Upendra: ಈ ವಾರ ಯುಐ ಸಿನಿಮಾ ಬಿಡುಗಡೆ, ರಿಯಲ್‌ ಸ್ಟಾರ್‌ ಉಪೇಂದ್ರ ಕುರಿತು 10 ಆಸಕ್ತಿದಾಯಕ ವಿಚಾರಗಳು
ಕನ್ನಡ ಸುದ್ದಿ  /  ಮನರಂಜನೆ  /  Upendra: ಈ ವಾರ ಯುಐ ಸಿನಿಮಾ ಬಿಡುಗಡೆ, ರಿಯಲ್‌ ಸ್ಟಾರ್‌ ಉಪೇಂದ್ರ ಕುರಿತು 10 ಆಸಕ್ತಿದಾಯಕ ವಿಚಾರಗಳು

Upendra: ಈ ವಾರ ಯುಐ ಸಿನಿಮಾ ಬಿಡುಗಡೆ, ರಿಯಲ್‌ ಸ್ಟಾರ್‌ ಉಪೇಂದ್ರ ಕುರಿತು 10 ಆಸಕ್ತಿದಾಯಕ ವಿಚಾರಗಳು

ರಿಯಲ್‌ ಸ್ಟಾರ್‌ ಉಪೇಂದ್ರ ನಟನೆ, ನಿರ್ದೇಶನದ ಯುಐ ಸಿನಿಮಾ ಈ ವಾರ (ಡಿಸೆಂಬರ್‌ 20, 2024) ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ಕನ್ನಡದ ಬಹುಮುಖ ಪ್ರತಿಭೆ ಉಪೇಂದ್ರರ ಕುರಿತಾದ 10 ಆಸಕ್ತಿದಾಯಕ ವಿಷಯಗಳನ್ನು ತಿಳಿದುಕೊಳ್ಳೋಣ.

ರಿಯಲ್‌ ಸ್ಟಾರ್‌ ಉಪೇಂದ್ರ ಕುರಿತು 10 ಆಸಕ್ತಿದಾಯಕ ವಿಚಾರಗಳು
ರಿಯಲ್‌ ಸ್ಟಾರ್‌ ಉಪೇಂದ್ರ ಕುರಿತು 10 ಆಸಕ್ತಿದಾಯಕ ವಿಚಾರಗಳು

UI Movie: ಉಪೇಂದ್ರ ನಟನೆ ಮತ್ತು ನಿರ್ದೇಶನದ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ "ಯುಐ" ಸಿನಿಮಾ ಈ ವಾರ (ಡಿಸೆಂಬರ್‌ 20, 2024) ಬಿಡುಗಡೆಯಾಗಲಿದೆ. ಕನ್ನಡದ ಇತರೆ ನಟರು, ನಿರ್ದೇಶಕರ ಸಿನಿಮಾಗಳಿಗಿಂತ ಉಪೇಂದ್ರ ಸಿನಿಮಾಗಳು ಡಿಫರೆಂಟ್‌ ಆಗಿರುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕನ್ನಡ ಸಿನಿಮಾ ಜಗತ್ತಿಗೆ ಹೊಸತನ, ವಿಭಿನ್ನ, ವಿನೂತನ ಸಿನಿಮಾಗಳನ್ನು ಪರಿಚಯಿಸಿದ ಖ್ಯಾತಿ ಉಪ್ಪಿಯದ್ದು. ಯುಐ ಸಿನಿಮಾ ಬಿಡುಗಡೆ ಸನಿಹದಲ್ಲಿರುವ ಸಂದರ್ಭದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರರ ಕುರಿತಾದ ಆಸಕ್ತಿದಾಯಕ ಅಂಶಗಳನ್ನು ತಿಳಿದುಕೊಳ್ಳೋಣ ಬನ್ನಿ.

  1. ಉಪೇಂದ್ರ ತನ್ನ ಕರಿಯರ್‌ ಅನ್ನು ಆರಂಭಿಸಿದ್ದು ನಟ, ನಿರ್ದೇಶಕ ಕಾಶಿನಾಥ್‌ ಬಳಿ. ಹೀಗಾಗಿ ಉಪೇಂದ್ರ ಅವರು ಕಾಶಿನಾಥ್‌ರನ್ನು ಗುರುವೆಂದು ಕರೆಯುತ್ತಾರೆ. ಉಪೇಂದ್ರ ಅವರು ಬರಹಗಾರರರಾಗಿ ಮತ್ತು ಸಹಾಯಕ ನಿರ್ದೇಶಕರಾಗಿ ಕರಿಯರ್‌ ಆರಂಭಿಸಿದರು.
  2. ಓಂ ಸಿನಿಮಾದ ನಿರ್ದೇಶನದ ಮೂಲಕ ಉಪೇಂದ್ರ ಕನ್ನಡದ ಭರವಸೆಯ ನಿರ್ದೇಶಕರಾಗಿ ಹೊರಹೊಮ್ಮಿದರು. ಶಿವರಾಜ್‌ ಕುಮಾರ್‌ ಮುಖ್ಯಪಾತ್ರದಲ್ಲಿ ನಟಿಸಿದ ಓಂ ಸಿನಿಮಾ ಸ್ಯಾಂಡಲ್‌ವುಡ್‌ನ ಮರೆಯಲಾಗದ ಚಿತ್ರ. ಬೆಂಗಳೂರು ಭೂಗತ ಜಗತ್ತಿನ ಕಥೆ ಹೇಳುವ ಈ ಸಿನಿಮಾದಿಂದಾಗಿ ಉಪೇಂದ್ರ ಸ್ಟಾರ್‌ ಡೈರೆಕ್ಟರ್‌ ಆಗಿ ಹೊರಹೊಮ್ಮಿದರು.
  3. ಓಂ ಸಿನಿಮಾದಲ್ಲಿ ಬೆಂಗಳೂರಿನ ಕೆಲವು ನಿಜವಾದ ರೌಡಿಗಳನ್ನು ನಟಿಸುವಂತೆ ಮಾಡಿದ್ದು ಉಪೇಂದ್ರ ಹೆಚ್ಚುಗಾರಿಕೆ. ಇಂತಹ ಸಾಹಸ ಕನ್ನಡದಲ್ಲಿ ಇದೇ ಮೊದಲು ಎಂದರೂ ತಪ್ಪಾಗದು.
  4. ಸ್ಯಾಂಡಲ್‌ವುಡ್‌ಗೆ ಎ ಎಂಬ ಸಿನಿಮಾ ಪರಿಚಯಿಸಿದ್ದರು. ಇದು ಆ ಕಾಲದಲ್ಲಿ ಅಚ್ಚರಿಯ ಸಿನಿಮಾ ಎಂದರೂ ತಪ್ಪಾಗದು. ಈ ಸಿನಿಮಾದ ಡೈಲಾಗ್‌ಗಳು, ಭಾಷೆಗಳು ಇಲ್ಲವೂ ಡಿಫರೆಂಟ್‌ ಆಗಿತ್ತು.
  5. ಜಪಾನ್‌ನ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ ನೋಡಿದರು. ಈ ಸಿನಿಮಾದ ಕಥೆಯು ಬುದ್ಧನ ಕಥೆಯೊಂದಕ್ಕೆ ಹೋಲುವುದನ್ನು ಗಮನಿಸಿದ್ದರಂತೆ. ಹೀಗಾಗಿ, ಈ ಸಿನಿಮಾವನ್ನು ಜಪಾನ್‌ನಲ್ಲಿಯೂ ಬಿಡುಗಡೆ ಮಾಡಲಾಯಿತು. ಈ ಸಿನಿಮಾವನ್ನು ಜಪಾನ್‌ನಲ್ಲಿ 2001ರಲ್ಲಿ ಯುಬಾರಿ ಇಂಟರ್‌ನ್ಯಾಷನಲ್‌ ಫೆಂಟಾಸ್ಟಿಕ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪ್ರದರ್ಶಿಸಲಾಯಿತು.
  6. ನಟ ಉಪೇಂದ್ರ ಅವರು ಮಿಸ್‌ ಕೊಲ್ಕೊತ್ತಾ ಪ್ರಿಯಾಂಕ ತ್ರಿವೇದಿಯವರನ್ನು ವಿವಾಹವಾಗಿದ್ದಾರೆ. ಪ್ರಿಯಾಂಕಾ ತ್ರಿವೇದಿಯವರು ಉಪೇಂದ್ರರ ಜತೆ ರಾ ಮತ್ತು ಎಚ್‌2ಒ ಸಿನಿಮಾದಲ್ಲಿ ನಟಿಸಿದ್ದಾರೆ.
  7. ಐಶ್ವರ್ಯಾ ಸಿನಿಮಾದಲ್ಲಿ ಉಪೇಂದ್ರರ ಜತೆ ದೀಪಿಕಾ ಪಡುಕೋಣೆ ನಟಿಸಿದರು. ದೀಪಿಕಾ ಪಡುಕೋಣೆ ಈ ಮೂಲಕ ಚಿತ್ರರಂಗಕ್ಕೆ ಆಗಮಿಸಿದರು. ಇದಾದ ಬಳಿಕ ದೀಪಿಕಾ ಪಡುಕೋಣೆ ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯಾದರು.
  8. ನಟ ಉಪೇಂದ್ರ ಅವರು ಕನ್ನಡದ ಜನಪ್ರಿಯ ಹಾಸ್ಯ ನಟ ಜಗ್ಗೇಶ್‌ (ತರ್ಲೆ ನನ್‌ ಮಗ) ಮತ್ತು ಪ್ರೇಮ (ಓಂ) ಅವರನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಿದರು.
  9. ನಟ, ನಿರ್ದೇಶಕ ಉಪೇಂದ್ರ ಅವರು ಪ್ರಜಾಕೀಯ ಎಂಬ ವಿನೂತನ ರಾಜಕೀಯ ಪಕ್ಷ ಸ್ಥಾಪಿಸಿದರು. ತನ್ನ ಸಿನಿಮಾಗಳಲ್ಲಿ ಜನ ಸಾಮಾನ್ಯರೇ ಜನ ನಾಯಕರು ಎಂದು ಹೇಳುವಂತೆ, ತನ್ನ ರಾಜಕೀಯ ಪಕ್ಷವನ್ನೂ ವಿಭಿನ್ನ ಪರಿಕಲ್ಪನೆಯಡಿ ಸ್ಥಾಪಿಸಿದರು.
  10. ಉಪೇಂದ್ರ ಕನ್ನಡ ಸಿನಿಮಾ ಕ್ಷೇತ್ರದ ಬಹುಮುಖ ಪ್ರತಿಭೆ. ನಟ, ಬರಹಗಾರ, ಗಾಯಕ. ಇಷ್ಟು ಮಾತ್ರವಲ್ಲದೆ ಇವರು ರಾಜಕಾರಣಿಯೂ ಹೌದು. ಉಪೇಂದ್ರ ಸಿನಿಮಾದ ಕಥೆಗಳು ಭಿನ್ನ. ಹಾಸ್ಯ, ಹಾರರ್‌, ಸಸ್ಪೆನ್ಸ್‌, ಥ್ರಿಲ್ಲರ್‌ ಸಿನಿಮಾಗಳನ್ನು ನೀಡಿದ್ದಾರೆ. ಅನೇಕ ಕಲಾವಿದರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿ ಇವರದ್ದು. ನಟ ಸಾಧುಕೋಕಿಲಾ, ಸಂಗೀತ ನಿರ್ದೇಶಕ ಗುರು ಕಿರಣ್‌ ಮುಂತಾದ ಕಲಾವಿದರನ್ನು ಸಿನಿಜಗತ್ತಿಗೆ ಪರಿಚಯಿಸಿದರು. ಶಿವರಾಜ್‌ ಕುಮಾರ್‌, ರಾಘವೇಂದ್ರ ರಾಜ್‌ ಕುಮಾರ್‌ ಮುಂತಾದವರು ದೊಡ್ಡಮಟ್ಟದ ಯಶಸ್ಸು ಪಡೆಯಲು ಕಾರಣರಾದರು.

Whats_app_banner