆಗೆಯಿರಿ. ನಿಮ್ಮನ್ನೇ ತಿಂದು ಹಾಕುತ್ತದೆ. ನಿಮ್ಮ ತಂದೆತಾಯಿಗೆ ಕೆಟ್ಟ ಹೆಸರು ಬೇಕೇ?" ಎಂದು ಉಮೇಶ್‌ ಶಿವರಾಜ್‌ ಎಂಬವರು ಟ್ವೀಟ್‌ ಮಾಡಿದ್ದಾರೆ.

ಆನ್‌ಲೈನ್‌ ಅವಹೇಳನಕ್ಕೆ ಬೇಕು ಅಂಕುಶ

ಸೋಷಿಯಲ್‌ ಮೀಡಿಯಾದಲ್ಲಿ ಮಹಿಳೆಯರು, ಮಕ್ಕಳ ಬಗ್ಗೆ ಕೆಟ್ಟದ್ದಾಗಿ ಕಾಮೆಂಟ್‌ ಮಾಡುವುದು, ಪೋಸ್ಟ್‌ ಮಾಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಫೇಕ್‌ ಖಾತೆಗಳ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಅಥವಾ ಸಮಾಜದಲ್ಲಿ ಜನಪ್ರಿಯತೆ ಪಡೆದ ಮಹಿಳೆಯರ ವಿರುದ್ಧ ಕೆಟ್ಟದಾಗಿ ವರ್ತಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಜಗತ್ತಿನಾದ್ಯಂತ ಬೇಡಿಕೆ ಆರಂಭವಾಗಿದೆ. ಆಯಾ ದೇಶಗಳು ತಮ್ಮ ದೇಶಗಳ ಕಾನೂನಿನ ಚೌಕಟ್ಟಿನೊಳಗೆ ಇಂತಹ ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಪ್ರಯತ್ನಿಸುತ್ತಿವೆ. ಆನ್‌ಲೈನ್ ಕಿರುಕುಳ ಮತ್ತು ಬೆದರಿಸುವಿಕೆ ವಿರುದ್ಧ ದೂರು ನೀಡುವ ಮೂಲಕ ಮಹಿಳೆಯರು, ಮಕ್ಕಳ ಮೇಲೆ ನಡೆಯುವ ದೌರ್ಜನ್ಯವನ್ನು ಕಡಿಮೆ ಮಾಡಬಹುದು.

Whats_app_banner