ಶ್ರೀಮುರಳಿ ನಟಿಸಿರೋ ಬಘೀರ ಸಿನಿಮಾ ಇಷ್ಟವಾಯ್ತ? ಇಲ್ಲಿದೆ ನೋಡಿ ದಕ್ಷಿಣ ಭಾರತದ 4 ಸೂಪರ್‌ಹೀರೋ ಸಿನಿಮಾಗಳು
ಕನ್ನಡ ಸುದ್ದಿ  /  ಮನರಂಜನೆ  /  ಶ್ರೀಮುರಳಿ ನಟಿಸಿರೋ ಬಘೀರ ಸಿನಿಮಾ ಇಷ್ಟವಾಯ್ತ? ಇಲ್ಲಿದೆ ನೋಡಿ ದಕ್ಷಿಣ ಭಾರತದ 4 ಸೂಪರ್‌ಹೀರೋ ಸಿನಿಮಾಗಳು

ಶ್ರೀಮುರಳಿ ನಟಿಸಿರೋ ಬಘೀರ ಸಿನಿಮಾ ಇಷ್ಟವಾಯ್ತ? ಇಲ್ಲಿದೆ ನೋಡಿ ದಕ್ಷಿಣ ಭಾರತದ 4 ಸೂಪರ್‌ಹೀರೋ ಸಿನಿಮಾಗಳು

South Indian superhero films List: ಇತ್ತೀಚೆಗೆ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ನಟಿಸಿರುವ ಬಘೀರ ಎಂಬ ಸೂಪರ್‌ಹೀರೋ ಸಿನಿಮಾ ಬಿಡುಗಡೆಯಾಗಿತ್ತು. ಭಾರತೀಯರಿಗೆ ಸೂಪರ್‌ಹೀರೋ ಸಿನಿಮಾ ಅಚ್ಚುಮೆಚ್ಚು. ನಿಮಗೆ ಬಘೀರ ಇಷ್ಟವಾಗಿದ್ದರೆ ಅದೇ ರೀತಿಯ ಇನ್ನೂ ನಾಲ್ಕು ದಕ್ಷಿಣ ಭಾರತದ ಸೂಪರ್‌ಹೀರೋ ಸಿನಿಮಾಗಳ ವಿವರ ಇಲ್ಲಿ ನೀಡಲಾಗಿದೆ.

ದಕ್ಷಿಣ ಭಾರತದ 4 ಸೂಪರ್‌ಹೀರೋ ಸಿನಿಮಾಗಳು
ದಕ್ಷಿಣ ಭಾರತದ 4 ಸೂಪರ್‌ಹೀರೋ ಸಿನಿಮಾಗಳು

South Indian superhero films List: ಮೊದಲೆಲ್ಲ ಸೂಪರ್‌ಹೀರೋ ಸಿನಿಮಾಗಳೆಂದರೆ ಎಲ್ಲರೂ ಬಾಲಿವುಡ್‌ನತ್ತ ನೋಡುತ್ತಿದ್ದರು. ಮಾರ್ವೆಲ್‌ ಸಿನಿಮ್ಯಾಟಿಕ್‌ ಯೂನಿವರ್ಸ್‌, ಡಿಸಿ ಎಕ್ಸ್‌ಟೆಂಡೆಂಡ್‌ ಯೂನಿವರ್ಸ್‌ ಮುಂತಾದ ಸಂಸ್ಥೆಗಳು ಹೊರತರುವ ಸಿನಿಮಾಗಳಿಗೆ ಸಾಕಷ್ಟು ಅಭಿಮಾನಿ ಬಳಗವಿದೆ. ಆದರೆ, ಭಾರತದ ಪುರಾಣ, ದಂತಕಥೆಗಳು, ಇತಿಹಾಸದಲ್ಲೂ ಸಾಕಷ್ಟು ಸೂಪರ್‌ಹೀರೋಗಳಿದ್ದಾರೆ. ಮಹಾಭಾರತ ಮತ್ತು ರಾಮಾಯಣದಲ್ಲೂ ಶಕ್ತಿಶಾಲಿ ಸಾಹಸಿಗಳ ಕಥೆಗಳಿವೆ. ಧೈರ್ಯ, ಸಮಾಜದ ಬಗ್ಗೆ ಕಾಳಜಿ ಹೊಂದಿರುವ ಇಂತಹ ಸೂಪರ್‌ಹೀರೋ ಕಥೆಗಳು ಎಲ್ಲರಿಗೂ ಇಷ್ಟವಾಗುತ್ತದೆ. ಸಾಮಾನ್ಯ ವ್ಯಕ್ತಿಗಳು ಅತಿಮಾನುಷ ಶಕ್ತಿ ಪ್ರದರ್ಶಿಸುವಂತಹ ಅನೇಕ ಸಿನಿಮಾಗಳು ಈಗಾಗಲೇ ಭಾರತದಲ್ಲಿ ಸಾಕಷ್ಟು ಬಂದಿವೆ. ಇಂತಹ ಸಿನಿಮಾಗಳಲ್ಲಿ ಹಾಸ್ಯ, ಭಾವನಾತ್ಮಕ, ಸಾಹಸದಂತಹ ಅಂಶಗಳನ್ನು ಬೆರೆಸಿ ಪ್ರೇಕ್ಷಕರಿಗೆ ಆಪ್ತವಾಗಿ ಕಟ್ಟಿಕೊಡುವಂತಹ ಪ್ರಯತ್ನ ಇತ್ತೀಚೆಗೆ ನಡೆಯುತ್ತಿದೆ.

ಇತ್ತೀಚೆಗೆ ಬಿಡುಗಡೆಯಾದ ಬಘೀರ ಸಿನಿಮಾವೂ ಸೂಪರ್‌ಹೀರೋ ಸಿನಿಮಾ. ಡಾ ಸೂರಿ ನಿರ್ದೇಶನದ ಈ ಸಿನಿಮಾದಲ್ಲಿ ಶ್ರೀಮುರಳಿಯು ವೇದಾಂತ್‌ ಪ್ರಭಾಕರ್‌ ಎಂಬ ಪೊಲೀಸ್‌ ಆಗಿರುತ್ತಾರೆ. ಇದೇ ಸಮಯದಲ್ಲಿ ಈತ ಬಘೀರನೆಂಬ ಸೂಪರ್‌ಹೀರೋ ಆಗಿಯೂ ದುಷ್ಟ ಸಂಹಾರ ಮಾಡುತ್ತಾನೆ. ಪ್ರಶಾಂತ್‌ ನೀಲ್‌ ಬರೆದಿರುವ ಈ ಸಿನಿಮಾದ ಕಥೆ ಸಾಕಷ್ಟು ಸಿನಿಪ್ರೇಕ್ಷಕರಿಗೆ ಇಷ್ಟವಾಗಿದೆ. ದೀಪಾವಳಿ ಹಬ್ಬದ ಸಮಯದಲ್ಲಿ ಬಿಡುಗಡೆಯಾದ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲೂ ಉತ್ತಮವಾದ ಗಳಿಕೆ ಮಾಡುತ್ತಿದೆ. ಅಕ್ಟೋಬರ್‌ 31ರಂದು ಬಿಡುಗಡೆಯಾದ ಬಘೀರ ಸಿನಿಮಾ ಈಗಾಗಲೇ ಆರು ದಿನಗಳಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ 14 ಕೋಟಿರ ಊಪಾಯಿ ಗಳಿಸಿದೆ. ದಕ್ಷಿಣ ಭಾರತದಲ್ಲಿ ಈಗಾಗಲೇ ಹಲವು ಸೂಪರ್‌ಹೀರೋ ಸಿನಿಮಾಗಳು ಬಂದಿವೆ. ನಿಮಗೆ ಬಘೀರ ಇಷ್ಟವಾದರೆ ಇದೇ ರೀತಿಯ ಸೂಪರ್‌ಹೀರೋ ಕಥೆ ಹೊಂದಿರುವ ಇನ್ನೂ ನಾಲ್ಕು ಸಿನಿಮಾಗಳ ಪರಿಚಯವನ್ನು ಇಲ್ಲಿ ನೀಡಲಾಗಿದೆ.

ಹನುಮಾನ್‌

ಹನುಮಾನ್‌ ಎಂಬ ತೆಲುಗು ಚಿತ್ರ ಜನವರಿ 2024ರಲ್ಲಿ ಬಿಡುಗಡೆಯಾಯಿತು. ಈ ಸಿನಿಮಾ ಬ್ಲಾಕ್‌ಬಸ್ಟರ್‌ ಆಗಿ ಯಶಸ್ಸು ಪಡೆಯಿತು.ಪ್ರಶಾಂತ್ ವರ್ಮಾ ನಿರ್ದೇಶನದ ಈ ತೆಲುಗು ಸೂಪರ್‌ಹೀರೋ ಚಿತ್ರದಲ್ಲಿ ತೇಜ ಸಜ್ಜ ಅಂಜನಾದ್ರಿಯ ಕಾಲ್ಪನಿಕ ಹಳ್ಳಿಯ ಹನುಮಂತು ಎಂಬ ಸಣ್ಣ ಕಳ್ಳನಾಗಿ ನಟಿಸಿದ್ದಾರೆ. ಭಗವಾನ್ ಹನುಮಂತನ ರಕ್ತದ ಒಂದು ಹನಿಯಿಂದ ರೂಪುಗೊಂಡ ದೈವಿಕ ರತ್ನ ದೊರಕಿದ ಬಳಿಕ ಈತನಿಗೆ ಸೂಪರ್‌ಹೀರೋ ಶಕ್ತಿ ದೊರಕುತ್ತದೆ. ಈ ಶಕ್ತಿಯ ನೆರವಿನಿಂದ ತನ್ನ ಹಳ್ಳಿಯನ್ನು ದುಷ್ಟರಿಂದ ಹೇಗೆ ರಕ್ಷಿಸುತ್ತಾನೆ ಎನ್ನುವುದೇ ಈ ಸಿನಿಮಾದ ಕಥೆ. ಈ ಸಿನಿಮಾವನ್ನು ಆಸಕ್ತರು ಝೀ5 ಮತ್ತು ಜಿಯೋ ಸಿನೆಮಾ ಓಟಿಟಿಯಲ್ಲಿ ನೋಡಬಹುದು. ಅಂದಹಾಗೆ, ಈ ಸಿನಿಮಾದ ಮುಂದಿನ ಭಾಗ ಜೈ ಹನುಮಾನ್‌ ಕೂಡ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಕಾಂತಾರ ಖ್ಯಾತಿಯ ರಿಷಬ್‌ ಶೆಟ್ಟಿ ಹನುಮಾನ್‌ ಪಾತ್ರದಲ್ಲಿ ನಟಿಸಲಿದ್ದಾರೆ.

ಮಿನ್ನಾಲ್‌ ಮುರಳಿ (Minnal Murali)

2021ರಲ್ಲಿ ಕೊರೊನಾ ಸಾಂಕ್ರಾಮಿಕ ಕಾಲದಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿತ್ತು. ಇದು ಓಟಿಟಿಯಲ್ಲಿ ದೊಡ್ಡಮಟ್ಟದ ಯಶಸ್ಸು ಪಡೆಯಿತು. ಟೊವಿನೋ ಥಾಮಸ್ ಜೈಸನ್ ವರ್ಗೀಸ್ / ಮಿನ್ನಲ್ ಮುರಳಿ ಪಾತ್ರದಲ್ಲಿ ನಟಿಸಿದ್ದರು. ಇದು ಬ್ಯಾಟ್‌ಮ್ಯಾನ್‌ನ ಮಲಯಾಳಂ ಆವೃತ್ತಿ. ಮಿಂಚಿನಿಂದ ಆಘಾತಕ್ಕೊಳಗಾದ ಜೈಸನ್‌ಗೆ ಮಹಾಶಕ್ತಿ ದೊರಕುತ್ತದೆ. ಈ ಶಕ್ತಿಯನ್ನು ಬಳಸಿ ತನ್ನ ಹಳ್ಳಿಯನ್ನು ಹೇಗೆ ಉಳಿಸುತ್ತಾನೆ ಮತ್ತು ಖಳನಾಯಕನ ವಿರುದ್ಧ ಹೇಗೆ ಹೋರಾಡುತ್ತಾನೆ ಎನ್ನುವುದೇ ಸಿನಿಮಾದ ಕಥೆ.

ಮಾವೀರನ್‌

ತಮಿಳು ನಟ ಶಿವಕಾರ್ತಿಕೇಯನ್ ಕೂಡ ಸೂಪರ್‌ಹೀರೋ ಸಿನಿಮಾದಲ್ಲಿ ನಟಿಸದ್ದಾರೆ. ಮಡೋನೆ ಅಶ್ವಿನ್ ನಿರ್ದೇಶನದ ಮಾವೀರನ್‌ ಚಿತ್ರವು 2023ರಲ್ಲಿ ಬಿಡುಗಡೆಯಾಗಿತ್ತು. ತಮಿಳಿನ ವ್ಯಂಗ್ಯಚಿತ್ರಕಾರ ಸತ್ಯನ ಕಥೆಯನ್ನು ಇದು ಹೊಂದಿದೆ. ಈ ಚಿತ್ರದಲ್ಲಿ ಸಾಹಸದ ಜತೆಗೆ ಹಾಸ್ಯವೂ ಇದೆ. ಸುಮಾರು 100 ಕೋಟಿ ಗಳಿಸಿದ ಈ ಚಿತ್ರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗುತ್ತಿದೆ.

ಹೀರೋ

ಇದು 2019ರಲ್ಲಿ ಬಿಡುಗಡೆಯಾದ ತಮಿಳು ಸಿನಿಮಾ. ಈ ಚಿತ್ರದಲ್ಲೂ ಶಿವಕಾರ್ತಿಕೇಯನ್‌ ನಟಿಸಿದ್ದಾರೆ. ಇದು ಹಿಂದಿಯ ಶಕ್ತಿಮಾನ್‌ ಪಾತ್ರದಿಂದ ಸ್ಪೂರ್ತಿ ಪಡೆದ ಸಿನಿಮಾ. ಶಕ್ತಿಮಾನ್‌ನಂತೆ ಸೂಪರ್‌ಹೀರೋ ಆಗಬೇಕೆಂದು ಶಕ್ತಿ ಕನಸು ಕಾಣುತ್ತಾನೆ. ಆದರೆ ಒಂದು ದುರಂತ ಸಂಭವಿಸುತ್ತದೆ. ಇದಾದ ಬಳಿಕ ಈತನ ಬದುಕಿನಲ್ಲಿ ತಿರುವು ಉಂಟಾಗುತ್ತದೆ. ಈ ಚಿತ್ರವನ್ನು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು.

Whats_app_banner