ಏನಿದು ಪ್ಲೆಸೆಂಟಿಸಂ; ಕೆಲಸದ ಸ್ಥಳದಲ್ಲಿ ಒತ್ತಡ-ಆತಂಕ ಮರೆಮಾಚಿ ನಗುವಿನ ಮುಖವಾಡ ಧರಿಸುವುದರ ಅಪಾಯವೇನು ನೋಡಿ
ಇತ್ತೀಚಿನ ದಿನಗಳಲ್ಲಿ ಉದ್ಯೋಗ ಕ್ಷೇತ್ರದ ಒತ್ತಡದ ಕುರಿತ ಹಲವು ಚರ್ಚೆಗಳು ಮುನ್ನೆಲೆಗೆ ಬರುತ್ತಿವೆ. ಇದೀಗ ಪ್ಲೆಸೆಂಟಿಸಂ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಏನಿದು ಪ್ಲೆಸೆಂಟಿಸಂ, ಉದ್ಯೋಗಿಗಳ ಮಾನಸಿಕ ಆರೋಗ್ಯದ ಮೇಲೆ ಇದು ಹೇಗೆಲ್ಲಾ ಪರಿಣಾಮ ಬೀರುತ್ತದೆ ಎಂಬ ವಿವರ ಇಲ್ಲಿದೆ. ಪ್ರತಿ ಉದ್ಯೋಗಿಯು ತಿಳಿದುಕೊಳ್ಳಬೇಕಾದ ಮಹತ್ವದ ಮಾಹಿತಿಯಿದು.
ಇತ್ತೀಚಿನ ದಿನಗಳಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ನಿಜಕ್ಕೂ ಸವಾಲಾಗಿದೆ. ಕೆಲಸದ ಒತ್ತಡವು ನಮ್ಮಲ್ಲಿ ಹಲವು ತೊಂದರೆಗಳಿಗೆ ಕಾರಣವಾಗುತ್ತಿದೆ. ಕೆಲವೊಮ್ಮೆ ಕೆಲಸದ ಒತ್ತಡ, ಬದುಕಿನ ಸಮಸ್ಯೆಗಳು ಸೇರಿಸಿ ಮಾನಸಿಕವಾಗಿ, ದೈಹಿಕವಾಗಿ ನಾವು ಬರಿದಾಗುವಂತೆ ಮಾಡುವುದು ಸುಳ್ಳಲ್ಲ. ಆದರೆ ನಾವು ಈ ಎಲ್ಲ ನೋವು, ಬೇಸರ, ಅಸಹನೆಯನ್ನೂ ಮರೆ ಮಾಚಿ ಮೇಲ್ನೋಟಕ್ಕೆ ಸಂತೋಷವಾಗಿರುವಂತೆ ನಟಿಸುತ್ತೇವೆ ಅಥವಾ ವರ್ತಿಸುತ್ತೇವೆ. ಇದನ್ನು ಪ್ಲೆಸೆಂಟಿಸಂ (Pleasenteeism) ಅಥವಾ ಆಹ್ಲಾದಕರವಾಗಿರುವುದು ಎಂದು ಕರೆಯಲಾಗುತ್ತದೆ.
ಪ್ಲೆಸೆಂಟಿಸಂ ಎಂದರೆ ನಮ್ಮ ಮನಸ್ಸಿನಲ್ಲಿರುವ ಒತ್ತಡ, ಆತಂಕ, ಅತೃಪ್ತಿಯನ್ನು ಮರೆ ಮಾಚಿ ಹರ್ಷಚಿತ್ತರಾಗಿ ಕೆಲಸದಲ್ಲಿ ತೊಡಗಿರುವಂತೆ ನಟಿಸುವ ಕ್ರಿಯೆ ಇದಾಗಿದೆ. ಎಷ್ಟೇ ಒತ್ತಡ, ಅಸಹನೆ ಇದ್ದರೂ ಅದನ್ನು ಮರೆಮಾಚಿ ಆರಾಮಾಗಿ ಇರುವಂತೆ ನಟಿಸುವ ಪ್ರಕ್ರಿಯೆ ಇದು. ಪ್ಲೆಸೆಂಟಿಸಂ ಎನ್ನುವುದು ಪ್ರಪಂಚದಾದ್ಯಂತ ಉದ್ಯೋಗ ಸ್ಥಳದಲ್ಲಿ ಬೆಳೆಯುತ್ತಿರುವ ಸಮಸ್ಯೆಯಾಗಿದೆ. ಇದನ್ನು ಗಮನಿಸದೇ ಬಿಟ್ಟರೆ ಗಂಭೀರ ಮಾನಸಿಕ ಸಮಸ್ಯೆಗೆ ಕಾರಣವಾಗಬಹುದು.
ಪ್ಲೆಸೆಂಟಿಸಂ ಎಂದರೇನು?
ವಿವಿಧ ಕೆಲಸಗಳ ಒತ್ತಡಗಳಿಂದ ನಮ್ಮಲ್ಲಿ ಪ್ಲೆಸೆಂಟಿಸಂ ಭಾವನೆ ಮೂಡಲು ಕಾರಣವಾಗುತ್ತದೆ. ಇದರಲ್ಲಿ ಉದ್ಯೋಗಿಗಳು ತಾವು ವೃತ್ತಿಪರರಂತೆ ಕಾಣಬೇಕು, ಸಕಾರಾತ್ಮಕ ಭಾವದಿಂದ ಕಾಣಿಸಿಕೊಳ್ಳಬೇಕು ಎಂಬ ಕಾರಣದಿಂದ ಮುಖವಾಡ ಧರಿಸಿ ಬದುಕುತ್ತಾರೆ. ಇಂದಿನ ಕಾಂಪಿಟೇಟಿವ್ ವರ್ಕ್ ಪ್ಲೇಸ್‌ನಲ್ಲಿ ಮಾತಿಗಿಂತ ಭಾವನೆಗಳಿಗಿಂತ ಕೆಲಸವೇ ಹೆಚ್ಚು ಕಾಣಬೇಕು, ಆ ಕಾರಣಕ್ಕೆ ಬಹುತೇಕ ಉದ್ಯೋಗಿಗಳು ಇಷ್ಟವಿಲ್ಲ ಎಂದರೂ ಮುಖವಾಡ ಧರಿಸಿ ಬದುಕುವ ಕಲೆ ರೂಢಿಸಿಕೊಂಡಿರುತ್ತಾರೆ. ಇಂದಿನ ಕಂಪನಿಗಳು ಅಥವಾ ಉದ್ಯೋಗ ರಂಗವೂ ಉದ್ಯೋಗಿಗಳು ಹೃದಯ ಬಡಿತ ಇರುವ ಮನುಷ್ಯರು, ಅವರು ಇತರ ಲೌಕಿಕ ಸಮಸ್ಯೆಗಳನ್ನು ಹೊಂದಿರುತ್ತಾರೆ ಎಂಬ ಅಂಶವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಒಟ್ಟಾರೆ ಕೆಲಸ ಆಗಬೇಕು ಎಂಬುದಷ್ಟೇ ಅವರ ಗುರಿಯಾಗಿರುತ್ತದೆ.
‘ನಾನು ಕೆಲಸದ ಒತ್ತಡದ ಸಮಸ್ಯೆ ಸಿಲುಕಿ ಮಾನಸಿಕವಾಗಿ ತತ್ತರಿಸಿ ಹೋಗಿರುವ ದಿನಗಳಲ್ಲೂ ನಗುವುದನ್ನು ಕಲಿತಿದ್ದೇನೆ. ಉಳಿದವರೆಲ್ಲರೂ ಹಾಗೆಯೇ ನಗುತ್ತಾ ಪರಿಸ್ಥಿತಿಯನ್ನು ನಿಭಾಯಿಸುತ್ತಿರುವಾಗ ನಾನು ಸೋತಿದ್ದೇನೆ ಎಂದು ತೋರಿಸಿಕೊಳ್ಳಲು ನನ್ನಿಂದ ಸಾಧ್ಯವಾಗುವುದಿಲ್ಲ. ಸದಾ ಪಾಸಿಟಿವ್ ಆಗಿ ಇರಬೇಕು ಎನ್ನುವ ವಾತಾವರಣದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ನಮ್ಮ ಮನದ ನಿಜವಾದ ಭಾವನೆಗಳನ್ನು ವ್ಯಕ್ತಪಡಿಸುವುದು ಅಥವಾ ತನಗಾಗುತ್ತಿರುವ ಕಷ್ಟದ ಬಗ್ಗೆ ಸಹಾಯ ಕೇಳಲು ಕಷ್ಟವಾಗಬಹುದು‘ ಎಂದು ಬಹುತೇಕ ಉದ್ಯೋಗಿಗಳು ಅಭಿಪ್ರಾಯ ಪಡುತ್ತಾರೆ.
ಕೆಲಸದ ಸಾಮರ್ಥ್ಯ, ಮಾನಸಿಕ ಆರೋಗ್ಯದ ಮೇಲೆ ಪ್ಲೆಸೆಂಟಿಸಂ ಪರಿಣಾಮ
ನಮ್ಮ ಮನಸ್ಸಿನಲ್ಲಿಗುತ್ತಿರುವ ಬದಲಾವಣೆಗಳು ಹಾಗೂ ನಿರಂತರವಾಗಿ ನಮ್ಮ ನಿಜವಾದ ಭಾವನೆಗಳನ್ನು ಮರೆ ಮಾಚುವುದು ನಮ್ಮ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಪ್ಲೆಸೆಂಟಿಸಂ ತೋರುವ ವ್ಯಕ್ತಿಗಳು ಕೆಲವೊಮ್ಮೆ ಅತಿಯಾದ ಮಾನಸಿಕ ಒತ್ತಡ ಹಾಗೂ ಆತಂಕವನ್ನು ಎದುರಿಸುತ್ತಿರುತ್ತಾರೆ. ಕೊನೆಯಲ್ಲಿ ಇದು ಖಿನ್ನತೆ, ಬರ್ನ್ ಔಟ್ ಹಾಗೂ ಕೆಲಸದಲ್ಲಿ ಆಸಕ್ತಿ ಕಡಿಮೆಯಾಗುವುದಕ್ಕೆ ಕಾರಣವಾಗುತ್ತದೆ.
ಮಾನಸಿಕ ಒತ್ತಡ, ಆತಂಕ, ಖಿನ್ನತೆ ಎದುರಿಸುತ್ತಿದ್ದು ಒತ್ತಾಯಪೂರ್ವಕವಾಗಿ ಒತ್ತಡ ಹಾಗೂ ಆತಂಕದ ಭಾವನೆಯನ್ನು ಹಿಡಿದಿಟ್ಟುಕೊಂಡು ಕೆಲಸ ಮಾಡಲು ಒತ್ತಾಯಿಸುವುದು ಆಂತರಿಕ ಭಾವನೆಗಳನ್ನು ಇನ್ನಷ್ಟು ಹದಗೆಡಿಸಬಹುದು. ಇದು ಭಾವನಾತ್ಮಕ ಒತ್ತಡವನ್ನು ಹೆಚ್ಚಿಸುತ್ತದೆ. ಇದು ವ್ಯಕ್ತಿಯಲ್ಲಿ ಸ್ವಾಭಿಮಾನದ ಪ್ರಜ್ಞೆಯನ್ನು ನಿಗ್ರಹಿಸುತ್ತದೆ ಹಾಗೂ ಹತಾಶೆಯ ಭಾವನೆಗಳನ್ನು ಹೆಚ್ಚಿಸುತ್ತದೆ. ಆದರೆ ದೀರ್ಘಕಾಲದವರೆಗೆ ಖಂಡಿತ ಮುಖವಾಡ ಧರಿಸಿ ಬದುಕಲು ಸಾಧ್ಯವಿಲ್ಲ. ದೀರ್ಘಕಾಲದವರೆಗೆ ಹೀಗೆ ಬದುಕುವುದರಿಂದ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುವುದು ಖಂಡಿತ.
ಪ್ಲೆಸೆಂಟಿಸಂ ಪರಿಣಾಮ ತಪ್ಪಿಸಲು ಏನು ಮಾಡಬೇಕು
ಇದಕ್ಕಾಗಿ ಕಂಪನಿಗಳು ಮಾನಸಿಕ ಆರೋಗ್ಯದ ಬಗ್ಗೆ ಮುಕ್ತವಾಗಿ ಚರ್ಚಿಸುವ ಹಾಗೂ ಆದ್ಯತೆ ನೀಡುವ ವಾತಾವರಣವನ್ನು ಸೃಷ್ಟಿಸಬೇಕು. ಮ್ಯಾನೇಜರ್‌ಗಳು ಉದ್ಯೋಗಿಗಳ ಮನಸ್ಥಿತಿಯನ್ನು ಗುರುತಿಸುವಂತಿರಬೇಕು. ಈ ರೀತಿ ಗುರುತಿಸುವುದು ಹಾಗೂ ಧೈರ್ಯ ತುಂಬುವುದು ಉದ್ಯೋಗಿಗಳು ಈ ಪ್ಲೆಸೆಂಟಿಸಂ ಮನಸ್ಥಿತಿಯಿಂದ ಹೊರ ಬರಲು ನೆರವಾಗುತ್ತದೆ. ಕೆಲಸದ ಸಮಯದ ನಂತರ ಸಂಪರ್ಕ ಕಡಿತಗೊಳಿಸಲು ಮತ್ತು ರಜೆಗಳನ್ನು ತೆಗೆದುಕೊಳ್ಳಲು ಉದ್ಯೋಗಿಗಳನ್ನು ಪ್ರೋತ್ಸಾಹಿಸುವುದು ಅತಿಯಾದ ಬದ್ಧತೆಯ ಭಾವನೆಗಳನ್ನು ತಡೆಯಬಹುದು. ಆಗಾಗ ವರ್ಕ್ ಫ್ರಂ ಹೋಮ್, ನಿಗದಿತ ಅವಧಿ ಎಂದು ಫಿಕ್ಸ್ ಮಾಡದೇ ಕೆಲಸದ ಅವಧಿಯನ್ನು ಸಡಿಲಗೊಳಿಸುವುದು ಸಹ ಒತ್ತಡವನ್ನು ಕಡಿಮೆ ಮಾಡಲು ಸಹಾಯವಾಗಬಹುದು. ಉದ್ಯೋಗಿಗಳು ತಮ್ಮ ಸಮಸ್ಯೆಗಳ ಬಗ್ಗೆ ಎಚ್‌ಆರ್‌ಗಳ ಅಥವಾ ಮ್ಯಾನೇಜರ್‌ಗಳ ಜೊತೆ ಚರ್ಚಿಸುವ ಮುಕ್ತ ಮನೋಭಾವ ಕಲ್ಪಿಸುವುದು ಕೂಡ ಬಹಳ ಮುಖ್ಯ.
ನಿರಂತರವಾಗಿ ಒನ್ ಟು ಒನ್ ಮಾತುಕತೆ, ಓಪನ್ ಡೋರ್ ಪಾಲಿಸಿಗಳು ಕೆಲಸದ ಸ್ಥಳದಲ್ಲಿ ಸುರಕ್ಷಿತ ಭಾವನೆ ಉಂಟು ಮಾಡಲು ಕಾರಣವಾಗುತ್ತದೆ. ಕೆಲಸದಲ್ಲಿ ಪದೇ ಪದೇ ತಪ್ಪುಗಳಾಗಲು ಇಂತಹ ಒತ್ತಡದ ಭಾವನೆ ಕಾರಣ ಎಂಬುದನ್ನು ಅರ್ಥ ಮಾಡಿಕೊಂಡು ಮುಂದೆ ಅದನ್ನು ಪರಿಹರಿಸುವ ಗುಣ ಬೆಳೆಸಿಕೊಂಡರೆ ಇದರಿಂದ ಮಾನಸಿಕ ಸ್ಥೈರ್ಯ ಹಾಗೂ ಧೈರ್ಯ ಮೂಡಲು ಸಾಧ್ಯವಾಗುತ್ತದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)